ಅಹಲ್ಯಾ ಸಂಹಿತೆ - ೦೫
ಆದರೇಕೋ ಆಪ್ತ ಬಳಗದ ಸವಿಮಾತು ಸಹ ದೇವರಾಜನ ಖಿನ್ನತೆಯನ್ನು ಬೇಧಿಸಲು ಸಮರ್ಥವಾಗುತ್ತಿಲ್ಲ..
ಅದನ್ನು ಕಂಡು ಮಿಕ್ಕವರಿಬ್ಬರ ಮಾತಿಗೆ ಮತ್ತಷ್ಟು ಬಲ ಸೇರಿಸುವವನಂತೆ ಈ ಬಾರಿ ಮಾತಾಡಿದವನು ಅಗ್ನಿದೇವ.. "ದೇವರಾಜ.. ನಮ್ಮಲ್ಲಿ ಸಮಸ್ಯೆಗೆ ಉತ್ತರವಿದೆಯೊ, ಇಲ್ಲವೊ ನಮಗೆ ತಿಳಿಯದಾದರು, ಅದೇನೆಂದು ಅರಿವಾದರೆ ಕನಿಷ್ಠ ಮುಕ್ತ ಚರ್ಚೆಯನಾದರು ಮಾಡಿ ಹಿತಾಹಿತಗಳ ವಿಶ್ಲೇಷಣೆ ಮಾಡಲಾದರು ಸಾಧ್ಯವಾದೀತು... ಪರಿಹಾರ ನಮ್ಮಿಂದಾಗದಿದ್ದರು, ಆಗಿಸಬಲ್ಲ ಸಮರ್ಥರ ಹುಡುಕಾಟಕ್ಕಾದರು ದಾರಿಯಾಗುತ್ತದೆ.. ಹೇಳು, ಏನೀ ಹೊಸ ಚಿಂತೆ ? ಮತ್ತಾವುದಾದರು ಹೊಸ ದಾನವರ ಭೀತಿ ಹುಟ್ಟಿಕೊಂಡಿದೆಯೆ..?"
ಒಳ ಸೇರಿದ ಸುರೆಯ ಪ್ರಭಾವವು ತುಸು ಬಿಗಿ ಸಡಿಲಿಸಿದ್ದರಿಂದ ಮತ್ತು ತನ್ನ ಸುತ್ತಲ ಹಿತೈಷಿಗಳ ಮಾತಿನಿಂದ ಕೊಂಚ ನಿರಾಳವಾದಂತಾಗಿ, ದೇವೇಂದ್ರ ಕೊಂಚ ಕದಲಿದ. ತಾನು ಏಕಾಕಿಯಲ್ಲ ಜತೆಗೆ ತನ್ನೊಟ್ಟಿಗಿರುವ ಈ ಆಪ್ತ ಮಿತ್ರರು ತನ್ನ ಸಹಾಯಕ್ಕೆ ಸದಾ ಸಿದ್ದರಿದ್ದಾರೆಂಬ ಅನಿಸಿಕೆಯೆ ಮತ್ತಷ್ಟು ಬಲ ನೀಡಿದಂತಾಗಿ, ಆ ಹುರುಪಿನಲ್ಲೆ ನಿಧಾನವಾಗಿ ಮಾತು ಜೋಡಿಸುತ್ತ ಬಾಯ್ತೆರೆದ..
' ಹೊಸ ದಾನವ ಭೀತಿಯೇನಲ್ಲ ಅಗ್ನಿ.. ಅದಾಗಿದ್ದರೆ ನಾನಿಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.. ನಿಮ್ಮಲ್ಲಿ ಯಾರಾದರೊಬ್ಬರನ್ನು ಬಳಸಿಯೊ, ಅಥವಾ ನನ್ನ ವಜ್ರಾಯುಧದಿಂದಲೊ ಅದರ ಕೆಲಸ ಮುಗಿದುಹೋಗುತ್ತಿತ್ತು.....'
"ಮತ್ತೆ..? ಈಗ ಬಂದಿರುವ ತೊಡಕಾದರೂ ಏನು ?"
ದೇವೇಂದ್ರ ನಾರದರು ಬಂದ ಲಾಗಾಯ್ತು ನಡೆದ ಮಾತುಕಥೆಯ ಸಾರಾಂಶವನ್ನು ತನ್ನ ಆಪ್ತ ಬಳಗದಲ್ಲಿ ಹಂಚಿಕೊಂಡ. ಅದನ್ನು ಕೇಳುತ್ತಿದ್ದಂತೆ ಅವರ ಮುಖದಲ್ಲು ಭೀತಿಯಿಂದೊಡಗೂಡಿದ ಖಿನ್ನತೆ ಆವರಿಸಿಕೊಂಡಿತು. ಅವರಿಗು ಈ ತಪಸ್ಸು ಮಾಡುವ ಋಷಿ, ಮುನಿಗಳ ತಂಟೆಗೆ ಹೋಗುವುದೆಂದರೆ ಭಯವೆ. ತಮಗಿಂತ ಶಕ್ತಿವಂತರಾದ ಅವರಿಗೆ ಮೂಗಿನ ತುದಿಯಲ್ಲೆ ಕೋಪ. ಸಿಟ್ಟಿಗೆದ್ದು ಶಪಿಸಿದರೆಂದರೆ ತಮ್ಮ ಕಥೆ ಮುಗಿದ ಹಾಗೆಯೆ ಎಂದು ಅವರಿಗೆ ಚೆನ್ನಾಗಿ ಗೊತ್ತು. ಅಲ್ಲದೆ ಇದು ಯಾರೊ ಮಾಮೂಲಿ ಮುನಿ, ಋಷಿಗಳ ಮಾತಲ್ಲ; ನಾರಾಯಣಾಂಶದಿಂದಲೆ ಜನಿಸಿದವರೆಂದು ಪ್ರತೀತಿಯಿರುವ ನರ ನಾರಾಯಣರ ವಿಷಯ... ಇಂತಹ ತಪೋಧನರ ಎದುರು ತಮ್ಮೆಲ್ಲರ ಶಕ್ತಿಗಳು ಕವಡೆಗಿಂತಲು ಕಡೆಯೆ....!
" ಇದು ಗಂಭೀರ ವಿಷಯವೆ... ನರ ನಾರಾಯಣರ ಶಕ್ತಿಯೆದುರು ನಮ್ಮೆಲ್ಲರ ಸಮಷ್ಟಿತ ಶಕ್ತಿಯೂ ಯಾವ ಕೆಲಸಕ್ಕೂ ಬಾರದು ನರೇಂದ್ರ.." ಅವರೆಲ್ಲರ ಮನದ ಅನಿಸಿಕೆಗೆ ಮಾತು ಕೊಟ್ಟ ವರುಣದೇವ.
ಅದರ ಹಿಂದೆಯೆ ವಾಯುದೇವ ನುಡಿದ, " ನಮ್ಮ ಎಂದಿನ ತಪೋಭಂಗದ ವಿಧಾನಗಳಾವುವು ಇಲ್ಲಿ ಕೆಲಸಕ್ಕೆ ಬರುವುದಿಲ್ಲ ನರೇಂದ್ರ... ಅಗ್ನಿಗೆ ಪ್ರತಿಯಗ್ನಿ, ವಾಯುವಿಗೆ ಪ್ರತಿವಾಯು, ಜಲಕ್ಕೆ ಪ್ರತಿಜಲ ಸೃಷ್ಟಿಸುವುದು ಅವರಿಗೆ ನೀರು ಕುಡಿದಷ್ಟೆ ಸುಲಭ.. ಅಲ್ಲದೆ, ಏನೇ ಮಾಡ ಹೋದರು ಅವರ ಕೋಪಕ್ಕೆ ಗುರಿಯಾದರೆ ನಮ್ಮೆಲ್ಲರನ್ನು ಒಂದೆ ಏಟಿಗೆ ಆಪೋಶಿಸಬಲ್ಲ ಸಾಮರ್ಥ್ಯವಿರುವವರು..."
ಅವನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ ನುಡಿದ ದೇವರಾಜ, " ನಿನ್ನ ಮಾತು ನಿಜ ವಾಯು.. ಅದಕ್ಕೆ ಈಗ ಚಿಂತೆಯಾಗಿರುವುದು.. ನಾನಾಗಿಯೆ ಆಗಿದ್ದರೆ ಈ ಕುರಿತು ಹೆಚ್ಚು ಚಿಂತಿತನಾಗುತ್ತಿರಲಿಲ್ಲ.. ಆದರೆ ನಾರದರೆ ಬಂದು ಹೇಳಿರುವುದನ್ನು ನೋಡಿದರೆ ಅದನ್ನು ತೀರಾ ಕಡೆಗಣಿಸುವಂತೆಯೂ ಇಲ್ಲ.."
ಸುಮಾರು ಹೊತ್ತಿನ ತನಕ ನಡೆದ ಚರ್ಚೆ, ಮಾತುಕಥೆಯಲ್ಲಿ ಯಾವ ಹಾದಿಯೂ ನಿಖರವಾಗಿ ತೋಚದೆ ಹೋದಾಗ ಕಡೆಗೆ ಅಗ್ನಿದೇವ ಒಂದು ಸಲಹೆ ನೀಡಿದ..
" ನಾವೇಕೆ ಹೀಗೆ ಮಾಡಬಾರದು ? ನಮ್ಮ ತಪೋಭಂಗದ ವಿಧಾನಗಳಲ್ಲಿ ಅತ್ಯಂತ ನಾಜೂಕಿನದೆಂದರೆ ಅಪ್ಸರೆಯರ ಮುಖಾಂತರ ಪ್ರಯತ್ನಿಸುವುದು.. ಮಿಕ್ಕ ವಿಧಾನಗಳೆಲ್ಲ ವಿನಾಶಕಾರಿ - ದಮನದ ಉದ್ದೇಶವಿದ್ದರೆ, ಇದು ಮಾತ್ರ ಕೇವಲ ಮನೋದೌರ್ಬಲ್ಯದ ಮೇಲೆ ಅವಲಂಬಿಸಿರುವಂತದ್ದು.. ಅಲ್ಲದೆ ಸುಂದರ ಅಪ್ಸರೆಯರ ಮೇಲೆ ಮುನಿಗಳ ಕೆಂಗಣ್ಣು ಬೀಳುವುದಿಲ್ಲ.. ಒಂದೊ ಅವರ ವಶವಾಗಿ ತಪಸ್ಸನ್ನು ಕಡೆಗಣಿಸುತ್ತಾರೆ ; ಒಂದು ವೇಳೆ ಪ್ರಲೋಭನೆಗೆ ಸಿಲುಕದಿದ್ದರು ಹೆಣ್ಣುಗಳೆಂದು ಶಪಿಸದೆ ಕರುಣೆ ತೋರಿ ಬಿಟ್ಟು ಬಿಡುತ್ತಾರೆ..."
" ನನಗೆ ತಿಳಿದ ಮಟ್ಟಿಗೆ ಇದಕ್ಕೆಲ್ಲ ಸಿಲುಕಿ ಬೀಳುವ ದುರ್ಬಲ ಮನಸ್ತರದವರಲ್ಲ ನರ ನಾರಾಯಣರು, ಅಗ್ನಿ.."
"ಅದು ನನಗೂ ತಿಳಿದಿದೆ ದೇವರಾಜ..."
"ಮತ್ತೆ..?"
" ಈ ವಿಧಾನದಲ್ಲೂ ಸೋಲು ಕಟ್ಟಿಟ್ಟ ಬುತ್ತಿಯೆ ಆದರೂ ಅದರ ಮುಖೇನ ನಾವಂದುಕೊಂಡ ಸಾಧ್ಯಾಸಾಧ್ಯತೆಯ ಪರೀಕ್ಷೆ ಮಾಡಿದಂತಾಗುತ್ತದೆ... ಏನಿಲ್ಲವೆಂದರು ಆ ನೆಪದಲ್ಲಿ ಅವರೊಡನೆ ಮಾತಿಗಿಳಿದು ನಮ್ಮ ಅಳುಕನ್ನು ಅವರಲ್ಲಿ ತೋಡಿಕೊಂಡಂತಾಗುತ್ತದೆ.. ಯಾರಿಗೆ ಗೊತ್ತು ? ಅದಕ್ಕೆ ಅವರೆ ಪರಿಹಾರ ಸೂಚಿಸಬಹುದು.. ಅಥವಾ ಅವರೆ ಬಲಿಷ್ಠರೆಂದಾದಲ್ಲಿ ಅವರೊಡನೆಯ ಸಖ್ಯ ಕದನ - ವಿರಸಕ್ಕಿಂತ ಮೇಲಲ್ಲವೆ?"
ಅಗ್ನಿದೇವನ ಚಿಂತನೆಯ ದಿಕ್ಕು ಅರಿವಾದಂತೆ ಮೆಚ್ಚಿಗೆಯಿಂದ ತಲೆದೂಗಿದ ನರೇಂದ್ರ. ಬಹುಶಃ ಇದೇ ಸುರಕ್ಷಿತ ವಿಧಾನವೆಂದು ಅವನಿಗೂ ಅನಿಸಿತು... ಕೊಂಚ ಎಚ್ಚರದಲ್ಲಿ ಎಲ್ಲಾ ನಡೆಸಿದರೆ, ಇದರಲ್ಲಿ ಅಪಾಯದ ಸಾಧ್ಯತೆ ಕಡಿಮೆಯೆ...
ತದನಂತರ ಇದನ್ನು ಹೇಗೆ ಸಂಭಾಳಿಸುವುದೆನ್ನುವ ಬಗ್ಗೆ ವಿವರಗಳನ್ನು ಚರ್ಚಿಸುತ್ತ ಮುಂದಿನ ಹೆಜ್ಜೆಯ ರೂಪುರೇಷೆಗಳನ್ನು ಚರ್ಚಿಸತೊಡಗಿತು ದೇವರಾಜನನ್ನೊಳಗೊಂಡ ಶಿಷ್ಠ ಚತುಷ್ಟಯ..
***********
ಬದರಿಕಾಶ್ರಮದ ಸುಂದರ ವನಸಿರಿಯ ಪ್ರಶಾಂತ ಧಾಮ. ಆಶ್ರಮದ ಸುತ್ತಲೂ ದಟ್ಟವಾಗಿ ಬೆಳೆದು ನಿಂತ ವನರಾಜಿ.. ವೃಕ್ಷಮೂಲಾದಿ ಪ್ರಕೃತಿ ವೈಭವಗಳಿಂದಾವೃತ್ತವಾಗಿ ಹೊರ ಜಗತ್ತಿಗೆ ತಕ್ಷಣಕ್ಕೆ ಕಾಣಿಸಿಕೊಳದೆ ಅವಿತಿರುವಂತೆ ಹುದುಗಿ ಕುಳಿತ ಆ ಆಶ್ರಮ ಗರ್ಭದಲ್ಲಿ ವರ್ಷಾಂತರಗಳ ಅವಿರತ, ನಿರಂತರ ತಪನೆ ಅಡಗಿದೆ. ಸುತ್ತಲ ಜಗದ ಪರಿಗಣನೆಯಿರದೆ ತಮ್ಮ ಪಾಡಿಗೆ ತಮ್ಮ ನಿರಂತರ ತಪ ಶೋಧದಲ್ಲಿ ನಿರತರಾದ ನರ ನಾರಾಯಣರು ಅಲ್ಲೇನು ಮಹಾಯಜ್ಞ ನಡೆಸಿರುವರೆಂದು ಯಾರಿಗೂ ಅರಿವಿಲ್ಲ. ಅಷ್ಟು ಸುಧೀರ್ಘ ಕಾಲ ತಪಸ್ಸಿಗೆ ಕೂರುವ ಅನಿವಾರ್ಯವಾಗಲಿ, ಉದ್ದೇಶವಾಗಲಿ ಏನೆಂದು ಯಾರಿಗೂ ತಿಳಿಯದು. ಅಲ್ಲಿ ಆಗಾಗ್ಗೆ ಹೊರಬೀಳುವ ಸದ್ದು ಗದ್ದಲಗಳ ಮೂಲಕ ಯಾವುದೊ ಭೀಕರ ಕಾಳಗ ನಡೆದಿರುವಂತೆ ತೋರುವುದಾದರು, ಮತ್ತೆ ಇದ್ದಕ್ಕಿದ್ದಂತೆ ಎಲ್ಲವು ಸ್ತಬ್ಧವಾಗಿ ಅಪಾರ ಮೌನ ವ್ಯಾಪಿಸಿಕೊಂಡು ಮೂಕರಾಗದ ಮುಖವಾಡ ಹಾಕಿಕೊಂಡ ದಿನಗಳು ಕಡಿಮೆಯೇನಿಲ್ಲ.
ಹಾಗೆಂದು ನರ ನಾರಾಯಣರ ಪೂರ್ಣ ಹಿನ್ನಲೆಯೇನು ಅಪಾರದರ್ಶಕದಲ್ಲಡಗಿಕೊಂಡ ಊಹಾಪ್ರಪಂಚವೇನಲ್ಲ. ಅವರನ್ನು ಹತ್ತಿರದಿಂದ ನೋಡಿ ಬಲ್ಲವರು ಅವರಿಬ್ಬರೂ ವಿಷ್ಣುವಿನ ಅಪರಾವತಾರ ರೂಪವೆಂದೇ ಹೇಳುತ್ತಾರೆ. 'ನರ - ಮಾನವರೂಪಿ ಸಂಕೇತವಾದರೆ, ನಾರಾಯಣ - ದೈವರೂಪಿ ಸಂಕೇತವಂತೆ. ಸ್ವತಃ ಶ್ರೀ ಹರಿಯೆ ನಾರಾಯಣ ರೂಪಿನಲ್ಲಿ ಅವತಾರವೆತ್ತಿದ್ದು, ನಿತ್ಯ ಸಖನಾಗಿ ಶ್ರೀ ಹರಿಯ ಶಯನವೆ ಆಗಿರುವ ಆದಿಶೇಷನೆ ನರನ ರೂಪಾಗಿ ಜನಿಸಿದ್ದು ಎಂದು ಹೇಳುತ್ತಾರೆ. ಮತ್ತೆ ಕೆಲವರು ಹೇಳುವಂತೆ, ಹಿರಣ್ಯಕಶಿಪುವಿನ ವಧೆಗಾಗಿ ಶ್ರೀ ಹರಿ ನರಸಿಂಹನಾಗಿ ಅವತರಿಸಬೇಕಾಯ್ತಲ್ಲ? ಆ ಅವತಾರದ ಉಪಸಂಹಾರ ಮಾಡಿದಾಗ, ಮಾನವ ದೇಹವಿದ್ದ ಮುಂಡದ ಭಾಗ ನರನ ರೂಪಾಯ್ತೆಂದು, ರುಂಡದ ಭಾಗ ನಾರಾಯಣನಾಗಿ ರೂಪಿತವಾಯ್ತೆಂದು ಮತ್ತೊಂದು ಸಿದ್ದಾಂತ. ಅದೇನೆ ಇದ್ದರು, ಜಾತಕಾದಿ ಜನ್ಮ ಕುಂಡಲಿ ಹಿಡಿದು ಹೊರಟವರು ಹೇಳುವುದು ಮತ್ತೊಂದು ಹೆಚ್ಚು ಲೌಕಿಕವೆನಿಸುವ ವಾದ; ಬ್ರಹ್ಮಕುಮಾರನಾದ ಧರ್ಮ ಮತ್ತವನ ಸತಿ ದಕ್ಷಪುತ್ರಿ ಅಹಿಂಸ (ಮರ್ತ್ಯಿ)ರಿಗೆ ಜನಿಸಿದ ಪುತ್ರರೆ ನರ ನಾರಾಯಣರು ಎಂಬುದು ಈ ಮೂಲದ ಶೋಧ.
ಅವರಿಬ್ಬರ ಹುಟ್ಟಿನ ಹಾಗೆಯೆ, ಅವರ ಬದುಕು ತಪಸಿನ ಬಗೆಯೂ ತರತರದ ರೋಚಕ ಕಥಾನಕಗಳು ಪ್ರಚಲಿತವಾಗಿವೆ. ಅದರಲ್ಲಿ ಬಹು ರೋಚಕವೆನಿಸುವ ಕಥನ ಸಹಸ್ರಕವಚನೆಂಬ ದಾನವ ಚಕ್ರವರ್ತಿಯದು. ಅಮರತ್ವವನ್ನು ಪಡೆಯಲಾಗದ ರಾಕ್ಷಸರು ಬದಲಿಗೆ ಅತ್ಯದ್ಭುತವೆನಿಸುವ ವರಗಳನ್ನು ತಪದ ಮೂಲಕ ಪಡೆದು, ತಮ್ಮ ಎದುರಾಳಿ ದೇವತೆಗಳ ಮೇಲೆ ಧಾಳಿಯಿಕ್ಕಿ ದಾಂಧಲೆಯೆಬ್ಬಿಸುವ ಅದೇ ಹಾದಿ ಹಿಡಿದ ಈ ದಾನವ, ಸೂರ್ಯದೇವನನ್ನು ತಪ ಮಾಡಿ ಒಲಿಸಿಕೊಂಡು ಪಡೆದ ವರವೂ ವಿನೂತನವೆ. ತನ್ನ ರಕ್ಷಣೆಗೆ ಸಹಸ್ರ ಕವಚಗಳನ್ನು ವರವಾಗಿ ಪಡೆದು, ಪ್ರತಿ ಕವಚವನ್ನು ಬೇಧಿಸಿ ನಾಶ ಮಾಡಲು ಕನಿಷ್ಠ ಒಂದು ಸಹಸ್ರ ವರ್ಷವಾದರೂ ತಪ ಮಾಡಿ ಶಕ್ತಿ ಸಂಚಯ ಮಾಡಿಕೊಂಡವನಿಂದ ಮಾತ್ರ ಸಾಧ್ಯವಾಗಬೇಕೆಂದು ವರ ಪಡೆದ. ಹಾಗೆ ತಪಶ್ಯಕ್ತಿಯನ್ನು ಕ್ರೋಢೀಕರಿಸಿಕೊಂಡವನೂ ಸಹ ಕನಿಷ್ಠ ಒಂದು ಸಹಸ್ರ ವರ್ಷ ಹೋರಾಡಿದ್ದಲ್ಲದೆ ಆ ಕವಚ ಬೇಧ ಸಾಧ್ಯವಾಗಬಾರದೆಂಬುದು ಆ ಶರತ್ತಿನ ಮತ್ತೊಂದು ಭಾಗ.... ! ಹೀಗೆ ಕವಚವೊಂದರ ಛೇಧನಕ್ಕೆ ಒಟ್ಟು ಎರಡು ಸಹಸ್ರ ವರ್ಷಗಳಾದುವೆಂದರೆ, ಇನ್ನು ಎಲ್ಲಾ ಸಹಸ್ರ ಕವಚಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸಬೇಕೆಂದರೆ ಎರಡು ದಶಲಕ್ಷ ವರ್ಷಗಳೆ ಬೇಕು - ಅದೂ ಯಾರಾದರೂ ನಿರಂತರವಾಗಿ ಅವನೊಡನೆ ಹೋರಾಡುತ್ತ ತಪ ಮಾಡುತ್ತ, ಹೋರಾಡುತ್ತ ತಪ ಮಾಡುತ್ತ ಒಂದೇ ಸಮನೆ ಅವನೊಡನೆ ಅವಿರತ ತಪ-ಕದನದಲ್ಲಿ ನಿರತರಾಗಿದ್ದರೆ ಮಾತ್ರ... ತಪಸ್ಸಿಗೆ ಅದೇನು ಮಹತ್ವವೊ? ಯಾವ ದೇವನಾದರೂ ಸರಿ ಅದಕ್ಕೆ ತಥಾಸ್ತು ಎನ್ನುವವನೆ...! ಸೂರ್ಯದೇವನು ಅದನ್ನೆ ಮಾಡಿದ್ದ - ಸಹಸ್ರ ಕವಚ ಬೇಡಿದ ವರವನ್ನು ಯಥಾವತ್ತಾಗಿ ನೀಡುವ ಮೂಲಕ....
(ಇನ್ನೂ ಇದೆ)