ಅವುಚಿ ಅವುಚಿ ಎದೆಗವುಚಿ

ಅವುಚಿ ಅವುಚಿ ಎದೆಗವುಚಿ

ಕವನ

ಅವನು   ಅವುಚಿ ಅವುಚಿ ಎದೆಗವುಚಿ
          ತಬ್ಬಲು ಮೇಲೆ ಬಿದ್ದು ಕವುಚಿ
          ಅಯ್ಯೋ ಏನೋ ವೇದನೆ ಸಂ..ವೇದನೆ
          ನಿನ್ನ ಕೋಮಲ ಮೈ ತಾಕಲು ಲಲನೆ 


  


ಅವಳು   ಚೆಲುವ, ಹೃದಯ ಕರೆಯಿತು
          ಬಾ ಎಂದು ಪ್ರೀತಿ ಮಾಡಲು
          ದೂರವಿದ್ದರೂ ಪ್ರೀತಿಕರೆ ಕೇಳಿ
          ಓಡೋಡಿ ಬಂದೆ ಸೇರಲು


 


ಅವನು   ನಿನ್ನಿರುವಿಕೆ ಗಮನಿಸಲು
          ಮೈಯೆಲ್ಲಾ ಕಣ್ಣಾಗಿಸುವೆ
          ನಿನ್ನಂತರಂಗ ದನಿ ಕೇಳಲು
          ಮನಸ್ಸು ಕಿವಿಯಾಗಿಸುವೆ


 


ಅವಳು   ಹೃದಯ ಮಾತಾಡಲು
          ಎಲ್ಲಿಯ ದೂರ? ಎಲ್ಲಿಯ ವಿರಹ?
          ನಾವೆಂದಿಗೂ ತೀರ ತೀರ ಹತ್ತಿರ
          ಪ್ರೀತಿ ಮನಕೆ ಎಲ್ಲಿಯ ಅಂತರ?


 


ಅವನು   ಸಂತೆ ಬೀದಿಯ ಗದ್ದಲದಲೂ
          ಪ್ರೇಮ ಸಲ್ಲಾಪ ಕೇಳಬಲ್ಲೆ!
          ಊರ ತೇರ ಜಾತ್ರೆಯಲೂ
          ದೃಷ್ಟಿಯಂಚಲೆ ಹುಡುಕಬಲ್ಲೆ!


 


ಅವಳು   ಇನಿಯನನೆ ಮನೆಯ ಮಾಡಿ
          ಮನೆಯಲ್ಲಿ ವಾಸ ಮಾಡಿದೆ
          ನನ್ನನ್ನೆ ಮನೆಮಾಡಿ ಇನಿಯನ ಕರೆದೆ
          ನಾನೆಲ್ಲಿ? ಮನೆಯೆಲ್ಲಿ? ಇನಿಯನೆಲ್ಲಿ? ಎಲ್ಲ ಒಂದೇನೆ.