ಅವತಾರ

ಅವತಾರ

ಬರಹ



  ಜುಟ್ಟಿಗೆ ಜುಟ್ಟನ್ನು ಸೇರಿಸಿ ಯಾವ ಪ್ರಾಣಿಯೊಂದಿಗೆ ಬೇಕಾದರೂ ನಂಟನ್ನು ಬೆಸೆಯಬಹುದು. ಆಗ ಆ ಪ್ರಾಣಿ ಅದರ ಸವಾರನ ಗುಲಾಮನಾಗುತ್ತದೆ. ಸವಾರನ ಆಜ್ಞೆಗಳನ್ನು ಪರಿಪಾಲಿಸುತ್ತದೆ.

  ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಅವತಾರ್ ಚಿತ್ರದಲ್ಲಿ ಆಗಾಗ ಕಂಡುಬರುವ ದೃಶ್ಯಗಳು. ಭುವಿಯಂತೆಯೇ ಇರುವ ಪರಲೋಕಕ್ಕೆ ಹೋಗಿ, ಅಲ್ಲಿ ಜನರಂತೆಯೇ ಇರುವ ಮಹಾಜನರನ್ನು ನಾಶ ಮಾಡಿ ತಮ್ಮ ಅಸ್ತಿತ್ವ ಸ್ಥಾಪಿಸಲೆಂದು ಅದೇ ರೀತಿಯ ದೇಹವನ್ನು ಇಲ್ಲಿ ಸೃಷ್ಠಿಸಿ ಆ ದೇಹವನ್ನು ಇಲ್ಲಿಯ ಮನುಷ್ಯರ ಮೆದುಳಿನೊಂದಿಗೆ ಸಂಪರ್ಕಿಸಿ, ಅನ್ಯಲೊಕದಲ್ಲಿ ವಿಜ್ಞಾನಿಗಳು ಬಿಡುವರು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಚಿಸಿರುವ 3D ಚಿತ್ರ ನಿಜಕ್ಕೂ ರಮಣೀಯವಾಗಿದೆ.

  ಆ ಅವತಾರದ ಮಾತು ಹಾಗಿರಲಿ ಇತ್ತ ನಿಜವಾಗಿಯೂ ಒಂದು ಹೊಸ ಅವತಾರದ ಅಲೆ ಎದ್ದಿದೆ. ಕಳೆದ ತಿಂಗಳು ಅಮೆರಿಕಾದ ಪ್ರಚಂಡ ಜೈವಿಕ ವಿಜ್ಞಾನಿ ಕ್ರೈಗ್ ವೆಂಟರ್ ೪೦೦೦೦ ವಿಜ್ಞಾನಿಗಳ ಜೊತೆ ಸೇರಿ ಕೃತಕ ಜೀವಿಯೊಂದನ್ನು ಸೃಷ್ಠಿಸಿದ್ದಾನಂತೆ. ಈ ಸಿಂಥೆಟಿಕ್ ಜೀವಿಗೆ ಸಿಂಥಿಯಾ ಎಂದು ನಾಮಕರಣ ಮಾಡಿರುವರಂತೆ.  DNA ಯಲ್ಲಿರುವ base pairs ಅನ್ನು ಕಂಪ್ಯೂಟರ್ ನೆರವಿನಿಂದ ಹೆಣೆದಿರುವರಂತೆ. ಮುಂಬರುವ ದಿನಗಳಲ್ಲಿ ಈ ಜೀವಿ ಮನುಷ್ಯನಿಗೆ ಅತ್ಯಂತ ಉಪಯೋಗಕಾರಿಯಾಗುವುದಂತೆ. ಇದರ ನೆರವಿನಿಂದ ಹಂದಿ ಜ್ವರ, ಹಕ್ಕಿ ಜ್ವರ ಹಾಗೂ ಭೂಮಿಯ ಮೇಲಿರುವ ಬಹುತೇಕ ಎಲ್ಲ ಸಾಂಕ್ರಾಮಿಕ ಖಾಯಿಲೆಗಳಿಗೂ ಒಂದೇ ಒಂದು ದಿನದಲ್ಲಿ vaccine ಅನ್ನು ತಯಾರಿಸಬಹುದಂತೆ.(ಪ್ರಸ್ತುತ ಇದಕ್ಕೆ ಕನಿಷ್ಠ ಒಂದು ತಿಂಗಳಾದರೂ ಬೇಕು). ಇಷ್ಟೇ ಅಲ್ಲ ಇದರಿಂದ ಇನ್ನೂ ಅನೇಕ ಅನೇಕ ಪರಿಸರ ಸ್ನೇಹಿ ಅನುಕೂಲಗಳಿವೆಯಂತೆ. ಇದು ವಾತಾವರಣದ ವಿಶಾನಿಲವನ್ನು ಸೇವಿಸಿ ಅದರಿಂದ ಪೆಟ್ರೊಲ್ ಅನ್ನು ಕಕ್ಕುತ್ತದಂತೆ.

  ಜೈವಿಕ ಕ್ಷೇತ್ರದಲ್ಲಿ ಹೊಸ ಹೊಸ ಅದ್ಭುತ ಆವಿಷ್ಕಾರಗಳು ಇನ್ನೂ ಕಾದಿವೆ. ಈಗ ವೆಂಟರ್ ಸೃಷ್ಠಿಸಿರುವ ಏಕಾಣು ಜೀವಿಯಂತೆ ಮುಂದೆ ಹೊಸ ಪ್ರಾಣಿಯನ್ನೂ ಸೃಷ್ಠಿಸುವುದು ಅಸಾಧ್ಯವೇನಲ್ಲ. ಅದಕ್ಕೂ ಜಡೆಯನ್ನಿಟ್ಟು ಅದರ ಸವಾರನ ಮೆದುಳಿಗೂ ಜಡೆಯೊಂದನ್ನು ಅಳವಡಿಸಿ ಜಡೆಗೆ ಜಡೆ ಬೆಸೆಸಿ ಅವತಾರ್ ನ ಸವಾರಿಯಂತೆ ಮಾಡಿದರೆ! ಆ ವಾಹನ ಸಂಪೂರ್ಣ ecofriendly ಆಗಿರುತ್ತದೆ. ಯಾವ ಹೊಗೆಯೂ ಇಲ್ಲ ವಿಶಾನಿಲವೂ ಇಲ್ಲ. ozone ಗೆ ಯಾವ ತಾಪತ್ರಯವೂ ಇಲ್ಲ. ಪರಿಸರದೊಂದಿಗೆ ಸಂಬಂಧ ಇನ್ನೂ ಬಧ್ರಗೊಳ್ಳುತ್ತ ಸಾಗುತ್ತದೆ. ಮುಂದೊಂದು ದಿನ, ಗಣಕಗಳ ನಡುವಿನ ಅಂತರ್ಜಾಲದಂತೆ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ನಡುವೆಯೂ ಜೈವಿಕ ಅಂತರ್ಜಾಲವೇರ್ಪಟ್ಟರೆ! ಕನಿಷ್ಠ ಪಕ್ಷ ಆಗಲಾದರೂ ದೇಶ ದೇಶಗಳ ನಡುವಿನ ಜಗಳ ದೂರವಾಗಬಹುದು. ಮನುಷ್ಯ-ಮನುಷ್ಯ, ಮನುಷ್ಯ-ಪ್ರಾಣಿ ಒಟ್ಟಾರೆ ಜೀವಿ-ಜೀವಿಗಳ ನಡುವೆ ಅವಿನಾಭಾವ ಅನುಬಂಧ ಉಂಟಾಗಬಹುದು. ವಿಶ್ವ ಮಾನವತೆ ಮೂಡಬಹುದು. ಅಸ್ತಿತ್ವಕ್ಕೆ ಹೊಸ ಅರ್ಥ ಬರಬಹುದು.

 

                   ಎಂಥಹ ಅದ್ಭುತವಾಗಬಹುದಲ್ಲವೇ? !