ಅಲ್ಲಿ ಪರ್ವತ ಪವಡಿಸಿತು - ೩

ಅಲ್ಲಿ ಪರ್ವತ ಪವಡಿಸಿತು - ೩

ಬರಹ

...ಇಲ್ಲಿಯವರೆಗೆ
-----------------------------

 

ಅದಾಗಲೇ ಇಲ್ಲೀ ತನಕ ಬಂದುಬಿಟ್ಟಿದೆಯಾ? ಗುಡ್ಡದಯ್ಯಾ, ಅದು ಆಟವಾಡೋ ವಸ್ತು ಅಲ್ಲ.
ಅಚ್ಯುತ ಯೋಚಿಸುತ್ತಿದ್ದ.

ಆಗ ಮತ್ತೆ ಘಂಟೆ ಶಬ್ದ ಕೇಳಿಸಿತು.

ಎಲ್ಲಿಂದ ಬಂತು ಅಂತ ಗಮನವಿಟ್ಟು ಕೇಳಿದಾಗ ಗುಡ್ಡದ ತುದಿಯಿಂದ ಬಂದದ್ದೆಂದು ತಿಳಿಯಿತು. ಓಡುತ್ತಲೇ ಗುಡ್ಡ ಹತ್ತತೊಡಗಿದ.

ಆ ಗುಡ್ಡದ ತುದಿಯಲ್ಲಿ ಅಯ್ಯನೋರು ಕುಳಿತಿದ್ದರು.

ಅವರನ್ನ ಅಲ್ಲಿ ನೋಡಿದ ತಕ್ಷಣ ಅಚ್ಯುತನಿಗೆ ತಾನು ಎಣಿಸಿದಂತೆಯೇ ಆಗುತ್ತಿದೆ ಎಂದೆನಿಸಿತು.

ನಿಮ್ಮ ಕಾಲು ಮುರಿದೇ ಇರಲಿಲ್ಲ. ನಿಮ್ಮನ್ನ ಜನ ಹುಡುಕಬಾರದೂಂತ ಇಲ್ಲಿಗೆ ಬಂದಿದ್ರಿ ಅಲ್ವಾ? ಅಚ್ಯುತ ಏದುಸಿರು ಬಿಡುತ್ತಲೇ ಕೇಳಿದ.

ಏನು ಹೇಳ್ತಾ ಇದ್ದೀರ‍ಿ? ಅಯ್ಯನೋರು ಕೇಳಿದರು.

ನನಗೆ ಘಂಟೆ ಶಬ್ದ ಕೇಳಿಸ್ತು. ನೀವೀಗ ಕುಚಿನಿಕೆಯನ್ನು ಕರೀತಾ ಇದ್ದೀರಿ ಅಲ್ವಾ? ಇಪ್ಪತ್ತೊಂದು ದಿನಗಳ ಕಾಲ ನಡೆಸೋ ಪ್ರಯೋಗ ಅದು. ಪ್ರಯೋಗ ಮುಗಿಯುತ್ತಾ ಬಂದ ಹಾಗೇ ಘಂಟೆ ಶಬ್ದ ಜೋರಾಗಿ ಕೇಳುತ್ತೆ. ಆದರೆ ಎಲ್ಲರಿಗೂ ಆ ಶಬ್ದ ಕೇಳೋಲ್ಲ. ನೀವೀಗ ಕುಚಿನಿಕೆಯನ್ನು ಕರೆದು, ನಿಮ್ಮನ್ನ ನೀವೇ ಬಲಿಕೊಟ್ಟು, ಅದರ ಕೈಗೆ ಈ ಗುಡ್ಡ ಬಿಟ್ಟು ಹೋಗಬೇಕು ಅಂತ ತೀರ್ಮಾನ ಮಾಡಿದ್ದೀರ‍ಿ ಅಲ್ವಾ? ಯಾಕೆ? ಅಚ್ಯುತ ಒಂದೇ ಉಸಿರಿನಲ್ಲಿ ಪ್ರಶ್ನಿಸಿದ.

ಅಯ್ಯನೋರು ಒಮ್ಮೆ ಜೋರಾಗಿ ಉಸಿರು ಬಿಟ್ಟರು.

ಈ ಮುಂಚೆ ಇಲ್ಲಿ ಇದ್ದ ಕುಚಿನಿಕೆ ಒಂದು ಸುಂದರವಾದ ಜಿಂಕೆಯ ರೂಪದಲ್ಲಿತ್ತು. ಅದರ ಕೋಡೇ ಸುಮಾರು ಎರಡು ಅಡಿ ಎತ್ತರವಿತ್ತು. ಅದು ಓಡ್ತಿದ್ರೆ ನೋಡ್ತಾನೇ ಇರಬೇಕು ಅಂತ ಅನ್ನಿಸೋದು. ಅಷ್ಟು ಸುಂದರವಾದ ಬೇರೆ ಕುಚಿನಿಕೆಯನ್ನು ನಾನು ನೋಡಿಲ್ಲ. ಆದ್ರೆ ನಾನು ಪಾಪಿ, ತಪ್ಪು ಮಾಡಿಬಿಟ್ಟೆ.

ಅಚ್ಯುತ ಅವರ ಮಾತನ್ನು ಅರ್ಧದಲ್ಲಿಯೇ ತಡೆದ.

ಆ ವಿಷಯ ಆಮೇಲೆ ಹೇಳಿ. ಮೊದಲು ಇಲ್ಲಿಗೊಂದು ದಿಗ್ಬಂಧನ ಹಾಕಬೇಕು. ಅಂದವನೇ ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ತಮ್ಮಿಬ್ಬರ ಸುತ್ತಲೂ ಒಂದು ಗೆರೆ ಹಾಕುತ್ತಾ ಮಂತ್ರ ಹೇಳತೊಡಗಿದ.

ಅಯ್ಯನೋರು ಮಾತು ಮುಂದುವರೆಸಿದರು.

ಇದರಿಂದೇನೂ ಆಗುವುದಿಲ್ಲ. ಅವಳಾಗಲೇ ಈ ಗುಡ್ಡಕ್ಕೆ ಬಂದಾಗಿದೆ. ಮೇಲಾಗಿ ಅವಳ ಶಕ್ತಿಯ ಮುಂದೆ ಇದೆಲ್ಲಾ ಏನೂ ಅಲ್ಲ. ಅವಳು, ಈ ಗುಡ್ಡಕ್ಕೆ ದೇವರಾಗಿರಬೇಕು, ನನ್ನಂತವನು ಅಲ್ಲ. ಆಮೇಲೆ ಇನ್ನೊಂದು, ನಾನು ಶಿವುಗೆ ಹೇಳಿಕೊಟ್ಟದ್ದು ನನಗೆ ತಿಳಿದ ಅಲ್ಪ ಸ್ವಲ್ಪ ವಿದ್ಯೆ ಹೊರತು ಅವನನ್ನು ನನ್ನ ನಂತರ ಇಲ್ಲಿ ಕೂರಿಸ್ಬೇಕು ಅಂತ ನನಗ್ಯಾವತ್ತೂ ಅನ್ನಿಸಿಲ್ಲ.

ನೀವು ಹೀಗೆ ಬಿಟ್ಟು ಹೋದರೆ ಊರವರ ಗತಿ ಏನು? ನಿಮ್ಮನ್ನು ಪೂಜೆ ಮಾಡ್ತಾರೆ ಅವರು. ನೀವು ಬೇಕು ಆ ಜನಕ್ಕೆ. ನೀವು ಈ ರೀತಿ ಹೋಗ್ಲಿಕ್ಕೆ ನಾನು ಬಿಡಲ್ಲ. ಅಚ್ಯುತ ಹೇಳ್ತಾನೇ ಹೋದ.

ದೂರ ಹೋಗು? ಅಯ್ಯನೋರ ದನಿ ಗಡುಸಾಗಿತ್ತು.

ಇದ್ದಕ್ಕಿದ್ದಂತೆ ಯಾವುದೋ ಅದೃಶ್ಯ ಶಕ್ತಿ ಅವನನ್ನು ಕೆಳಗೆ ನೂಕಿತು. ನಿಂತಿದ್ದ ಬಂಡೆಯಿಂದ ಕೆಳಗೆ ಬಿದ್ದ ಅವನು ಮೇಲೆ ನೋಡಿದ.

ಅಯ್ಯನೋರು ತಮ್ಮೆರಡೂ ಕೈಗಳನ್ನು ಮೇಲೆತ್ತಿ ನಿಂತಿದ್ದರು. ಮುಖ ಪ್ರಶಾಂತವಾಗಿತ್ತು. ಕಣ್ಣುಗಳು ಮುಚ್ಚಿದ್ದವು. ಅದೆಲ್ಲಿತ್ತೋ ಏನೋ ವಿಪರೀತ ರಭಸವಾಗಿ ಗಾಳಿ ಬೀಸತೊಡಗಿತು. ಯಾವುದೋ ಬೆಳಕು ಹತ್ತಿರಕ್ಕೆ ಬರುತ್ತಿದೆಯೇನೋ ಅಂತ ಅನ್ನಿಸಿತು.
ಆ ಬೆಳಕು ಹತ್ತಿರಕ್ಕೆ ಬಂದ ಹಾಗೇ ಕಣ್ಣು ಬಿಡಲಿಕ್ಕಾಗದಷ್ಟು ಪ್ರಕಾಶಮಾನವಾಗಿತ್ತು.
ಅದರಲ್ಲೇ ಕಷ್ಟಪಟ್ಟು ಅಯ್ಯನೋರ ಕಡೆಗೆ ನೋಡಿದ. ಅವರು ಆ ಬೆಳಕಲ್ಲಿ ನೆಂದು ಹೋಗಿದ್ದರು. ಅವರೇ ಒಂದು ದೀಪವೇನೋ ಅನ್ನುವಂತೆ ಹೊಳೆಯುತ್ತಾ ಇದ್ದರು. ನೋಡ್ತಾ ಇದ್ದ ಹಾಗೇ ಅವರು ಆ ಬೆಳಕಿನಲ್ಲಿ ಕರಗಿ ಹೋದರು.

ಅಚ್ಯುತ ಅಲ್ಲಿ ನಿಂತಿದ್ದವನು ಎಚ್ಚರ ತಪ್ಪಿ ಬಿದ್ದ.

ಅರೆ ಪ್ರಜ್ಞಾವಸ್ಥೆಯಲ್ಲಿದ್ದವನಿಗೆ ಒಂದು ಕನಸು ಕಂಡಿತು.

ಒಂದು ಮನೆ, ತುಂಬಾ ಜನರಿದ್ದಾರೆ. ಅಯ್ಯನೋರು ಕೂಡಾ ಇದ್ದರು. ಆದರೆ ಈಗಿನಂತೆ ವಯಸ್ಸಾಗಿರಲಿಲ್ಲ.

ಯಾರೋ ಕೇಳಿದರು.

ನೀವ್ಯಾಕೆ ನಮ್ಮಲ್ಲೇ ಉಳೀಬಾರ‍್ದು? ಪಾರುತೀನ ಮದುವೆಯಾಗಿ ಇಲ್ಲೇ ಉಳಿದುಬಿಡಬಹುದಲ್ವಾ?

ಇಲ್ಲ. ಅಲೆದಾಟ ಅನ್ನೋದು ನನಗೆ ಚಿಕ್ಕಂದಿನಿಂದ ಅಂಟಿದ ರೋಗ. ಒಂದೇ ಕಡೆ ನೆಲೆ ನಿಲ್ಲೋದು ಈ ಜೀವಕ್ಕೆ ಒಗ್ಗೋಲ್ಲ. ಅಯ್ಯನೋರು ಹೇಳಿದರು.

ನಿಜಕ್ಕೂ ಆಗಲ್ವಾ? ಪಾರುತೀಗೆ ಈ ಊರು ಅಂದ್ರೆ ತುಂಬಾ ಇಷ್ಟ. ಮತ್ತೊಬ್ಬಾಕೆ ಯಾರೋ ಕೇಳಿದರು. ಬಹುಶಃ ಪಾರುತಿ ತಾಯಿ ಇರಬೇಕು.

ಒಂದು ದಾರಿ ಇದೆ. ಗುಡ್ಡದಲ್ಲಿರೋ ಕುಚಿನಿಕೆಯನ್ನು ಬದಿಗೆ ಸರಿಸಿ, ನಾನೇ ಅಲ್ಲಿ ಉಳಿದುಬಿಡುವುದು. ಆಗ ನನ್ನ ಪ್ರಯೋಗಕ್ಕೂ ಅಡ್ಡಿ ಇರೋದಿಲ್ಲ. ನಿಮ್ಮ ಮಗಳೂ ಊರಲ್ಲಿದ್ದ ಹಾಗಾಗುತ್ತೆ. ಅಯ್ಯನೋರು ಜೋರಾಗಿ ನಕ್ಕರು.

ಉಳಿದವರೂ ನಕ್ಕರು. ಕುಚಿನಿಕೆ ಅಂದರೆ ಏನೆಂದು ಅವರಿಗೆ ಗೊತ್ತಿಲ್ಲ, ಆದರೆ ಗುಡ್ಡದಲ್ಲಿ ದೇವರಿದೆ ಅಂತ ಅವರಿಗೆ ಗೊತ್ತಿತ್ತು.


ಛೇ, ಛೇ, ಹಾಗೆಲ್ಲಾ ತಮಾಷೆಗೂ ಹೇಳುವುದು ತಪ್ಪು. ಕುಚಿನಿಕೆಯನ್ನು ಸರಿಸುವುದು? ಛೇ, ಅಯ್ಯನೋರಿಗೆ ಬೇಜಾರಾಗಿತ್ತು. ಉಳಿದವರೂ ಸುಮ್ಮನಾದರು.

ಮತ್ತೊಂದು ದೃಶ್ಯ.

ಅಯ್ಯನೋರ ಪೆಟ್ಟಿಗೆ ಮುಚ್ಚಳ ತೆರೆದಿದೆ. ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಯ್ಯನೋರ ಮುಖದಲ್ಲಿ ಗಾಬರಿ.

ಎಂಥಾ ಅನಾಹುತ ಆಗ್ಹೋಯ್ತು. ಅಯ್ಯೋ ಅಷ್ಟು ಅಮೂಲ್ಯವಾದದ್ದನ್ನು ಹೀಗ್ಯಾಕೆ ಬೇಜವಾಬ್ದಾರಿಯಿಂದ ಇಟ್ಟಿದ್ದೆ?

ಬಾಗಿಲು ಬಡಿದ ಸದ್ದು. ಅಯ್ಯನೋರು ತಡಬಡಿಸಿ ಎದ್ದು ಬಾಗಿಲು ತೆರೆದರು. ಹೊರಗಡೆ ಪಾರುತಿ ನಿಂತಿದ್ದಳು. ಮೈಯೆಲ್ಲಾ ರಕ್ತ. ಮುಖದಲ್ಲಿ ಕ್ಷುದ್ರಕಳೆ. ಕೈ ನೋಡ್ತಾರೆ, ಜಿಂಕೆ ತಲೆಯೊಂದನ್ನ ಹಿಡಿದಿದ್ದಳು.

ನಾನು ಸರಿಸಿಬಿಟ್ಟೆ. ನೀವು ಬಯಸಿದಂತೆ, ಈ ಗುಡ್ಡ ಇನ್ಮೇಲೆ ನಿಮ್ದೇ! ಅಲ್ಲಿ ಈಗ ಯಾರೂ ಇಲ್ಲ. ಈಗ ಇಲ್ಲೇ ಉಳಿದ್ಬಿಡಿ, ದಯವಿಟ್ಟು...
ಹಾಗೆ ಹೇಳ್ತಾನೇ ಅವಳು ಕುಸಿದಳು.

ಅಚ್ಯುತನಿಗೆ ಎಚ್ಚರವಾಯ್ತು. ಅವನು ಆ ಗುಡ್ಡದಲ್ಲಿದ್ದ ಅಯ್ಯನೋರ ಗುಡಿಸಲಲ್ಲಿದ್ದ. ಎದುರಿಗೆ ಶಿವು ಕುಳಿತಿದ್ದ.

ಏನಾಯ್ತು? ಅಚ್ಯುತ ಕೇಳಿದ.

ಮೊನ್ನೆ ರಾತ್ರಿ ನೀವು ಕೂಗಿದ್ದನ್ನ ನಾನು ಕೇಳ್ಸ್ಕಂಡೆ. ಗುಡ್ಡ ಹತ್ತಿ ಮೇಲ್ಬಂದು ನೋಡಿದ್ರೆ ನೀವು ಎಚ್ಚರ ತಪ್ಪಿ ಬಿದ್ದಿದ್ರಿ. ಬೆಳಗ್ಗೆ ತನಕ ಕುಂತೆ, ನೀವು ಎದ್ದೇಳ್ಲಿಲ್ಲ. ಊರಿಂದ ಆಳು ಕರ‍್ಕಂಡ್ ಬಂದು ನಿಮ್ಮನ್ನ ಇಲ್ಲಿ ಮಲಗ್ಸೀವ್ನಿ. ಅಯ್ಯನೋರು ಎಲ್ಲಿ? ಶಿವು ಕೇಳಿದ.

ತಾನು ಎರಡು ದಿನದಿಂದ ಮಲಗಿದ್ದೀನಿ ಎಂದು ಅಚ್ಯುತನಿಗೆ ತಿಳಿಯಿತು.

ಅವರಿನ್ನಿಲ್ಲ, ಕುಚಿನಿಕೆ ಅವರನ್ನ ಆಪೋಶನ ತಗೊಂಡಳು. ಊರಲ್ಲಿ ಜನ ಏನಂತಾರೆ? ಅಚ್ಯುತ ಕೇಳಿದ.

ಶಿವು ಮುಖದಲ್ಲಿ ಸಮಾಧಾನ, ಸಂಕಟ ಎರಡೂ ಒಟ್ಟಿಗೇ ಗೋಚರಿಸಿದವು.

ಊರಲ್ಲಿ ಯಾರ‍್ಗೂ ಅವರ ನೆಪ್ಪಿಲ್ಲ. ಅಯ್ಯನೋರು ಅಂದ್ರೆ ಯಾರು ಅಂತಾರೆ. ನಿಮ್ಗೊಬ್ರಿಗೇ ಅವ್ರ ನೆನ್ಪಿರೋದು. ಶಿವು ಹೇಳಿದ.

ಅಚ್ಯುತನಿಗೆ ಆಶ್ಚರ್ಯವಾಯಿತು. ಕುಚಿನಿಕೆ ಅಯ್ಯನೋರನ್ನಷ್ಟೇ ಅಲ್ಲ, ಅವರ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಳು. ಆ ರಾತ್ರಿ ಗುಡ್ಡದಲ್ಲಿದ್ದುದರಿಂದ ತನಗೂ, ಶಿವುಗೂ ಅವರ ನೆನಪಿದೆ ಎಂದು ನಂತರ ಹೊಳೆಯಿತು.

ಆ ದಿನ, ಸಂಜೆ ಹೊತ್ತಿಗೆ ಅಚ್ಯುತ ಪೂರ್ತಿಯಾಗಿ ಸುಧಾರಿಸಿಕೊಂಡಿದ್ದ. ಶಿವುಗೆ ವಿದಾಯ ಹೇಳಿ ಮತ್ತೊಂದು ಸಲ ಕೊನೆಯದಾಗಿ ಗುಡ್ಡ ನೋಡಲು ಹೊರಟ.

ಗುಡ್ಡ ಹತ್ತುತ್ತಾ ರಾತ್ರಿಯಾಯಿತು. ಹುಣ್ಣಿಮೆಯಲ್ಲಿ ಆ ಗುಡ್ಡ ಮತ್ತಷ್ಟು ಸುಂದರವಾಗಿ ಕಾಣ್ತಿತ್ತು. ಯಾರೋ ಹಾಲಿನ ಪಾತ್ರೆ ಚೆಲ್ಲಿದ್ದಾರೇನೋ ಅನ್ನುವಂತೆ ಬೆಳದಿಂಗಳು ಬಿದ್ದಿತ್ತು. ಆ ಪರ್ವತ ನೆಮ್ಮದಿಯಾಗಿ ನಿದ್ರಿಸುತ್ತಿದೆ ಎಂದು ಅವನಿಗೆ ಅನ್ನಿಸಿತು.

ಅಚ್ಯುತನಿಗೆ ಆ ರಾತ್ರಿ ಮತ್ತೆ ನೆನಪಾಯಿತು.

ಬೇರೆ ಯಾವುದಾದ್ರೂ ಒಂದು ದಾರಿಯಿರಬೇಕು - ಇವನ ಧ್ವನಿ.

ಇಲ್ಲ, ಇದೊಂದೇ ದಾರಿ ಉಳಿದಿರುವುದು - ಅಯ್ಯನೋರ ದನಿ.

ಅಚ್ಯುತ ತಾನು ಕಂಡದ್ದು ಕನಸಲ್ಲ, ಅಯ್ಯನೋರೇ ಸ್ವತಃ ಯಾರಿಗೂ ಹೇಳದ ತಮ್ಮ ಕಥೆ ಹೇಳಿದ್ದೆಂದು ನಂಬಿದ್ದ.

ಅಚ್ಯುತ ಆಗಲೇ ಗುಡ್ಡದ ತುದಿ ತಲುಪಿದ್ದ. ಮತ್ತದೇ ಬಂಡೆಯ ಬಳಿ, ತಲೆಯೆತ್ತಿ ನೋಡಿದ. ಆಗ ಅದು ಕಾಣಿಸಿತು!

ಆ ಬಂಡೆಯ ಮೇಲೆ ನಂಬಲಸಾಧ್ಯವಾಗುವಷ್ಟು ಎತ್ತರಕ್ಕೆ ಸುರುಳಿಯಾಗಿ ಸುತ್ತಿಕೊಂಡು ಅಜಗರವೊಂದು ಕುಳಿತಿತ್ತು. ಇವನನ್ನೇ ದಿಟ್ಟಿಸಿ ನೋಡುತ್ತಿತ್ತು.

ಒಬ್ಬ ವ್ಯಕ್ತಿಯ ಆತ್ಮವನ್ನರಿಯುವುದು ಎಷ್ಟು ವಿಸ್ಮಯಕಾರಿ ಸಂಗತಿ ಅಲ್ಲವೇ ಕುಚಿನಿಕೆ? ಅಚ್ಯುತ ಕೇಳಿದ.

ಇವನನ್ನೇ ದಿಟ್ಟಿಸಿ ನೋಡುತ್ತಿದ್ದ ಅಜಗರ, ಸುರುಳಿಯಾಗಿ ಸುತ್ತಿದ್ದ ತನ್ನ ದೇಹದ ಮೇಲೆ ತಲೆಯನ್ನಿಟ್ಟು, ಕಣ್ಣು ಮುಚ್ಚಿ, ಒಮ್ಮೆ ಜೋರಾಗಿ ಭುಸುಗುಟ್ಟಿತು.

ಅದು ನಿಟ್ಟುಸಿರು ಬಿಟ್ಟಿತೋ, ಹೌದೆಂದಿತೋ ಅಚ್ಯುತನಿಗೆ ಗೊತ್ತಾಗಲಿಲ್ಲ.
ಅವನು ಅದನ್ನೇ ನೋಡುತ್ತಾ ಕುಳಿತ.