ಅಲೆಮಾರಿ ಮತ್ತು ಕೆಲವು ಹನಿಗಳು...
ಹರಿದ ರವಿಕೆ
ಅಲ್ಲಲ್ಲಿ ತೂತು ಬಿದ್ದ ಸೀರೆ
ಚಪ್ಪಲಿ ಇಲ್ಲದ ಕಾಲುಗಳು
ತಲೆಯ ಮೇಲೊಂದು ಬುಟ್ಟಿ
ಒಂದು ತೋಳಲ್ಲಿ ಚೀಲ
ತನ್ನದು ಒಂದು ಬದುಕಿದೆ ಎಂಬುದನ್ನು ಮರೆತು,..
ಯಾವನೋ ಪುಣ್ಯಾತ್ಮ ಉಡುಗೊರೆಯಾಗಿ ಕೊಟ್ಟ
ಮಗುವನ್ನು,...ಕಂಕುಳಲ್ಲಿ ಇಟ್ಟುಕೊಂಡು ಅದರ ಬದುಕಿಗಾಗಿ ಜೀವನ ಸವೆಸುತ್ತಿರುವ ಅವಳು...
ಆ ಮಗುವಿನ ರೂಪದಲ್ಲಿ ಅವಳಿಗೂ ಒಂದು ಬದುಕಿದೆ ಅಲ್ಲವೇ....?
*
ವಿಧವೆ
ತೀರಿಹೋದ ಗಂಡ..
ಗರ್ಭದಲ್ಲಿ ಚಿಗುರೊಡೆಯುತ್ತಿರುವ ಸಣ್ಣ ಜೀವ..
ಆಸರೆಯಾಗದ ಮನೆಯವರು..
ಕಣ್ಣು ಕುಕ್ಕುವ ಹಾಗೇ ನೋಡುವ ಅಕ್ಕಪಕ್ಕದವರು..
ಸಂಬಂಧಿಕರಲ್ಲೇ ಆಸೆಪಡುವ ಕೆಲವು ಗಂಡಸರು..
ಸಹಾಯ ಮಾಡುವ ನೆಪದಲ್ಲಿ..
ಅನಿವಾರ್ಯ, ಅಸಹಾಯಕದ ಅವಳ ಜೀವನವನ್ನು..
ಸ್ವಾರ್ಥ ಲಾಭಕ್ಕಾಗಿ ಬಳಸಿಕೊಳ್ಳುವ ಕೆಲವರು...
ಆಕೆಗೂ ಒಂದು ಬದುಕಿದೆ ಎಂದು ಅರಿಯಬೇಕಲ್ಲವೇ..?
*
ಅನಾಥೆ
ಹೆಣ್ಣೇಂಬ ಹೆಸರಿಗೆ, ಕಸ ಒಂದರಲ್ಲಿ ಬಿಸಾಡಿ...
ಯಾರೋ ಮಾಡಿದ ತಮ್ಮ ಕ್ಷಣಿಕ ಸುಖದ ಕಾಮದ ಪ್ರೀತಿಗೆ...
ಅನಾಥವಾಗಿ ಎಲ್ಲೊ ಹುಟ್ಟಿ,ಎಲ್ಲೊ ಬೆಳೆದು, ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸಿ...
ಕಸ ಮುಸುರೆ ಮಾಡಿ ಕಟ್ಟಿಕೊಳ್ಳುವ ಒಂದು ಹೆಣ್ಣು ಮಗುವಿನ ಜೀವನವನ್ನು...
ಮತ್ತದೇ ಕಾಮ ಲೋಕಕ್ಕೆ ಪ್ರೇರೇಪಿಸುವ ಜನಾಂಗವು
ಅವಳದು ಒಂದು ಜೀವ ಅಲ್ಲವೇ,..?...ಆಕೆಗೂ ಒಂದು ಬದುಕಿದೆ ಅಲ್ಲವೇ..?
ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬಹುದಲ್ಲವೇ....?
*
ಮಂಗಳಮುಖಿ
ಬಯಸಿ ಬಂದಂತಹ ಆಸೆ ಅಲ್ಲ ಅದು ಅವನದು....
ದೇವರು ಕರುಣಿಸಿದ ಮನೋವ್ಯಕ್ತಿತ್ವವದು...
ಹೆಣ್ಣಿನ ಉಡುಗೆ ತೊಡುಗೆ,
ಹಣೆಬೊಟ್ಟು, ಬಳೆ, ಹೆಣ್ಣುಮಕ್ಕಳ ಆಟ ಇಷ್ಟ ಆಗುತ್ತಾ...ಬರುಬರುತ್ತ ವರ್ತನೆ, ಮಾತು,
ದೇಹದ ಸೌಂದರ್ಯ ಸಹಜವಾಗೇ ಹೆಣ್ಣಿನ ಆಕಾರ ಪಡೆದು... ಮಂಗಳಮುಖಿಯಾಗಿ ರೂಪಗೊಂಡಾಗ..
ವಿಚಿತ್ರ ಯೋಚನೆ, ಆಸೆ ಕಣ್ಣುಗಳಿಂದ ಕಾಮ ದೃಷ್ಟಿಯಲ್ಲಿ ನೋಡುವ ಬದಲು....
ದೇವರು ಕರುಣಿಸಿದ ಅವನ (ಅವಳ )ಜೀವನವನ್ನು ಕರುಣೆ ಎಂಬ ಪ್ರೀತಿಯ, ಸಹಾಯ ಎಂಬ ಕಣ್ಣಗಳಿಂದ
ನೋಡಿ ಅವನಿಗೂ (ಆಕೆಗೂ )ಒಂದು ಬದುಕಿದೆ ಎಂದು
ಆ ಬದುಕನ್ನು ಕಲ್ಪಿಸಿಕೊಳ್ಳಲು ಬಿಡಬೇಕಲ್ಲವೇ...?
-ಪೇಟೆಕವಿ ಜ್ಯೋತಿಭಾ. ಎನ್.ಚಿಲ್ಲಣ್ಣವರ, ಹುಬ್ಬಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
