ಅಲ್ಪಾಯುಷಿ ಮಹಾನ್ ಸಾಧಕರು

ಅಲ್ಪಾಯುಷಿ ಮಹಾನ್ ಸಾಧಕರು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೊ. ಗೀತಾ ಶ್ರೀನಿವಾಸ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೧೨೫.೦೦, ಮುದ್ರಣ : ಜೂನ್ ೨೦೨೦

ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ ಪ್ರೊ.ಗೀತಾ ಶ್ರೀನಿವಾಸ್ ಅವರು. ಇವರು ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಅನುವಾದಕಿ. ಇವರು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ‘ಅಲ್ಪಾಯುಷಿ ಮಹಾನ್ ಸಾಧಕರು” ಇವರ ಮೊದಲ ಕನ್ನಡ ಕೃತಿ.

ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಜ್ಞಾನವಾಣಿ ಬಾನುಲಿ ಕೇಂದ್ರ, ಬೆಂಗಳೂರು ಇದರ ನಿಲಯ ವ್ಯವಸ್ಥಾಪಕರಾದ ಡಾ.ಎಸ್.ಎಸ್. ಹೀರೇಮಠ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಹೇಳುತ್ತಾರೆ “ಅಲ್ಪಾಯುಷ್ಯದಲ್ಲೇ ಸಾಧನೆಯ ಗೌರಿಶಂಕರವನ್ನೇರಿದ ಮಹಾಸಾಧಕರು ವಿರಳ. ಅಂಥ ವಿರಳ ಪಂಕ್ತಿಯ ಮಹಾಸಾಧಕರ ಜೀವನ, ಸಾಧನೆ ಹಾಗೂ ಕರ್ತೃತ್ವಶಕ್ತಿ ಯುವಜನತೆಗೆ ಸ್ಪೂರ್ತಿಯ ನೆಲೆಯಾಗುವ ಕಸುವು ಉಳ್ಳದು... ಅಂತಹ ಮಹಾಸಾಧಕರ ಬಗ್ಗೆ ನಾವು ಯೋಜಿಸಿದ್ದ ಬಾನುಲಿ ಸರಣಿಯ ಸಾರಥ್ಯವನ್ನು ಯಾರಿಗೆ ವಹಿಸಬೇಕೆಂದು ಯೋಚಿಸುತ್ತಿರುವಾಗ ಮೊದಲು ಹೊಳೆದದ್ದು ಶ್ರೀಮತಿ ಗೀತಾ ಶ್ರೀನಿವಾಸನ್ ಅವರ ಹೆಸರು. ಸ್ಪಷ್ಟವಾದ ಉಚ್ಚಾರ, ಬಾನುಲಿಗೆ ಸಮರ್ಪಕವಾದ ಧ್ವನಿ, ಇಂಗ್ಲೀಷ್ - ಕನ್ನಡ ಸಾಹಿತ್ಯಗಳ ಆಳವಾದ ಜ್ಞಾನವಿರುವ ಅವರು ನಮ್ಮ ನಂಬಿಕೆಯನ್ನು ಸುಳ್ಳಾಗಿಸಲಿಲ್ಲ, ಸರಣಿ ಯಶಸ್ವಿಯಾಯಿತಷ್ಟೇ ಅಲ್ಲ, ಎಲ್ಲರ ಮೆಚ್ಚುಗೆ ಪಡೆದು ಅಪಾರ ಜನಪ್ರಿಯವಾಯಿತು. ಕಾರ್ಯಕ್ರಮದ ಬಗ್ಗೆ ಅತ್ಯಂತ ಪ್ರೀತಿಯನ್ನಿರಿಸಿಕೊಂಡು, ಬರವಣಿಗೆಯ ಒಂದೊಂದು ಗಳಿಗೆಯಲ್ಲೂ ಶೃದ್ಢೆವಹಿಸಿ ವಿಷಯ ಸಂಗ್ರಹಿಸಿ, ನಮ್ಮ ಜ್ಞಾನದಾಸೋಹದಲ್ಲಿ ಪಾಲ್ಗೊಂಡ ಶ್ರೀಮತಿ ಗೀತಾ ಶ್ರೀನಿವಾಸ್ ಅವರಿಗೆ ಧನ್ಯವಾದಗಳು.”

ಲೇಖಕಿ ತಮ್ಮ ನುಡಿಯಲ್ಲಿ ಈ ಪುಸ್ತಕವನ್ನು ಹೊರತರಲು ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೧೭ ಲೇಖನಗಳಿವೆ. ಏಸುಕ್ರಿಸ್ತ, ಜಗದ್ಗುರು ಆದಿ ಶಂಕರಾಚಾರ್ಯರು, ಜಾನ್ ಕೀಟ್ಸ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತೋರುದತ್, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥರು, ಶ್ರೀನಿವಾಸ ರಾಮಾನುಜಂ, ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್, ಮೈಲಾರ ಮಹಾದೇವ, ಕೊಡಗಿನ ಗೌರಮ್ಮ, ಗುರುದತ್, ತ್ರಿವೇಣಿ, ಅನ್ ಫ್ರಾಂಕ್, ಮಾರ್ಟಿನ್ ಲೂಥರ್ ಕಿಂಗ್, ಬ್ರೂಸ್ ಲೀ, ಶಂಕರ್ ನಾಗ್. ದೇಶ ವಿದೇಶ ಹಾಗೂ ನಮ್ಮ ಕನ್ನಡ ನಾಡಿನ ಸಾಧಕರ ಪರಿಚಯವಿದೆ. ಪ್ರತಿಯೊಬ್ಬರ ಬಗ್ಗೆ, ಅವರ ಸಾಧನೆಗಳ ಬಗ್ಗೆ ಲೇಖಕಿಯವರು ಕೂಲಂಕುಶವಾದ ಅಧ್ಯಯನ ಮಾಡಿದ್ದಾರೆ ಎಂದು ಈ ಪುಸ್ತಕ ಓದುವಾಗ ಅರಿವಾಗುತ್ತದೆ. ಹಲವಾರು ಮಂದಿಯ ಸಾಧನೆಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಆದರೆ ಈ ಪುಸ್ತಕ ಓದಿದ ಬಳಿಕ ಅವರ ಬಗ್ಗೆ ಸದಭಿಪ್ರಾಯ ಮೂಡಿ ಬರುವುದರಲ್ಲಿ ಸಂಶಯವಿಲ್ಲ.

ಸುಮಾರು ೧೬೦ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಸಪ್ನ ಬುಕ್ ಹೌಸ್ ಅವರು ಮುದ್ರಿಸಿ, ಪ್ರಕಾಶಿಸಿದ್ದಾರೆ. ಜುಲೈ ೨೦೧೪ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣದ ಸಂಭ್ರಮದಲ್ಲಿದೆ.