ಅವನಲ್ಲ ಅವಳು...
"ಲೋ ಸುರೇಶಾ! ಎಲ್ಲಾ ತಯಾರಿ ಸರಿಯಾಗಿದೆ ತಾನೇ..! ಹೊಸ ಮೇಡಮ್ ತುಂಬಾ ಸ್ಟ್ರಿಕ್ಟ್ ಅಂತೆ ಕಣೋ! ಬಂದ ದಿನವೇ ಅವರ ಬಾಯಿಗೆ ಬಲಿಯಾಗೋದು ಬೇಡ ತಿಳೀತಾ?" ಎಂದು ಪೊಲೀಸ್ ಪೇದೆ ಸುರೇಶನಿಗೆ ಸಬ್ ಇನ್ಸ್ಪೆಕ್ಟರ್ ಶ್ರೀಕಂಠ ಹೇಳಿ, ಎಲ್ಲ ಅಚ್ಚುಕಟ್ಟಾಗಿದೆ ಎಂದು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟ. ಹೊರಗೆ ಪೊಲೀಸ್ ಜೀಪು ಬಂದು ನಿಂತ ಸದ್ದು ಕೇಳಿತು. ಎಲ್ಲರೂ ಶಿಸ್ತಿನಿಂದ ಹೊಸದಾಗಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡ ಪ್ರಜ್ವಲಾಗೆ ತಮ್ಮ ಇಲಾಖೆಯ ಕ್ರಮದಂತೆ ಸ್ವಾಗತ ಕೋರಿದರು. ಗಂಭೀರ ವದನೆಯಾಗಿ ಎಲ್ಲರನ್ನು ಗಮನಿಸುತ್ತ ಬಂದ ಆಕೆಯ ದೃಷ್ಠಿ ಶ್ರೀಕಂಠನ ಮೇಲೆ ನೆಟ್ಟಿತು. ಆಕೆಯ ತೀಕ್ಷ್ಣ ನೋಟದಿಂದ ಗಲಿಬಿಲಿಗೊಂಡ ಶ್ರೀಕಂಠ "ಮೇಡಂ. ನೀವು ಕೊಂಚ ವಿಶ್ರಮಿಸಿ, ಕುಡಿಯಲು ಏನಾದರೂ ತರುತ್ತೇನೆ" ಎಂದು ಆಕೆಯ ಕೊಠಡಿ ತೋರಿಸಿದ. ಕೋಣೆಯಲ್ಲಿ ಕುಳಿತ ಪ್ರಜ್ವಲ ತನ್ನ ತಂದೆ ಶ್ರೀಕಂಠನ ನೋಡಿ ಖುಷಿಯಾದರೂ ಒಳಗೊಳಗೇ ಕುದಿದಳು. ಗಂಡಾಗಿ ಹುಟ್ಟಿದರೂ, ನನ್ನ ದೇಹದಲ್ಲಿ ನಡೆದ ಹಾರ್ಮೋನ್ ಗಳ ಹೋರಾಟದಿಂದ ದೀಪಕ್ ಅಂದರೆ ನಾನು ಹೆಣ್ಣಾಗಿ ಇರಲು ಬಯಸಿದ್ದೆ. ಆಟ ಪಾಠಗಳಲ್ಲೂ ಮುಂದಿದ್ದ ನಾನು ಏನು ಮುಚ್ಚಿಡಬೇಕು ಎಂದು ಬಯಸಿದ್ದೆನೋ ಅದು ಮನೆಯವರಿಗೂ, ಸಮಾಜಕ್ಕೂ ತಿಳಿಯಿತು. ಅವಮಾನದಿಂದ ತಂದೆ ಶ್ರೀಕಂಠ "ಯಾಕಾದರೂ ಹುಟ್ಟಿದೆ ಪಾಪಿ ಮಗನೇ, ಎಲ್ಲಾದರೂ ಹಾಳಾಗಿ ಹೋಗು, ಮತ್ತೆ ಮುಖ ತೋರಿಸಬೇಡ" ಅಂತ ತಿರಸ್ಕಾರದಿಂದ ಉಗುಳಿ ಸಾಯೋ ಹಾಗೆ ಹೊಡೆದು ಅಟ್ಟಿದ್ದ. ಅಂದು ಜೀವ ಉಳಿಸಲು ಮನೆ ಬಿಟ್ಟು ಹೋದ ತಾನು ಅನುಭವಿಸಿದ ಬವಣೆಗಳು ತನಗೆ ಮಾತ್ರ ಗೊತ್ತು. ಕೊನೆಗೂ ಒಬ್ಬ ಪುಣ್ಯಾತ್ಮ,ಮಠದ ಸ್ವಾಮೀಜಿಯ ಕೈಗೆ ತಾನು ಸಿಕ್ಕಿ, ಆತ ತೋರಿದ ದಾರಿಯಲ್ಲಿ ಸಾಗಿ ಛಲದಿಂದ ಓದಿ ಇಂದು "ದೇಶದ ಮೊದಲ ತೃತೀಯ ಲಿಂಗಿ ಕಮಿಷನರ್" ಪ್ರಜ್ವಲಾ ಆಗಿ ಈ ಹುದ್ದೆಯಲ್ಲಿ ಇರುವೆ. ೧೪ ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ತನ್ನ ಪರಿಚಯ ತಂದೆಗೆ ಸಿಗಲಿಲ್ಲ, ಸಿಗಲೂ ಸಾಧ್ಯವಿಲ್ಲ. ತಾನಾಗಿ ಹೇಳುವುದು ಬೇಡ. ಎಷ್ಟಾದರೂ ಜನ್ಮಕೊಟ್ಟ ತಂದೆ ತಾನೇ?" ಎಂದು ನೆನಪುಗಳ ಸಂತೆಯಿಂದ ಹೊರ ಬಂದ ಪ್ರಜ್ವಲಾ ನಿಟ್ಟುಸಿರು ಬಿಟ್ಟು, ವಿಲೇವಾರಿ ಆಗದೆ ಬಾಕಿ ಉಳಿದಿದ್ದ ಕೇಸ್ ಫೈಲ್ ಗಳನ್ನು ತರ ಹೇಳಲು ಬೆಲ್ ಒತ್ತಿದಳು.
-ಶ್ರೀವಿದ್ಯಾ .ಎಸ್. ಗೋಖಲೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ