ಅಲ್ಲಿ ಪರ್ವತ ಪವಡಿಸಿತು - ೧

ಅಲ್ಲಿ ಪರ್ವತ ಪವಡಿಸಿತು - ೧

ಬರಹ

ಬಿಸಿಲು ಬೆಚ್ಚಗೆ ಮೈಮೇಲೆ ಬೀಳುತ್ತಿತ್ತು. ಆಕಾಶದಲ್ಲಿ ಸಾಲು ಸಾಲಾಗಿ ಮೋಡಗಳು. ಗಾಳಿ ಹೌದೋ ಅಲ್ಲವೋ ಅನ್ನೋ ಹಾಗೆ ಬೀಸ್ತಾ ಇತ್ತು. ಅಚ್ಯುತ ಆಗತಾನೇ ಊರಿಗೆ ಕಾಲಿಡ್ತಾ ಇದ್ದ. ತುಂಬಾ ಊರು ತಿರುಗಿದ್ದನಾದರೂ ಈ ಊರಿನ ಬೆಳಗು ಅವನಿಗೆ ಹಿಡಿಸಿತು.

ಊರು ಶುರುವಾಗ್ತಾ ಇದ್ದ ಹಾಗೇ ಅರಳಿಮರ ಇತ್ತು. ಕಟ್ಟೆ ಕೂಡ ಇತ್ತು. ಅಲೆಮಾರಿಗೆ ಯಾವ ಹಂಗು, ಅಲ್ಲೇ ಕುಳಿತ. ಹಾಗೇ ಮುಂಜಾನೆಯ ಸೊಬಗನ್ನು ಸವಿಯಲು ಶುರು ಮಾಡಿದ.

ಕುಳಿತಲ್ಲಿಂದಲೇ ತಲೆ ಮೇಲಕ್ಕೆತ್ತಿದ. ಎದುರಿಗೇ ಅದೆಷ್ಟೂ ಎತ್ತರಕ್ಕೆ ಪರ್ವತವೊಂದು ಹಬ್ಬಿತ್ತು. ದಟ್ಟವಾಗಿ ಬೆಳೆದ ಮರಗಳು. ಹೆಸರೇ ಗೊತ್ತಿಲ್ಲದ ಪಕ್ಷಿಗಳು. ಮರದಿಂದ ಮರಕ್ಕೆ ಹಾರಿ ಕೂತ್ಕೊಳ್ತಿದ್ದ ಬೆಳ್ಳಕ್ಕಿಗಳು. ತುಂಬಾ ಸೊಗಸಾಗಿದೆ ಅಂತ ಯೋಚಿಸುವಷ್ಟರಲ್ಲೇ ಇದ್ದಕ್ಕಿದ್ದಂತೆ ಮಂಗಗಳು ಅಸಾಧ್ಯ ದನಿಯಲ್ಲಿ ಕೂಗತೊಡಗಿದವು.

ಅಚ್ಯುತನಿಗೆ ರಸಭಂಗವಾಗಿ ಆ ದಿಕ್ಕಿನೆಡೆಗೇ ನೋಡಿದ. ಸ್ವಲ್ಪ ಹೊತ್ತಿಗೆ ಮುಂಚೆ ನೋಡಿದ ಜಾಗದಲ್ಲಿ ಆಗಲೇ ಒಂದು ಕಮಾನು ಎದ್ದಿತ್ತು. ಗುಡ್ಡ ತಾನಾಗಿ ಮೇಲೆದ್ದಿದೆಯೇನೋ ಅನ್ನೋ ಹಾಗೆ ಭೂಮಿ ತುಸು ಮೇಲೆದ್ದು ಗುಡ್ಡದ ತುದಿಯಲ್ಲಿ ಒಂದು ತೂತಾಗಿತ್ತು.
ಅದನ್ನೇ ನೋಡ್ತಾ ಕುಳಿತುಬಿಟ್ಟ.
ಸ್ವಲ್ಪ ಹೊತ್ತಿನ ನಂತರ ಅದು ದಿಢೀರ್ ಅಂತ ಮಾಯವಾಗ್ಬಿಟ್ತು. ಅವನಿಗೆ ಅಚ್ಚರಿಯಾಯ್ತು, ಆದರೆ ಇಂಥದ್ದನ್ನೆಲ್ಲಾ ತುಂಬಾ ನೋಡಿದ್ದನಾದ್ದರಿಂದ ಭಯಪಡಲಿಲ್ಲ.

ಅವನಿಗೆ ಬುದ್ಧಿ ತಿಳಿದಾಗಿನಿಂದಲೂ ಅವನು ಅಘೋರಿಗಳ ಗುಂಪೊಂದರಲ್ಲಿ ಇದ್ದ. ಅವರು ಹೇಳಿದ ಪ್ರಕಾರ, ಅವನು ಕೇವಲ ಮೂರು ದಿನದ ಕೂಸಿದ್ದಾಗ ಅವರು ಅವನನ್ನು ಎತ್ತಿಕೊಂಡು ಬಂದಿದ್ದರು. ತಾರುಣ್ಯಕ್ಕೆ ಬರುವವರೆಗೂ ಅವರ ಜೊತೆ ಇದ್ದ ಅವನು ಸಾಕಷ್ಟು ತಂತ್ರವಿದ್ಯೆಯನ್ನು ಕಲಿತಿದ್ದ. ಒಂದು ದಿನ ಆ ಬದುಕು ಬೇಸರವಾಗಿ ಹಿಮಾಲಯಕ್ಕೆ ನಡೆದಿದ್ದ. ವರ್ಷಗಳ ಕಾಲ ಹಿಮಾಲಯದಲ್ಲಿ ಅಲೆದವನು ಪೂರ್ತಿಯಾಗಿ ಬದಲಾಗಿದ್ದ. ಅವನೀಗ ಅಘೋರಿಯಾಗಿರಲಿಲ್ಲ, ಸನ್ಯಾಸಿಯಾಗಿರಲಿಲ್ಲ, ಬದಲಾಗಿ ಅವನೀಗ ಅವನೇ ಆಗಿದ್ದ. ಬದುಕನ್ನು ಅಮಿತ ಅಚ್ಚರಿಯಿಂದ ನೋಡುತ್ತಲೇ ಅದರ ಹಂಗು ತೊರೆದವನಾಗಿದ್ದ. ಅವನಿಗಾಗಲೇ ಸಾಧುವೊಬ್ಬನ ಮುಖಲಕ್ಷಣ ದೊರಕಿತ್ತು. ಕಣ್ಣುಗಳು ತಾವರೆ ಕೊಳದಂತೆ ಪ್ರಶಾಂತ. ಎದುರಿಗೆ ಬಂದವರ‍್ಯಾರೂ ಒಮ್ಮೆ ನಮಸ್ಕಾರ ಮಾಡದೆ ಮುಂದೆ ಹೋಗುತ್ತಿರಲಿಲ್ಲ.

ಆ ಕಮಾನು ನೋಡಿದ ನಂತರ ಅಚ್ಯುತ ಅಲ್ಲಿಂದ ಎದ್ದು ಊರೆಡೆಗೆ ನಡೆದ.

ಊರು ಮುಟ್ತಿದ್ದ ಹಾಗೇ ಚಿಕ್ಕ ಮಕ್ಕಳ ಗುಂಪೊಂದು ಆಟ ಆಡ್ತಿದ್ದುದು ಕಾಣಿಸ್ತು. ಅವರ ಬಳಿ ನಡೆದವನು ಒಬ್ಬ ಚಿಕ್ಕ ಹುಡುಗನನ್ನು ಕರೆದು ಈ ಊರ ಹೆಸರೇನಪ್ಪಾ ಅಂತ ಕೇಳಿದ.

-ಕಲ್ಲಡ್ಕ! ಅಂತ ಹೇಳಿದುದೇ ಒಮ್ಮೆ ವಿನಾಕಾರಣ ಹ್ಹಿ ಹ್ಹಿ ಹ್ಹಿ ಅಂತ ನಕ್ಕು ಆ ಮಗು ಓಡಿಬಿಟ್ಟಿತ್ತು. ಉಳಿದ ಮಕ್ಕಳೂ ಅದರ ಹಿಂದೇನೇ ಓಡಿದವು.

ಚಿಕ್ಕ ಮಕ್ಕಳಿಗೆ ಏನೇನಕ್ಕೆ ಸಂತೋಷವಾಗುತ್ತೋ ಅಂತ ಯೋಚಿಸುತ್ತಾ ಮುಂದೆ ನಡೆದ. ಸ್ವಲ್ಪ ದೂರ ಹೋಗ್ತಿದ್ದ ಹಾಗೆಯೇ ಒಂದು ದೊಡ್ಡ ಮನೆ ಕಾಣಿಸಿತು.
ಸೀದಾ ಅಲ್ಲಿಗೇ ನಡೆದ. ಅಲ್ಲಿಯಾಗಲೇ ಒಂದು ಜನರ ಗುಂಪು ಕುಳಿತು ಏನೋ ಚರ್ಚೆ ಮಾಡುತ್ತಿತ್ತು. ದನಿ ಸ್ವಲ್ಪ ಎತ್ತರವಾಗಿಯೇ ಇತ್ತು.

ಈಗ ಗುಡ್ಡದಯ್ಯನ ತಾವಕ್ಕೆ ಹ್ಯಾಂಗ್ ಹ್ವಾಗಾದು?

ಹುಡಕ್ಕಂಡು ಹ್ವಾದೋರ ಗತಿ ಹಿಂಗಾಗ್ತೈತಲ್ಲಾ...

ಬಿಳೀ ಧೋತರ, ಉತ್ತರೀಯದಲ್ಲಿದ್ದ ಅಚ್ಯುತನನ್ನು ನೋಡಿ ಅವರೆಲ್ಲಾ ತಮ್ಮ ಮಾತು ನಿಲ್ಲಿಸಿದರು.

ನಮಸ್ಕಾರ, ಕುಡಿಯೋದಕ್ಕೆ ಸ್ವಲ್ಪ ನೀರು ಸಿಗುತ್ತಾ? ಅಚ್ಯುತ ಕೇಳಿದ.

ಬನ್ನಿ ಸ್ವಾಮಿ ಕುಳಿತುಕೊಳ್ಳಿ - ಮುಖ್ಯಸ್ಥನ ರೀತಿ ಕಾಣ್ತಿದ್ದ ಒಬ್ಬನು ಕಟ್ಟೆಯಿಂದೆದ್ದು ಕರೆದ.

ಅಚ್ಯುತ ಅಲ್ಲಿಗೆ ಹೋಗಿ ಕುಳಿತ. ಒಳಗಿನಿಂದ ಹಾಲು ಹಣ್ಣು ಬಂದವು.

ಹಣ್ಣು ತಿನ್ನುತ್ತ ಜನರನ್ನ ಗಮನಿಸತೊಡಗಿದ. ಎಲ್ಲರ ಮುಖಗಳೂ ಮ್ಲಾನವಾಗಿದ್ದವು.

ಏನೋ ಕಷ್ಟದಲ್ಲಿರೋ ಹಾಗಿದೆ? ಅಚ್ಯುತ ಕೇಳಿದ.

ಮುಖ್ಯಸ್ಥನಂತಿದ್ದವನು ಮುಂದೆ ಬಂದ.

ಸ್ವಾಮೀ, ನಿಮ್ಮಂಥೋರು ಈ ಹೊತ್ನಾಗೆ ಇಲ್ಲಿಗೆ ಬಂದಿದ್ದು ನಮ್ಮ ಪುಣ್ಯ. ನೀವಾಗಿ ಕೇಳಿದ್ರಿಂದ ಹೇಳ್ತೀವ್ನಿ. ನಮಗೆ ಸಹಾಯ ಮಾಡ್ತೀರಾ?
ಅಂಗಲಾಚುವ ದನಿಯಲ್ಲಿ ಅವನು ಮಾತಾಡ್ತಿದ್ದ.

ಅಚ್ಯುತ ತಲೆಯಲ್ಲಾಡಿಸಿದ. ’ವಿಷಯ ಹೇಳಿ’

ಮುಖ್ಯಸ್ಥನ ದನಿಗೆ ಜೀವ ಬಂತು.

ಈ ಗುಡ್ಡದ ಕಾಡೊಳಗೆಲ್ಲೋ ಗುಡ್ಡದಯ್ಯನೋರು ಅವ್ರೆ. ಅವ್ರನ್ನ ಹುಡಿಕ್ಕೊಡ್ತೀರ‍ಾ?

ಗುಡ್ಡದಯ್ಯ ಎಂದರೆ ಒಬ್ಬ ವ್ಯಕ್ತಿ ಎಂದು ಅಚ್ಯುತನಿಗೆ ತಿಳಿಯಿತು.

ಮುಖ್ಯಸ್ಥ ಮಾತು ಮುಂದುವರೆಸಿದ.

ನಮ್ಮಪ್ಪ, ಅಜ್ಜನ ಕಾಲ್ದಿಂದೂವೆ ಈ ಗುಡ್ದಾಗೆ ದೇವ್ರೈತೆ ಸ್ವಾಮಿ. ನಮ್ಮ ಅಯ್ಯನೋರಿಗೆ ಮಾತ್ರ ದೇವ್ರು ಹೇಳಾದು ಗೊತ್ತಾಕತಿ ಸ್ವಾಮಿ.
ನಾವು ಮರ ಕಡೀಬೇಕಂತ ಹೊಂಟ್ರೂ, ಶಿಕಾರಿಗೆ ಹ್ವಾದ್ರೂ ಅವರನ್ನ ಕೇಳೇ ಹೋಗಾದು. ಈ ಗುಡ್ದಾಗೆ ಬಾಳ್ ವಿಚಿತ್ರ ಆಕತಿ. ಇವತ್ತು ಮರ ಕಡುದ್ರೆ ನಾಳೀಕಾಗಲೇ ಬೆಳೆದ್ ಬಿಟ್ತಾವೆ. ಶಿಕಾರಿಗ್ವಾದಾಗ ಎಂತೆಂತವೋ ಪ್ರಾಣಿ ಸಿಕ್ತಾವೆ. ನೋಡಾಕ್ ಒಳ್ಳೆ ನರಿ ಇದ್ದಂಗಿರ್ತಾವೆ, ಆದ್ರೆ ಮಕ ಮಾತ್ರ ಮಂಗ್ಯಾಂದ್ ಇದ್ದಂಗಿರ್ತತಿ. ಅಂಗಾಗಿ, ನಾವು ಗುಡ್ಡಕ್ ಹೋಗಾಗ್ಮುಂಚೆ ಅಯ್ಯನೋರ‍್ನ ಕೇಳೇ ಹೋಗಾದು.

ಆದ್ರೆ ಈಗ ಒಂದ್ ತಿಂಗಳಿಂದ ಅಯ್ಯನೋರು ಊರಾಗ್ ಕಾಣ್ತಿಲ್ಲ. ಅವ್ರು ಮೊದ್ಲೂ ಹಿಂಗೇ ಗುಡ್ಡದ್ವಳಗೆ ಹೋಗಿ ಕುಂತ್ಕಂಬಿಡೋರು. ಆದ್ರೆ ಈ ಸಲ ಮಾತ್ರಾ ಬಾಳ ದಿನ ಆದ್ರೂ ವಾಪಸ್ ಬಂದಿಲ್ಲ. ನಮಗೇನ್ಮಾಡ್ಬುಕಂತನೇ ಗೊತ್ತಾಗ್ವಲ್ದು. ಅವ್ರನ್ನ ಹುಡುಕಾಕೆ ಅಂತ ಜನ ಕಳ್ಸಿದ್ವಿ. ಹೋದೋರು ಹೆಂಗೆಂಗೋ ಮಾಡಿ ಸ್ವಲ್ಪ ದಿನಕ್ಕೆ ವಾಪಸ್ ಬಂದ್ರು. ಪೂರ್ತಿ ಸುಸ್ತಾಗಿದ್ರು. ಬಂದೋರಿಗೆ ಜ್ವರ ಹಿಡ್ಕಂಡಿದ್ದು ಜೀವ ಹೋಗತಂಕ ಬಿಡ್ಲಿಲ್ಲ. ಒಬ್ರೂ ಉಳೀಲಿಲ್ಲ ಸ್ವಾಮಿ. ನಮ್ಗೆ ಏನೂ ಗೊತ್ತಾಗ್ವಲ್ದು ಸ್ವಾಮಿ.

ಅಚ್ಯುತ ಸ್ವಲ್ಪ ಹೊತ್ತು ಯೋಚನೆ ಮಾಡಿ, ’ಆಯ್ತು ನೋಡೋಣ, ಏನಂದ್ರಿ ಅವರ ಹೆಸರು?’ ಎಂದು ಕೇಳಿದ.

ಮಲ್ಲಿಕಾರ್ಜುನಯ್ಯನೋರು ಅಂತ, ನಾವೆಲ್ಲಾ ಗುಡ್ಡದಯ್ಯ ಅಂತ ಕರೀತೀವಿ.

ಅಚ್ಯುತ ಒಬ್ಬನೇ ಗುಡ್ಡಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟ.

ಗುಡ್ಡದ ಬಳಿ ಹೋಗ್ತಿದ್ದ ಹಾಗೆಯೇ, ಅಲ್ಲಿ ಯಾವುದೋ ಅದೃಶ್ಯ ಶಕ್ತಿ ಇಡೀ ಗುಡ್ಡವನ್ನೇ ಹಿಡಿದಿಟ್ಟಿದೆಯೇನೋ ಅನ್ನುವಂತೆ ಭಾಸವಾಯಿತು. ನೆಲದಿಂದ ಉದ್ಭವವಾಗಿ, ಎಲೆ ಎಲೆಯನ್ನೂ ಮುಟ್ಟಿ, ಅವನ್ನು ಸುತ್ತಿ ಉಸಿರುಗಟ್ಟಿಸುವಂತೆ ತಬ್ಬಿ ಹಿಡಿದಿದೆಯೇನೋ ಅನ್ನುವಂತಿತ್ತು. ಆ ಗುಡ್ಡವೊಂದು ಶಕ್ತಿ ಚೇತನದ ತಾಣ, ಅಲ್ಲೊಂದು ಜೀವಸೆಲೆ ಹರಿಯುತ್ತಿದೆಯೆಂದು ಅವನಿಗೆ ತಿಳಿಯಿತು.

ಅಷ್ಟು ದಟ್ಟ ಕಾಡನ್ನು ಹೊಂದಿರುವ ಯಾವುದೇ ಗುಡ್ಡವಾದರೂ ತನ್ನದೇ ಆದ ಒಂದು ನಿಲುವು ಹೊಂದಿರುತ್ತೆ. ಈ ಶಕ್ತಿ ತಾಣ ಈ ಗುಡ್ಡಕ್ಕೆ ಒಂದು ಅಲೌಕಿಕ ಕಳೆ ತಂದು ಕೊಟ್ಟಿತ್ತು.

ಅಚ್ಯುತ ಯೋಚಿಸುತ್ತಿದ್ದ.
ಶಕ್ತಿ ಚೇತನವಿದೆ ಎಂದರೆ ಅದನ್ನು ನಿಯಂತ್ರಿಸಲು ಯಾವುದಾದರೂ ಮತ್ತೊಂದು ಶಕ್ತಿ ಇದೆ ಎಂದಾಯ್ತು. ಬಹುಶಃ ಈ ಗುಡ್ಡದಯ್ಯನಿಗೆ ಅದರ ಬಗ್ಗೆ ತಿಳಿದಿರಬೇಕು. ಊರ ಜನ ತುಂಬ ಪ್ರೀತಿಸ್ತಾರೆ ಇವನನ್ನ. ಯಾವ ರೀತಿಯ ವ್ಯಕ್ತಿ ಇರಬಹುದು ಈ ಗುಡ್ಡದಯ್ಯ?

ಹಾಗೇ ಯೋಚಿಸುತ್ತಾ ಮುಂದೆ ಹೋಗುತ್ತಿರಬೇಕಾದರೆ, ಅವನಿಗೆ ದಾರಿಯಲ್ಲಿ ಯಾರೋ ಬಿದ್ದಿರುವುದು ಕಾಣಿಸಿತು. ದಡಬಡಿಸಿ ಹತ್ತಿರ ಹೋಗಿ ನೋಡಿದರೆ ಯಾರೋ ಚಿಕ್ಕ ಹುಡುಗ. ಸುಮಾರು ಹನ್ನೆರಡು-ಹದಿಮೂರು ವರ್ಷವಿರಬಹುದೇನೋ.

ಮುಖಕ್ಕೆ ನೀರು ಚಿಮುಕಿಸಿ ಅವನನ್ನೆಬ್ಬಿಸಿದ.

ಪಾಪ, ಸುಸ್ತಾಗಿ ಎಚ್ಚರತಪ್ಪಿ ಬಿದ್ದಿದ್ದ ಅವನು. ನೀರು ಕುಡಿದು ಸ್ವಲ್ಪ ಸಮಾಧಾನವಾದವನಂತೆ ಕಂಡ ಮೇಲೆ ಅವನನ್ನು ಕೇಳಿದ.

ಊರಿಂದ ತಪ್ಪಿಸಿಕೊಂಡು ಬಂದೆಯಾ? ಇಲ್ಲೇನು ಮಾಡ್ತಿದ್ದೀಯ?

ನಾನು ಅಯ್ಯನೋರ ಶಿಷ್ಯ. ಅವರನ್ನ ಹುಡುಕ್ಕಂತ ಇಂಗ್ಬಂದೆ.

ಅಚ್ಯುತನಿಗೆ ಆಶ್ಚರ್ಯವಾಯಿತು. ಈ ಗುಡ್ಡದಯ್ಯನಿಗೆ ಶಿಷ್ಯ ಬೇರೆ ಇದ್ದಾನಾ?

ನೋಡು, ಇಲ್ಲೇ ಕುಳಿತಿರು, ನಾನು ನಿಮ್ಮ ಅಯ್ಯನೋರನ್ನ ಹುಡುಕುತ್ತೀನಿ. ಎಂದ.

ನಾಲ್ಕು ಹೆಜ್ಜೆ ಮುಂದೆ ಬಂದವನು, ಸ್ವಲ್ಪ ಹುಲ್ಲಿರೋ ಜಾಗದಲ್ಲಿ ಪದ್ಮಾಸನ ಹಾಕಿ ಕುಳಿತ.

ಹುಡುಗ ಬೆರಗುಗಣ್ಣಿಂದ ನೋಡ್ತಾ ಇದ್ದ. ’ಏನು ಮಾಡ್ತಿದ್ದೀರ?’ ಕೇಳಿದ.

ನಿಮ್ಮ ಅಯ್ಯನೋರನ್ನ ಹುಡುಕ್ತಾ ಇದ್ದೀನಿ. ನಮಗೆಲ್ಲಾ ನರ ಇರ್ತಾವಲ್ಲಾ, ಹಾಗೇ ಗುಡ್ಡಕ್ಕೂ ನರಗಳಿರ್ತಾವೆ. ಎಲ್ಲಾ ಕಡೇನೂ ಹಬ್ಬಿರ್ತಾವೆ. ಕಣ್ಣಿಗೆ ಕಾಣೋಲ್ಲ. ಪ್ರತಿ ಗಿಡ, ಮರ, ಎಲೆ, ಹಣ್ಣು, ಹೂವನ್ನು ಕೂಡ ಅವು ತಮ್ಮಿಷ್ಟದಂತೆಯೇ ಬೆಳೆಸುತ್ತಾವೆ. ಅವಕ್ಕೆ ಅಷ್ಟು ಶಕ್ತಿಯಿರುತ್ತದೆ. ಈ ಜಾಗದಲ್ಲಿ ಹುಲ್ಲಿದೆ ಅಂದರೆ ಅವಕ್ಕೆ ಈ ಜಾಗದಲ್ಲಿ ಬೇರೆ ಏನು ಬೆಳೆಯುವುದೂ ಇಷ್ಟ ಇಲ್ಲ ಅಂತ ಅರ್ಥ. ಎಲ್ಲಾ ಕಡೆ ಹಬ್ಬಿರುತ್ತಾವೆ ಅಂತ ಅಂದೆನಲ್ಲ, ಈಗ ಅವುಗಳ ಜಾಡು ಹಿಡಿದು ನಿಮ್ಮ ಅಯ್ಯನೋರು ಎಲ್ಲಿದಾರೆ ಅಂತ ನೋಡೋಣ.

ಹುಡುಗ, ಕಣ್ಣು ಬಿಟ್ಟುಕೊಂಡು ನೋಡ್ತಾ ಇದ್ದ.
ಅಚ್ಯುತ, ಹಾಗೇ ಕುಳಿತವನು, ಸ್ವಲ್ಪ ತಡಕಾಡಿ ಒಂದು ಕಡೆ ಅಂಗೈಯೂರಿದ. ಅವನು ಹೇಳಿದ ಹಾಗೇ, ಆ ಗುಡ್ಡದ ಧಮನಿಗಳು ಅವನನ್ನು ತಬ್ಬಿ ಹಿಡಿದವು. ನೋಡುವವರಿಗೆ ಅವನನ್ನು ಯಾರೋ ಅದೃಶ್ಯ ಬಳ್ಳಿಗಳಿಂದ ಕಟ್ಟಿದ್ದಾರೇನೋ ಅನ್ನುವಂತಿತ್ತು. ಅಚ್ಯುತ ಮಾತ್ರ ಸಮಾಧಾನವಾಗಿಯೇ ಕುಳಿತಿದ್ದ. ಅವುಗಳಿಗೆ ಪೂರ್ತಿಯಾಗಿ ಶರಣಾಗಿದ್ದ. ಆ ಗುಡ್ಡದಲ್ಲೊಂದಾಗಿ ಬಿಟ್ಟಿದ್ದ. ಅವನಿಗೆ ಅಲ್ಲಿನ ಪ್ರತಿ ಚಲನೆಯೂ ಗೊತ್ತಾಗುತ್ತಿತ್ತು. ಪ್ರತಿ ಎಲೆ ಮಿಸುಗುವುದನ್ನೂ ಗುರುತಿಸಬಲ್ಲವನಾಗಿದ್ದ. ಪ್ರತಿ ಹೂವು, ಕಾಯಿ.. ಎಲ್ಲಾ... ಅವನಿಗೀಗ ಇಡೀ ಗುಡ್ಡದ ಜೀವ ಬಡಿತದ ಅರಿವಾಗತೊಡಗಿತ್ತು.
ಆ ಜೀವಸೆಲೆಯ ಕೇಂದ್ರಸ್ಥಾನವೆಲ್ಲಿದೆ ಅಂತ ಅರಸತೊಡಗಿದ. ಇಲ್ಲಿಲ್ಲ... ಅಲ್ಲಿಲ್ಲ... ಓ ಬಹುಶಃ ಅಲ್ಲಿದೆ ಎಂದು ನೋಡುವಷ್ಟರಲ್ಲಿ ಆ ಅದೃಶ್ಯ ಬಳ್ಳಿಗಳು ಅವನನ್ನು ಬಿಟ್ಟು ಬಿಟ್ಟವು. ತಮ್ಮನ್ನು ನಿಯಂತ್ರಿಸುವವನನ್ನು ಬಿಗಿದಪ್ಪುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಅವಕ್ಕನ್ನಿಸಿರಬೇಕು.

ಯಾವ ದಿಕ್ಕಿನಲ್ಲಿ ಶಕ್ತಿಕೇಂದ್ರವಿದೆಯೆಂದು ಅವನಿಗನ್ನಿಸಿತ್ತೋ ಆ ದಿಕ್ಕಿನೆಡೆಗೆ ಹೊರಟ.

ಮುಂದೆ ಓದಿ...