ಅಸಾಮಾನ್ಯರಾಗಲು ಅಸಾಧ್ಯವಾದುದನ್ನೇ ಸಾಧಿಸಬೇಕಲ್ಲವೇ?
ದೇಹವೆಂಬ ದೇಗುಲದಲ್ಲಿ
ಹೃದಯವೆಂಬ ಹಣತೆ ಬೆಳಗುತಿದೆ,
ಮನಸ್ಸೆಂಬ ಆಳದಲ್ಲಿ
ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ.
ಜಾತಸ್ಯ ಮರಣಂ ಧ್ರುವಂ...
ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ.
ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ...
ಸೃಷ್ಟಿಯ ನಿಯಮದಂತೆ,
ಗಂಡು ಹೆಣ್ಣಿನ ಸಮ್ಮಿಲನದಿಂದ,
ತಾಯ ಗರ್ಭದಲ್ಲಿ ಪ್ರಾರಂಭವಾಗುವುದು,
ಮೊದಲ ಉಚ್ವಾಸ -
ಅದೇ ನಮ್ಮ ಆರಂಭ,
ಅದೇ ಎಲ್ಲರ ಸಂಭ್ರಮ.
ಮುಂದೊಮ್ಮೆ.....
ಕೊನೆಯ ನಿಶ್ವಾಸ -
ಅದೇ ನಮ್ಮ ಅಂತ್ಯ,
ಅದೇ ಎಲ್ಲರಿಗೂ ದುಃಖ - ನೋವು.
ಈ ನಡುವಿನ ಬಾಲ್ಯ ಯೌವ್ವನ
ಮುಪ್ಪುಗಳೇ ನಮ್ಮ ಬದುಕು,
ಹೇಗೆಂದು ವರ್ಣಿಸಲಿ ಇದನು,
ಹೇಗೆಂದು ಬಣ್ಣಿಸಲಿ ಇದನು,
ಪದಗಳಿವೆಯೇ ಇದಕೆ ಅರ್ಥಕೊಡಲು,
ನಿಲುಕುವುದೇ ಇದು ಭಾಷೆಗಳಿಗೆ,
ಹೃದಯದ ಬಡಿತ - ರಕ್ತದ ಹರಿವು,
ಮೆದುಳಿನ ಗ್ರಹಿಕೆ - ನರಗಳ ಚಲನೆ,
ಗಾಳಿ ನೀರು ಬೆಳಕಿನ ಶಕ್ತಿ,
ಮಣ್ಣಿನ ಆಶ್ರಯ ಮುನ್ನಡೆಸುವುದು
ಸಾವಿನೆಡೆಗೆ ,
ಅದೇ ಜೀವನ.
ಚರ್ಮದ ಸ್ಪರ್ಶ - ಕಣ್ಣ ನೋಟ,
ಕಿವಿಯ ಆಲಿಸುವಿಕೆ - ಮೂಗಿನ ಗ್ರಹಿಕೆ,
ಹೊರ ಹಾಕುವುದು ಬಾಯಿ,
ಧ್ವನಿಯ ಮೂಲಕ.
ಅದೇ ಜೀವಾ..
ಅದೇ ನಾನು ನಾನು ನಾನು..
ಕೊನೆಗೊಂದು ದಿನ ಆ ನಾನೇ
ಆಗುವುದು ನಿರ್ಜೀವ ಶವ.
ಸೂರ್ಯ - ಚಂದ್ರರ ನಾಡಿನಲ್ಲಿ,
ಸಾಗರದ ತಟದಲ್ಲಿ,
ಭೂತಾಯಿ ಮಡಿಲಲ್ಲಿ,
ಹಗಲು - ರಾತ್ರಿಗಳ ಜೊತೆಯಲ್ಲಿ,
ನೋವು ನಲಿವುಗಳ ಭಾವದಲ್ಲಿ,
ನಿಮ್ಮೆಲ್ಲರ ಹೃದಯದಲ್ಲಿ
ಶಾಶ್ವತವಾಗಿ ನೆಲೆಯಾಗುವಾಸೆ.
ಅದೇ ಬದುಕಿನ ಸಾರ್ಥಕತೆ.
ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು...
ಕ್ಷಣಕ್ಷಣಕ್ಕೂ ಬದಲಾಗುತ್ತಾ ವಿಶಾಲ ಸಾಗರದ ಅಲೆಗಳಂತೆ ,
ಎತ್ತರದ ಪರ್ವತಗಳ ನೋಟದಂತೆ
ದಟ್ಟ ಕಾನನದ ಮಾಲೆಗಳಂತೆ,
ಅನಂತ ಆಕಾಶದ ಕೌತುಕದಂತೆ,
ಚಲಿಸುತ್ತಲೇ ಇರುತ್ತದೆ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳು ಇರುವಂತೆ,
ಪ್ರೀತಿ ಪ್ರೇಮ ಕರುಣೆ ಮಮತೆಗಳೆಂಬ ಭಾವಗಳೂ ತುಂಬಿ ತುಳುಕುತ್ತವೆ.
ಇಲ್ಲಿ ನಾವು ಮಾಡಬೇಕಿರುವುದು ಹೆಚ್ಚೇನೂ ಇಲ್ಲ.
ಎಲ್ಲ ಭಾವಗಳಲ್ಲೂ ಸಂಚರಿಸುತ್ತಾ ಪ್ರೀತಿ ಎಂಬ ಭಾವವನ್ನು ಅಪ್ಪಿಕೊಳ್ಳೋಣ.....
ಪ್ರೀತಿ ಎಂಬ ಭಾವದಲ್ಲಿ ಸ್ಥಾಯಿಯಾಗೋಣ.
ಅದೊಂದು ಅದ್ಬುತ ಪ್ರಪಂಚ. ಬೇರೆ ಎಲ್ಲಾ ಭಾವಗಳಿಗೂ ಅಧಿಪತಿ ಈ ಪ್ರೀತಿ ಎಂಬ ಭಾವ. ಇದು ಎಂದೆಂದಿಗೂ ಮುಗಿಯದ ಅಕ್ಷಯ ಭಾವ. ನಿಷ್ಕಲ್ಮಶ ಪ್ರೀತಿಗೆ ಯಾವ ಮಿತಿಯೂ ಇಲ್ಲ. ಹರಿಯಲು ಬಿಡಿ ಪ್ರೀತಿಯನ್ನು....
ಅದು ಮತ್ತಷ್ಟು ವಿಶಾಲವಾಗುತ್ತಾ ಸಾಗುತ್ತದೆ. ನಿರೀಕ್ಷೆಗಳಿಲ್ಲದ ,
ಸ್ವಾರ್ಥವಿಲ್ಲದ ಪ್ರೀತಿ ನಿಮ್ಮನ್ನು ಆಂತರಿಕವಾಗಿ ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರೀತಿ ಎಂಬ ಭಾವ ಎಲ್ಲಾ ಸಂಬಂದಗಳನ್ನು ಮೀರಿ ಬದುಕನ್ನು ಸಾರ್ಥಕತೆಯತ್ತಾ ಮುನ್ನಡೆಸುತ್ತದೆ. ಸಾಮಾನ್ಯ ವ್ಯಾವಹಾರಿಕ ಬದುಕಿನಲ್ಲಿ ಇದು ಅತ್ಯಂತ ಕಠಿಣ. ಆದರೆ, ಅಸಾಮಾನ್ಯರಾಗಲು ಅಸಾಧ್ಯವಾದುದನ್ನೇ ಸಾಧಿಸಬೇಕಲ್ಲವೇ ?
ಪ್ರಯತ್ನಿಸಿ ಇಂದಿನಿಂದಲೇ..
ನೀವಿರುವ ನೆಲೆಯಲ್ಲಿಯೇ..
ಇದರಿಂದ ಯಾವ ದುಷ್ಪರಿಣಾಮಗಳು ಇಲ್ಲವೆಂಬ ಖಚಿತ ಭರವಸೆ ನೀಡಬಲ್ಲೆ.....
ಪ್ರೀತಿಯನ್ನು ಪ್ರೀತಿಸುತ್ತಾ, ನಿಮ್ಮೊಂದಿಗೆ ನಾನು, ನಿಮ್ಮೊಳಗೆ ನಾನು...
- 290 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದಿಂದ ಸುಮಾರು 23 ಕಿಲೋಮೀಟರ್ ದೂರದ ಮದೆನಾಡು ಗ್ರಾಮ ತಲುಪಿತು. ಮೂರು ವರ್ಷಗಳ ಹಿಂದೆ ಇದೇ ದಿನ ಭೀಕರ ಮಳೆಗೆ ಈ ಪ್ರದೇಶದಲ್ಲಿ ಭೂಕುಸಿತಗಳು ಉಂಟಾಗಿ ಇಡೀ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆ ದೃಶ್ಯಗಳನ್ನು ನೋಡುತ್ತಾ ಏರು ರಸ್ತೆಗಳನ್ನು ಹತ್ತುತ್ತಾ ಜೊತೆಗೆ ಸುಂದರ ಪರಿಸರ ಆಸ್ವಾದಿಸುತ್ತಾ ಮದೆನಾಡು ತಲುಪಿದೆನು.
ಇಂದು 18/8/2021 ಬುಧವಾರ 291 ನೆಯ ದಿನ ನಮ್ಮ ಕಾಲ್ನಡಿಗೆ ಕೊಡಗು ಜಿಲ್ಲೆಯ ಮದೆನಾಡು ಗ್ರಾಮದಿಂದ ಸುಮಾರು 10 ಕಿಲೋಮೀಟರ್ ದೂರದ ಮಡಿಕೇರಿ ತಾಲ್ಲೂಕು ತಲುಪಲಿದೆ.
ಕೊಡಗು ಜಿಲ್ಲೆಯ ಸಂಭಾವ್ಯ ವೇಳಾಪಟ್ಟಿ:
ಮಡಿಕೇರಿ ಅ. 17. ಸಮಾಜಮುಖಿ ಚಿಂತಕ ಹೆಚ್.ಕೆ.ವಿವೇಕಾನಂದ ರವರ ಕಾಲ್ನಡಿಗೆಯ ಜ್ಞಾನಭಿಕ್ಷೆ ಪಾದಯಾತ್ರೆಯು ದಿನಾಂಕ 18-08-2021 ರಂದು ಮಡಿಕೇರಿಗೆ ಆಗಮಿಸಲಿದ್ದಾರೆ. ಅವರು ಅಂದು ಮದ್ಯಾಹ್ನ 2.30 ಕ್ಕೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯುವ ಸಂವಾದ ಕಾರ್ಯಕ್ರಮ ಭಾಗವಹಿಸಲಿದ್ದಾರೆ.. ಸಾರ್ವಜನಿಕರು, ಆಸಕ್ತ ಚಿಂತಕರು, ಕಾರ್ಯಕ್ರಮಕ್ಕೆ ಆಗಮಿಸಲು ಕೋರಿಕೆ ಅಂದು ಮಡಿಕೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರನೇ ದಿನ 19-08-2021 ರಂದು ಮೂರ್ನಾಡಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 20-08-2021ರಂದುವಿರಾಜಪೇಟೆಯಲ್ಲಿ ಸಾರ್ವಜನಿಕ ಸಂವಾದ ನಂತರ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
21-08-2021 ರಂದು ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆಯಲ್ಲಿ ಸಾರ್ವಜನಿಕ ಸಂವಾದ ನಡೆಸಲಿದ್ದಾರೆ ಮತ್ತು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 22-08-2021ರಂದು ಸಿದ್ದಾಪುರದಲ್ಲಿ ಸಾರ್ವಜನಿಕ ಸಂವಾದ ನಡೆಸಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 23-08_2021 ರಂದು ಕುಶಾಲನಗರದಲ್ಲಿ ಸಾರ್ವಜನಿಕ ಸಂವಾದ ನಡೆಸಲಿದ್ದಾರೆ ಎಂದು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರದಲ್ಲಿ: ಮಡಿಕೇರಿಯತ್ತ ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಕಂಡ ದೃಶ್ಯ