ಅಹಲ್ಯಾ ಸಂಹಿತೆ - ೦೭

ಅಹಲ್ಯಾ ಸಂಹಿತೆ - ೦೭

ಹರನ ತಪೋಭಂಗದ ಹುನ್ನಾರದಲ್ಲಿ ಸುಟ್ಟು ಬೂದಿಯಾಗಿ ಮರುಜನ್ಮ ಪಡೆಯಬೇಕಾಗಿ ಬಂದ ಕರಾಳ ನೆನಪು ಅವನಲ್ಲಿನ್ನು ಮರೆಯಾಗಿರಲಿಲ್ಲವೆನ್ನುವುದನ್ನು ಕಾಮದೇವನ ದನಿಯಲ್ಲಿದ್ದ ಆತಂಕ, ಕಳವಳವೆ ಎತ್ತಿ ತೋರಿಸುತ್ತಿತ್ತು..

ಆಗ ನಡುವೆ ಬಾಯಿ ಹಾಕಿದ ಅಗ್ನಿದೇವ - "ಅಂತದ್ದೊಂದು ಆಲೋಚನೆ ವಿಹಿತವೊ ಅಲ್ಲವೊ ಎಂಬುದರ ಚರ್ಚೆಗಾಗಿಯೆ ಈ ರಹಸ್ಯ ಸಭೆ ಕಾಮದೇವ.." ಎಂದ.

"ನರನಾರಾಯಣರು ಸಾಮಾನ್ಯರಲ್ಲವೆಂದು ನಾನು ಕೇಳಿದ್ದೇನೆ.. ಹರಿಯ ಅವತಾರವಾಗಿ ದಾನವ ದಮನದ ಸುಧೀರ್ಘ ಕದನವೊಂದರಲ್ಲಿ ನಿರತರಾಗಿ ಲೋಕಕಲ್ಯಾಣಕ್ಕೆ ತಮ್ಮನ್ನೆ ಅರ್ಪಿಸಿಕೊಂಡವರ ಮೇಲೆ ಕಣ್ಣು ಹಾಕುವುದು ಕ್ಷೇಮವಲ್ಲವೆಂದೆ ನನ್ನ ಭಾವನೆ.." ಈಗ ಅಪ್ಸರೆಯರ ಪರವಾಗಿ, ಗುಂಪಿನಿಂದ ಅವರ ದನಿಯಾಗಿ ಮಾತನಾಡಿದವಳು ರಂಭೆ... ಸುತ್ತಲಿದ್ದ ಮಿಕ್ಕ ಹೆಣ್ಣುಗಳು ಅವಳ ಮಾತಿಗೆ ಹೌದೆನ್ನುವಂತೆ ತಲೆಯಾಡಿಸಿದರು.

ಹೀಗೆ ಎಲ್ಲರು ತಂತಮ್ಮ ಅನಿಸಿಕೆಗಳನ್ನು ಅನಾವರಣ ಮಾಡುತ್ತ ಹೋದಂತೆ ನಡುವೆ ಮಾತಾಡದೆ ಎಲ್ಲವನ್ನು ಆಲಿಸಿಕೊಂಡು ಹೋಗುತ್ತಿದ್ದ ದೇವೇಂದ್ರ. ಆಸಕ್ತ ಆಲಿಸುವಿಕೆ ಅವನ ಸಮರ್ಥ ನಾಯಕತ್ವದ ಅನೇಕ ಗುಣಗಳಲ್ಲೊಂದು. ಅದಕ್ಕೆಂದೆ ಅವನೆಂದರೆ ಇತರ ದೇವತೆಗಳಿಗು ಪ್ರೀತಿ - ತಮ್ಮ ಮಾತಿಗೂ ಬೆಲೆ ಕೊಡುತ್ತಾನೆ ಎಂದು... 'ಏನಿಲ್ಲವೆಂದರೂ ಕನಿಷ್ಠ ಶ್ರದ್ಧೆಯಿಂದ ಆಲಿಸುತ್ತಾನಲ್ಲ' ಎನ್ನುವ ಗೌರವ ಕೂಡ.

ಎಲ್ಲರ ಮಾತಿನ ಸರದಿ ಮುಗಿದ ಮೇಲೆ ಸರ್ವರ ಅಭಿಪ್ರಾಯದ ಸಾರ ಸಂಗ್ರಹಿಸಿದವನಂತೆ ನುಡಿದ ದೇವರಾಜ, "ಒಟ್ಟಾರೆ ಎಲ್ಲರ ಅಭಿಪ್ರಾಯದಲ್ಲು ಇದು ಸಾಧುವೆ ? ಅಲ್ಲವೆ ? ಎನ್ನುವ ಸಂಶಯವಂತೂ ಇದೆ... ನನ್ನ ಅಭಿಪ್ರಾಯವೂ ಇದೇ ಆದ ಕಾರಣ ನಾವೆಲ್ಲ ಒಂದೆ ಸ್ತರದಲ್ಲಿ ಚಿಂತನೆ ನಡೆಸಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ... ಆದರೆ..." ಎಂದವನೆ ಅರೆಗಳಿಗೆ ಮಾತು ನಿಲ್ಲಿಸಿ ಸುತ್ತಲು ದಿಟ್ಟಿಸಿ ಎಲ್ಲರ ಗಮನವು ತನ್ನ ಮಾತಿನ ಮೇಲಿದೆಯೆನ್ನುವುದನ್ನು ಖಚಿತ ಪಡಿಸಿಕೊಂಡು ನುಡಿದ: " ಅದರೆ, ನಾರದರಂತ ಮುನಿಗಳ ಮಾತನ್ನು ಉಢಾಪೆಯಿಂದ ತೆಗೆದೆಸೆಯುವಂತಿಲ್ಲ.. ಅವರೆ ಖುದ್ದಾಗಿ ಬಂದು ಹೇಳಬೇಕೆಂದರೆ ಅದರಲ್ಲೇನೊ ಮರ್ಮ ಅಡಗಿರಲೆಬೇಕು... ನಮಗದೀಗ ಅಸಾಧುವೆಂಬಂತೆ ಕಂಡರೂ, ಅದು ಅಸಾಧ್ಯ ಎಂದು ಕಡೆಗಣಿಸುವಂತಿಲ್ಲ ಅಲ್ಲವೆ?"

ಹೌದೆನ್ನುವಂತೆ ತಲೆಯಾಡಿಸಿದರು ಮಿಕ್ಕವರೆಲ್ಲರು.

"ಇಂತಹ ಸನ್ನಿವೇಶದಲ್ಲಿ ಎಂದಿನಂತೆ ಸಾಮ-ದಾನ-ದಂಡಾದಿ ಬೇಧೋಪಾಯಗಳನ್ನೆಲ್ಲ ಬಳಸುವ ಮಾಮೂಲಿ ವಿಧಾನ ಶ್ರೇಯಸ್ಕರವಲ್ಲವೆನ್ನುವುದು ಎಷ್ಟು ನಿಜವೊ, ಏನೂ ಮಾಡದೆ ಸುಮ್ಮನಿರುವುದು ಕೂಡ ಅಷ್ಟೆ ಅಹಿತಕರ.."

"ದೇವೇಂದ್ರ..ನಿನ್ನಲೇನೊ ಯೋಜನೆಯಿರುವ ಮಸುಕಾದ ಸುಳಿವು ಕಾಣಿಸಿಕೊಳ್ಳುತ್ತಿದೆ.. ಹೌದೇನು ?" ದೇವರಾಜನ ಮನಸನ್ನೋದುವವನಂತೆ, ಈ ಬಾರಿ ಕೇಳಿದವನು ವಾಯುದೇವ...

" ಸಿದ್ದ ಯೋಜನೆ ಎಂದೇನೂ ಇಲ್ಲ ವಾಯುದೇವ.. ಆದರೆ ಯೋಜನೆಯ ಸ್ಥೂಲ ಕಲ್ಪನೆ ಇದೆ.."

"ಅಂದರೆ.. ?" ಈ ಸಾರಿಯದು ವರುಣನ ದನಿ..

"ಅಂದರೆ.. ನಾವು ಕಾಣಬೇಕಾದ ಫಲಿತ ತಪೋಭಂಗ ಅನ್ನುವುದಕ್ಕಿಂತ, ಅವರಿಗೆ ಅಂತಹ ಆಕಾಂಕ್ಷೆಗಳೇನಾದರು ಇವೆಯೆ ಎಂಬುದರ ತಾಳೆ ನೋಡುವಿಕೆಯಷ್ಟಕ್ಕೆ ಸೀಮಿತವಾದರೆ ಸಾಕು.."

" ಅಂದರೆ ನಾವು ಎಂದಿನಂತೆ ನಮ್ಮ ಮಳೆ, ಗಾಳಿ, ಅಗ್ನಿಗಳಂತಹ ಸಾಮರ್ಥ್ಯಗಳನ್ನು ಬಳಸಿ ತಪೋಭಂಗಕ್ಕಿಳಿದು ಅವರ ಕೋಪಕ್ಕೆ ಗುರಿಯಾಗುವುದು ಬೇಡ ಎಂದರ್ಥವೆ?"

" ಹೌದು ವರುಣ.. ಈ ಹೊತ್ತಿನಲ್ಲಿ ಅದೆ ಸೂಕ್ತ ಕಾರ್ಯತಂತ್ರ.. ಆದರೆ ಹಾಗೆಂದು ತಪೋಭಂಗದ ಕಾರ್ಯಕ್ರಮವೆ ರದ್ದಾಗಿಹೋಯ್ತೆಂದೂ ಅರ್ಥವಲ್ಲ.."

"ಹಾಂ...?"

"ಅರ್ಥಾತ್ ನಾವು ಹೇಗಾದರೂ ಮಾಡಿ ಆ ತಪದ ಓಘಕ್ಕೆ ತಡೆಯೊಡ್ಡಿ ಅವರ ನಿಜ ಉದ್ದೇಶವನ್ನರಿಯುವ ಯತ್ನ ಮಾಡಬೇಕು.. ತದನಂತರವೆ ಮುಂದಿನ ಹೆಜ್ಜೆಯ ನಿರ್ಧಾರ.."

"ನಾವು ಎಂದಿನಂತೆ ದಂಡೋಪಾಯಗಳಿಗಿಳಿಯದೆ ನೇರವಾಗಿ ಮೋಹಾದಿ ಹಾವಭಾವದಿಂದ ನರನಾರಾಯಣರನ್ನಾಕರ್ಷಿಸಿ, ತನ್ಮೂಲಕ ವಿಷಯದ ಬುಡಕ್ಕೆ ಕೈ ಹಾಕಿ ಅವರ ಮೂಲ ಉದ್ದೇಶವನ್ನು ಅರಿಯಬೇಕು.. ಅಲ್ಲವೆ ದೇವೇಂದ್ರ?" ಅವನ ಯೋಜನೆಯ ಸುಳಿವು ಹಿಡಿದವಳಂತೆ ನುಡಿದಳು ಅಪ್ಸರೆಯರ ಗುಂಪಿನಲ್ಲಿ ಚಾಣಾಕ್ಷಮತಿಯೆನಿಸಿದ್ದ ಮಿತ್ರವೃಂದೆ.

" ನಿಜ.. ಅದಕ್ಕಾಗಿ ಹೇಗಾದರೂ ಏನಾದರೂ ಸಹಾಯ ಮಾಡುವ ನೆಪದಲ್ಲಿ ರತಿ ಮನ್ಮಥರೊಡಗೂಡಿದ ಅಪ್ಸರೆಯರೆಲ್ಲರ ತಂಡ ಬದರಿಕಾಶ್ರಮದತ್ತ ಹೋಗಿ ಬೀಡುಬಿಟ್ಟು ಈ ಕಾರ್ಯ ನೆರವೇರಿಸಬೇಕು... ನಿಮಗೆಲ್ಲ ತಿಳಿದಂತೆ ಆ ದುರ್ಗಮ ತಾಣಕ್ಕೆ ಮಿಕ್ಕವರಾರು ಸುಲಭದಲ್ಲಿ ಹೋಗುವಂತಿಲ್ಲ... ಆದರೆ ಸುಂದರ ರೂಪು ಲಾವಣ್ಯದ ಹೆಣ್ಣುಗಳೆಂದರೆ ಯಾವಾಗಲೂ ಸ್ವಲ್ಪ ಮೃದು ಧೋರಣೆ, ಮೆತ್ತನೆಯ ಭಾವನೆ ಇರುವುದರಿಂದ, ಅದನ್ನೇ ಅಸ್ತ್ರವಾಗಿ ಬಳಸಿ ಏನಾದರು ದಾರಿ ಹುಡುಕಿ ನಡೆಯಬೇಕು.. ಹಾಗೆಯೆ ತೀರಾ ಆಳಕ್ಕೂ ಇಳಿಯದೆ, ಬೇಕಿದ್ದ ವಿಷಯ ಅರಿವಾಗುತ್ತಿದ್ದಂತೆ ಮತ್ತೇನು ದಾಂಧಲೆಗಿಳಿಯದೆ ಹೊರಟು ಬಂದುಬಿಡಬೇಕು.."

ಸ್ಥೂಲವಾಗಿ ಏನು ಮಾಡಬೇಕೆಂದು ಅರಿವಾಗುತ್ತಿದ್ದಂತೆ ಅದರ ವಿವರವಾದ ರೂಪುರೇಷೆಗಳನ್ನು ಚರ್ಚಿಸುತ್ತ ಯೋಜನೆಗೊಂದು ಪೂರ್ಣರೂಪ ಕೊಟ್ಟಿತು ದೇವರಾಜನ ಆಪ್ತ ತಂಡ. ಅಲ್ಲಿಂದ ಮುಂದಿನ ಹೆಜ್ಜೆಯೆ ಅಪ್ಸರೆಯರ ಜತೆ ರತಿಮನ್ಮಥರೊಡಗೂಡಿ ಬದರೀಕಾಶ್ರಮದ ನದಿ ತಟದಲ್ಲೊಂದೆಡೆ ಗುಢಾರ ಹಾಕಿದ್ದು..!

*************

ಬದರೀಕಾಶ್ರಮದ ಸೀಮೆಗಂಟಿಕೊಂಡಂತೆ ಬಿಡಾರ ಹೂಡಿದ್ದಾದ ಮೇಲೆ ಮುಂದಿನ ಹೆಜ್ಜೆಯಿಡುವ ಮೊದಲು ಬೇಕಾಗಿದ್ದುದು ಅದರ ಸುತ್ತಮುತ್ತಲಿನ ಆಂತರಿಕ ಪ್ರಥಮ ಮಾಹಿತಿ... ಎಲ್ಲಾ ಬರಿ ಅಂತೆಕಂತೆಗಳ ಮತ್ತು ಊಹಾಪೋಹಗಳ ಜಾಡು ಹಿಡಿದು ಯೋಜನೆ ರೂಪಿಸಲಾಗುವುದಿಲ್ಲವಲ್ಲ ? ಅಂತೆಯೆ ಮಾರುವೇಷದಲ್ಲೊ ಅಥವಾ ಕಂಡವರಿಂದಲೊ ಒಂದೊಂದಾಗಿ ಮಾಹಿತಿ ಸೇರಿಸತೊಡಗಿತು ದೇವರಾಜನ ತಂಡ. ಸಾಕಷ್ಟು ಗಾಳಿಸುದ್ದಿಯ ಮಾಹಿತಿಗಳಿಗೆ ಅವು ಸಾಕ್ಷ್ಯ ಒದಗಿಸಿದ್ದು ಮಾತ್ರವಲ್ಲದೆ ಅವುಗಳ ನಿಖರತೆಯ ಕುರಿತು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳುವಲ್ಲಿ ಸಹಕಾರಿಯಾದವು. ಹೀಗೆ ಕೆಲವು ದಿನಗಳವರೆಗೆ ಒಗ್ಗೂಡಿಸಿದ ಮಾಹಿತಿಯನ್ನೆಲ್ಲ ಕ್ರೋಢಿಕರಿಸಿದ ಮೇಲೆ ಪರಿಸ್ಥಿತಿಯ ಒಂದು ಸ್ಥೂಲ ಚಿತ್ರಣ ಕಟ್ಟಿಕೊಳ್ಳಲು ಸಾಧ್ಯವಾಯ್ತು.

ಅದರಂತೆ ಒಂದು ವಿಷಯವಂತು ಸ್ಪಷ್ಟವಾಗಿತ್ತು. ಇರುವವರು ಇಬ್ಬರಾದರು ಸದ್ಯಕ್ಕೆ ತಪೋನಿರತರಾಗಿ ಕೂತವ ಒಬ್ಬನೆ. ಅದು ನರನೊ, ನಾರಾಯಣನೊ ಎಂಬುದು ಅಸ್ಪಷ್ಟವಾದರು ಒಬ್ಬ ತಪದಲ್ಲಿರುವಾಗ ಮತ್ತೊಬ್ಬ ಸಹಸ್ರಕವಚನೊಡನೆ ಯುದ್ಧನಿರತನಾಗಿರುತ್ತಾನೆಂಬ ವದಂತಿಗೆ ಇದು ಪೂರಕವಾಗಿತ್ತು. ಒಂದು ರೀತಿಯಲ್ಲಿ ತಂಡಕ್ಕೆ ಇದು ಅನುಕೂಲಕರವೆ ಆಗಿತ್ತು; ಒಂದೆ ಬಾರಿಗೆ ಇಬ್ಬರು ತಪಸ್ವಿಗಳ ಮೇಲೆ ಕಣ್ಣು ಹಾಕಿ ಅವರ ಸಂಯುಕ್ತ ಶಕ್ತಿಗಳ ಜತೆ ಹೆಣಗಾಡುವುದಕ್ಕಿಂತ ಬೇರ್ಪಟ್ಟ ಒಬ್ಬರ ಜತೆ ಯತ್ನಿಸಿ ನೋಡುವುದು ಉಚಿತ. ಈ ಮಾಹಿತಿ ಖಚಿತವಾದ ಮೇಲೆ ತಪೋನಿರತ ತಾಣದ ಆಸುಪಾಸಿನಲ್ಲಿ ಹೊಕ್ಕು ಸುತ್ತಮುತ್ತಲ ಪರಿಸರದ ಸಮೀಕ್ಷೆ ನಡೆಸತೊಡಗಿದ ತಂಡದ ಮುಂದಾಳತ್ವ ವಹಿಸಿದವನು ಮನ್ಮಥ. ಈಗಾಗಲೆ ತಪ ನಡೆಸಿರುವ ತಾಣದ ನಿಖರ ಮಾಹಿತಿಯಿದ್ದ ಕಾರಣ, ಅದರ ಹತ್ತಿರ ಹತ್ತಿರಕ್ಕೆ ಹೋಗಿ ಅಲ್ಲಿನ ಸುತ್ತಲ ಪರಿಸರವನ್ನೆಲ್ಲ ವಿಶ್ಲೇಷಿಸಿ ಬಂದಿದ್ದ ಮನ್ಮಥ.

ದಟ್ಟವಾದ ಜಟಿಲ ಕಾಡಿನ ವಾತಾವರಣದ ನಿಸರ್ಗ ಮನೋಹರ ತಾಣದಲ್ಲಿ ಎಲ್ಲವೂ ನೈಸರ್ಗಿಕವಾಗಿಯೆ ಋತುಚಕ್ರದನುಸಾರ ನಡೆಯುತ್ತಿದ್ದ ಕಾರಣಕ್ಕೊ ಏನೊ ಮನ್ಮಥನಿಗೆ ಎಲ್ಲವನ್ನು ಹೊಸತಾಗಿ ಸೃಜಿಸುವ ಅಥವಾ ಶೂನ್ಯದಿಂದ ಆರಂಭಿಸುವ ಅಗತ್ಯ ಕಾಣಲಿಲ್ಲ. ಬದಲಿಗೆ ಇದ್ದ ಸಹಜ ಪರಿಸರವನ್ನೆ ಬಳಸಿಕೊಂಡು ಅವುಗಳ ನಡುವಲ್ಲೆ, ಆಹ್ಲಾದವನ್ನುಂಟು ಮಾಡಿ ಪ್ರೇಮ-ಕಾಮ ಪ್ರಚೋದನೆಗೆ ಇಂಬು ಕೊಡುವ ತರತರದ ಗಿಡ ಸಸ್ಯಗಳ ಬೀಜಗಳನ್ನು ಪ್ರೋಕ್ಷಿಸತೊಡಗಿದ. ಅದೇನು ಭೂಲೋಕಕ್ಕೆ ಅಪರೂಪವಾದ ವಿಶೇಷ ಸಸ್ಯರಾಶಿಯೊ ಏನೊ, ನೋಡನೋಡುತ್ತಿದ್ದಂತೆ ಅಲ್ಲಿನ ಮಣ್ಣಿನ ಹವೆಗೆ ಒಗ್ಗಿಕೊಂಡಂತೆ ವೇಗವಾಗಿ ಚಿಗುರೊಡೆದುದ್ದು ಮಾತ್ರವಲ್ಲದೆ, ಅದೇ ವೇಗದಲ್ಲಿ ತಂತಾನೆ ಹಬ್ಬಿಕೊಳ್ಳುತ್ತ ಸುತ್ತಲಿನ ಪ್ರದೇಶವನ್ನೆಲ್ಲ ವ್ಯಾಪಿಸಿಕೊಳ್ಳತೊಡಗಿದವು. ಹೂ ಬಿಡಲು ಅಕಾಲವಾಗಿದ್ದ ಆ ಋತುವಿನಲ್ಲು ಈ ಗಿಡಗಳು ಮಾತ್ರ ನಳನಳಿಸುತ್ತ ಹೂ ಬಿಟ್ಟು ತಮ್ಮ ಸುಮನೋಹರ ಸುವಾಸನೆಯನ್ನು ಸುತ್ತಲಿನ ಪರಿಸರಕ್ಕೆ ಧಾರೆಯೆರೆಯುತ್ತ ವಾತಾವರಣದಲ್ಲೆ ಒಂದು ರೀತಿಯ ಮಾದಕತೆಯನ್ನು ಆರೋಪಿಸಿಬಿಟ್ಟವು.

ಕಾಮದೇವನ ಈ ವನರಾಜಿಗಳೆ ಹಾಗೆ.. ತಪ ನಿರತ ಜಾಗದ ಸುತ್ತಲ ಪರಿಧಿಯಲ್ಲಿ ನಿಧಾನವಾಗಿ ಪಸರಿಸುತ್ತ ಒಳಗಿನ ಜಾಗೆಗಳಿಗು ತಲುಪಿ, ತಪದ ಜಾಗವನ್ನು ಅಲ್ಲಿರುವವರ ಅರಿವಿಗೆ ಬರುವ ಮೊದಲೆ ಪರಿವರ್ತಿಸಿಬಿಡುತ್ತವೆ. ಆಮೇಲಿನ ಕೆಲಸವೇನಿದ್ದರು ಅಪ್ಸರೆಯರದು; ತನ್ನ ವಿಶೇಷ ದ್ರವ್ಯಲೇಪಿತ ಬಾಣಗಳ ಪ್ರಯೋಗ ಮಾಡುವ ಸಂಧರ್ಭ ಇಲ್ಲಿ ಬರದು ಎನ್ನುವ ಅನಿಸಿಕೆಯಲ್ಲಿ, ಸುತ್ತಲಿನ ವಾತಾವರಣದಲ್ಲಿ ಎಷ್ಟು ಉದ್ವೇಗ, ಉದ್ರೇಕ, ಮಾದಕತೆಯನ್ನು ಅನುಮಾನಕ್ಕೆಡೆಯಿರದಂತೆ ಸಂಯೋಜಿಸಬಹುದೊ ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿದ ಮನ್ಮಥ ತನ್ನ ಕೆಲಸ ತೃಪ್ತಿಕರ ಹಂತ ಮುಟ್ಟಿದೆಯೆಂದನಿಸಿದಾಗ ಬಿಡಾರದತ್ತ ನಡೆದಿದ್ದ, ಆ ಮಾಹಿತಿಯನ್ನರುಹಿ ಮುಂದಿನ ಹೆಜ್ಜೆಯನ್ನಣಿಗೊಳಿಸಲು..

ಆ ಹೊತ್ತಿಗೆ ಅಪ್ಸರೆಯರೆಲ್ಲರ ನಡುವೆ ಪುಟ್ಟದೊಂದು ಸಭೆಯೆ ನಡೆದಿತ್ತು. ಅದರಲ್ಲಿ ಮೊದಲು ಚರ್ಚೆಯಾಗುತ್ತಿದ್ದ ವಿಷಯ ತಪೋಭಂಗದ ಭೂಮಿಕೆ ನಿಭಾಯಿಸುವವರಾರು ಮತ್ತು ಹೇಗೆ ? ಎನ್ನುವುದು. ಹೇಳಿ ಕೇಳಿ ಮಹಾನ್ ಶಕ್ತಿ ಹೊಂದಿದ ತಪೋನಿಧಿಗಳು ಮೂಗಿನ ತುದಿಯ ಉಗ್ರಕೋಪಕ್ಕು ಹೆಸರಾದವರಲ್ಲವೆ ? ಒಂದೆಡೆ ಅಂತಹ ನೂರಾರು ಮುನಿಗಳ ಏಕಾಗ್ರತೆಯನ್ನು ಕದಡಿ, ಪ್ರೇಮ ಪಾಶದಲ್ಲಿ ಕೆಡವಿ ಕಾಮನಂಗಣದಲ್ಲಿ ಮೈ ಮರೆಸಿ ಅವರ ತಪದ ಮೂಲೋದ್ದೇಶವನ್ನೆ ಭಂಗಿಸುವಲ್ಲಿ ಜಯಶೀಲರಾದ ಉದಾಹರಣೆಗಳಿದ್ದರೆ, ಮತ್ತೊಂದೆಡೆ ವಿಫಲರಾಗಿ ಅವರ ಕೋಪಕ್ಕೆ ತುತ್ತಾಗಿ ಶಾಪಗ್ರಸ್ತರಾದ ಪ್ರಕರಣಗಳೂ ಸಾಕಷ್ಟು. ರಂಭಾದಿ ಅಪ್ಸರೆಯರಿಗೆ ಶಾಪವೆಂದರೆ ನಡುಕ; ದೇವಲೋಕದ ಐಷಾರಾಮ ಸುಖಭೋಗದಲ್ಲಿ ಹೂವಿನ ಹಾಸಿಗೆಯಂತ ಬದುಕು ನಡೆಸಿದವರಿಗೆ ಶಾಪದ ಫಲವಾಗಿ ಭೂಲೋಕದಲ್ಲಿ ಜನಿಸುವುದೊ, ಕಲ್ಲಾಗಿಬಿಡುವುದೊ ಅಥವಾ ಇನ್ನೇನೊ ಗತಿಗೊಳಗಾಗಿ ಪಾಡು ಪಡುವುದು ಎಂದರೆ ಅಸಹನೀಯ ಭೀತಿ. ಆ ಕಾರಣಕ್ಕೆ ಈಗ ಅವರಲ್ಲೆ ಚರ್ಚೆ - ಮುಂದಿನ ಹೆಜ್ಜೆ ಏನೆಂದು.

(ಇನ್ನೂ ಇದೆ)