ಅಲ್ಪಾಯುಷಿ ಆದರೂ ಅಸಾಮಾನ್ಯ ಸಾಧಕಿ - ತೋರು ದತ್

ಅಲ್ಪಾಯುಷಿ ಆದರೂ ಅಸಾಮಾನ್ಯ ಸಾಧಕಿ - ತೋರು ದತ್

ಆಕೆ ಬದುಕಿದ್ದು ಕೇವಲ ೨೧ ಚಿಲ್ಲರೆ ವರ್ಷಗಳು. ಆದರೆ ಸಾಧಿಸಿದ್ದು ಬಹಳ. ಅಲ್ಪಾಯುಷಿಯಾಗಿದ್ದರೂ ತೋರು ದತ್ ಎಂಬ ಮಹಿಳೆಯ ಸಾಧನೆ ಅಪಾರ. ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಬರೆದ ಅಪರೂಪದ ಕಾದಂಬರಿಗಾರ್ತಿ ಹಾಗೂ ಕವಯತ್ರಿ. ಭಾರತೀಯ ಮಹಿಳೆಯೊಬ್ಬಳು ಫ್ರೆಂಚ್ ಭಾಷೆಯಲ್ಲಿ ಪೂರ್ಣ ಕಾದಂಬರಿಯನ್ನು ಮೊದಲಿಗೆ ಬರೆದದ್ದು ಬಹುಷಃ ತೋರು ದತ್ ಇರಬೇಕು. ಬರೆದದ್ದು ಆಂಗ್ಲ ಹಾಗೂ ಫ್ರೆಂಚ್ ಭಾಷೆಗಳಲ್ಲಾದರೂ ತೋರು ದತ್ ಗೆ ಸಂಸ್ಕೃತ ಭಾಷೆಯ ಪರಿಚಯ ಚೆನ್ನಾಗಿತ್ತು.

ತೋರು ದತ್ ಹುಟ್ಟಿದ್ದು ೧೮೫೬, ಮಾರ್ಚ್ ೪ರಂದು ಕಲ್ಕತಾದಲ್ಲಿ. ಇವರ ತಂದೆ ಗೋವಿನ್ (ಗೋವಿಂದ) ಚಂದರ್ ದತ್ ಹಾಗೂ ತಾಯಿ ಕ್ಷೇತ್ರಮೊನಿ ದತ್. ಇವರ ಮೂರು ಮಂದಿ ಮಕ್ಕಳಲ್ಲಿ ತೋರು ಸಣ್ಣವರು. ಅಬ್ಜು ಹಾಗೂ ಆರು ಇವರಿಬ್ಬರು ತೋರುವಿನ ಅಣ್ಣ ಹಾಗೂ ಅಕ್ಕ. ತೋರುವಿನ ತಂದೆಯವರಿಗೆ ಬ್ರಿಟೀಷ್ ಸರಕಾರ ಹಾಗೂ ಅವರ ಮತದ ಮೇಲೆ ಗೌರವವಿತ್ತು. ಆ ಕಾರಣದಿಂದಲೇ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾರೆ. ಆ ಸಮಯ ತೋರುವಿಗೆ ೬ ವರ್ಷ ವಯಸ್ಸಾಗಿತ್ತು. ಈ ಮತಾಂತರವನ್ನು ತೋರುವಿನ ತಾಯಿ ಪ್ರಾರಂಭದಲ್ಲಿ ವಿರೋಧಿಸಿದರೂ, ನಂತರ ಅವರೂ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾರೆ. ತೋರುವಿನ ತಂದೆ ಮತ್ತು ಅವರ ಕುಟುಂಬ ಆರ್ಥಿಕವಾಗಿ ಬಹಳ ಪ್ರಬಲವಾಗಿತ್ತು. ಆ ಕಾರಣದಿಂದ ತೋರುವಿಗೆ ಬಾಲ್ಯದಲ್ಲಿ ಎಲ್ಲಾ ಸವಲತ್ತುಗಳು ದೊರಕಿದವು. ಅವರ ಪ್ರಾರಂಭಿಕ ವಿದ್ಯಾಭ್ಯಾಸವು ಮನೆಯಲ್ಲೇ ಆಯಿತು. ಇವರ ತಂದೆ ಗೋವಿನ್ ಕವಿ, ಲೇಖಕರೂ ಆಗಿದ್ದುದರಿಂದ ತೋರು ಬಾಲ್ಯದಿಂದಲೇ ಕವನ ರಚನೆಯತ್ತ ಗಮನ ಹರಿಸಿದರು. ತಂದೆಯವರ ಉತ್ತಮ ಪ್ರೋತ್ಸಾಹವೂ ದೊರೆಯಿತು.

ತೋರುವಿಗೆ ೮ ವರ್ಷವಿದ್ದಾಗ ಅವರ ಅಣ್ಣ ಅಬ್ಜು ಕ್ಷಯ ರೋಗಕ್ಕೆ ಬಲಿಯಾದ. ನಂತರದ ದಿನಗಳಲ್ಲಿ ಅಂದರೆ ೧೮೬೯ರಲ್ಲಿ ತೋರುವಿನ ಕುಟುಂಬ ಯುರೋಪ್ ಗೆ ತಮ್ಮ ವಾಸ್ತ್ಯವ್ಯವನ್ನು ಬದಲಾಯಿಸುತ್ತಾರೆ. ಯುರೋಪ್ ನಲ್ಲಿ ಮೊದಲ ವರ್ಷ ಫ್ರಾನ್ಸ್ ನಲ್ಲಿ ಕಳೆಯುತ್ತಾರೆ. ಮೊದಲ ಬಾರಿಗೆ ತನ್ನ ೧೩ನೇ ವಯಸ್ಸಿನಲ್ಲಿ ತೋರು ಶಾಲೆಯ ಮೆಟ್ಟಲೇರುತ್ತಾಳೆ. ಓದಿಗಲ್ಲಿ ತೋರು ತುಂಬಾನೇ ಜೋರು. ಅವಳ ಗ್ರಹಣ ಶಕ್ತಿಯೂ ಬಹಳ ಅಧಿಕ. ಈ ಕಾರಣದಿಂದ ಶಾಲೆಗೆ ಸೇರಿದ ಮೂರೇ ತಿಂಗಳಿಗೆ ತೋರು ಫ್ರೆಂಚ್ ಕಲಿಯುತ್ತಾಳೆ. ಫ್ರೆಂಚ್ ಭಾಷೆ ಹಲವರಿಗೆ ಕಬ್ಬಿಣದ ಕಡಲೆ. ಆದರೂ ಫ್ರೆಂಚ್ ಭಾಷೆಯ ಬಗ್ಗೆ ಏನೇನೂ ತಿಳಿಯದ ತೋರು ಶಾಲೆಗೆ ಸೇರಿದ ಮೂರೇ ತಿಂಗಳಲ್ಲಿ ಫ್ರೆಂಚ್ ಭಾಷೆಯನ್ನು ಓದಲು, ಬರೆಯಲು ಕಲಿಯುವುದು ಸೋಜಿಗವೇ ಸರಿ. ನಂತರದ ದಿನಗಳಲ್ಲಿ ಫ್ರೆಂಚ್ ಭಾಷೆಯಲ್ಲಿ ಕಾದಂಬರಿ, ಕವನಗಳನ್ನೂ ಬರೆಯುತ್ತಾಳೆ. ಒಂದು ವರ್ಷ ಫ್ರಾನ್ಸ್ ನಲ್ಲಿ ಕಳೆದ ದತ್ ಕುಟುಂಬ ಇಂಗ್ಲೆಂಡ್ ತೆರಳುತ್ತದೆ. ಅಲ್ಲಿ ಆಂಗ್ಲ ಭಾಷೆಯ ಅಧ್ಯಯನ ಮಾಡಿದ ತೋರು ಮುಂದಿನ ಮೂರು ವರ್ಷ ಆಂಗ್ಲ ಭಾಷೆಯಲ್ಲಿ ಪರಿಣತಿಯನ್ನು ಪಡೆಯುತ್ತಾಳೆ. ಕವನ ಬರೆಯುವಾಗಲಾಗಲೀ, ಕಾದಂಬರಿ ರಚನೆಯಲ್ಲಾಗಲೀ ಭಾಷೆಯ ಮೇಲಿನ ತೋರುವಿನ ಹಿಡಿತ ಪರಿಣಿತ ಭಾಷಾ ತಜ್ಞರೂ ಮೆಚ್ಚುತ್ತಾರೆ. ಇಂಗ್ಲೆಂಡ್ ನಲ್ಲಿ ತೋರುವಿಗೆ ಮೇರಿ ಮಾರ್ಟಿನ್ ಎಂಬ ಯುವತಿ ಗೆಳತಿಯಾಗುತ್ತಾಳೆ. ಇವಳದ್ದೂ ತೋರುವಿನಂತೆಯೇ ಸಮಾನ ಆಸಕ್ತಿ ಇರುತ್ತದೆ. ೧೮೭೨ರಲ್ಲಿ ತೋರುವಿನ ಅಕ್ಕ ಆರು ಕೂಡಾ ಕ್ಷಯ ರೋಗಕ್ಕೆ ಬಲಿಯಾಗುತ್ತಾಳೆ. ಇವಳ ನಿಧನ ತೋರುವಿಗೆ ಬಹಳ ನೋವು ತಂದುಕೊಡುತ್ತದೆ. ಆದರೆ ಮೇರಿ ಮಾರ್ಟಿನ್ ಸಾಂತ್ವನ ಹೇಳುತ್ತಾಳೆ.

೧೮೭೩ರಲ್ಲಿ ತೋರು ಕುಟುಂಬ ಮತ್ತೆ ಕಲ್ಕತ್ತಾಗೆ ಹಿಂದಿರುಗುತ್ತದೆ. ಭಾರತಕ್ಕೆ ಬಂದ ಬಳಿಕ ಸ್ವಲ್ಪ ಸಮಯ ಸಂಸ್ಕೃತ ಅಭ್ಯಾಸ ಮಾಡುವ ತೋರು ಅದರಲ್ಲೂ ಪರಿಣತಿಯನ್ನು ಪಡೆಯುತ್ತಾಳೆ. ಸಂಸ್ಕೃತದಲ್ಲಿರುವ ಹಲವಾರು ಉತ್ತಮ ವಿಷಯಗಳನ್ನು ಫ್ರೆಂಚ್, ಇಂಗ್ಲಿಷ್ ಭಾಷೆಗೆ ಭಾಷಾಂತರಿಸುತ್ತಾಳೆ. 

ತೋರು ತನ್ನ ೨೦ನೇ ವಯಸ್ಸಿನಲ್ಲಿ ‘A Sheaf gleaned in French fields’ ಎಂಬ ಹೆಸರಿನ ಇಂಗ್ಲಿಷ್ ಕವನ ಸಂಕಲನ ವನ್ನು ಹೊರತರುತ್ತಾಳೆ. ಈ ಕವನಗಳನ್ನು ತೋರು ಫ್ರೆಂಚ್ ಭಾಷೆಯಿಂದ ಅನುವಾದ ಮಾಡಿರುತ್ತಾಳೆ. ಇದರಲ್ಲಿರುವ ಕೆಲವು ಕವನಗಳನ್ನು ಬಹಳ ಹಿಂದೆ ತೋರುವಿನ ಅಕ್ಕ ಆರು ಭಾಷಾಂತರಿಸಿರುತ್ತಾಳೆ. ಈ ಕವನ ಸಂಕಲನ ವಿಮರ್ಶಕರ ಗಮನ ಸೆಳೆಯುತ್ತದೆ ಹಾಗೂ ಹಲವು ಮುದ್ರಣಗಳನ್ನು ಕಾಣುತ್ತದೆ. 

ತೋರು ದತ್ ನಿಜಕ್ಕೂ ಕಾಲದ ಜತೆ ಓಟಕ್ಕೆ ನಿಂತಿದ್ದಳು. ಆ ಸಮಯದ ಭಯಾನಕ ಕಾಯಿಲೆ ಕ್ಷಯ ರೋಗ ಅವಳಿಗೂ ಹಬ್ಬಿತ್ತು. ಇದರಿಂದ ಸಾವು ಖಚಿತ ಎಂದು ತಿಳಿದರೂ ತೋರು ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಈ ಕ್ಷಯದ ನೋವನ್ನು ಮರೆಯಲು ಕವಿತೆಗಳು ತುಂಬಾನೇ ಸಹಕಾರಿಯಾಗಿತ್ತು. ತನ್ನ ಮನಸ್ಸನ್ನು ಕವನ, ಕಾದಂಬರಿ ಬರೆಯುವತ್ತ ತಿರುಗಿಸಿ ತನ್ನ ನೋವನ್ನು ಮರೆಯುವ ಪ್ರಯತ್ನ ಮಾಡಿದಳು ತೋರು. ತನ್ನ ಬದುಕಿನಲ್ಲಿ ಉಳಿದ ಸ್ವಲ್ಪ ಸಮಯವನ್ನು ಸದುಪಯೋಗ ಮಾಡಬೇಕೆಂದು ಅವಳಿಗೆ ಬಹಳಷ್ಟು ಮನಸ್ಸಿತ್ತು. ಆಹಾರ, ನಿದ್ರೆಯ ಪರಿವೆ ಇಲ್ಲದೇ ಹಲವಾರು ಬರಹಗಳನ್ನು ಬರೆದಳು. ಆದರೆ ಒಂದು ದಿನ ಕಾಲನ ಕರೆಗೆ ಅವಳು ಓ ಎನ್ನಲೇ ಬೇಕಾಯಿತು. ಆಗಸ್ಟ್ ೩೦, ೧೮೭೭ರಲ್ಲಿ ತನ್ನ ೨೧ನೇ ವಯಸ್ಸಿನಲ್ಲಿ ಭಾರತ ಕಂಡ ಅತ್ಯಂತ ಪ್ರತಿಭಾವಂತ ಸಾಹಿತಿ ಅಕಾಲ ಮರಣವನ್ನಪ್ಪಬೇಕಾಯಿತು. 

ತೋರು ದತ್ ನಿಧನ ಹೊಂದಿದಾಗ ಅವಳ ಹಲವಾರು ಬರಹಗಳು ಇನ್ನೂ ಪ್ರಕಟಣೆಯಾಗದೇ ಉಳಿದಿದ್ದುವು. ಅವುಗಳಲ್ಲಿ ಎರಡು ಕಾದಂಬರಿಗಳು ಪ್ರಮುಖವಾದವುಗಳು. ಮೊದಲನೆಯದ್ದು ಒಂದು ಫ್ರೆಂಚ್ ಕಾದಂಬರಿ. ಈ ಕಾದಂಬರಿ ಭಾರತೀಯರೊಬ್ಬರು ಬರೆದ ಮೊದಲನೆಯ ಫ್ರೆಂಚ್ ಕಾದಂಬರಿ ಎಂದೇ ಹೆಸರುವಾಸಿಯಾಗಿದೆ. ಇದರ ಜೊತೆ ಒಂದು ಆಂಗ್ಲ ಭಾಷಾ ಕಾದಂಬರಿಯೂ ಪ್ರಕಟನೆಗೆ ಬಾಕಿ ಇತ್ತು. ತೋರು ದತ್ ಇವರು ಆಂಗ್ಲ ಭಾಷೆಯಲ್ಲಿ ಸ್ವತಂತ್ರವಾಗಿ ರಚಿಸಿದ ಕವನಗಳ ಸಂಕಲನವೂ ಮುದ್ರಣಕ್ಕೆ ಬಾಕಿ ಇತ್ತು. ತೋರು ದತ್ ಅವರ ತಂದೆ ಗೋವಿನ್ ದತ್ ಸ್ವತಃ ಕವಿಯಾಗಿದ್ದುದರಿಂದ ಈ ಬರಹಗಳ ಮಹತ್ವ ಅವರಿಗೆ ಚೆನ್ನಾಗಿ ಅರಿವಿತ್ತು. ಅವರು ಕವನಗಳ ಸಂಕಲನ ‘Ancient Ballads and Legends of Hindustan’ ಹಾಗೂ ಇನ್ನೆರಡು ಪುಸ್ತಕಗಳನ್ನು ಮುದ್ರಿಸಿದರು. ಈ ಕಾರಣದಿಂದಾಗಿ ತೋರು ದತ್ ಅವರ ಬರಹದ ಪ್ರತಿಗಳು ಈಗಲೂ ಪ್ಯಾರಿಸ್ ನಲ್ಲಿರುವ ನ್ಯಾಷನಲ್ ಲೈಬ್ರೆರಿಯಲ್ಲಿ ಕಾಣಲು ಸಿಗುತ್ತವೆ. ತೋರು ದತ್ ಅವರ ಕೈಬರಹವಿರುವ ಡೈರಿ ಲಂಡನ್ ನ ನ್ಯಾಷನಲ್ ಲೈಬ್ರೆರಿಯಲ್ಲಿದೆ. 

ತೋರು ದತ್ ಅವರ ಕವನ ಸಂಗ್ರಹಕ್ಕೆ ಖ್ಯಾತ ಕವಿ, ವಿಮರ್ಷಕ ಎಡ್ಮಂಡ್ ಗಾಸ್ ಮುನ್ನುಡಿಯನ್ನು ಬರೆದಿದ್ದಾರೆ. ಇವರು ಇವರ ಕವನಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅವರು ಹೇಳುತ್ತಾರೆ ‘ತೋರು ದತ್ತಳ ಅಕಾಲ ಮರಣದಿಂದ ಆಗಿರುವ ನಷ್ಟವನ್ನು ಉತ್ಪ್ರೇಕ್ಷೆ ಮಾಡುವುದು ಅಸಾಧ್ಯ. ೨೧ ವರ್ಷಕ್ಕೆ ಇಷ್ಟು ಅದ್ಭುತ ಕಾವ್ಯವನ್ನು ಬರೆದ ಮತ್ತು ತನ್ನದಲ್ಲದ ಭಾಷೆಯಲ್ಲಿಯೂ ಅಮೋಘವಾಗಿ ಬರೆದ ಈ ತರುಣಿಗೆ ಸಾಹಿತ್ಯದ ಎಲ್ಲಾ ಗೌರವಗಳೂ ದಕ್ಕುವಂತಹದಾಗಿದ್ದವು. ಸಾಹಿತ್ಯವನ್ನು ಓದಿಕೊಂಡಿರುವ ಯಾರಿಗೇ ಆದರೂ ಸರಿ, ಅವರಿಗೆ ತೋರು ದತ್ತಳ ಹೆಸರು ಚಿರಪರಿಚಿತವಾಗಿರುತ್ತದೆ.”

ತೋರು ದತ್ ಬರೆದ ಹಲವಾರು ಬರಹಗಳು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಆಂಗ್ಲ ಶಿಕ್ಷಣ ಪಡೆದರೂ ತೋರು ದತ್ ಭಾರತೀಯ ಸಂಸ್ಕೃತಿಯನ್ನು ಮರೆತಿರಲಿಲ್ಲ. ಭಾರತೀಯ ಮಹಾ ಕಾವ್ಯಗಳು, ಪುರಾಣ ಕಥೆಗಳು ಹಾಗೂ ಶಾಸ್ತ್ರೀಯ ಸಂಪ್ರದಾಯಗಳನ್ನು ಯುರೋಪ್ ನಲ್ಲಿನ ದೇಶದವರಿಗೆ ಪರಿಚಯಿಸುವ ಉದ್ದೇಶ ಹೊಂದಿದ್ದರು. ಇದೇ ಉದ್ದೇಶದಿಂದ ತೋರು ಬರೆದ ‘ಲಕ್ಷ್ಮಣ' ಎಂಬ ಸುದೀರ್ಘ ಕಾವ್ಯವನ್ನು ಬರೆದರು. ಐದು ಭಾಗಗಳಲ್ಲಿರುವ ಸಾವಿತ್ರಿ ಎಂಬ ಕವನ, ‘Our Casuarina Tree’ (ನಮ್ಮ ಕಸುವಾರಿನ ಮರ) ಎಂಬ ಕವನ, ‘ಎ ಸೀ ಆಫ್ ಫೋಲಿಯೆಜ್' ಸಾನೆಟ್ ಗಳು ಇವೆಲ್ಲವೂ ಅದ್ಭುತ ರಚನೆಗಳು. ಇಷ್ಟು ಸಣ್ಣ ವಯಸ್ಸಿಗೇ ಇವನ್ನೆಲ್ಲಾ ಬರೆದ ತೋರು ಇನ್ನಷ್ಟು ವರ್ಷ ಜೀವಂತ ಇದ್ದಿದ್ದರೆ ಸಾಹಿತ್ಯ ಲೋಕ ಇನ್ನಷ್ಟು ಶ್ರೀಮಂತವಾಗುತ್ತಿತ್ತು. 

ಭಾರತೀಯ ಸಂಸ್ಕಾರವನ್ನು ಹೊಂದಿದ ಹೆಣ್ಣು ಮಗಳೊಬ್ಬಳು, ತನ್ನದಲ್ಲದ ಆಂಗ್ಲ, ಫ್ರೆಂಚ್ ಭಾಷೆಯಲ್ಲಿ ಸಾಹಿತ್ಯ ಲಾಲಿತ್ಯವನ್ನು ಕಟ್ಟಿಕೊಟ್ಟದ್ದು ಅಚ್ಚರಿಯೇ ಸರಿ. ತೋರುದತ್ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರೂ ತನ್ನ ದೇಶದ ಸಂಸ್ಕೃತಿಯನ್ನು ಬಿಟ್ಟುಕೊಡಲಿಲ್ಲ. ಭಾರತೀಯ ಇತಿಹಾಸ, ಪುರಾಣ ಸಾಹಿತ್ಯಗಳನ್ನು ಚೆನ್ನಾಗಿ ಅರಿತು ಬರಹಗಳನ್ನು ರೂಪಿಸಿದ್ದಾರೆ. ಅದಕ್ಕಾಗಿಯೇ ಅವರನ್ನು ‘ಯುರೇಶಿಯನ್ ಪೊಯೆಟ್' ಎಂದು ಕರೆಯುತ್ತಾರೆ.

ತೋರು ದತ್ ಅವರ ಕೆಲವೊಂದು ಕವನಗಳ ಮೇಲೆ ಇಂಗ್ಲೀಷ್ ಕವಿ ಜಾನ್ ಕೀಟ್ಸ್ ಅವರ ಪ್ರಭಾವವಿರುವುದು ಗೋಚರವಾಗುತ್ತದೆ. ಜಾನ್ ಕೀಟ್ಸ್ ಸಹಾ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದವರು. ತೋರು ದತ್ ಅವರನ್ನು ‘ಇಂಡೋ-ಇಂಗ್ಲೀಷ್ ಸಾಹಿತ್ಯದ ಕೀಟ್ಸ್' ಎಂದು ಕರೆದಿದ್ದಾರೆ. ತೋರು ದತ್ ಅವರ ಬಗ್ಗೆ ಇಂದಿನ ಜನಾಂಗಕ್ಕೆ ತಿಳಿದಿರುವುದು ಅತ್ಯಲ್ಪ. ಇದಕ್ಕಾಗಿಯೇ ಡಾ. ಗೀತಾ ಸೇಟ್ ಎಂಬವರು ತೋರು ದತ್ ಬಗ್ಗೆ ದಶಕಗಳ ಕಾಲ ಅಧ್ಯಯನ, ಸಂಶೋಧನೆ ಮಾಡಿ ೨೦೦೯ರಲ್ಲಿ ‘ರಿವೈವಿಂಗ್ ತೋರು ದತ್' ಎಂಬ ೧೫ ನಿಮಿಷದ ಸಾಕ್ಷ್ಯ ಚಿತ್ರವನ್ನು ತಯಾರಿಸಿದ್ದಾರೆ. ಈ ಚಿತ್ರ ಯೂಟ್ಯೂಬ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಆಸಕ್ತರು ಈ ಕಿರುಚಿತ್ರವನ್ನು ನೋಡಿದರೆ, ಖಂಡಿತವಾಗಿಯೂ ನಿಮಗೆ ತೋರು ದತ್ ಬಗ್ಗೆ ಅಧಿಕ ಮಾಹಿತಿ ಸಿಗುತ್ತದೆ. 

(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)