ಅಹಿಂಸೆಯ ಹಿಂಸಾವಾದ
ಕವನ
ಕೂಲಿಗಳ್ಳತನವನ್ನು
ಶಾಸನಮಾಡೀ
ರೊಟ್ಟಿಗಳ್ಳತನವನ್ನು
ಅಪರಾಧವೆನ್ನುವುದು
ಹಿಂಸಾವಾದ...
ಅಕ್ಷರವನ್ನು ಅಟ್ಟದಲ್ಲಿ
ಬಚ್ಚಿಟ್ಟು
ಏರುವ ಏಣಿಯನ್ನು
ಕಸಿವುದು
ಹಿಂಸಾವಾದ...
ಹಾತ್ರಸ್ ಗಳ ಕೀಚಕರನ್ನು
ಮನುವಾದದ ಗಡಿಯೋಧರೆಂದು
ಸನ್ಮಾನಿಸುವುದು
ಹಿಂಸಾವಾದ...
ಬಗ್ಗಲೊಲ್ಲದ ಕೇರಿಗೆ
ಬೆಂಕಿಯಿಕ್ಕುವ ಊರಿನ
ಅಹಿಂಸಾ ಬೋಧನೆ
ಹಿಂಸಾವಾದ...
ಮಂದಿರಕೆ ನಂಬಿಕೆ
ಸಾಕೆನ್ನುವ ನ್ಯಾಯಾಸ್ಥಾನ
ಹಿಜಾಬಿಗೆ, ನಮಾಜಿಗೆ
ಪೈಗಂಬರನ ಪುರಾವೆ ಕೇಳುವುದು
ಹಿಂಸಾವಾದ...
ತೋಳಗಳು ತುಪಾಕಿಯೇರಿಸಿ
ಹೊಂಚು ಹಾಕುವಾಗ...
ಕುರಿಗಳು ಕೊಂಬನ್ನು ನಿಷೇಧಿಸುವುದು
ಹಿಂಸಾವಾದ...
ಕಾನನ ದಹನಕ್ಕೆ
ಕವಾಯತು ನಡೆಯುತ್ತಿರುವಾಗ..
ಕಾಡಿನ ಮಕ್ಕಳ ಬಿಲ್ಲುಗಳನ್ನು
ಕಾನೂನುಬಾಹಿರಗೊಳಿಸುವುದು
ಹಿಂಸಾವಾದ....
ಬುಲ್ಡೋಜರುಗಳಿಗಿರುವ
ಬಂದೂಕು ರಕ್ಷಣೆಯನ್ನು
ಶಾಂತಿಪಾಲನೆ ಎನ್ನುವರು...
ಗುಡಿಸಲ ರಕ್ಷಣೆಗಿರುವ
ದೊಣ್ಣೆಗಳನ್ನು
ದೇಶದ್ರೋಹ ವೆನ್ನುವುದು
ಹಿಂಸಾವಾದ...
- ಶಿವಸುಂದರ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
![](https://saaranga-aws.s3.ap-south-1.amazonaws.com/s3fs-public/blodshed.jpg)