ಅಸೂಯೆ ಎಂಬ ತಡೆಗೋಡೆ...

ಅಸೂಯೆ ಎಂಬ ತಡೆಗೋಡೆ...

ಬರಹ

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ ಗಮನವೆಲ್ಲ ಇನ್ನೊಬ್ಬರ ಪ್ರಯತ್ನ, ಸಾಧನೆಯತ್ತಲೇ ಇರುತ್ತದೆ. ಆದರೆ, ಅದನ್ನು ಮೆಚ್ಚುಗೆಯ, ಪ್ರೇರಣೆಯ ಕಣ್ಣುಗಳಿಂದ ಗಮನಿಸುವುದಿಲ್ಲ. ಬದಲಾಗಿ, ಅಸೂಯೆಯಿಂದ ಇನ್ನೊಬ್ಬರ ಸಾಧನೆಯನ್ನು ನೋಡುತ್ತಾರೆ. ಆ ಸಾಧನೆಯ ವೇಗವನ್ನು, ಪರಿಣಾಮವನ್ನು ತಗ್ಗಿಸುವುದು ಹೇಗೆಂದು ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮೆಲ್ಲ ಶ್ರಮ, ಸಾಮರ್ಥ್ಯವನ್ನು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಬಳಸುತ್ತಾರೆ.

’ಪರಿಣಾಮ ಏನಾಗುತ್ತದೆ?

’ವ್ಯಕ್ತಿಯೊಬ್ಬನ ಸಹಜ ಸಾಮರ್ಥ್ಯದ ದುರ್ಬಳಕೆಯಾಗುತ್ತದೆ. ಯಾರು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಪ್ರಯತ್ನಿಸುತ್ತಿರುತ್ತಾರೋ, ಅವರ ಪ್ರಗತಿ ಸಹಜವಾಗಿ ಕುಂಠಿತವಾಗುತ್ತದೆ. ಅವರ ಎಲ್ಲ ಸಮಯ ಹಾಗೂ ಯೋಚನೆ ಇನ್ನೊಬ್ವ ವ್ಯಕ್ತಿಯ ನಡೆಯನ್ನು ಅವಲಂಬಿಸತೊಡಗುತ್ತದೆ. ಅಸೂಯಾಪರ ವ್ಯಕ್ತಿಯ ಮನಸ್ಸನ್ನು ಇನ್ನೊಬ್ಬ ವ್ಯಕ್ತಿ ತುಂಬಿಕೊಳ್ಳುತ್ತಾನೆ. ನಾಶದ ಉದ್ದೇಶ ಈಡೇರುವತನಕ ಈ ವ್ಯಕ್ತಿ ಬೇರೊಂದು ವಿಷಯದತ್ತ ಗಮನ ಹರಿಸುವುದಿಲ್ಲ. ತನ್ನ ಗುರಿ ಸಾಧಿಸಿದ ನಂತರವೇ ಆತನಿಗೆ ನೆಮ್ಮದಿ.

’ಆದರೆ ಇದರಿಂದ ಅಸೂಯಾಪರನಿಗೆ ಏನು ಸಿಕ್ಕಂತಾಯಿತು? ಕ್ಷುದ್ರ ತೃಪ್ತಿ ಬಿಟ್ಟರೆ ಬೇರೆ ಏನೂ ಇಲ್ಲ. ಬದಲಾಗಿ, ಅವನ ಸಮಯ, ಶಕ್ತಿ ಹಾಗೂ ಸಾಮರ್ಥ್ಯ ವ್ಯರ್ಥ್ಯವಾಗುತ್ತದೆ. ಅವನ ಬುದ್ಧಿಶಕ್ತಿ ಕ್ರಿಯಾತ್ಮಕವಾದುದನ್ನು ಮಾಡಲಾಗದ ಸ್ಥಿತಿ ತಲುಪುತ್ತದೆ. ಕ್ರಮೇಣ ಅಸೂಯಾಭಾವನೆ ಅವನನ್ನು ಎಷ್ಟೊಂದು ಆವರಿಸಿಕೊಳ್ಳುತ್ತದೆಂದರೆ, ಸಹಜ ಸಮಾಧಾನ, ಸಂತೃಪ್ತಿ, ವಿವೇಕವನ್ನು ಕಳೆದುಕೊಂಡು ಆತ ಮಾನಸಿಕ ರೋಗಿಯಾಗುತ್ತಾನೆ.

’ಅಸೂಯೆ ಕೆಟ್ಟದ್ದು. ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೊಬ್ಬರ ಪ್ರಗತಿಯನ್ನು ತಡೆದೆವು, ಅದಕ್ಕೆ ತೊಂದರೆ ಉಂಟು ಮಾಡಿದೆವು ಎಂಬ ಕ್ಷುದ್ರ ತೃಪ್ತಿ ಬಿಟ್ಟರೆ, ಅಸೂಯಾಪರನಿಗೆ ಏನೂ ದಕ್ಕುವುದಿಲ್ಲ. ಬದಲಾಗಿ ಆತ ತನ್ನದೇ ಮಾರ್ಗವನ್ನು ಕಳೆದುಕೊಂಡು, ಇನ್ನೊಬ್ಬರ ನಡೆಯನ್ನು ಕಾಯುತ್ತ ಇದ್ದಲ್ಲೇ ಇದ್ದುಬಿಡುತ್ತಾನೆ.’
ಪುಸ್ತಕ ಓದುತ್ತ ಹೋದಂತೆ ನನಗೆ ಸಾಧು ಹೇಳಿದ ಮಾತುಗಳು ಮತ್ತೆ ನೆನಪಾದವು.

ಒಬ್ಬ ಮನುಷ್ಯ ಇನ್ನೊಬ್ಬನನ್ನು ಕಂಡು ಏಕೆ ಅಸೂಯೆ ಪಡುತ್ತಾನೆ ಎಂಬುದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಆದರೆ, ಅವು ಸಮರ್ಥನೀಯ ಎಂದು ಅನ್ನಿಸುವುದಿಲ್ಲ. ನಿಜವಾದ ಸತ್ವ ಇರುವ ವ್ಯಕ್ತಿ ಹೊಸ ಹೊಸ ಸಾಧನೆಗಳನ್ನು ಮಾಡುತ್ತಲೇ ಹೋಗುತ್ತಾನೆ. ಅಸೂಯಾಪರನೊಬ್ಬನ ಅಡ್ಡಗಾಲು ಆತನನ್ನು ಶಾಶ್ವತವಾಗಿ ಮುಗಿಸಲಾರದು.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಜನ ಅಸೂಯಿಗಳು ಸಿಕ್ಕೇ ಸಿಗುತ್ತಾರೆ. ಅವರು ನಮ್ಮ ಜತೆಗೇ ಇರುತ್ತಾರೆ. ಒಮ್ಮೊಮ್ಮೆ ನಮ್ಮ ಪರಮಾಪ್ತರಂತೆ ನಟಿಸುತ್ತಿರುತ್ತಾರೆ. ನಮ್ಮ ಒಂದೇ ಒಂದು ತಪ್ಪನ್ನು ಹಿಗ್ಗಿಸಿ ತೋರಿಸಲು, ನಮ್ಮನ್ನು ಅವಮಾನಿಸಲು, ನಮ್ಮ ಅವಕಾಶಗಳನ್ನು ಕಸಿದುಕೊಳ್ಳಲು ಪ್ರತಿ ಕ್ಷಣವೂ ಕಾಯುತ್ತಿರುತ್ತಾರೆ. ಅವರ ನಿತ್ಯದ ಬದುಕು ನಮ್ಮನ್ನು, ನಮ್ಮ ನಡೆಯನ್ನು ಅವಲಂಬಿಸಿರುತ್ತದೆ. ಇವರೊಂಥರಾ ಮಾನಸಿಕ ಅವಲಂಬಿಗಳು. ಮಾನಸಿಕ ರೋಗಿಗಳು.

ಎಷ್ಟೋ ಸಾರಿ ಅವರಿಂದ ನಮಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಅವಮಾನವೂ ಆಗುತ್ತದೆ. ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಮನಸ್ಸು ರೊಚ್ಚಿಗೇಳುತ್ತದೆ. ಆದರೆ, ಒಂದೇ ಒಂದು ನಿಮಿಷ ಯೋಚಿಸಿ ನೋಡಿ! ನಮ್ಮನ್ನು ಕೆಣಕುವ ವ್ಯಕ್ತಿಗೆ, ನಮ್ಮನ್ನು ತನ್ನ ಮಟ್ಟಕ್ಕೆ, ತನ್ನ ಕ್ಷೇತ್ರಕ್ಕೆ ತಂದು ಕದನಕ್ಕಿಳಿಸುವ ಉದ್ದೇಶ ಮಾತ್ರ ಇರುತ್ತದೆ. ನಾವು ರೊಚ್ಚಿಗೆದ್ದರೆ, ಮನಸ್ಸಿನ ಸಮತೋಲನ ಕಳೆದುಕೊಂಡರೆ, ಅಸೂಯಿಯ ಉದ್ದೇಶವನ್ನು ಈಡೇರಿಸಿದಂತೆ.

ಸಾಮಾನ್ಯವಾಗಿ ಇಂಥ ಅಸೂಯಿಗಳು ಬಲು ಬೇಗ ಪತ್ತೆಯಾಗುತ್ತಾರೆ. ಅವರನ್ನು ಗುರುತಿಸಲು ತುಂಬ ಕಷ್ಟಪಡಬೇಕಿಲ್ಲ. ಎಷ್ಟೋ ಸಾರಿ ಅಸೂಯಿಗಳು ನಮಗಿಂತ ಮೇಲಿನ ಹಂತದಲ್ಲಿರುತ್ತಾರೆ. ಆಗ ಕಷ್ಟ ಇನ್ನೂ ಜಾಸ್ತಿ. ನಮ್ಮನ್ನು ಹೀಯಾಳಿಸಿ, ನಮಗೆ ಸಹಜವಾಗಿ ದಕ್ಕಬಹುದಾದ ಅವಕಾಶಗಳನ್ನು ನಿರಾಕರಿಸಿ, ಅಥವಾ ಅವನ್ನು ನಮಗಿಂತ ಕಡಿಮೆ ಬುದ್ಧಿಮತ್ತೆ, ಪ್ರತಿಭೆ ಇರುವವರಿಗೆ ಕೊಡುವ ಮೂಲಕ ಅವರು ವಿಲಕ್ಷಣ ಆನಂದ ಅನುಭವಿಸುತ್ತಾರೆ.

ಆಗೆಲ್ಲ, ನಮ್ಮ ಮನಸ್ಸು ರೊಚ್ಚಿಗೇಳುತ್ತದೆ. ಇದನ್ನು ಖಂಡಿಸಬೇಕು, ಅಸೂಯಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಹಂಬಲಿಸುತ್ತದೆ. ಆದರೆ, ಹಾಗೆ ಮಾಡಲು ಹೋದರೆ, ಅಸೂಯಿಗೂ ನಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಏಕೆಂದರೆ, ಮನಸ್ಸಿನೊಳಗೆ ನಮ್ಮ ಪ್ರಗತಿಗಿಂತ ಇನ್ನೊಬ್ಬನ ವಿನಾಶದ ವಿಚಾರವೇ ತುಂಬಿಕೊಳ್ಳುತ್ತದೆ. ನಮ್ಮ ಗುರಿಯನ್ನು ಮರೆತು, ಇನ್ನೊಬ್ಬರಿಗೆ ಕೆಟ್ಟದು ಮಾಡುವುದು ಹೇಗೆ? ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಮನಸ್ಸು ರೋಗಿಯಾಗುತ್ತದೆ.

ಅದರ ಬದಲು, ಸಮಾಧಾನದಿಂದ ಇರಲು ಪ್ರಯತ್ನಿಸೋಣ. ನಮ್ಮ ಅಸಲಿ ಪ್ರತಿಭೆಯನ್ನು ಮತ್ತಷ್ಟು ಸಾಣೆ ಹಿಡಿಯುವುದರಲ್ಲಿ ಸಮಯ ವಿನಿಯೋಗಿಸೋಣ. ಹೊಸ ಹೊಸ ವಿಷಯಗಳನ್ನು ಕಲಿಯಲು ಯತ್ನಿಸೋಣ. ನಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಕಲಿಯುವ ಮೂಲಕ, ಮಾಡಲು ಯತ್ನಿಸುವ ಮೂಲಕ, ನಿರಾಶೆಯನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳೋಣ. ನಮ್ಮ ಭಾವನೆಗಳ ಮೇಲಿನ ಹಿಡಿತ ಬಲಗೊಳ್ಳುತ್ತ ಹೋದಂತೆ, ಹೊಸ ಆತ್ಮವಿಶ್ವಾಸ ಬೆಳೆಯುತ್ತ ಹೋಗುತ್ತದೆ. ಅಸೂಯಿಗಳ ಸಣ್ಣತನ ಕಂಡು ನಗುವ, ಅವರ ಅಡ್ಡಗಾಲನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯ ನಮ್ಮದಾಗುತ್ತದೆ.

ತುಂಬ ಜನ, ತಾವು ಅಸೂಯಿಗಳಲ್ಲ ಎಂದೇ ಅಂದುಕೊಳ್ಳುತ್ತಾರೆ. ನನಗೆ ಸವಾಲಾಗಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಕುಂದಿಸಲು ಯತ್ನಿಸುತ್ತಿದ್ದೇನೆ ಎಂದಷ್ಟೇ ಭಾವಿಸುತ್ತಾರೆ. ಆದರೆ, ಎಲ್ಲಿಯವರೆಗೆ ನಮ್ಮಿಂದ ಕ್ರಿಯಾಶೀಲತೆ ಸಾಧ್ಯವಾಗುವುದಿಲ್ಲವೋ, ಹೊಸದನ್ನು ಕಲಿಯಲು ಕಷ್ಟವಾಗುತ್ತದೋ, ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಅಸೂಯೆಯ ಒಂದಂಶ ನಮ್ಮಲ್ಲೂ ಇದೆ ಎಂದೇ ಅರ್ಥ.
ಅದನ್ನು ದೂರ ಮಾಡಿದರೆ ಮಾತ್ರ ನಾವು ಕ್ರಿಯಾಶೀಲರಾಗುತ್ತೇವೆ. ಇಲ್ಲದಿದ್ದರೆ ಯಾವುದೋ ಒಂದು ಅನುಪಯುಕ್ತ ಸಿದ್ಧಾಂತಕ್ಕೆ ಕಟ್ಟುಬಿದ್ದು, ಅದರಲ್ಲಿಯೇ ಮುಳುಗೇಳುತ್ತ, ನಮ್ಮದೇ ಒಂದು ಸೀಮಿತ ವಲಯವನ್ನು ಕಟ್ಟಿಕೊಂಡು, ಅದರಲ್ಲಿಯೇ ಈಜಾಡುತ್ತ ಇದ್ದು ಬಿಡುತ್ತೇವೆ. ನಮ್ಮ ವಲಯದಾಚೆಗೂ ಜಗತ್ತಿದೆ ಎಂಬುದನ್ನೇ ಮರೆತು ಬಾವಿ ಕಪ್ಪೆಗಳಾಗುತ್ತೇವೆ. ವ್ಯಕ್ತಿಗಳು, ಸಿದ್ಧಾಂತಗಳು, ಪಕ್ಷಗಳು, ಜಾತಿಗಳು, ಧರ್ಮಗಳ ನಡುವೆ ಗೋಡೆ ಎದ್ದಿರುವುದೇ ಈ ಕಾರಣಕ್ಕೆ.

ಹಾಗಂತ ಆ ಸಾಧು ಹೇಳಿದ್ದ. ಇವತ್ತಿನ ಕ್ಷಣದವರೆಗೂ, ಒಂದೇ ಒಂದು ಸಾರಿಯೂ, ಅದು ಸುಳ್ಳು ಎಂದು ನನಗೆ ಅನ್ನಿಸಿಲ್ಲ!

- ಚಾಮರಾಜ ಸವಡಿ