ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು-ಭಾಗ ೩
ಎತ್ತುಗಳು ಮತ್ತು ಕಟುಕರು
ಒಂದು ಸಾರಿ ಎತ್ತುಗಳೆಲ್ಲ ಸೇರಿ ತಮ್ಮ ವಂಶವನ್ನು ನಿರ್ವಂಶ ಮಾಡುವ ಕಸುಬಿನ ಕಟುಕರನ್ನು ನಾಶಮಾಡಬೇಕೆಂದು ತೀರ್ಮಾನಿಸಿದವು. ತಮ್ಮ ಉದ್ದೇಶದ ಈಡೇರಿಕೆಗೆ ಅವು ಒಂದು ದಿನ ಸಭೆ ಸೇರಿ ಕೊಂಬನ್ನು ಮಸೆದು ಚೂಪುಮಾಡಿಕೊಂಡವು. ಅವುಗಳಲ್ಲೊಂದು, ಎಷ್ಟೋ ಹೊಲಗದ್ದೆಗಳನ್ನು ಉತ್ತುತ್ತು ಮುದಿಯಾಗಿದ್ದ ಎತ್ತು ಹೀಗೆ ಹೇಳಿತು " ಈ ಕಟುಕರು ನಮ್ಮನ್ನು ಕೊಲ್ಲುತ್ತಾರೆ ಅನ್ನುವುದೇನೋ ನಿಜ, ಆದರೆ ಅವರು ನಮ್ಮನ್ನು ಕೊಲ್ಲುವಾಗ ಅನಗತ್ಯ ನೋವಿಲ್ಲದಂತೆ ನುರಿತ ಕೈಗಳಿಂದ ಕೊಲ್ಲುತ್ತಾರೆ. ನಾವು ಅವರನ್ನು ಕೊಂದರೆ ಅಡ್ಡಕಸಬಿ ಕಟುಕರ ಕೈಗೆ ಸಿಕ್ಕಿಕೊಳ್ಳುತ್ತೇವೆ. ಹಾಗಾಗಿ ಎರಡು ಸಾವನ್ನು ಅನುಭವಿಸಬೇಕಾಗುತ್ತದೆ. ಒಂದು ವಿಷಯವಂತೂ ಖಾತ್ರಿ; ಜಗತ್ತಿನ ಎಲ್ಲ ಕಟುಕರು ನಾಶವಾದರೂ ಜನರಿಗೆ ಎತ್ತಿನ ಮಾಂಸ ಬೇಡದೆಹೋಗುವುದಿಲ್ಲ.
ಒಂದು ಅನಿಷ್ಟ ಕೈತೊಳೆದುಕೊಂಡು ಮತ್ತೊಂದು ಹೊಸ ಅನಿಷ್ಟ ಸ್ವಾಗತಿಸಬೇಡಿ.
ಮುದುಕಿಯೂ ವೈದ್ಯನೂ
ತನ್ನ ದೃಷ್ಟಿಶಕ್ತಿಯನ್ನು ಕಳೆದುಕೊಂಡ ಮುದುಕಿಯೊಬ್ಬಳು ಚಿಕಿತ್ಸೆಗಾಗಿ ಒಬ್ಬ ವೈದ್ಯನನ್ನು ಕರೆಸಿ, ಸಾಕ್ಷಿಗಳ ಸಮ್ಮುಖದಲ್ಲಿ ಒಂದು ಒಪ್ಪಂದ ಮಾಡಿಕೊಂಡಳು. ಒಪ್ಪಂದದಂತೆ ಅವನ ಚಿಕಿತ್ಸೆಯಿಂದ ಅವಳ ದೃಷ್ಟಿಬಂದರೆ ಅವಳು ವೈದ್ಯನಿಗೆ ಒಂದು ನಿರ್ದಿಷ್ಟ ಮೊತ್ತದ ಹಣ ನೀಡಬೇಕು, ಇಲ್ಲದಿದ್ದಲ್ಲಿ ಅವಳು ಅವನಿಗೆ ಏನೂ ಕೊಡಬೇಕಾಗಿಲ್ಲ. ಒಪ್ಪಂದದಂತೆ ವೈದ್ಯನು ಚಿಕಿತ್ಸೆ ಶುರು ಮಾಡಿದ. ಪ್ರತಿಸಾರಿ ಅವನು ಬಂದಾಗ ಅವಳ ಕಣ್ಣಿಗೆ ಲೇಪ ಹಚ್ಚುತ್ತ, ಸ್ವಲ್ಪ ಸ್ವಲ್ಪವೇ ಮುದುಕಿಯ ಸೊತ್ತನ್ನೆಲ್ಲ ಕದ್ದು ಸಾಗಿಸತೊಡಗಿದ. ಅವನಿಗೆ ಬೇಕಾದದ್ದನ್ನೆಲ್ಲ ಹೀಗೆ ಸಾಗಿಸಿದನಂತರ ಅವನು ಅವಳ ಕಣ್ಣಿನ ದೃಷ್ಟಿ ಬರಿಸಿದ. ತನ್ನು ಚಿಕಿತ್ಸೆ ಫಲಕಾರಿಯಾದ್ದರಿಂದ ಒಪ್ಪಂದದಂತೆ ಹಣಕೊಡಬೇಕೆಂದು ಒತ್ತಾಯಿಸಿದ. ದೃಷ್ಟಿಬಂದ ಮುದುಕಿ ತನ್ನ ಮನೆಯಲ್ಲಿ ಯಾವ ವಸ್ತುವೂ ಇಲ್ಲದ್ದನ್ನು ನೋಡಿ ಹಣ ಕೊಡುವುದಿಲ್ಲವೆಂದು ಪಟ್ಟುಹಿಡಿದಳು. ಹೀಗೇ ವಾಗ್ವಾದದ ನಂತರ ವೈದ್ಯ ತನ್ನ ಹಣಕ್ಕಾಗಿ ದಾವೆ ಹೂಡಿದ. ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ನಿಂತ ಮುದುಕಿ ಹೀಗೆ ವಾದಿಸಿದಳು "ನನ್ನ ಕಣ್ಣು ಸರಿಹೋದರೆ ನಾನು ಒಂದು ಮೊತ್ತದ ಹಣಕೊಡುತ್ತೇನೆಂದೂ, ದೃಷ್ಟಿ ಬರದಿದ್ದರೆ ಏನೂ ಕೊಡುವುದಿಲ್ಲವೆಂದು ಹೇಳಿದ್ದು ನಿಜ; ಈಗ ಇವನು ನನ್ನ ದೃಷ್ಟಿ ಸರಿಹೋಗಿದೆಯೆಂದು ಹೇಳುತ್ತಿದ್ದಾನೆ. ನಾನು ಇದಕ್ಕೆ ವಿರುದ್ಧವಾಗಿ ನಾನಿನ್ನೂ ಕುರುಡಿಯಾಗಿಯೇ ಇದ್ದೇನೆ ಎಂದು ಹೇಳುತ್ತೇನೆ. ನನ್ನ ದೃಷ್ಟಿಕಳೆಯುವುದಕ್ಕೆ ಮುಂಚೆ ನನಗೆ ಈ ಮನೆಯಲ್ಲಿ ನನ್ನ ಸೊತ್ತು ಆಸ್ತಿಗಳು ಕಾಣಿಸುತ್ತಿದ್ದವು. ಈಗ ಈ ವೈದ್ಯ ನನ್ನ ಕಣ್ಣುಗಳು ಸರಿಯಾಗಿದೆಯೆಂದು ಪ್ರಮಾಣಮಾಡುತ್ತಿದ್ದರೂ ನನಗೆ ಅವೇನೂ ಕಾಣಿಸುತ್ತಿಲ್ಲ."