ಅಶ್ವತ್ಥಾಮನಿಗೆ ಸುದರ್ಶನ ಚಕ್ರ ಏಕೆ ಸಿಗಲಿಲ್ಲ?

ಅಶ್ವತ್ಥಾಮನಿಗೆ ಸುದರ್ಶನ ಚಕ್ರ ಏಕೆ ಸಿಗಲಿಲ್ಲ?

ಕೌರವರ ಹಾಗೂ ಪಾಂಡವರ ಗುರುವಾಗಿದ್ದ ದ್ರೋಣಾಚಾರ್ಯರ ಸುಪುತ್ರನೇ ಅಶ್ವತ್ಥಾಮ. ತನ್ನ ತಂದೆಯಿಂದ ಶಸ್ತ್ರಗಳ ಸಂಪೂರ್ಣ ಜ್ಞಾನವನ್ನು ಪಡೆದಿದ್ದ ಅಶ್ವತ್ಥಾಮ. ಬಾಲ್ಯದಿಂದಲೇ ಹಠವಾದಿ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಅಶ್ವತ್ಥಾಮನಿಗೆ ಧೃತರಾಷ್ಟ್ರನ ಪುತ್ರ ದುರ್ಯೋಧನನ ಗೆಳೆತನ. ಅಶ್ವತ್ಥಾಮ ಸಕಲ ವಿದ್ಯಾ ಪಾರಂಗಿತನಾದರೂ ಆತನ ಅಹಂಕಾರ ಮಾತ್ರ ಸಕಲ ಎಲ್ಲೆಗಳನ್ನೂ ಮೀರಿತ್ತು. ತನ್ನ ತಂದೆಯ ಪಟ್ಟ ಶಿಷ್ಯ ಅರ್ಜುನನಿಗಿಂತಲೂ ದೊಡ್ಡ ಬಿಲ್ವಿದ್ದೆಯ ಪ್ರವೀಣನಾಗುವ ಬಯಕೆ ಅವನಿಗಿತ್ತು. ಅದಕ್ಕಾಗಿ ಆತನ ತನ್ನ ತಾಯಿಯ ಚಿಕ್ಕಪ್ಪನಾದ ಕೃಪಾಚಾರ್ಯರಿಂದಲೂ ವಿದ್ಯೆಯನ್ನು ಕಲಿಯುತ್ತಿದ್ದ. ಆತನ ಹಣೆಯಲ್ಲಿ ಮಣಿಯೊಂದಿತ್ತು ಹಾಗೂ ಆತ ಚಿರಂಜೀವಿ ಎಂಬ ವರವನ್ನೂ ಪಡೆದಿದ್ದ.

ಆದರೆ ಅಶ್ವತ್ಥಾಮನಿಗೆ ತಿಳಿದಿತ್ತು, ಪಾಂಡವರ ಶಕ್ತಿ ಎಂದರೆ ಶ್ರೀಕೃಷ್ಣ. ಆತನು ಪಾಂಡವರ ಜೊತೆ ಇರುವ ತನಕ ಕೌರವರಿಗೆ ಉಳಿಗಾಲವಿಲ್ಲ ಎಂದು. ಶ್ರೀಕೃಷ್ಣನಿಗೆ ಆತನ ಬಳಿ ಇದ್ದ ಸುದರ್ಶನ ಚಕ್ರವು ಬಹು ದೊಡ್ಡ ಶಕ್ತಿಯಾಗಿತ್ತು. ಈ ವಿಚಾರವನ್ನು ತಿಳಿದುಕೊಂಡ ಅಶ್ವತ್ಥಾಮ ಆ ಸುದರ್ಶನ ಚಕ್ರವನ್ನು ಪಡೆದುಕೊಳ್ಳಲು ಯೋಚನೆ ಮಾಡತೊಡಗಿದ. ನೇರವಾಗಿ ಶ್ರೀಕೃಷ್ಣನ ಬಳಿ ಹೋಗಿ ಉಡುಗೊರೆಯಾಗಿ ಕೊಡು ಎಂದು ಕೇಳಿದರೆ ಕೊಡದೇ ಇರಲಾರ ಎಂದು ಅಂದುಕೊಂಡು ಒಂದು ದಿನ ದ್ವಾರಕೆಯತ್ತ ಪ್ರಯಾಣ ಬೆಳೆಸಿದ.

ಅನಿರೀಕ್ಷಿತವಾಗಿ ಬಂದ ದ್ವಾರಕೆಗೆ ಬಂದ ಅಶ್ವತ್ಥಾಮನನ್ನು ಕಂಡು ಚಕಿತನಾದ ಶ್ರೀಕೃಷ್ಣ ಆತನನ್ನು ಆದರದಿಂದ ಸತ್ಕರಿಸಿದ. ಗುರು ದ್ರೋಣಾಚಾರ್ಯರ ಪುತ್ರನಾದುದರಿಂದ ಅಶ್ವತ್ಥಾಮನಿಗೆ ವಿಶೇಷ ಸತ್ಕಾರಗಳು ಲಭಿಸಿದವು. ಊಟ ಉಪಚಾರಗಳ ಬಳಿಕ ಕುಶಲೋಪಚರಿಯ ಮಾತುಗಳು ಮುಗಿದಾದ ನಂತರ ಶ್ರೀಕೃಷ್ಣ ಆತನಲ್ಲಿ ಕೇಳಿದ “ಗುರುಪುತ್ರರೇ, ನಿಮ್ಮ ಆಗಮನದಿಂದ ದ್ವಾರಕೆಯು ಪಾವನವಾಯಿತು. ಆದರೆ ತಮ್ಮ ಮುಖದಲ್ಲಿ ಏನೋ ಚಿಂತೆಯು ನನಗೆ ಕಾಣುತ್ತಿದೆಯಲ್ಲಾ? ಏಕೆ ನಿಮ್ಮ ಮುಖಾರವಿಂದ ಬಾಡಿದೆ? ನಿಮ್ಮ ಮನಸ್ಸಿನ ಭಾರವನ್ನು ನನ್ನಿಂದ ಇಳಿಸಲು ಸಾಧ್ಯವಾದರೆ ಅದೇ ನನ್ನ ಸುಯೋಗ. ನೀವು ಹೇಳುವ ಮನಸ್ಸು ಮಾಡಬೇಕು" ಎಂದ.

“ಶ್ರೀಕೃಷ್ಣ, ನಿಮಗೆ ತಿಳಿಯದ್ದು ಏನಿದೆ? ನೀವು ಮಾತ್ರ ನನ್ನ ಮನಸ್ಸಿನ ಬೇಗುದಿಯನ್ನು ನಿವಾರಿಸಲು ಸಾಧ್ಯ. ನಿಮ್ಮಿಂದ ಮತ್ತೆ ನಾನು ಮೊದಲಿನ ಹಸನ್ಮುಖಿ ಅಶ್ವತ್ಥಾಮನಾಗ ಬಲ್ಲೆ" ಎಂದ ಅಶ್ವತ್ಥಾಮ.

“ಒಗಟಿನ ರೂಪದ ನಿನ್ನ ಮಾತುಗಳು ನನಗೆ ಅರ್ಥವಾಗುತ್ತಿಲ್ಲ ಗುರುಪುತ್ರಾ, ನೇರವಾಗಿ ನಿನ್ನ ಮನದಲ್ಲಿರುವ ವಿಷಯವನ್ನು ಅರುಹುವಂತಾಗು.ನಿನ್ನ ಮನಸ್ಸಿನಲ್ಲಿರುವ ವಿಷಯ ನನಗೆ ತಿಳಿದರೆ ನಾನು ಅದಕ್ಕೆ ಪರಿಹಾರವನ್ನು ಸೂಚಿಸಬಹುದು ಅಲ್ಲವೇ? ದಯವಿಟ್ಟು ನಿನ್ನ ಮನಸ್ಸಿನಲ್ಲಿ ಕೊರೆಯುವ ಸಮಸ್ಯೆಯನ್ನು ತಿಳಿಸುವಂತಾಗು" ಎಂದ ಶ್ರೀಕೃಷ್ಣ.

ಅಶ್ವತ್ಥಾಮ ತನ್ನ ಯೋಜನೆ ಕೈಗೂಡುತ್ತಿರುವುದನ್ನು ಗಮನಿಸಿ ಮನಸ್ಸಿನಲ್ಲೇ ಹಿಗ್ಗಿ ಹೀರೇಕಾಯಿ ಆಗಿ “ಕೃಷ್ಣಾ, ನನಗೆ ಒಂದು ಆಸೆಯಿದೆ. ಈ ಜಗತ್ತಿನಲ್ಲಿ ನನ್ನ ಸಾಮರ್ಥ್ಯಕ್ಕಿಂತಲೂ ಬಲಶಾಲಿಯಾದ ಇನ್ನೊಬ್ಬ ವ್ಯಕ್ತಿ ಇರಬಾರದು. ಜಗತ್ತಿನಲ್ಲಿರುವ ಎಲ್ಲಾ ಸಮರ್ಥ ಶಸ್ತ್ರಾಸ್ತ್ರಗಳು ನನ್ನ ಬಳಿ ಇರಬೇಕು ಎನ್ನುವುದು ನನ್ನ ಆಸೆ. ನನ್ನ ಬಳಿ ಎಲ್ಲಾ ಅಸ್ತ್ರಗಳು ಹಾಗೂ ಅವುಗಳನ್ನು ಬಳಸುವ ವಿದ್ಯೆಗಳಿದ್ದರೂ ಸುದರ್ಶನ ಚಕ್ರವೊಂದು ನನ್ನ ಬಳಿ ಇಲ್ಲ. ಆ ಸುದರ್ಶನ ಚಕ್ರದ ಅಗತ್ಯತೆ ನನಗಿದೆ. ದಯವಿಟ್ಟು ದಯಪಾಲಿಸುವೆಯಾ?” ಎಂದು ಕೇಳಿದ.

ಶ್ರೀಕೃಷ್ಣನಿಗೆ ಅಶ್ವತ್ಥಾಮನ ಕುಟಿಲತೆಯ ಅರಿವು ಮೊದಲೇ ಇತ್ತು. ಆದರೂ ದೇಹಿ ಎಂದು ಕೇಳಿಕೊಂಡು ಬಂದವರಿಗೆ ನಿರಾಸೆ ಮಾಡುವುದು ಸತ್ ಸಂಪ್ರದಾಯವಲ್ಲ. ಆ ಕಾರಣದಿಂದ ಕೃಷ್ಣ ಹೇಳಿದ “ ಯಾವುದೇ ಶಸ್ತ್ರಗಳನ್ನು ಹೊಂದಿರುವುದರಿಂದ ಆ ವ್ಯಕ್ತಿಯ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದನ್ನು ನಾನು ನಂಬುವುದಿಲ್ಲ. ಆ ಶಸ್ತ್ರಗಳನ್ನು ಯಾವ ಸಮಯದಲ್ಲಿ, ಯಾರ ಮೇಲೆ ಬಳಸುತ್ತೀಯಾ ಎಂಬುವುದರ ಮೇಲೆ ನಮ್ಮ ಸಾಮರ್ಥ್ಯ ಅಡಗಿದೆ. ನಮ್ಮ ಒಳಗಿನ ಸಾಮರ್ಥ್ಯದ ಅರಿವು ಬಹುಮುಖ್ಯ. ಹೊರಗಿನಿಂದ ದೊರೆತ ಯಾವುದೇ ಶಸ್ತ್ರದಿಂದ ನೆಮ್ಮದಿ ದೊರೆಯಲಾಗದು. ಒಂದು ಮಹತ್ವದ ಸಂಗತಿ, ಬೇರೆಯವರ ಶಸ್ತ್ರಗಳಿಗೆ ಅಥವಾ ಯಾವುದೇ ವಸ್ತುಗಳಿಗೆ ಆಸೆ ಪಡುವುದು ವೀರನ ಲಕ್ಷಣವಲ್ಲ ಅಶ್ವತ್ಥಾಮ" ಎಂದ.

ಶ್ರೀಕೃಷ್ಣನ ಹಿತನುಡಿಗಳಿಗೆ ತನ್ನ ಪಟ್ಟು ಸಡಿಲಿಸದ ಅಶ್ವತ್ಥಾಮ “ ಕೃಷ್ಣಾ, ನೀವು ನನಗೆ ಸುದರ್ಶನ ಚಕ್ರವನ್ನು ಪುಕ್ಕಟೆಯಾಗಿ ನೀಡಬೇಕಾಗಿಲ್ಲ. ನಾನು ಅದರ ಬದಲಿಗೆ ಅತ್ಯಂತ ಶಕ್ತಿಶಾಲಿಯಾದ ಅಸ್ತ್ರವಾದ ‘ಬ್ರಹ್ಮಶಿರಾಸ್ತ್ರ'ವನ್ನು ನೀಡುತ್ತೇನೆ. ಈ ಅಸ್ತ್ರವನ್ನು ಬಳಸಿ ನೀವು ಯಾರನ್ನು ಬೇಕಾದರೂ ಗೆಲ್ಲಲು ಸಾಧ್ಯ. ಅದರ ಪ್ರತಿಯಾಗಿ ನೀವು ಸುದರ್ಶನ ಚಕ್ರವನ್ನು ನೀಡಿದರೆ ಸಾಕು.” ಎಂದ.

ಶ್ರೀಕೃಷ್ಣ ಮುಗುಳ್ನಗುತ್ತಾ ಹೇಳಿದ “ ಇಲ್ಲಿ ವ್ಯಾಪಾರದ ಪ್ರಶ್ನೆ ಬರುವುದಿಲ್ಲ ಅಶ್ವತ್ಥಾಮ. ನೀನು ಕೊಡುವ ವಸ್ತುವಿಗೆ ಪ್ರತಿಯಾಗಿ ನಾನು ಮತ್ತೊಂದು ವಸ್ತುವನ್ನು ಕೊಡುವಂತಹ ವ್ಯಾಪಾರ ಮಾಡಲು ನನಗೆ ಮನಸ್ಸಿಲ್ಲ. ಇಂತಹ ವ್ಯಾಪಾರ ಮನಸ್ಥಿತಿಯಿಂದ ಮನುಷ್ಯರ ನಡುವಿನ ಸಂಬಂಧಗಳು ಹಾಳಾಗಿಹೋಗುತ್ತವೆ. ನಿನಗೆ ಸುದರ್ಶನ ಚಕ್ರವನ್ನು ಉಡುಗೊರೆಯಾಗಿ ನೀಡಲು ನನಗೇನೂ ಅಭ್ಯಂತರವಿಲ್ಲ. ಅದನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಮಾತ್ರ ನೀನೇ ಮಾಡಬೇಕು. ಅಗೋ, ಅಲ್ಲಿದೆ ನೋಡು ಚಕ್ರ. ತೆಗೆದುಕೊಂಡು ಹೋಗು. ನಿನಗೆ ಶುಭವಾಗಲಿ" ಎಂದ.

ಅಶ್ವತ್ಥಾಮ ಬಹಳ ಖುಷಿಯಿಂದ “ನಾನು ಧನ್ಯನಾದೆ ಕೃಷ್ಣಾ. ನಿನಗೆ ಅನಂತಾನಂತ ಕೃತಜ್ಞತೆಗಳು"ಎನ್ನುತ್ತಾ ಸುದರ್ಶನ ಚಕ್ರದತ್ತ ಸಾಗಿ ಅದನ್ನು ಎತ್ತಲು ಪ್ರಯತ್ನಿಸಿದ. ಅದು ಒಂದು ಇಂಚೂ ಅಲುಗಾಡಲಿಲ್ಲ. ಬಹಳ ಹೊತ್ತು ಅದನ್ನು ಎತ್ತಲು ಪ್ರಯತ್ನ ಪಟ್ಟ ಬಳಿಕ ಅಶ್ವತ್ಥಾಮನಿಗೆ ಆ ಚಕ್ರವನ್ನು ಬಳಸುವ ಯೋಗ್ಯತೆ ಮತ್ತು ಸಾಮರ್ಥ್ಯ ತನಗಿಲ್ಲ ಎಂಬ ಸತ್ಯದ ಅರಿವಾಯಿತು. ಮರು ಮಾತನಾಡದೇ ಶ್ರೀಕೃಷ್ಣನಿಗೆ ನಮಸ್ಕರಿಸಿ ಮರಳಿ ಹೊರಟ.

ಕೊನೇ ವಿಷಯ: ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಕೌರವರ ಪಡೆಯಿಂದ ಬದುಕುಳಿದ ಮಹಾರಥಿ ಅಶ್ವತ್ಥಾಮ ಮಾತ್ರ. ಆತನಿಗೆ ಮರಣವಿಲ್ಲ ಎಂಬ ವರ ಇದ್ದುದರಿಂದ ಸಾಯದೇ ಉಳಿದುಕೊಂಡ. ಆತ ಕಾಲು ಮುರಿದುಕೊಂಡು ಬಿದ್ದಿದ್ದ ದುರ್ಯೋಧನನನ್ನು ಸಂಪ್ರೀತಗೊಳಿಸಲು ಪಾಂಡವರನ್ನು ಕೊಲ್ಲುವ ಬದಲು ಉಪ ಪಾಂಡವರು (ಪಾಂಡವರ ಮಕ್ಕಳು) ಮಲಗಿದ್ದಾಗ ಅವರನ್ನು ಕೊಂದು ದುರ್ಯೋಧನನ ಬಳಿ ಬಂದು ತನ್ನ ವೀರಾವೇಷವನ್ನು ಹೇಳಿಕೊಳ್ಳುತ್ತಾನೆ. ಪಾಂಡವರ ಸಂತಾನ ನಾಶವಾದುದರಿಂದ ಇನ್ನು ಅವರ ವಂಶ ಮುಂದುವರೆಯದೆಂದು ಅಶ್ವತ್ಥಾಮ ಭಾವಿಸುತ್ತಾನೆ. ಆದರೆ ಅರ್ಜುನನ ಮಗನಾದ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿನ ಬಗ್ಗೆ ತಿಳಿದ ಅಶ್ವತ್ಥಾಮ ಆ ಮಗುವನ್ನು ಕೊಲ್ಲಲು ಬ್ರಹ್ಮಾಸ್ತ್ರವನ್ನು ಬಳಸುತ್ತಾನೆ. ಅದಕ್ಕೆ ಪ್ರತಿಯಾಗಿ ಅರ್ಜುನನೂ ಬ್ರಹ್ಮಾಸ್ತ್ರವನ್ನು ಬಳಸಿದರೂ ಎರಡು ಬ್ರಹ್ಮಾಸ್ತ್ರಗಳಿಂದ ಭೂಮಂಡಲವೇ ನಾಶವಾಗುವುದೆಂಬ ಕೃಷ್ಣನ ಮಾತಿಗೆ ಮನ್ನಣೆ ನೀಡಿ ತನ್ನ ಅಸ್ತ್ರವನ್ನು ಹಿಂಪಡೆಯುತ್ತಾನೆ. ಆದರೆ ಅಶ್ವತ್ಥಾಮ ಆ ಅಸ್ತ್ರದಿಂದ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ನಾಶ ಮಾಡುತ್ತಾನೆ.

ಇದರಿಂದ ಕ್ರೋಧಿತನಾದ ಶ್ರೀಕೃಷ್ಣ ತನ್ನ ಸುದರ್ಶನ ಚಕ್ರವನ್ನು ಬಳಸಿ ಆತನ ಹಣೆಯಲ್ಲಿದ್ದ ಮಣಿಯನ್ನು ಕಿತ್ತೊಗೆಯುತ್ತಾನೆ. “ನಿನಗೆ ಸಿಕ್ಕ ಅಮರತ್ವವೇ ಶಾಪವಾಗಲಿ, ಇಡೀ ಜೀವನ ರೋಗಿಷ್ಟನಾಗಿ, ಚರ್ಮರೋಗ ಪೀಡಿತನಾಗಿ ಬದುಕು ಸವೆಸು. ನೀನು ಪ್ರತೀ ದಿನ ಮರಣವನ್ನು ಬೇಡುವಂತಾಗಬೇಕು, ಆದರೆ ನಿನಗೆ ಸಿಕ್ಕ ವರದ ಕಾರಣ ಮರಣ ಬಾರದೇ ಹೋಗಲಿ” ಎಂದು ಶ್ರೀಕೃಷ್ಣ ಶಾಪ ನೀಡುತ್ತಾನೆ. ನಂತರ ತನ್ನ ಪುಣ್ಯ ಶಕ್ತಿಯಿಂದ ಉತ್ತರೆಯ ಗರ್ಭದಲ್ಲಿರುವ ಮಗುವಿಗೆ ಪುನರ್ಜೀವ ನೀಡುತ್ತಾನೆ. ಶಕ್ತಿಶಾಲಿಯಾಗಲು ಬಯಸಿ ಯಾವ ಅಸ್ತ್ರವನ್ನು ಪಡೆಯಲು ಅಶ್ವತ್ಥಾಮ ಹೋಗಿದ್ದನೋ ಅದೇ ಅಸ್ತ್ರ ಅವನ ಶಕ್ತಿಯನ್ನು ನಿರ್ನಾಮ ಮಾಡಿಬಿಡುತ್ತದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ