ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಗೆ ಸಸ್ಯ ಹೇನು ಎಂಬ ಕೀಟ ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರೆ ಅಧಿಕ ಲಾಭದ ಸರ್ವಋತು ತರಕಾರಿ ಎಂದರೆ ಅಲದಂಡೆ. ಈ ಕೀಟವನ್ನು ರಾಸಾಯನಿಕವಾಗಿ, ಜೈವಿಕವಾಗಿ ಹಾಗೆಯೇ ರಾಸಾಯನಿಕ ಬಳಸದೆ ಯಾವ ಯಾವ ವಿಧಾನದಲ್ಲಿ ನಿಯಂತ್ರಣ ಮಾಡಬಹುದು ಎಂಬುದನ್ನು ನೋಡೋಣ.

ಅಲಸಂಡೆ ಮಳೆಗಾಲದಲ್ಲಿ – ಚಳಿಗಾಲದಲ್ಲಿ ಬೇಸಿಗೆಯಲ್ಲಿ  ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು. ಈ ಹೇನು ಎಲೆಗಳಿಗೆ ಬಾಧಿಸಿ ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ. ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ. 

ಅಲಸಂಡೆಗೆ ಬರುವ ಹೇನುಗಳಿಗೆ ಏಫಿಡ್ (APHIDS) ಎಂಬುದಾಗಿ ಕರೆಯುತ್ತಾರೆ. ಇದು ಹಿಂಡು ಹಿಂಡಾಗಿ ಇರುತ್ತದೆ. ಇದರಲ್ಲಿ ಬಲಿತ ಕೀಟಗಳು ಕಪ್ಪು ಮತ್ತು ಮರಿ ಕೀಟಗಳು ಬೂದಿ ಬಣ್ಣದಲ್ಲಿ ಕಾಣಿಸುತ್ತವೆ. ಪ್ರಪಂಚದ ಎಲ್ಲಾ ಭಾಗಗಳಲ್ಲೂ ಈ ಸಸ್ಯ ಹೇನುಗಳನ್ನು ಕಾಣಬಹುದು. ಇದು ಸಸ್ಯದ ಹೂವು, ಎಲೆ, ಕಾಂಡ, ಕಾಯಿ ಮುಂತಾದವುಗಳ ರಸ ಹೀರುವುದೇ ಅಲ್ಲದೆ ರೋಗಗಳನ್ನೂ ಪ್ರಸಾರಮಾಡುತ್ತದೆ. ಮುಖ್ಯವಾಗಿ ನಂಜಾಣು ರೋಗ (Virus disease) ಗಳ ಪ್ರಸರಕಗಳು ಇವು. ಅಲದಂಡೆ ಅಲ್ಲದೆ ಬಹುತೇಕ ದ್ವಿದಳ ಧಾನ್ಯಗಳ ಬೆಳೆಗಳಲ್ಲಿ ಇದರ ಉಪಟಳ ಇರುತ್ತದೆ. ಇವು ಗಾಳಿಯ ಮೂಲಕ ಎಲ್ಲಿಂದೆಲ್ಲಿಗೆ ಪ್ರಸಾರವಾಗುತ್ತದೆ.

ರಾಸಾಯನಿಕ ನಿಯಂತ್ರಣ: ಸಸ್ಯ ಹೇನುಗಳಲ್ಲಿ ಸುಮಾರು ೨೫೦ ಬಗೆಯ ಪ್ರಭೇಧಗಳಿದ್ದು, ಹೆಚ್ಚಿನವು ಬೆಳೆಗಳಿಗೆ ಹಾನಿ ಮಾಡುವವುಗಳಾಗಿವೆ. ಇವು ರಸ ಹೀರುವುದು ಮಾತ್ರವಲ್ಲದೆ ಕೆಲವು ರೋಗಗಳನ್ನೂ ಪ್ರಸರಿಸುತ್ತವೆ. ಇದರ ನಿಯಂತ್ರಣಕ್ಕೆ ಬೇರೆ ಬೇರೆ ಉಪಾಯಗಳಿದ್ದು, ರಾಸಾಯನಿಕವಾಗಿ ಡೈಮಿಥೋಯೇಟ್ ಕೀಟನಾಶಕವನ್ನು ಬಳಸಿ ಇದನ್ನು ನಿಯತ್ರಿಸಲಾಗುತ್ತದೆ. ೨.೫ ಮಿಲಿ ೧ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಡೈಮಿಥೊಯೇಟ್ (ರೋಗರ್) ಇದನ್ನು ಬಳಕೆ ಮಾಡಿ ಸುಮಾರು ೧ ವಾರ ತನಕವಾದರೂ ಅದನ್ನು ಬಳಕೆ ಮಾಡಬಾರದು. ಆದರೆ ಹಾಗೆ ಮಾಡಲಿಕ್ಕಾಗುವುದಿಲ್ಲ. ಇದರ ಬದಲಿಗೆ ಇನ್ನೂ ಕೆಲವೊಂದು ನಿವಾರಣಾ ಉಪಾಯಗಳಿವೆ.

ಸುರಕ್ಷಿತ ನಿಯಂತ್ರಣ: ಹೆಚ್ಚಾಗಿ ಸಸ್ಯ ಹೇನುಗಳು ಎಳೆ ಚಿಗುರಿನ ಬಾಗದಲ್ಲಿ ಮೂಲತಃ ಕಂಡು ಬರುತ್ತದೆ. ಮೊದಲಾಗಿ ಇದನ್ನು ಗುರುತಿಸಿದ್ಡೇ ಆದರೆ ಎಲ್ಲಿ ಇದರ ಹಿಂಡು ಇದೆಯೋ ಆ ಭಾಗವನ್ನು  ಕತ್ತರಿಸಿ ತೆಗೆದು ಬೆಂಕಿಗೆ ಹಾಕಿ ನಾಶ ಮಾಡಬಹುದು. ಅಧಿಕ ಒತ್ತಡದಲ್ಲಿ ನೀರನ್ನು ಈ ಸಸ್ಯ ಹೇನುಗಳು ಇರುವ ಭಾಗಕ್ಕೆ ಸಿಂಪಡಿಸಿದಾಗ ಅದು ಸಣ್ಣ ಜೀವಿಯಾದ ಕಾರಣ ತೊಳೆದು ಹೋಗಿ ನಿಯಂತ್ರಣಕ್ಕೆ ಬರುತ್ತದೆ. ಸಾಬೂನಿನ ದ್ರಾವಣ (ಧೋಬಿ ಸಾಬೂನು ಅಥವಾ ಡಿಷ್ ವಾಶ್) ಒಂದು ೫೦ ಗ್ರಾಂನಷ್ಟು ಇರುವ ಒಂದು ತುಂಡು ಸಾಬೂನನ್ನು ನೀರಿನಲ್ಲಿ ಕರಗಿಸಿ ಅದನ್ನು ಸುಮಾರು ೫ ಲೀ ನೀರಿಗೆ ಮಿಶ್ರಣ ಮಾಡಿ ಅದನ್ನು ಸಿಂಪರಣೆ ಮಾಡುವುದರಿಂದ ಸಸ್ಯ ಹೇನುಗಳು ಕಡಿಮೆಯಾಗುತ್ತವೆ. ಸಾಬೂನಿನ ಖಾರ ಸಸ್ಯ ಹೇನುಗಳಿಗೆ ಮಾರಕವಾಗುತ್ತದೆ.

ಬೇವಿನ ಎಣ್ಣೆ ಅಥವಾ ಹೊಂಗೆ ಎಣ್ಣೆಯನ್ನು ಸಾಬೂನು ನೀರಿನ ಜೊತೆಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಣ ಮಾಡಬಹುದು. ಈ ಸಿಂಪರಣೆಯನ್ನು ಮಾಡುವಾಗ ಅಧಿಕ ಒತ್ತಡದಲ್ಲಿ ಹೇನುಗಳು ಇರುವ ಭಾಗಕ್ಕೆ  ಬೀಳುವಂತೆ ಸಿಂಪಡಿಸಬೇಕು. ಕಾಯಿ ಬರುವ ಮುಂಚೆ ಸೀಮೆ ಎಣ್ಣೆ (ಕೆರೋಸಿನ್ ಆಯಿಲ್) ಮತ್ತು ಸಾಬೂನು ದ್ರಾವಣ ಮಿಶ್ರಣ ಮಾಡಿ ( ಕಾಲು ಲೀ. ಕೆರೋಸಿನ್ ಮತ್ತು ಸಿಂಪರಣೆಗೆ ೧೦ ಲೀ. ಸೋಪ್ ವಾಟರ್ ಅಥವಾ ಶಾಂಪೂ ದ್ರಾವಣ ಸೇರಿಸಿ ಸಿಂಪಡಿಸಿದರೆ ಹೇನು ಸತ್ತು ಹೋಗುತ್ತದೆ. ಆದರೆ ಕಾಯಿ ಬಂದ ನಂತರ ವಾಸನೆ ಬರುವ ಸಾಧ್ಯತೆ ಇದೆ. ಸೊಳ್ಳೆ ಪರದೆ ತರಹದ (insect net) ಹಾಕಿ ಬೆಳೆ ಬೆಳೆದಾಗ ತೊಂದರೆ ಕಡಿಮೆಯಾಗುತ್ತದೆ.

ಕಡಿಮೆ ತೊಂದರೆಯ ಕೀಟನಾಶಕಗಳು: ರಾಸಾಯನಿಕ ಕೀಟನಾಶಕ ಸಿಂಪರಣೆ ಅನಿವಾರ್ಯದಲ್ಲಿ ಉಳಿಕೆ ಅಂಶ ೧-೨ ದಿನ ಮಾತ್ರ ಇರುವ ಕೀಟನಾಶಕ ಸಿಂಪರಣೆ ಮಾಡಬೇಕು. ಮೆಲಾಥಿಯಾನ್ ಹುಡಿಯನ್ನು ಧೂಳೀಕರಣ ಮಾಡಬಹುದು. ವೆಟ್ಟೆಬಲ್ ಸಲ್ಫರ್ (Sulfur will kill off Powdery mildew, mealy bugs and also effective in controlling Mites, Aphids and Thrips) ಸಿಂಪರಣೆ ಮಾಡಬಹುದು. ಬಾಯರ್ ತಯಾರಿಕೆಯ ಡೆಸಿಸ್ (Decis)  ಸಹ ೧-೨ ದಿನಗಳ ವಾಯಿದೆಯ ಕೀಟ ನಾಶಕಗಳು.

ಕೆಲವು ಕಡೆ ಕೀಟ ನಿಯಂತ್ರಕ ಸಾಬೂನುಗಳು ಲಭ್ಯವಿದೆ. ಈ ಸಾಬೂನಿನಲ್ಲಿ ಬೇವು, ಹೊಂಗೆ  ಜೊತೆಗೆ ಸಾಬೂನಿಗೆ ಬಳಕೆ ಮಾಡುವ ಮೂಲವಸ್ತುಗಳನ್ನು ಸೇರಿಸಿರುತ್ತಾರೆ. ಇದನ್ನು ಕಲಕಿ ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಿಸಬಹುದು.

ಪ್ರಕೃತಿಯಲ್ಲಿ ಕೆಲವೊಂದು ಉಪಕಾರೀ ಕೀಟಗಳಿವೆ. ಹಸುರು ಬಣ್ಣದ ಮಿಡತೆಯೊಂದು ಸಸ್ಯ ಹೇನುಗಳನ್ನು ತಿನ್ನುತ್ತದೆ. ಇದನ್ನು ಗುರುತಿಸಿ ಅಲಸಂಡೆ ಬೆಳೆಯುವಲ್ಲಿ ಬಿಡುವುದರಿಂದ ಸಸ್ಯ ಹೇನು ನಿಯಂತ್ರಿಸಬಹುದು. ಗುಲಗುಂಜಿ ಹುಳ ಸಸ್ಯ ಹೇನಿನ ನಿಯಂತ್ರಣದಲ್ಲಿ ಪ್ರಮುಖ ಪರಭಕ್ಷಕ ಕೀಟವಾಗಿರುತ್ತದೆ. ಇವುಗಳ ಸಂಖ್ಯೆ ಹೆಚ್ಚಿದಲ್ಲಿ ಸಹಜವಾಗಿ ಹೇನಿನ ನಿಯಂತ್ರಣವೂ ಆಗುತ್ತದೆ. ಕಳೆಗಳಲ್ಲಿ ಈ ಹೇನಿನ ವಾಸ್ತವ್ಯ ಇರುತ್ತದೆ. ಬೆಳೆ ಬೆಳೆಯುವ ಸುತ್ತಮುತ್ತ ಕಳೆಗಳನ್ನು ನಿಯಂತ್ರಣ ಮಾಡಿದರೆ ತೊಂದರೆ ಕಡಿಮೆಯಾಗುತ್ತದೆ.

ಎಲ್ಲಾ ತರಕಾರಿ ಬೆಳೆಗಳಿಗೂ, ವಾಣಿಜ್ಯ ಬೆಳೆಗಳಿಗೂ ಸಸ್ಯ ಹೇನಿನ ಕಾಟ ಇದೆ. ಕೆಲವು ಸಮಯದಲ್ಲಿ ಇದರ ತೊಂದರೆ ಕಡಿಮೆ. ಹೆಚ್ಚು ಬಿಸಿಲು ಇರುವಾಗ ತಿಗಣೆಗಳು ಮತ್ತು ಹೇನುಗಳು ಚಟುವಟಿಕೆಯಲ್ಲಿ ಇರುತ್ತವೆ. ಈ ಸಮಯದಲ್ಲಿ ಬೇಸಾಯ ಮಾಡುವುದನ್ನು ಬದಲಿಸಿದರೆ ಮಾಡಿದರೆ ಕೀಟನಾಶಕ ಬಳಕೆ ಕಡಿಮೆ ಮಾಡಬಹುದು.   

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ