ಅವನಿ

ಅವನಿ

ಪುಸ್ತಕದ ಲೇಖಕ/ಕವಿಯ ಹೆಸರು
ಆದಪ್ಪ ಹೆಂಬಾ ಮಸ್ಕಿ
ಪ್ರಕಾಶಕರು
ಆದಪ್ಪ ಹೆಂಬಾ ಮಸ್ಕಿ
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೧

ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ  ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ತ್ರಿವೇಣಿಯವರ 'ಬೆಕ್ಕಿನ ಕಣ್ಣು' ಹುಚ್ಚು ಹಿಡಿಸಿ ಮುಂದಿನ ಸಂಚಿಕೆಗಾಗಿ ಕಾತುರದಿಂದ ಕಾಯುವಂತೆ ಮಾಡಿತ್ತು.

ಇಂತಹದೇ ನೂರಾರು ಕಾದಂಬರಿ ಓದಿದರೂ ನಮ್ಮವರೇ ಬರೆದ ಕಾದಂಬರಿಗಳು ಕೈಗೆ ಸಿಕ್ಕಿದ್ದು ಕಡಿಮೆ. ಮೊನ್ನೇ ತಾನೆ ಓದಿದ ಶಾಂತರಸರ ಸಣ್ಣ ಗೌಡಸಾನಿ, ಜಂಬಣ್ಣ ಅಮರಚಿಂತರ ಕುರಿಯಯ್ಯ ಮತ್ತು ಅಂಕುಶದೊಡ್ಡಿ, ಜಲದುರ್ಗದ ಕುರಿತು ಜಯತೀರ್ಥ ಪುರೋಹಿತರು ಬರೆದ ಐತಿಹಾಸಿಕ ಕಾದಂಬರಿ 'ಜೊಹಾರ' ಓದಿ ಉಸಿರು ತೆಗೆದುಕೊಳ್ಳುವ ಹೊತ್ತಿಗೆ ಕೈಗೆ ಬಂದು ಕುಂತಿದ್ದು ಹಿರಿಯ ಅಣ್ಣನಾದ ಆದಪ್ಪ ಹೆಂಬಾ ಅವರು ಬರೆದ 'ಅವನಿ' ಕಾದಂಬರಿ.

ಕವಿತೆ ಬರೆಯುವುದೇ ಕಷ್ಟವಾಗಿ ಹೈಕು,ಹನಿಗವಿತೆಗಳಿಗೆ ಕಲೇ ಬಿದ್ದ ಈ ದಿನಗಳಲಿ ಕತೆಗಳು ಕೂಡ ನ್ಯಾನೋ ಆಗಿ ನೆನೆಗುದಿಗೆ ಬೀಳುವ ಸಂಧಿಕಾಲದಲ್ಲಿ ಆದಪ್ಪ ಸರ್ ಕಾದಂಬರಿ ಬರೆಯುತ್ತಾರೆಂದರೆ ಅವರಿಗೆ ಶಹಬ್ಬಾಷ್ ಹೇಳಬೇಕು ಎಂದರೆ ಅದು ಅತಿಶಯೋಕ್ತಿ ಅಲ್ಲ. ನೀವು ಆ ಕಾದಂಬರಿಯನ್ನು ಕೈಲಿಡಿದು ಓದುತ್ತ ಹೋಗಿ ಅಲ್ಲೊಂದು ವಿಭಿನ್ನ ಲೋಕವೇ ನಿಮ್ಮೆದುರು ತೆರೆದುಕೊಳ್ಳುತ್ತದೆ. ನೋಡಿದರೆ 'ಮೋಟಾ' ಕಾಣುವ ಕಾದಂಬರಿಕಾರರು ಬರೆದದ್ದು ಮಾತ್ರ ಕಾರ್ಪೊರೇಟ್ ಜಗತ್ತಿನ ಸಂಧಿ-ಗೊಂದಿಯ ಕತೆ. ಅಲ್ಲಿ ಬರುವ ಮಾಲ್,ಕಾಫಿ ಕುಡಿಯುವ 'ಕೇಫೆಟೇರಿಯಾ' ಬಳಸಿದ ವಿಫುಲ,ಅಸ್ಖಲಿತ ಆಂಗ್ಲ ಪದಗಳು ಬರುವ ತರಾವರಿ ಪಾತ್ರಗಳು,ಸಿನೀಮಾದ ಪ್ರೇಮಿನಷ್ಟೇ ಚಕಾಚಕ್ ಬದಲಾಗುವ ಸನ್ನಿವೇಶಗಳು ಓದಿನ ವೇಗಕ್ಕೆ ಸಾಥ್ ನೀಡುತ್ತವೆ.

ಇದೊಂದು ಪ್ರೇಮಕಥೆ,ಎರಡೂ ಧರ್ಮದವರ ಮದ್ಯೆ ಪಿಸುಗುಡುವ ಒಲವಿನ ಕವಿತೆ, ಪ್ರೇಮದ ಪರಕಾಷ್ಠೆ ಹೇಳುತ್ತಲೇ ಇನ್ನೊಂದು ಮಗ್ಗುಲಲಿ ಭಯತ್ಪಾದನೆಯ  'ಅಸಲಿ ಮುಖ' ತೋರಿಸುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಮಿಸ್ಬಾ,ಅರ್ಮಾನ್,ತೇಜಸ್, ಆವನೀ,ಉಗ್ರ ಮಸೂದ್, ಇವಿಷ್ಟೆ ಪಾತ್ರಗಳ ಸುತ್ತಲೂ ಸುತ್ತುವ ಕತೆ ಕ್ಷಣ,ಕ್ಷಣಕ್ಕೂ ಪಡೆದುಕೊಳ್ಳುವ ತಿರುವು ಮಾತ್ರ ಅದ್ಭುತ. ಗುಲಾಬಿಯ ಬೆನ್ನಲ್ಲೇ ಮುಳ್ಳಿರುವಂತೆ ಪ್ರೀತಿಯ ಪಕ್ಕದಲ್ಲೆಲ್ಲೋ ದ್ವೇಷ ಹೊಗೆಯಾಡುತ್ತಿರುತ್ತದೆ. ಅದನ್ನೆಲ್ಲ ಅತ್ಯಂತ ಜತನದಿಂದ ತಮ್ಮ ಕತೆಯ ಕ್ಯಾನ್ವಾಸನಲ್ಲಿ ಹಿಡಿದಿಟ್ಟಿದ್ದಾರೆ.

ಕಾದಂಬರಿಯ ಆರಂಭದ ನುಡಿಗಳನ್ನ ಬರೆದ ಗುಂಡುರಾವ ದೇಸಾಯಿ ಗುರುಗಳು ಹೇಳಿದಂತೆ "ಮನಸು ಮಾಡಿ ಗಟ್ಟಿಯಾಗಿ ಕುಳಿತು ಸ್ಕ್ರಿಪ್ಟ್ ಮಾಡಿದರೆ ಒಂದು ಅ್ಯಕ್ಷನ್, ಥ್ರಿಲ್ಲರ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಈ ಕಾದಂಬರಿಗೆ ಇವೆ". ಕಾದಂಬರಿಯ ಜೊತೆಗೆ ಅದನ್ನು ಬರೆಯಲು ಪಟ್ಟ ಪಾಡನ್ನು ಟೈಪಿಸಿದ ಸ್ವಾರಸ್ಯಕರ ಕತೆಯನ್ನು ಕಾದಂಬರಿಯ ಆರಂಭಿಕ ಪುಟಗಳಲ್ಲಿ ದಾಖಲಿಸಲಾಗಿದೆ. 

ಏಕಾಂತದಲ್ಲಿ ಲಗುಬಗೆಯಿಂದ ಟೈಪಿಸಿದರಾಯ್ತೆಂದು ಮಂತ್ರಾಲಯದ ಹೊರವಲಯದ ಲಾಡ್ಜೊಂದರಲಿ ರೂಮು ಹಿಡಿದು ಕುಳಿತ ಗುಂಡುರಾವ ಸರ್ ಮತ್ತು ಆದಪ್ಪ ಹೆಂಬಾ ಕನಿಷ್ಠ ದೇವರ ದರ್ಶನಕ್ಕೂ ಹೋಗದೇ ಎರಡೂ ದಿನ ಬಾಗಿಲು ಹಾಕಿದ್ದು ಹಾಕಿದಂತೆಯೇ ಕುಳಿತು  "ಅರ್ಮನ್,ಮಿಸ್ಬಾ, ಮಸೂದ್ ಉಗ್ರ, ಬಾಂಬ್" ಅನ್ನುತ್ತ ಟೈಪ್ ಮಾಡಿದರೆ ರೂಮ್ ಕೊಟ್ಟವರ ಪಾಡು ಹೇಗಾಗಿರಬೇಡ ಅಂಜಿ ಯಂಡಿ ಹಾಕಿರಬೇಕು!

ಇಂತಿಪ್ಪ ಇಂತಹದೊಂದು ಮಟ್ಟಸವಾದ ಕಾದಂಬರಿ ಬರೆದ ಆದಪ್ಪ ಹೆಂಬಾ ಗುರುಗಳಿಗೆ ನಮಿಸುತ್ತ.ನನ್ನ ಇತ್ತೀಚಿನ ದಿನಗಳ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಪುಸ್ತಕ ಕೊಂಡು ಓದಲು ಸಾಧ್ಯವಾಗದ ಕಠಿಣ ದಿನಗಳಲಿ 'ಹಾಗೆ' ಪುಸ್ತಕ ಕೊಟ್ಟು ಓದಿಸಿದ ಗುಂಡುರಾವ ಗುರುಗಳಿಗೂ ನೆನಕೆಗಳು ಸಲ್ಲುತ್ತವೆ. ಇವರಿಂದ ಇನ್ನೊಂದಿಷ್ಟು ಕಾದಂಬರಿಗಳನ್ನು ಮುಖ್ಯವಾಗಿ ಈ ನೆಲದ,ಮಣ್ಣಿನ ಗುಣಗಳನ್ನುಳ್ಳ ಇಲ್ಲಿಯ ನೋವು,ನಲಿವು, ತಲ್ಲಣಗಳನ್ನು ಹಿಡಿದಿಟ್ಟು ಹೊಸದೊಂದು ದೀವಟಿಗೆಯಾಗುವ ಪುಸ್ತಕವನ್ನು ನಾನಂತೂ ನಿರೀಕ್ಷಿಸುತ್ತೇನೆ.

ಅವರ ಕಣ್ಣ ಮುಂದೆ ಬೆಳೆದ ಹುಡುಗರು ನಾವು ಎಷ್ಟಂತ ಅವರ ತಾಕತ್ತನ್ನು ಅಳೆದೇವು! ಆದರೂ ಅವರ ಬರಹದಲ್ಲಿನ ಲವಲವಿಕೆ ಮೆಚ್ಚುವಂತದ್ದೆ. ಕೆಲವು ಕಡೆ ಚೂರು ನಿಧಾನವಾಗಿ ಹೇಳಬಹುದಿತ್ತು ಘಟನೆ ನಡೆಯುವ ಸನ್ನಿವೇಶ,ಸ್ಥಳವನ್ನು ಇನ್ನೂ ವಿವರವಾಗಿ ಕಟ್ಟಿಕೊಟ್ಟು ಓದುಗರನ್ನು ಕತೆಯೊಳಗೆ ಕಳೆದುಹೋಗುವಂತೆ ಮಾಡಬಹುದಿತ್ತು. ಅವರ ಕಣ್ಣಮುಂದೆಯೇ ದಿನಾಲು ನೂರಾರು ಘಟನೆಗಳು ನಡೆದರೂ ಅವರೇಕೆ ಅಂತಹದೇ ಥ್ರಿಲ್ಲರ್ ಕತೆಯನ್ನು ಆಯ್ದುಕೊಂಡರೆಂಬುದು ಸೋಜಿಗ! ಯಾಕೆಂದರೆ ನಮ್ಮೂರುಗಳ ಕತೆಯನ್ನು ಅವರು ಇನ್ನೂ ಜೀವಂತವಾಗಿ ಹೇಳುವ ಸಾಧ್ಯತೆ ಇತ್ತು ಅಂತ.

ಅದೇನೆ ಇರಲಿ, ಅವರ ಕಾದಂಬರಿಯ ನಿರೂಪಣೆ ಸಂಭಾಷಣೆಯನ್ನು ನೋಡಿದ ಯಾರೇ ಆದರೂ, ಇದು ಅವರ ಮೊದಲ ಕಾದಂಬರಿ ಎಂದರೆ ನಂಬಲಾರದಷ್ಟು ಚಂದ ಬರೆದಿದ್ದಾರೆ. ನೀವು ಓದಿಲ್ಲವಾದರೆ ಖಂಡಿತ ಓದಿ. ಕಾದಂಬರಿಗಳು ಕಾಣೆಯಾಗುವ ಈ ಹೊತ್ತಿನಲ್ಲಿ ಆ ಹೊತ್ತಿಗೆಗಳನ್ನು ನಾವೆಲ್ಲ ಕೈಲಿಡಿಯುವ ಜರೂರತ್ತು ಎಂದಿಗಿಂತ ಇಂದು ಹೆಚ್ಚಿದೆ..

-ಶರಣಬಸಪ್ಪ ಕೆ. ಗುಡದಿನ್ನಿ