ಅವರಿಗೆ ಅವರೇ ಸಾಟಿ !
ಒಬ್ಬ ವ್ಯಕ್ತಿ ಇಪ್ಪತ್ತೈದು ವರ್ಷಗಳ ಹಿಂದೆ ಬದುಕಿದ್ದರು, ಆತ ಒಬ್ಬ ಕಲಾವಿದ. ಮತ್ತೊಬ್ಬ ಮೇರು ಕಲಾವಿದನನ್ನು ಆರಾಧಿಸುತ್ತಾ, ಅನುಕರಿಸುತ್ತಾ ಬಹಳ ಪ್ರಸಿದ್ಧಿ ಪಡೆದು ನಾಡಿನಾಧ್ಯಂತ ಮನೆಮಾತಾಗುವ ಮಟ್ಟಿಗೆ ಬೆಳೆದರು. ಮೇರುಕಲಾವಿದ ಬಹುಭಾಷಾ ಹಾಡುಗಾರ, ಕವಿ, ವಿದ್ವಾಂಸ, ಕೀರ್ತನಕಾರ... ಏಳೆಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾನಾಡುವರು, ಬರಹಗಾರರು, ಕವಿತೆ ರಚಿಸುವಷ್ಟು ನೈಪುಣ್ಯ ಹೊಂದಿದ್ದರು. ಅಂಥವರು ಹಾಡಿದ ಗೀತೆಗಳನ್ನು ಯಥಾವತ್ತಾಗಿ ಹಾಡುವಷ್ಟು ನಿಷ್ಣಾತ ಈ ಯುವ ಗಾಯಕ..!
ಒಮ್ಮೆ ಈ ಯುವಗಾಯಕ ಒಂದು ಕಾರ್ಯಕ್ರಮದಲ್ಲಿ ಹಾಡುತ್ತಿದ್ದರು, ಏಕಾಗ್ರಚಿತ್ತದಿಂದ ಹಾಡುತ್ತಾ ಶ್ರೋತೃಗಳ ಮನಸೂರೆಗೊಂಡು ಕರತಾಡನ ಗಿಟ್ಟಿಸುತ್ತಾ ಮುಂದುವರೆದಿದ್ದರು. ಅದೇ ಕಾರ್ಯಕ್ರಮಕ್ಕೆ ಇವರ ಮಾನಸ ಗುರುಗಳಾದ ಆ ಮೇರು ಕಲಾವಿದರು ಆಗಮಿಸಿದರು, ತಾವೇ ಗೀತೆಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿರುವೆನೇನೋ ಎಂಬಷ್ಟರ ಮಟ್ಟಿಗೆ ತಲ್ಲೀನರಾಗಿ ಆಸ್ವಾದಿಸುತ್ತಾ ಕುಳಿತರು. ಕಾರ್ಯಕ್ರಮ ಮುಗಿಯಿತು, ಕೊನೆಗೆ ವೇದಿಕೆಯೇರಿದ ಮೇರು ಕಲಾವಿದ ಈ ಕಿರಿಯ ಕಲಾವಿದನನ್ನು ಹಾಡಿ ಹೊಗಳಿ ಅಪ್ಪಿಕೊಂಡು ಸಂತಸ, ಸಂತೃಪ್ತಿ ವ್ಯಕ್ತಪಡಿಸಿದ ಬಳಿಕ ಆ ಕಿರಿಯನಿಗೆ ಕಿವಿಮಾತೊಂದು ಹೇಳಿದರು. 'ನೀವು ನನ್ನನ್ನು ಅನುಕರಿಸಿ ನನಗಿಂತಲೂ ಅದ್ಭುತವಾಗಿ ಹಾಡುಗಳನ್ನು ಶ್ರೋತೃಗಳಿಗೆ ಮುಟ್ಟಿಸುತ್ತಿದ್ದೀರಿ, ಸಂತೋಷ.. ಆದರೆ ನನ್ನನ್ನು ಅನುಕರಿಸಿ ನಿಮ್ಮಲ್ಲಿರುವ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದ್ದೀರಿ..! ಅದಾಗಕೂಡದು, ನಿಮ್ಮಿಂದ ಹಾಡಲ್ಪಡುವ ಹಾಡು ನಿಮ್ಮದೇ ಶೈಲಿಯನ್ನು ಹೊಂದಿದ್ದರೆ ಮತ್ತಷ್ಟು ಖ್ಯಾತಿಗೆ ಬಾಜನರಾಗುವಿರಿ.. ಮತ್ತೊಬ್ಬರ ಮೂಲಕ ನಮ್ಮನ್ನು ಸಮಾಜ ಗುರುತಿಸಿದರೆ ಅದು ನಮ್ಮತನ ತೋರಿಸಿದಂತಾಗದು, ಮುಂದೆ ಆ ನಿಟ್ಟಿನಲ್ಲಿ ಮುಂದುವರೆಯಿರಿ, ನಮಗಿಂತಲೂ ಪ್ರಖ್ಯಾತಿ ಹೊಂದುವಿರಿ' ಎಂದು ಆಶೀರ್ವದಿಸಿದರಂತೆ. ಮುಂದೆ ತಮ್ಮದೇ ಆದ ಅನೇಕ ಹಾಡುಗಳ ಗುಚ್ಛಗಳನ್ನೇ ಸಾಂಸ್ಕೃತಿಕ ಲೋಕಕ್ಕೆ ಬಿಟ್ಟು ಅತಿಚಿಕ್ಕ ವಯಸ್ಸಿನಲ್ಲೆ ಇಹಲೋಕ ತ್ಯಜಿಸಿದರು ಈ ಕಥೆಯ ನಾಯಕ ‘ಜಿ ವಿ ಅತ್ರಿ’ ಎಂಬ ಗಾಯಕ. ಇವರನ್ನು ಪ್ರೇರೇಪಿಸಿದ್ದ ಮೇರು ಪ್ರತಿಭೆ ಈ ಕಥೆಯ ಮಹಾನಾಯಕ ಡಾ|| ಪಿ ಬಿ ಶ್ರೀನಿವಾಸ್ ಅವರು.
ಪಿಬಿಎಸ್ ಅವರ ಸರಳತೆ ಹೇಗಿತ್ತೆಂಬುದಕ್ಕೆ ಮೇಲಿನ ಘಟನೆ ಒಂದು ಉದಾಹರಣೆಯಾದರೆ, ಕನ್ನಡದ ಮೇರುನಟ 'ಡಾ|| ರಾಜ್' ಅವರಿಗಾಗಿ ನೂರಾರು ಹಾಡುಗಳನ್ನು ಹಾಡಿ ಹೆಸರಾಗಿದ್ದರು. ಎಂಭತ್ತರ ದಶಕದಿಂದೀಚೆಗೆ ಅವರಿಗಾಗಿ ಹಾಡುವ ಸಂದರ್ಭಗಳು ಕಡಿಮೆಯಾದಾಗಲೂ 'ರಾಜ್ ಚಿತ್ರಗಳಿಗೆ ತಾವೇಕೆ ಹಾಡುತ್ತಿಲ್ಲ..?' ಎಂದು ಕೇಳಿದವರಿಗೆ "ಸ್ವತಃ ರಾಜ್ ಅವರೇ ಅದ್ಭುತವಾದ ಗಾಯಕ, ಅವರಿಗಾಗಿ ನನ್ನ ಕಂಠದಿಂದ ಹಾಡಿಸಿದ್ದು ಕೇವಲ ಅವರಿಗೆ ನನ್ನ ಮೇಲಿರುವ ಅಭಿಮಾನದಿಂದಲೇ ಹೊರತು ಅವರಿಗೆ ಗಾಯನ ಗೊತ್ತಿಲ್ಲವೆಂದಾಗಿರಲಿಲ್ಲ, ಇಂದಿಗೂ ನನ್ನನ್ನು ಅವರು ತಮ್ಮ ಶಾರೀರವೆಂದು ಹೇಳುವುದು ನನ್ನ ಭಾಗ್ಯವಲ್ಲವೇ..?" ಎಂದು ಮರುಪ್ರಶ್ನೆ ಹಾಕುತ್ತಿದ್ದರಂತೆ..
-ಸತ್ಯ ಹರಿಹಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ