ಅವಕಾಶ, ಲಭ್ಯ ಮತ್ತು ಪ್ರಾಪ್ತಿ -ಕಲ್ಪನೆಯ ಒಂದು ಸಣ್ಣ ಕಥೆ

ಅವಕಾಶ, ಲಭ್ಯ ಮತ್ತು ಪ್ರಾಪ್ತಿ -ಕಲ್ಪನೆಯ ಒಂದು ಸಣ್ಣ ಕಥೆ

“ ದೇವರಲ್ಲಿ ಏನು ಬೇಡುವುದು “

ಸಂಧ್ಯಾವಂದನೆ ಮತ್ತು ದೇವರ ಪೂಜೆ ಮುಗಿಸಿ ಸೋಫಾದ ಮೇಳೆ ಕುಳಿತಿದ್ದ ಜಾನಕಿರಾಮಯ್ಯ ನವರಿಗೆ ಮನಸ್ಸಿನಲ್ಲಿ ಏಳುತಿದ್ದ ಪ್ರಶ್ನೆ ಇದು.

ಜಾನಕಿರಾಮಯ್ಯನವರ ತಂದೆಗೆ ನಾಲ್ಕು ಜನ ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಇವರೇ ಕಡೆಯವರು ಚಿಕ್ಕಂದಿನಿಂದಲು ಕಷ್ಟದಲ್ಲೇ ಬೆಳೆದು ಬೆಂಗಳೂರಿನ ಅಣ್ಣನ ಮನೆಯಲ್ಲಿ ಇದ್ದುಕೊಂಡು ಹೇಗೋ ಓದು ಮುಗಿಸಿ ಸರ್ಕಾರಿ ಕೆಲಸಕ್ಕೆ ಸೇರಿ, ಅವರ ತಾಯಿಯ ಅಣ್ಣನ ಮಗಳಾದ ಲಕ್ಷ್ಮಮ್ಮ ನವರನ್ನ ಮದುವೆ ಆಗಿದ್ರು, ಇವರ ಪಾಲಿಗೆ ಬಂದಿದ್ದ ಹಳ್ಳಿಯಲ್ಲಿದ್ದ ಸ್ವಲ್ಪ ಜಮೀನನ್ನ ಮಾರಿ ಬೆಂಗಳೂರಿನ ಜಯನಗರದಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರು ಈಗ ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ ನಿವೃತ್ತ ಜೀವನ ನಡೆಸುತ್ತಾ ಇದ್ದರು.

ಜಾನಕಿರಾಮಯ್ಯನವರಿಗೆ ಆರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಮೊದಲನೆಯದು ಹೆಣ್ಣಾದ ಮೇಲೆ ಎರಡನೆಯದು ಗಂಡು ಮಗು ಆಗಿತ್ತು, ಇನ್ನೊಂದು ಗಂಡು ಮಗು ಬೇಕೆಂಬ ಆಸೆಯಿಂದ ನಂತರ ಐದು ಹೆಣ್ಣು ಮಕ್ಕಳನ್ನು ಪಡೆದಿದ್ದರು, ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗನಿಗೆ ಮದುವೆ ಆಗಿತ್ತು ಉಳಿದ ನಾಲ್ಕು ಹೆಣ್ಣು ಮಕ್ಕಳಿಗೆ ಗಂಡು ಹುಡುಕುತ್ತಾ ಇದ್ದರು .

ಇವನು ಇಂಜಿನಿಯರ್ ಅಲ್ಲ, ಬೆಂಗಳೂರಿನಲ್ಲಿ ವಾಸವಾಗಿಲ್ಲ, ಅತ್ತೆ ಮಾವ ಜೊತೆಯಲ್ಲಿ ಇರ್ತಾರೆ, ಹೀಗೆ ಏನೋ ಒಂದು ನೆಪ ಹೇಳಿ ಬಂದ ಗಂಡುಗಳನ್ನ ಒಪ್ಪುತ್ತಿರಲಿಲ್ಲ ಮೂರನೆ ಮಗಳು, ಇವಳ ಮದುವೆ ಆಗುವವರೆಗೆ ಉಳಿದವರ ಮದುವೆ ಆಗುವಂತಿಲ್ಲ, ಇದೇ ಜಾನಕಿರಾಮಯ್ಯ ಮತ್ತು ಲಕ್ಷ್ಮಮ್ಮ ನವರಿಗೆ ಒಂದು ದೊಡ್ಡ ಯೋಚನೆಯಾಗಿತ್ತು. ಹೀಗಾಗಿ ಈಗಿರುವ ಮನೆಯನ್ನು ಮಾರಿ ಬರುವ ಹಣದಲ್ಲಿ ಬೇರೆ ಏರಿಯಾದಲ್ಲಿ ಕಡಿಮೆ ಬೆಲೆಗೆ ಮನೆಯೊಂದನ್ನ ಖರೀದಿಸಿ ಉಳಿದ ಹಣದಲ್ಲಿ ಮದುವೆ ಮಾಡುವುದು, ಮದುವೆಗೆ ಹೆಣ್ಣು ಮಕ್ಕಳು ಒಪ್ಪದಿದ್ದಲ್ಲಿ ಆ ಹಣವನ್ನ ಅವರುಗಳ ಹೆಸರಿಗೆ ಠೇವಣಿ ಇಡುವುದು ಎಂದು ನಿರ್ಧರಿಸಿದ್ದರು. ನಮ್ಮ ನಂತರವು ಅವರುಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿದ್ದರು . ಇದಕ್ಕೆ ಅವರ ಮಕ್ಕಳು ಸಹ ಒಪ್ಪಿಗೆ ಸೂಚಿಸಿದ್ದರು.

ಜಾನಕಿರಾಮಯ್ಯನವರದು ಸಾತ್ವಿಕ ಸ್ವಭಾವದ ವೆಕ್ತಿತ್ವ, ಯಾವುದೇ ಮಾತಿಗೂ ಯಾರ ಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ , ದ್ವೇಷಸಾಧನೆಯನ್ನಂತು ಮಾಡುತ್ತಲೆ ಇರಲಿಲ್ಲ , ದೇವರ ಮೇಲೆ ಅಚಲವಾದ ನಂಬಿಕೆ ಮತ್ತು ಭಕ್ತಿಯನ್ನು ಇಟ್ಟದ್ದವರು, ಅದರಲ್ಲೂ ಇವರ ಮನೆದೇವರಾದ ಶ್ರೀ ವೆಂಕಟೇಶ್ವರಸ್ವಾಮಿಯ ಮೇಲೆ ಅಪಾರವಾದ ನಂಬಿಕೆ, ಎಲ್ಲವೂ ಅವನ ಪ್ರೇರಣೆಯಂತೆ ನಡೆಯುತ್ತದೆ ಎಂದು ನಂಬಿದ್ದವರು.

ಅಂದು ಬೆಳಗಿನಜಾವ ಕನಸಿನಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ನೀಡಿ ನಿನಗೆ ಏನು ಬೇಕೋ ಬೇಡಿಕೋ ಅದನ್ನ ನೀಡುತ್ತೇನೆ ಎಂದು ಅಭಯ ನೀಡಿದ್ದ, ಅಷ್ಟೆ ಆಗಿದ್ದರೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಸಂಧ್ಯಾವಂದನೆ ಮಾಡಿ ಗಾಯಿತ್ರಿ ಜಪ ಮಾಡುವಾಗ ಮತ್ತೆ ದರ್ಶನ ನೀಡಿ ಇದೇ ಮಾತನ್ನು ಹೇಳಿದಂತ ಅನುಭವ ಆಗಿತ್ತು. ಹಿಂದೆಂದು ಇಂತಹ ಅನುಭವ ಆಗಿರಲಿಲ್ಲ ಹಾಗಾಗಿ ಇಂದು ನಾನು ಬೇಡುವುದನ್ನ ಶ್ರೀ ವೆಂಕಟೇಶ್ವರ ಸ್ವಾಮಿ ನೀಡೇ ನೀಡುತ್ತಾನೆ ಎಂಬ ಅಚಲವಾದ ನಂಬಿಕೆ ಜಾನಕಿರಾಮಯ್ಯನವರಿಗೆ . ಏನು ಬೇಡುವುದು ಎಂಬ ಗೊಂದಲದಲ್ಲಿ ಯೋಚಿಸುತ್ತ ಕುಳಿತಿದ್ದರು.

ಆಡುಗೆ ಮನೆಯಿಂದ ಕಾಫಿ ತಂದ ಇವರ ಹೆಂಡತಿ ಲಕ್ಷ್ಮಮ್ಮ ನವರು ಇವರ ಕೈಗೆ ಕಾಫಿ ಲೋಟ ಕೊಡುತ್ತ   ಬೆಳಗ್ಗೆ ಎದ್ದು ಸಂಧ್ಯಾವಂದನೆ, ದೇವರ ಪೂಜೆ ಮುಗಿಸಿ ನಂತರ ಪೇಪರ್ ನ ಮೊದಲ ಪುಟದಿಂದ ಕೊನೆ ಪುಟದ ವರೆಗೆ ಓದಿಯೆ ಮುಂದಿನ ಕೆಲಸಕ್ಕೆ ಹೊರಡುತಿದ್ದವರು ಸುಮ್ಮನೆ ಕುಳಿತಿರುವುದನ್ನು ನೋಡಿ “ ಏನ್ರಿ ಇದು ಆಶ್ಚರ್ಯ ಪೇಪರ್ ಒದ್ತಾ ಇಲ್ಲ “ ಅಂತ ಕೇಳಿದರು.

“ ಯಾಕೋ ಪೇಪರ್ ಓದೊಕ್ಕೆ ಮನಸ್ಸಿಲ್ಲ ಕಣೇ …” ಅಂದರು ಜಾನಕಿ ರಾಮಯ್ಯನವರು “ ಯಾಕ್ರಿ ಮೈಯಲ್ಲಿ ಸರಿ ಇಲ್ವ , ರಾತ್ರಿ ಬಿ.ಪಿ. ಮಾತ್ರೆ ತಗೊಂದ್ರಿತಾನೆ “ “ ತಗೊಂಡಿದ್ದೆ ಕಣೇ … ಅದಕ್ಕಲ್ಲ, ಇವತ್ತು ಬೆಳಗಿನ ಜಾವ ಕನಸಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಬಂದು ಇವತ್ತು    ನಿನಗೆ ಏನು ಬೇಕು ಅದನ್ನು ಕೇಳಿಕೊ ಅದನ್ನು ನಿನಗೆ ನೀಡುತ್ತೇನೆ ಅಂತ ಹೇಳಿದ್ದಾನೆ, ಸ್ವಾಮಿ ಹತ್ರ ಏನು ಕೇಳೋದು ಅಂತ ಗೊಂದಲ ಆಗಿದೆ “

“ ನಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆ ಕಡೆ ಸಂಬಂಧ ಸಿಗಲಿ ಅಂತ ಕೇಳಿಕೊಳ್ರಿ “

“ ನನಗೂ ಹಾಗೆ ಅನ್ನಿಸಿತು ಆದರೆ ಮದುವೇ ಅನ್ನೋದು ದೈವ ನಿರ್ಣಯ ಅದರ ಬಗ್ಗೆ ಕೇಳೋಕೆ ಮನಸ್ಸಾಗುತ್ತಿಲ್ಲ “ ಅಂದರು ಜಾನಕಿ ರಾಮಯ್ಯ ನವರು .

“ ಹಾಗದರೆ ಒಂದು ಕೆಲಸ ಮಾಡಿ ಹೇಗೂ ಮನೆ ಮಾರಬೇಕು ಅಂತ ಇದೀವಲ್ಲ ಸ್ವಲ್ಪ ಜಾಸ್ತಿ ಬೆಲೆಗೆ ಹೋಗು ಹಾಗೆ ಮಾಡು ಅಂತ ಕೇಳಿಕೊಳ್ಳಿ” ಅಂದರು ಲಕ್ಷ್ಮಮ್ಮ ನವರು, ಅವರಿಗೂ ದೇವರ ಮೇಲೆ ನಂಬಿಕೆ ಜಾಸ್ತಿ, ಅವರ ಕೋರಿಕೆಯನ್ನು ಶ್ರೀ ವೆಂಕಟೇಶ್ವರ ಸ್ವಾಮಿ   ಈಡೇರಿಸುತ್ತಾನೆ ಎಂಬ ಅಚಲವಾದ ಭರವಸೆ , ಹಾಗಾಗಿ ಸ್ವಲ್ಪ ಜಾಸ್ತಿ ಹಣ ಬಂದರೆ ಅನುಕೂಲ ಆಗುತ್ತೆ ಅನ್ನೊ ಆಸೆಯಿಂದ ಈ ರೀತಿ ಸಲಹೆ ಕೊಟ್ಟರು.

ಲಕ್ಷ್ಮಮ್ಮ ನವರ ಸಲಹೆ ಕೇಳಿದ ಜಾನಕಿರಾಮಯ್ಯ ವ್ಯಾಮೋಹಕ್ಕೆ ಒಳಗಾದರು   ಹೌದು ಇದೆ ಸರಿ ಸ್ವಲ್ಪ ಜಾಸ್ತಿ ಹಣ ಬಂದರೆ ಮುಂದೆ ಅಕಸ್ಮಾತ್ ನಾವು ಇಲ್ಲದೆ ಇದ್ದರು ಮಕ್ಕಳಿಗೆ ಯಾವುದೇ ತೊಂದರೆ ಆಗಲ್ಲ, ಇದನ್ನೆ ಕೇಳಿಕೊಳ್ಳೋದು ಅಂತ ತೀರ್ಮಾನ ಮಾಡಿ ಮನಸ್ಸಿನಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದ್ಯಾನಿಸಿ ತಮ್ಮ ಕೋರಿಕೆಯನ್ನು ಮುಂದಿಟ್ಟರು.

ಅವರು ದೃಢವಾಗಿ ನಿರ್ದರಿಸಿ ಕೋರಿಕೊಂಡ ತಕ್ಷಣ ಪೋನ್ ರಿಂಗಾಯಿತು ರಿಸಿವರ್ ತೆಗೆದು ಹಲೋ… ಎಂದರು ಆಕಡೆಯಿಂದ “ ನಾನು ಸಾರ್ ಶ್ರೀನಿವಾಸ್ ಅದೇ ನಿಮ್ಮ ಮನೆ ಮಾರಾಟ ಮಾಡಿಸಿಕೊಡಲು ಹೇಳಿದ್ರಲ್ಲ …. ಒಬ್ಬ ಒಳ್ಳೆ ಪಾರ್ಟಿ ಇದರೆ ಅವರಿಗೆ ಜಯನಗರದಲ್ಲೆ ಮನೆ ಬೇಕಂತೆ ಅವರನ್ನ ಕರೆದುಕೊಂಡ್ ಬರಣ ಅಂತ ಇದೀನಿ , ನೀವು ಎಷ್ಟಕ್ಕೆ ಕೊಡಬೇಕು ಅಂತ ಅನ್ಕೊಂಡಿದೀರ ಹೇಳಿದರೆ … ಅದನ್ನ ಅವರಿಗೆ ಮುಂಚೇನೆ ತಿಳಿಸಿರ್ತಿನಿ ..” ಅಂದ .

ಒಂದು ಕ್ಷಣ ಜಾನಕಿರಾಮಯ್ಯನವರಿಗೆ ಮಾತೆ ಹೊರಡದಂತಾಯಿತು ಕೋರಿದ ತಕ್ಷಣವೇ ಶ್ರೀವೆಂಕಟೇಶ್ವರ ಸ್ವಾಮಿ ಎಷ್ಟು ಹಣ ಬೇಕು ಅಂತ ಕೇಳಿಸುತ್ತಿದ್ದಾನಲ್ಲ ಎಂದು ಮನಸ್ಸಿನಲ್ಲಿಯೆ ವಂದಿಸಿದರು. ಸ್ವಲ್ಪ ಯೋಚಿಸಿ ಐವತ್ತು ಲಕ್ಷಕ್ಕೆ ಈ ಮನೆ ಮಾರಾಟ ಆದರೆ ಹದಿನೈದು ಲಕ್ಷದೊಳಗೆ ಇನ್ನೊಂದು ಮನೆ ಖರೀದಿಸಿ ಉಳಿದ ಹಣವನ್ನು ಹೆಣ್ಣು ಮಕ್ಕಳ ಮದುವೆಗೆ ಬಳಸಬಹುದು ಅಥವಾ ಅವರುಗಳ ಹೆಸರಿಗೆ ಠೇವಣಿ ಇಡಬಹುದು ಅಂತ ನಿರ್ಧರಿಸಿ “ ಐವತ್ತು ಲಕ್ಷ ಬಂದರೆ ಕೊಡೋಣ ಅಂತ ಶ್ರೀನಿವಾಸ್ “ ಅಂದರು “ ಸರಿ ಸಾರ್ ಇನ್ನೊಂದು ಗಂಟೆ ಒಳಗೆ ಅವರನ್ನ ಕರ್ಕೊಂಡು ಬರ್ತೀನಿ “ ಅಂತ ಶ್ರೀನಿವಾಸ್ ಪೋನ್ ಕಟ್ ಮಾಡಿದ.

ಶ್ರೀನಿವಾಸ್ ಹೇಳಿದಂತೆ ಒಂದು ಗಂಟೆಯೊಳಗೆ ಮನೆ ಖರೀದಿಸುವವರೊಂದಿಗೆ ಅವರದೇ ಕಾರ್ ನಲ್ಲಿ ಬಂದಿಳಿದ 

ಮನೆಯನ್ನೆಲ್ಲಾ ನೋಡಿದ ಅವರು “ ನನಗೆ ಮನೆ ಒಪ್ಪಿಗೆ ಆಗಿದೆ ಐವತ್ತೈದು ಲಕ್ಷಕ್ಕೆ ತಗೊಳಕ್ಕೆ ರೆಡಿ ಇದೀನಿ ಏನಂತಿರಿ ರಾಯರೆ ….” ಅಂದರು ಜಾನಕಿರಾಮಯ್ಯನವರನ್ನ ನೋಡಿ, ಇದೇನು ಇವರು ಐವತ್ತೈದು ಲಕ್ಷ ಅಂತ ಇದರಲ್ಲ ಇರಲಿ ಆಮೇಲೆ ಶ್ರೀನಿವಾಸ್ ನ ಕೇಳಿದರಾಯಿತು ಅಂತ “ ಆಯಿತು ನನಗೂ ಒಪ್ಪಗೆ ಇದೆ “ ಅಂದರು ಜಾನಕಿ ರಾಮಯ್ಯ ನವರು .

ಐದು ಲಕ್ಷ ಅಡ್ವಾನ್ಸ್ ಕೊಟ್ಟು ಇನ್ನೊಂದು ತಿಂಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದಾಗಿ ತಿಳಿಸಿ ಹೋದರು. ಅವರನ್ನು ಕಳುಹಿಸಿ ಒಳಬಂದ ಶ್ರೀನಿವಾಸ್ “ ನಾನೆ ಅವರಿಗೆ ಅರವತ್ತು ಲಕ್ಷ ಅಂತ ಹೇಳಿದ್ದೆ ಅವರು ಐವತ್ತೈದು ಲಕ್ಷಕ್ಕೆ ಒಪ್ಪಿಕೊಂಡರು ನಿಮ್ಮಂತ ಒಳ್ಳಯವರಿಗೆ ನನ್ನಿಂದಲೂ ಸ್ವಲ್ಪ ಸಹಾಯ ಆಗಲಿ ಅನ್ನೋ ಉದ್ದೇಶ, ಹಾಗೆ ನೀವು ಕಮೀಶನ್ ಏನು ಕೊಡಬೇಡಿ ಎರಡು ಸೇರಿಸಿ ಅವರ ಹತ್ತಿರನೆ ತೆಗೆದುಕೋಡಿದ್ದೇನೆ , ಇನ್ನೊಂದು ವಿಷಯ ಕುಮಾರಸ್ವಾಮಿ ಲೇಔಟ್ ನಲ್ಲಿ ನಿಮಗೆ ಅಡ್ಜಸ್ಟ್ ಆಗೋ ಅಂತ ಒಂದು ಮನೆ ಇದೆ ನೋಡಿ ನೀವು ಒಪ್ಪಿಕೊಂಡರೆ ಎರಡು ವ್ಯವಹಾರನು ಒಂದೆ ಸರ್ತಿ ಮುಗಿದು ಹೋಗುತ್ತೆ ಏನಂತೀರಿ…..” ಅಂದ      “ ಏನು ಹೇಳೋದು ಅಂತ ಗೊತ್ತಾಗ್ತ ಇಲ್ಲ ಶ್ರೀನಿವಾಸ್, ನಿಮ್ಮಂತ ಒಳ್ಳೆ ಗುಣ ಇರೋರು ಸಿಕ್ಕಿರೋದು ನಮ್ಮ ಪುಣ್ಯ ನೀವು ಹೇಳಿದಂತೆ ಆಗಲಿ ಆದರೂ ನಿಮ್ಮ ಕಮೀಶನ್ ತಗೊಂಡಿದ್ದರೆ ಚನ್ನಾಗಿತ್ತು “ ಅಂದರು ಜಾನಕಿರಾಮಯ್ಯನವರು.

“ನಾನು ಕರೆದುಕೊಂಡು ಬಂದಿದ್ದ ಪಾರ್ಟಿ ಗ್ರಾನೈಟ್ ಬಿಸಿನೆಸ್ ಮಾಡ್ತಾರೆ, ಕೋಟ್ಯಾಂತರ ರೂಪಾಯಿ ಹಣ ಇದೆ ಸ್ವಲ್ಪ ಹಣ ನಿಮ್ಮಂತವರಿಗೆ ನೀಡಿದರೆ ಸದ್ವಿನಿಯೋಗ ಆದ ಹಾಗೆ ಆಗುತ್ತೆ ಅದರ ಬಗ್ಗೆ ನೀವೇನು ಯೋಚನೆ ಮಾಡಬೇಡಿ ಸಂಜೆ ಬಂದು ನಿಮ್ಮನ್ನ ಮನೆ ತೋರಿಸೋಕೆ ಕರೆದುಕೊಂಡು ಹೋಗುತ್ತೀನಿ ನಾನು ಬರ್ತಿನಿ “ ಅಂತ ಹೇಳಿ ಹೋದ ಶ್ರೀನಿವಾಸ್.

ಒಂದು ತಿಂಗಳೊಳಗೆ ಎಲ್ಲ ವ್ಯವಹಾರಗಳು ಸುಸೂತ್ರವಾಗಿ ಮುಗಿದು ಜಾನಕಿ ರಾಮಯ್ಯನವರ ಸಂಸಾರ ಹೊಸಮನೆಗೆ ಬಂದಿತ್ತು, ಉಳಿದ ಹಣವನ್ನು ಹೆಣ್ಣಮಕ್ಕಳ ಹೆಸರಿಗೆ ಠೇವಣಿ ಇರಿಸಿದ್ದರು ಅಂದುರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ಜಾನಕಿರಾಮಯ್ಯನವರಿಗೆ ಎಲ್ಲವು ಕನಸಿನಲ್ಲಿ ನಡೆದಂತೆ ಅನಿಸುತಿತ್ತು ಇದ್ದಕಿದ್ದಂತೆ ಅವರ ಮನಸ್ಸಿನಲ್ಲಿ ವ್ಯಾಕುಲತೆ ಆವರಿಸಿತು ಛೇ ಎಂತಹ ದಡ್ಡತನದ ಕೆಲಸ ಮಾಡಿದೆ ಸಾವಿರಾರು ವರ್ಷ ತಪಸ್ಸು ಮಾಡಿ ಸಾಧನೆ ಮಾಡಿದರು ಸಿಗದ ಅವಕಾಶ ಶ್ರೀ ವೆಂಕಟೇಶ್ವರ ಸ್ವಾಮಿ ನನಗೆ ಕರುಣಿಸಿದ್ದ, ಈ ಜೀವನ್ಮರಣ ಚಕ್ರದಿಂದ ಬಿಡುಗಡೆ ಮಾಡೆಂದು ಕೋರುವುದನ್ನು ಬಿಟ್ಟು ಪ್ರಾಪಂಚಿಕ ಆಸೆಗೆ  ಮರುಳಾದೆನಲ್ಲ ಎಂತ ಮೂಡ ನಾನು ಎಂದು ದುಃಖಿತರಾಗಿ ಹಾಗೆ ನಿದ್ದೆಗೆ ಜಾರಿದರು.

ಅಂದು ಅವರ ಕನಸಿನಲ್ಲಿ ಮತ್ತೆ ದರ್ಶನ ನೀಡಿದ ಶ್ರೀವೆಂಕಟೇಶ್ವರ ಸ್ವಾಮಿ “ಏನು ಮಗು ನಿನ್ನ ಕೋರಿಕೆಯಲ್ಲ ಈಡೇರಿತಲ್ಲ ನೀನು ಕೋರಿದ್ದಕಿಂತ ಸ್ವಲ್ಪ ಜಾಸ್ತಿನೆ ಸಿಗೋ ಹಾಗೆ ಮಾಡಿದ್ದೇನೆ ಈಗ ಸಂತೋಷನಾ “ ಅಂತ ಕೇಳಿದ “ ಯಾಕೆ ನನಗೆ ಮಾಯೆ ಮುಸುಕುವಾಗ ಹಾಗೆ ಮಾಡಿದೆ ತಂದೆ, ಮುಕ್ತಿಯನ್ನು ಬೇಡುವಂತೆ ಏಕೆ ನನಗೆ ಪ್ರೇರಣೆ ನೀಡಲಿಲ್ಲ, ಹಣದಾಸಗೆ ಮರುಳಾಗುವಂತೆ ಏಕೆ ಮಾಡಿದೆ“ ಅಂತ ಕೇಳಿದರೂ ಜಾನಕಿರಾಮಯ್ಯನವರು. ಇವರ ಪ್ರಶ್ನೆಗೆ ಶ್ರೀವೆಂಕಟೇಶ್ವರ ಸ್ವಾಮಿ ಮುಗಳ್ನಗೆ ಯನ್ನು ಸೂಸೂತ್ತ ನಿಧಾನವಾಗಿ ಕತ್ತಲಲ್ಲಿ ಕರಿಗಿ ಹೋದ. ಜಾನಕಿರಾಮಯ್ಯ ನವರಿಗೆ ತಕ್ಷಣ ಎಚ್ಚರವಾಯಿತು, ಗಡಿಯಾರ ನೋಡಿದರು ಅದರ ಕೆಲಸ ಅದು ಮಾಡುತ್ತ ಐದು ಗಂಟೆ ಎಂದು ತೋರಿಸುತಿತ್ತು, ದುಗುಡ ತುಂಬಿದ ಮನಸ್ಸಿನಿಂದ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಬಾಯ್ಲರ್ ಸ್ವಿಚ್ ಹಾಕಲು ಬಚ್ಚಲಮನೆ ಕಡೆ ನಡೆದರು………..

Comments