ಅಲೆಮಾರಿಗಳಲ್ಲವೇ ನಾವೂ?!!

ಅಲೆಮಾರಿಗಳಲ್ಲವೇ ನಾವೂ?!!

ರಮ್ಯ ಈಗ ಹತ್ತನೆಯ ತರಗತಿ. ಪರೀಕ್ಷೆ ಮುಗಿದ ನಂತರ ಮುಂದೇನು ಎಂಬ ಚಿಂತೆ. ಯಾವ ಕೋರ್ಸ್, ಯಾವ ಕಾಲೇಜ್ ಹೀಗೇ ನೂರಾರು ಚಿಂತೆ ಮನಸ್ಸಿನಲ್ಲಿ. ತಲೆಯ ತುಂಬಾ ನೂರಾರು ಕಾಲೇಜ್, ಕೋರ್ಸ್ ಗಳು ಗಿರಕಿ ಹೊಡೆಯುತ್ತಿವೆ. ಇದು ಕೇವಲ ಒಬ್ಬರ ಸಮಸ್ಯೆಯಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಈ ಪ್ರಶ್ನೆಗೆ ಒಳಗಾದವರೇ, ಒಳಗಾಗುವವರೇ.
     ವಿದ್ಯಾಭ್ಯಾಸದ ಒಂದು ಹಂತ ದಾಟಿದ ಮೇಲೆ ಮುಂದಿನ ಯೋಚನೆ ಎಲ್ಲರಲ್ಲೂ ಸಹಜ. ಅದು ಅತ್ಯಗತ್ಯ ಕೂಡಾ. ಈಗಂತೂ ಜೀವನೆಂದರೆ ಕೇವಲ ವಿದ್ಯಾಭ್ಯಾಸ, ಉದ್ಯೋಗ ಎಂಬಂತಾಗಿದೆ. ನಮ್ಮೆಲ್ಲಾ ಕನಸುಗಳನ್ನು ನನಸಾಗಿಸುವ ಸಾಧನ ಅದೇ ಅಲ್ಲವೇ? ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಹುಡುಕಾಟ ಪ್ರಾರಂಭಿಸುತ್ತೇವೆ. ನಮ್ಮ ಹತ್ತಿರದ, ದೂರದ, ಸ್ನೇಹಿತರ ಸಲಹೆಯ ಪಟ್ಟಿಯಲ್ಲಿರುವ ಎಲ್ಲಾ ಕೋರ್ಸ್, ಕಾಲೇಜ್ ಗಳ ಬಗೆಗೆ ವಿಚಾರಿಸಿ, ಸೂಕ್ತವೆನಿಸಿದ್ದಕ್ಕೆ ಸೇರಲು ಪೂರ್ವತಯಾರಿ ಆರಂಭಿಸುತ್ತೇವೆ. ಕಾಲೇಜ್ ಗಳ ಅರ್ಜಿಗಾಗಿ ಹತ್ತಾರು ಬಾರಿ ಅಲೆದಾಡಿ, ನಂತರ ನಮ್ಮ ನಿರ್ಧಾರದಂತೆ ಸೇರಬೇಕಾಗಿರುವ ಕಾಲೇಜ್ ಗೆ ಅಗತ್ಯವಾದ ಸರ್ಟಿಫಿಕೇಟ್ ಹೊಂದಿಸುವ ಕೆಲಸ. ಇಷ್ಟೆಲ್ಲಾ ಆಗಿ ಕಾಲೇಜ್ ಸೇರಿದಮೇಲೆ, ಹೊಸ ಜಾಗ, ಹೊಸ ಜನರೊಂದಿಗೆ ಹೊಂದಿಕೊಳ್ಳಲು ಪರದಾಟ. ಅತ್ತ ಒಂದುಕಡೆ ಹೊಂದಿಕೊಂಡೆವು ಎನ್ನುವಷ್ಟರಲ್ಲಿ ಆ ಸ್ಥಳದಿಂದ ಕಾಲ್ಕೀಳುವ ಸಮಯ ಬಂದಿರುತ್ತದೆ. ಮತ್ತದೇ ಚಿಂತೆ, ಅಲೆದಾಟ, ಪರದಾಟ!!.ಉನ್ನತ ವಿದ್ಯಾಭ್ಯಾಸದ್ದೊಂದು ಚಿಂತೆಯಾದರೆ, ಉದ್ಯೋಗದ ಅಲೆದಾಟ - ಸಮಸ್ಯೆಯಂತೂ ಯಾವ ಶತ್ರುವಿಗೂ ಬೇಡ.
     ಮೊದಲೆಲ್ಲಾ ಕೆಲವು ಜನಾಂಗದವರು ತಮ್ಮ ಸಂಪ್ರದಾಯದಂತೆ ಊರೂರು ಅಲೆದು ಜೀವನ ನಡೆಸುವುದು ವಾಡಿಕೆಯಾಗಿತ್ತು. ಅವರನ್ನು ಅಲೆಮಾರಿಗಳೆಂದೇ ಕರೆಯಲಾಗುತ್ತಿತ್ತು. ಆದರೆ ಇಂದು ಉದ್ಯೋಗಕ್ಕಾಗಿ ವಲಸೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಸ್ವಂತ ಮನೆ - ಮಠ ಬಿಟ್ಟು ಸಮಾಜದ ಬದಲಾವಣೆಗೆ ತುತ್ತಾಗಿಯೋ , ಆಧುನಿಕತೆಗೆ ಹೆಚ್ಚು ಆಕರ್ಷಿತರಾಗಿಯೋ ಅಥವಾ ಕೆಲವು ಅನಿವಾರ್ಯ ಕಾರಣದಿಂದಲೋ ಸ್ಥಳಾಂತರ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇಂದು ಮಹಾನಾಗರಗಳಲ್ಲಂತೂ ಉದ್ಯೋಗಕ್ಕಾಗಿ ಅಲೆದಾಡಿ ಚಪ್ಪಲಿ ಸವೆಸುವ ಕಷ್ಟ ಅನುಭವಿಸಿದವರಿಗೇ ಗೊತ್ತು. ಮೈಲಿಗಟ್ಟಲೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಕಛೇರಿಗಳಲ್ಲಿ ಉದ್ಯೋಗದ ಸಂದರ್ಶನಕ್ಕಾಗಿ ಕಾಯುವ ಪರಿಸ್ಥಿತಿಯಿದೆ ಎನ್ನುವುದು ಖಂಡಿತವಾಗಿಯೂ ಉತ್ಪ್ರೇಕ್ಷೆಯ ಮಾತಲ್ಲ.ನಮ್ಮ ಕೌಶಲ್ಯಗಳನ್ನು ಉತ್ತಮ ಬೆಲೆಗೆ ಮಾರುವ ತವಕದಲ್ಲಿ ನಾವಿಂದು ಸ್ವಂತಿಕೆಯನ್ನು ಮರೆಯುತ್ತಿದ್ದೇವೆ. ಯಾರದ್ದೋ ಕೈ ಕೆಳಗೆ, ಯಾವುದೋ ಜಾಗದಲ್ಲಿ ಬಾಡಿಗೆ ವ್ಯಕ್ತಿಗಳಾಗಿ ಅಲೆದಾಡುತ್ತಿದ್ದೇವೆ.
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂದರೆ, ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತ ಮಿಗಿಲು ಎಂಬ ರಾಮನ ಮಾತನ್ನು ನಾವೆಲ್ಲಾ ಇಂದು ಮರೆತಂತಿದೆ. ಹಣ- ಹೆಸರುಗಳಿಕಯ ಆತುರದಲ್ಲಿ ನಾವು ನಾಲ್ಕ ಹುಟ್ಟೂರು, ಸ್ವಂತ ಮನೆ-ಮಠಗಳು ಆಸ್ತಿಯ ಪಾವಿತ್ರ್ಯತೆಯನ್ನು, ಬೆಲೆಯನ್ನು ಕಡೆಗಣಿಸುತ್ತಿದ್ದೇವೆ. ಸ್ವಂತಿಕೆಯನ್ನು ತೊರೆದಮೇಲೆ ಎಷ್ಟು ಹಣ ಹೆಸರು, ಐಶಾರಾಮವಿದ್ದೇನು ಪ್ರಯೋಜನ? ಎಲ್ಲವೂ ಸೊನ್ನೆಯೇ. ಅದಾವ ಸೌಕರ್ಯಕ್ಕಾಗಿ ನಾವಿಂದು ನಾಮ್ಮ ಸ್ವಂತಿಕೆಯನ್ನು ಮಾರುತ್ತಿದ್ದೇವೋ ತಿಳಿಯದು.
     ಉದ್ಯೋಗ ದೊರೆತ ನಂತರವೂ ಯಾರೂ ಒಂದೆಡೆ ಶಾಶ್ವತವಾಗಿ ನೆಲೆನಿಲ್ಲುವುದಿಲ್ಲ. ಹೆಚ್ಚು ಸಂಬಳ, ಜಾಬ್ ಸ್ಯಾಟಿಸ್ಫ್ಯಾಕ್ಸ್ಯನ್ ಎಂಬೆಲ್ಲಾ ಕಾರಣಗಳಿಗೆ( ನಮ್ಮ ಕೌಶಲ್ಯಗಳಿಗೆ ಹೆಚ್ಚು ಬೆಲೆ ದೊರೆಯುವಲ್ಲಿ!!) ನಮ್ಮ ಕೆಲಸ- ಕಛೇರಿಯನ್ನು ಬದಲಾಯಿಸುತ್ತೇವೆ. ಮತ್ತದೇ ಹುಡುಕಾಟ, ಅಲೆದಾಟ, ಪರದಾಟ. ಜನ ಎಷ್ಟೇ ಹೇಳಬಹುದು, ನಾನು ನೆಮ್ಮದಿಯ ಹುಡುಕಾಟದಲ್ಲಿದ್ದೇನೆ ಎಂದು. ಆದರೆ ಯಾವುದೋ ನೆಮ್ಮದಿಯ ಹುಡುಕಾಟದಲ್ಲಿ ನಾವು ಈಗಿರುವ ನೆಮ್ಮದಿಯನ್ನು, ಸಂಭ್ರಮವನ್ನು ನೋಡುತ್ತಿಲ್ಲ, ಅನುಭವಿಸುತ್ತಿಲ್ಲ.
     ಹೀಗೆ ಜೀವನದುದ್ದಕ್ಕೂ ಕಾಲೇಜ್, ಮನೆ, ಉದ್ಯೋಗ , ಕಛೇರಿ ಎಂದು ಅಲೆದಾಡುತ್ತ ನಮ್ಮದೊಂದು ಸ್ವಂತ ಜೀವನವಿದೆ ಎಂಬುದನ್ನೇ ಮರೆತಿರುವ ನಾವೂ ಅಲೆಮಾರಿಗಳೇ ಅಲ್ಲವೇ?!!

(ಚಿತ್ರಕೃಪೆ : ಗೂಗಲ್)