ಅವಶ್ಯಕ ಸೇವಾ ಸಿಬಂದಿ ಬಾಕಿ ವೇತನ ಕೂಡಲೇ ಪಾವತಿಯಾಗಲಿ

ಅವಶ್ಯಕ ಸೇವಾ ಸಿಬಂದಿ ಬಾಕಿ ವೇತನ ಕೂಡಲೇ ಪಾವತಿಯಾಗಲಿ

ಫೆಬ್ರವರಿಯಿಂದೀಚೆಗೆ ಬಾಕಿ ಇರುವ ೩ ತಿಂಗಳುಗಳ ವೇತನ ಪಾವತಿಗೆ ಆಗ್ರಹಿಸಿ ರಾಜ್ಯಾದ್ಯಂತ ೧೦೮ ಆಂಬುಲೆನ್ಸ್ ನೌಕರರು ಸೋಮವಾರ ರಾತ್ರಿಯಿಂದ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. (ತತ್ಕಾಲಕ್ಕೆ ಮುಷ್ಕರ ಕೈಬಿಡಲಾಗಿದೆ) ೧೦೮ ಆಂಬುಲೆನ್ಸ್ ಸೇವೆಯ ಗುತ್ತಿಗೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆ ಕಳೆದ ವರ್ಷದ ಡಿಸೆಂಬರ್ ನಿಂದೀಚೆಗೆ ಈ ನೌಕರರಿಗೆ ವೇತನ ಪಾವತಿ ಬಾಕಿ ಇರಿಸಿಕೊಂಡಿರುವುದು ಮುಷ್ಕರಕ್ಕೆ ಕಾರಣ. ನೌಕರರ ಅಳಲನ್ನು ಪರಿಶೀಲಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಿದ ಬಳಿಕ ಕಳೆದ ಡಿಸೆಂಬರ್ ಮತ್ತು ಈ ವರ್ಷದ ಜನವರಿ ತಿಂಗಳುಗಳ ವೇತನದ ಅರ್ಧಾಂಶವನ್ನು ಪಾವತಿಸಿದ್ದು, ಉಳಿದ ಮೊತ್ತ ಮತ್ತು ಆ ಬಳಿಕ ಎಪ್ರಿಲ್ ವರೆಗಿನ ೩ ತಿಂಗಳುಗಳ ಪೂರ್ಣ ವೇತನ ಪಾವತಿ ಆಗಬೇಕಿದೆ. ರಾಜ್ಯದಲ್ಲಿ ೭೧೫ಕ್ಕೂ ಅಧಿಕ ೧೦೮ ಆಂಬುಲೆನ್ಸ್ ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಚಾಲಕರು ಮತ್ತು ಸಹಾಯಕ ಸಿಬಂದಿಯಾಗಿ ೩ ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. 

ಇದು ಆಂಬುಲೆನ್ಸ್ ನಂತಹ ತುರ್ತು ಮತ್ತು ಆವಶ್ಯಕ ಸೇವೆಯೊಂದರಲ್ಲಿ ಪ್ರಸ್ತುತ ಎದುರಾಗಿರುವ ಸಮಸ್ಯೆಯ ಸ್ವರೂಪ. ಸಾರ್ವಜನಿಕ ಆರೋಗ್ಯದಂತಹ ಅತ್ಯಾವಶ್ಯಕ ಸೇವೆಯಲ್ಲಿ ಆಂಬುಲೆನ್ಸ್ ಜೀವನಾಡಿಯಷ್ಟು ಪ್ರಧಾನವಾದುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ದೇಶದ ಇತರ ಕಡೆಗಳಂತೆ ರಾಜ್ಯದಲ್ಲಿ ಖಾಸಗಿ ವಲಯದ ಆರೋಗ್ಯ ಸೇವೆ ನಗರ ಪ್ರದೇಶಗಳಿಗೆ ಸೀಮಿತವಾಗಿದೆ. ಇದನ್ನು ಬಿಟ್ಟರೆ ರಾಜ್ಯದ ಬಹುಭಾಗದಲ್ಲಿ ಬಹ್ವಂಶ ಜನಸಾಮಾನ್ಯರು ಸರಕಾರಿ ಆರೋಗ್ಯ ಸೇವೆಯನ್ನೇ ನಂಬಿದ್ದಾರೆ. ಇವರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಎದುರಾದರೆ ಆಸ್ಪತ್ರೆಗೆ ಕರೆದೊಯ್ಯಲು ಸರಕಾರಿ ವ್ಯವಸ್ಥೆಯಾಗಿರುವ ೧೦೮ ಆಂಬುಲೆನ್ಸ್ ಏಕೈಕ ದಾರಿ. ಆದರೆ ಇದರ ಚಾಲಕರು ಮತ್ತು ಸಿಬಂದಿ ವೇತನ ಸಿಗದೆ, ವೇತನ ಪಾವತಿಸುವಂತೆ ಮಾಡಿದ ಮನವಿಗೂ ಮನ್ನಣೆ ಸಿಗದೆ ಸೇವೆಯನ್ನು ಸ್ಥಗಿತಗೊಳಿಸುವ ಸ್ಥಿತಿಗೆ ತಲುಪಿದ್ದಾರೆ.

ಮೊತ್ತಮೊದಲನೆಯದಾಗಿ ಇಂತಹ ಅವಶ್ಯಕ ಸೇವೆಯಲ್ಲಿ ತೊಡಗಿರುವ ಸಿಬಂದಿಗೆ ವೇತನದಂತಹ ಜೀವನೋಪಾಯವನ್ನು ಬಾಕಿ ಇರಿಸಿಕೊಂಡಿರುವುದೇ ಅಕ್ಷಮ್ಯ. ಅದೂ ಕಳೆದ ಡಿಸೆಂಬರ್ ನಿಂದ. ಅಂದರೆ ಐದು ತಿಂಗಳುಗಳಿಂದ ಸಂಬಳ ಪಾವತಿಸಿಲ್ಲ. ಇದರಿಂದಾಗಿ ಕೆಲವು ದಿನಗಳ ಹಿಂದೆ ಆಂಬುಲೆನ್ಸ್ ಸಿಬಂದಿಯೊರ್ವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ ಎಂದರೆ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬ ಅರಿವಾದೀತು. ಆಂಬುಲೆನ್ಸ್ ಸೇವೆಯನ್ನು ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯಾಗಲಿ, ಅದಕ್ಕೆ ವೇತನದ ಮೊತ್ತವನ್ನು ಒದಗಿಸುವ ಸರಕಾರವಾಗಲಿ ಈ ಬಗ್ಗೆ ಇಷ್ಟು ದಿನಗಳಿಂದ ತಲೆಕೆಡಿಸಿಕೊಳ್ಳದಿರುವುದು ವ್ಯವಸ್ಥೆ ತಲುಪಿರುವ ಜಡ್ಡುಗಟ್ಟಿದ ಸ್ಥಿತಿಯ ದರ್ಶನವನ್ನು ಮಾಡಿಸುತ್ತದೆ. ಚುನಾವಣೆಯ ಮಾದರಿ ನೀತಿ ಸಂಹಿತೆ ವೇತನ ಪಾವತಿಯಂತಹ ರೂಢಿಯ ಚಟುವಟಿಕೆಗಳಿಗೆ ಅಡ್ಡಿಯಲ್ಲ ಎಂಬುದನ್ನು ಆರೋಗ್ಯ ಇಲಾಖೆ, ಸರಕಾರದ ಉನ್ನತ ಅಧಿಕಾರಿಗಳಿಗೆ ತಿಳಿಹೇಳಬೇಕಾಗಿಲ್ಲ. ಜನಪ್ರತಿನಿಧಿಗಳು, ಅಧಿಕರಾರೂಢರು ಕೂಡ ಚುನಾವಣೆಯ ಕಾವಿನ ನಡುವೆ ಈ ವಿಷಯವನ್ನು ಇಷ್ಟರಮಟ್ಟಿಗೆ ನಿರ್ಲಕ್ಷಿಸಬಾರದಿತ್ತು.

ಸರಕಾರ ಮತ್ತು ಸಂಬಂಧಪಟ್ಟವರು ತತ್ ಕ್ಷಣ ಕ್ರಮ ಕೈಗೊಂಡು ೧೦೮ ಆಂಬುಲೆನ್ಸ್ ಸಿಬಂದಿಗೆ ಬಾಕಿ ಉಳಿದಿರುವ ಸಂಪೂರ್ಣ ವೇತನವನ್ನು ಪಾವತಿಸುವ ವ್ಯವಸ್ಥೆ ಆಗಬೇಕು. ಆಂಬುಲೆನ್ಸ್ ನಂತಹ ಅತ್ಯಾವಶ್ಯಕ ಸೇವೆ ಕೆಲವೇ ತಾಸುಗಳಷ್ಟು ಕಾಲ ಸ್ಥಗಿತಗೊಂಡರೂ ಆಗಬಹುದಾದ ದುಷ್ಪರಿಣಾಮಗಳು ಊಹೆಗೂ ನಿಲುಕದ್ದು. ಹಾಗಾಗಬಾರದು. ಆಂಬುಲೆನ್ಸ್ ಒಂದೇ ಅಲ್ಲ, ಯಾವುದೇ ತುರ್ತು, ಅವಶ್ಯಕ ಸೇವೆಗಳ ಸಿಬಂದಿ ವೇತನ ಪಾವತಿ ಬಾಕಿಯಂತಹ ಕಾರಣಕ್ಕೆ ಕೆಲಸವನ್ನು ಸ್ಥಗಿತಗೊಳಿಸುವಂತಹ ಸ್ಥಿತಿ ಉಂಟಾಗದಿರಲಿ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ