ಅಹಿಂಸೆ
1990 ನೇ ಇಸವಿ ಜ್ಯೋತಿಷ್ಯಾಭ್ಯಾಸದಲ್ಲಿ ಮುಳುಗಿ ಹೋದ ದಿನಗಳವು, ಜೊತೆಗೆ ದೇವಾಲಯಗಳ ಹುಡುಕಾಟ. ಅಮ್ಮನ ಸಂಗಡ ಆಂದ್ರಪ್ರದೇಶದ ರಾಜಧಾನಿ ಭಾಗ್ಯನಗರಕ್ಕೆ ಕೆಲವರ ಕರೆಯೋಲೆಯ ಮೇರೆಗೆ ಹೋಗಿದ್ದಾಗ ಅಲ್ಲಿನವರೊಬ್ಬರು ಅಹೋಬಲದ ಬಗ್ಗೆ ಪ್ರಸ್ತಾಪಿಸಿದರು. ಅಲ್ಲಿಗೆ ಹೋಗಬೇಕೆಂಬ ಅಚಲ ನಿರ್ಧಾರ ಮನದಲ್ಲಾಯಿತು. ಅಮ್ಮನ ಆರೋಗ್ಯದ ದೃಷ್ಟಿಯಿಂದ ಬೆಟ್ಟದ ಕಾಡಾದ್ದರಿಂದ ಒಬ್ಬನೇ ಹೋಗೋಣವೆನ್ನಿಸಿತು.
ಇವನ ಬಗ್ಗೆ ಹೆಚ್ಚು ಕಾಳಜಿ ಇರುವ ಅಮ್ಮ ಒಬ್ಬ ನಡುವಯಸ್ಸಿನ ವ್ಯಕ್ತಿಯನ್ನು ಇವನೊಂದಿಗೆ ಕಳುಹಿಸಿದರು.
ಅಹೊಬಲ ದಟ್ಟವಾದ ಕಾನನ, ಮಂದಿರವಿರುವ ಕ್ಷೇತ್ರವೇ ಕಾಡಿನ ವಾತಾವರಣ. ಅಬ್ಭಾ ಇನ್ನು ಆ ಅರಣ್ಯ ಹೇಗಿರಬಹುದು ಅದು ಊಹಿಸದಸದಳ. ಇನ್ನೂಮುಂದೆ ಹೋದರೇ ಪ್ರಹ್ಲಾದನ ಪಾಠಶಾಲೆ ಇದೆ, ಜ್ವಾಲನಾರಸಿಂಹ ದೇಗುಲ ಹಾಗೂ ಹಿರಣ್ಯಕಶಿಪುವಿನ ಹೊಡೆತದಿಂದ ಸೀಳಾಗಿ ನರಸಿಂಹನ ಉಗಮವಾದ ಉಗ್ರ ಸ್ತಂಭವಿದೆ ಎಂದು ತಿಳಿದು ಅಲ್ಲಿಗೂ ಹೋಗುವ ಉದ್ದೇಶ ಮುಂದಿಟ್ಟಾಗ ಜೊತೆಗೆ ಬಂದವರು ತನ್ನಿಂದಾಗದೆಂದು ತಿಳಿಸಿದರು. ಅಂದು ಯಾತ್ರಿಕರು ಕಡಿಮೆ ಇದ್ದದ್ದರಿಂದ ಮೇಲೆ ಹತ್ತುವವರ್ಯಾರು ಸಿಗಲಿಲ್ಲ. ಭಗವಂತನನ್ನು ನೆನೆದು ಏಕಾಂಗಿಯಾಗಿ ಮುನ್ನಡೆಯಲು ಸಂಕಲ್ಪಮಾಡಿ ಹತ್ತಲು ಸಿದ್ಧವಾದಾಗ ಅಹೋಬಲದ ಅರ್ಚಕರು ದಾರಿಯ ಸೂಕ್ಷ್ಮತೆಯ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟರು. ಆ ಸೂಚನೆಗಳ ಮೇರೆಗೆ ಪ್ರಹ್ಲಾದನ ಪಾಠಶಾಲೆ ತಲುಪಿದ್ದಾಯಿತು. ಎಂದೂ ನೋಡಿರದ ಕಾಡದು. ಉಗ್ರಸ್ತಂಭಕ್ಕೆಂದು ಮುಂದೆ ಹತ್ತಲು ಬೆಟ್ಟದ ತೀಕ್ಷ್ಣತೆ ಹೆಚ್ಚಾಗುತ್ತಾ ಹೋಯಿತು. ಸುಮಾರು ಅರ್ಧ ತಾಸು ಹತ್ತಿರಬಹುದು. ಆ ಘೋರಾರಣ್ಯದ ಮಧ್ಯೆ ಒಬ್ಬ ಆದಿವಾಸಿಯ ದರ್ಶನವಾಯಿತು. ಎತ್ತರದ ಕಟ್ಟುಮಸ್ತಾದ ಆಳು, ಶ್ಯಾಮಲ ವರ್ಣ, ಮಹಾಭಾರತದ ಏಕಲವ್ಯನ ನೆನಪಿಸುವ ವೇಷ, ಕಾಡುಜನರು ಬಳಸುವ ಬಿಲ್ಲು, ಚರ್ಮದ ಬತ್ತಳಿಕೆ ಅದರೊಳಗೆ ಮುಳ್ಳನ್ನು ಹೋಲುವ ಬಾಣಗಳು.
ಮುಖಸಾಮುದ್ರಿಕಾಭ್ಯಾಸವಿರುವ ಇವನಿಗೆ ಕಂಡ ಅವನ ಮುಖಚರ್ಯೆ ಭಗವತ್ಗೀತೆಯ ಹದಿನಾರನೇಯ ಅಧ್ಯಾಯದ ಮೊದಲ ಮೂರು ಶ್ಲೋಕಗಳನ್ನು ನೆನಪಿಸಿತ್ತು. ಭಯವಿಲ್ಲದ ಅಭಯತೋರುವ ಗುಣ, ಸ್ವಚ್ಛಮನದ ಭೃಮಧ್ಯೆ, ಗೊಂದಲಗಳಿಲ್ಲದ ನಡೆವಳಿಕೆ, ಏನು ಕೇಳಿದರೂ ಇಲ್ಲವೆನ್ನದ ಸ್ವಭಾವ, ಆಸೆಗಳಿಲ್ಲದ ಭಾವ, ಇತರರ ನೋವಿಗೆ ಸ್ಪಂದಿಸುವ ಕಣ್ಣುಗಳು, ತನ್ನ ಬಗ್ಗೆ ತನಗಿರುವ ನಂಬಿಕೆ, ಹೀಗೆ ಮುಂತಾದ ಲಕ್ಷಣಗಳು ಭಗವಂತನೇ ಇಳಿದು ಬಂದನೇನೋ ಎನ್ನುವ ಭಾವನೆಯನ್ನು ತರಿಸಿತ್ತು.
ಅಲ್ಲಿನ ಒಂದು ಹೊಂಗೆ ಮರದ ನೆರಳಲ್ಲಿ ಆತನನ್ನೇ ನೋಡುತ್ತಾ ಎಂದಿನ ಅಭ್ಯಾಸದಂತೆ ಅದೇ ಮರದ ಎಲೆಗಳನ್ನು ಒಂದೊಂದಾಗಿ ಕೀಳುತ್ತಾ ನಿಂತಿದ್ದ ಇವನನ್ನ ಕಂಡು ಆತ ಕಾಡುಭಾಷೆ ಆದಿವಾಸಿ ತೆಲುಗಿನಲ್ಲಿ
ಮರದ ಎಲೆಗಳನ್ನು ಕೀಳಬಾರದೆಂದು ವಿನ್ನವಿಸಿದ. ಇವನ ಮುಖದ ಪ್ರಶ್ನಾರ್ಥಕ ಭಾವವನ್ನು ಗಮನಿಸಿ, ಯಾವುದೇ ಜೀವಿಗೆ ಕಾರಣವಿಲ್ಲದೇ ನೋಯಿಸಭಾರದೆಂದು ತಿಳಿಸಿದ, ಅವನ ಬಿಲ್ಲಿನ ಕಡೆ ನೋಡಿ ನಗುತ್ತಿದ್ದ ಇವನ ಮನಸ್ಸನ್ನು ಗ್ರಹಿಸಿದ ಅವನ ಮಾತುಗಳು ಪುಂಖಾನುಪುಂಖವಾಗಿ ಹೊರಬಂದವು, " ನರಸಿಂಹದೇವನ ಕಿರುಬೆರಳ ಕೊನೆಯಲ್ಲಿ ಸಾಸಿವೆಯಂತೆ ನಿಂತಿರುವ ಈ ಭುಮಿಯಲ್ಲಿ ಸಾವಿಗೆ ಬೆಲೆಯಿಲ್ಲ, ಹುಟ್ಟಿಗೆ ಬರವಿಲ್ಲ, ನೋವಿಗೆ ನೋವಾಗಿ ಕಾಣದ ಸುಖದ ಹಿಂದೆ ಹರಡಿಕೊಂಡಿದೆ ಈ ಜೀವಜಾಲ, ಕಾರಣವಿಲ್ಲದೆ ಕೊಡುವ ನೋವಿನ ಹಿಂದೆ ಬರುವ ನೋವು ಕಟ್ಟಿಟ್ಟ ಬುತ್ತಿ. ತಿಂದ ಆಹಾರದಲ್ಲಿ ನೊಂದು ಬೆಂದ ಜೀವಿಯು ತಿಂದವರ ಹೊಟ್ಟೆಸೇರಿ ಮರು ಹುಟ್ಟು ಪಡೆಯುತ್ತದೆ, ಹಾಗಾಗಿ ಹಸಿವಿನ ಕಾರಣವಿಲ್ಲದೆ ಸಸ್ಯಹಾರಿಗಳು ಹುಲ್ಲು ಎಲೆಯನ್ನು ತಿನ್ನುವುದಿಲ್ಲ, ಮಾಂಸಾಹಾರಿ ಪ್ರಾಣಿಗಳು ತಮ್ಮ ಆಹಾರವಾದ ಪ್ರಾಣಿಗಳನ್ನು ಕೊಲ್ಲುವುದಿಲ್ಲ. ನಡೆದಾಡುವ ಕಡೆ ಬೆಳೆಯದಿರುವ ಹುಲ್ಲು ಇವು ತಿನ್ನುವ ಕಡೆ ಮತ್ತಷ್ಟು ಬೆಳೆಯುತ್ತವೆ. ಹೆಚ್ಚು ನೋವು ಕೊಡುವ ಜೀವಿ ಹೆಚ್ಚುನೋವು ಪಡೆದು ಕಡಿಮೆ ಬದುಕುತ್ತದೆ, ಕಡಿಮೆ ನೋವು ಕೊಡುವ ಜೀವಿ ಕಡಿಮೆ ನೋವು ಪಡೆದು ಹೆಚ್ಚು ಜೀವಿಸುತ್ತದೆ. ಅದೇಹಾರಣಕ್ಕೆ ಹುಲಿ ಸಿಂಹಗಳು ತಮ್ಮ ಬೇಟೆಯ ಕತ್ತನ್ನೆ ಹಿಡಿದು ಅತಿ ಕಡಿಮೆ ನೊವಿನಲ್ಲಿ ಕೊಲ್ಲುತ್ತವೆ. ವಿಷಸರ್ಪಗಳು ವಿಷದಿಂದ ಕ್ಷಣಗಳಲ್ಲಿ ಕೊಂದು ತಿನ್ನುತ್ತವೆ, ಹೋರಾಟಗಳಲ್ಲಿ ಕ್ರೌರ್ಯ ಸಹಜ, ಅದು ನೋವಿಗೆ ಆಹ್ವಾನ ಆದರೇ ನೋವಲ್ಲ ಅದು ಧೀರತೆ, ಅಲ್ಲ ಸೋಲು ಸಾವು ಸ್ವಯಂಕೃತ, ಓಡುವುದು, ಬಚ್ಚಿಟ್ಟುಕೊಳ್ಳುವದು ಹಿಡಿಯುವವರಿಗೆ ಸವಾಲು ಆದರೇ ನೋವಲ್ಲ, ಮರಿಗಳನ್ನು, ಗರ್ಭಿಣಿಯರನ್ನು, ಮಕ್ಕಳತಾಯಿಯರನ್ನು ರೋಗಿಗಳನ್ನು ಹಿಡಿಯುವುದು ಹೇಡಿತನ, ಹಂದಿಯ ಮರಿಗಳನ್ನು ಕೊಲ್ಲದೇ ಅವುಗಳ ತಾಯಿಗೊಪ್ಪಿಸುವ ಚಿರತೆಗಳಿವೆ. ಹುಲಿಯ ಮಕ್ಕಳನ್ನು ತಾಯಿಯಿಲ್ಲದ ಸಮಯದಲ್ಲಿ ಕೊಲ್ಲುವ ಕಾಡೆಮ್ಮೆಗಳೂ ಇವೆ." ಹೀಗೆ ನಡೆಯುತ್ತಾ ಹೇಳುತ್ತಿದ್ದರೇ ಪೌರಾಣಿಕರಿಗೂ ಮೀರಿದ ತೊದಲಿಲ್ಲದ ಸ್ವಚ್ಚ ಕಾಡು ಭಾಷೆ ಕಂಡು ಈತ ಸಾಕ್ಷಾತ್ ನರಸಿಂಹನೇ ಇರಬೇಕೆಂದು ಭಾವಿಸಿದ ಇವನ ಮನಸ್ಸನ್ನು ಓದಿದನೇನೋ ಅನ್ನುವ ಹಾಗೆ ತನ್ನ ಮಾತನ್ನು ಮುಂದುವರೆಸಿದ, " ಹೀಗೆ ಈ ಕಾಡಲ್ಲಿ ನಡೆಯುವ ನೋವು ಹಿಂಸೆಯ ಸಹಜ, ಅಸಹಜ ಕ್ರಿಯೆಗಳನ್ನು ತುಲನೀಕರಿಸಲು ಮನುಷ್ಯನ ಜನ್ಮವಾಗಹುದು, ಮನುಷ್ಯರನ್ನು ಮಾನವೀಯರನ್ನಾಗಿಸಲು ಇಲ್ಲಿ ನರಸಿಂಹನ ಹುಟ್ಟಾಗಿದೆ, ಆ ನರಹರಯ ತಾಪವಡಗಿಸಲು ಹುಟ್ಟಿಬಂದ ಚೆಂಚುಲಕ್ಷ್ಮಿಯ ವಂಶದವರು ನಾವು. ನರಸಿಂಹನ ಅನತಿಯಂತೆ ಈ ಕಾಡಿನ ಸೇವಕರು ನಾವು, ಕಾರಣವಿಲ್ಲದೆ ಹಿಂಸೆಕೊಡುವವರನ್ನು ಬೇಟೆಯಾಡಿ ತಿನ್ನುವುದೇ ನಮ್ಮ ಕಸುಬು, ದೇವರಿಗರ್ಪಿಸದೇ ಏನನ್ನೂ ತಿನ್ನುವುದಿಲ್ಲ, ಮರಿಗಳನ್ನು, ತಾಯಿಯರನ್ನು, ಗರ್ಬಿಣಿಯರನ್ನು ಸಲಹುತ್ತೇವೆ, ಬೇಟೆಯಾಡುವವನು ಬೇಟೆಯಾಗಲೂ ಸಿದ್ಧನಿರಬೇಕು, ಎಷ್ಟೋಸಲ ಮೋಲಗಳು ಕೂಡ ಭೇಟೆಯ ಸಂದರ್ಭದಲ್ಲಿ ಭೇಟೆಗಾರನ ಮುಖಕ್ಕೆರಗಿ ಉಗುರುಗಳಿಂದ ಅವನ ಕಣ್ಣು ಪರಚಿ ಕುರುಡು ಮಾಡಿದ್ದುಂಟು. ಈ ಎಲ್ಲ ನಿಯಮಗಳಲ್ಲಿ ಸಿಕ್ಕರೇ ಬೇಟೆ ಇಲ್ಲದಲ್ಲಿ ಗೆಡ್ಡೆಗೆಣಸು, ಹಣ್ಣು ಹಂಪಲು, ಎಲ್ಲ ಅವನ ಪ್ರಸಾದ, ಏನೆ ಆಗಲಿ ಅದು ನಮಗಾಗಲಿ ಅಥವ ನಾವದಕ್ಕಾಗಲಿ ಆಹಾರವೇ ಕಾರಣ, ಭಯವಿಲ್ಲದೇ ಭಯಬೀಳಿಸದೇ ಬದುಕುವುದು ಮಾನವೀಯತೆ. ಅಗೋ ಬಂತು ನೋಡಿ ಜ್ವಾಲಾ ನರಸಿಂಹ ದೇಗುಲ, ಇಲ್ಲಿಂದ ಇನ್ನು ಸ್ವಲ್ಪ ಮೇಲೆರಿದರೇ ಉಗ್ರ ಸ್ತಂಭ" ಎಂದ ತೋರಿಸಿ ಹೊರಡಲನುವಾದಾಗ, ಮನದಲ್ಲಿ ಈತನಿಗೆ ಅತಿಕಡಿಮೆ ನೋವಿರುವ ಪ್ರಾಣಿಗಳ ಭಾಗಕ್ಕೇ ಗುರಿಇಡುವ ಸಾಮರ್ಥ್ಯವಿದೆಯೇ ಎಂದು ಅನಿಸಿ ಈತನ ಗುರಿ ಪರೀಕ್ಷೆ ಮಾಡಬೇಕೆನಿಸಿತು. ಅಷ್ಟರಲ್ಲಿ ಆತ ಒಂದು ಭಾಣವನ್ನು ಹೂಡಿ ಹೊಡೆದದ್ದೂ ಆಯಿತು, ಅಲ್ಲದೇ ಮುಂದೆ ನಡೆಯುವ ದಾರಿಯಲ್ಲಿ ನೆಲಕ್ಕೆ ತಾಗಿದಂತೆ ಆ ಭಾಣ ಸಿಗುವುದಾಗಿ ತಿಳಿಸಿದನು. ಈತನ ಪಾದಮುಟ್ಟಬೇಕೆಂದನಿಸಿ ನಮಸ್ಕರಿಸಲು ಹೋದಾಗ ಅದಕ್ಕೆ ಸ್ವಲ್ಪವೂ ಆಸ್ಪದ ಕೊಡದೇ ಕೆಳಗೆ ಇಳಿದು ಹೊರಟು ಕಾಣೆಯಾದ. ಈ ಘಟನೆ ಇವನ ಜೀವನದಲ್ಲಿ ಇಂದಿಗೂ ಅವಿಸ್ಮರಣಿಯವಾಗಿ ಉಳಿದಿದೆ.
ಯಾವ ಶಾಲೆಯಲ್ಲೂ ಕಲಿಯದೆ, ಪದವಿ ಗೌರವ ಪರಸ್ಕಾರಗಳರಿವಿಲ್ಲದ ಈ ಕಾಡುಮಾನವನಿಗಿರುವ ಪರಿಸರ ವ್ಯವಸ್ಥೆಯ ಜ್ಞಾನ ಜಾಗತಿಕ ತಾಪಮಾನದ ಅರಿವು ಅಚ್ಚರಿ ಮೂಡಿಸಿತು. ನಮ್ಮದೇಶದ ಹಳ್ಳಿಯೋದರಲ್ಲಿ ನಡೆಯುವ ಊರಜಾತ್ರೆಯಲ್ಲಿ ಇವನು ಹತ್ತುವರ್ಷದವನಿದ್ದಾಗ ಕಂಡ ಕೆರೆಗೆ ಹಾರವಾದಂತಹ ಕುರಿಯ ಮೇಲೆ ನಡೆದ ಕ್ರೌರ್ಯ ನೆನಪಾಯಿತು, ಅದನ್ನು ಒಂದು ಅಲಂಕೃತ ತೆಪ್ಪದಲ್ಲಿ ಮಲಗಿಸಿ ಎರಡು ಕೋಲುಗಳಿಂದ ಬಂಧಿಸಲಾಗಿತ್ತು, ಇಬ್ಬರು ದಡೂತಿಗಳು ಆ ತೆಪ್ಪದಲ್ಲಿ ಕುಳಿತು ಆ ಕುರಿಯನ್ನು ಕಚ್ಚಿ ಕಚ್ಚಿ ದೊಣ್ಣೆಗಳಿಂದ ಒಡೆಯುತ್ತಿದ್ದರು, ಸುಮಾರು ಗಂಟೆಯ ಸಮಯ ಕೆರೆಯೆಲ್ಲಾ ತೆಲುತ್ತಿರುವ ಆ ತೆಪ್ಪದಲ್ಲಿ ಕುರಿಯು ಕಿರುಚುತ್ತಾ ಅರಚುತ್ತಾ ಪ್ರಾಣಬಿಟ್ಟಿತ್ತು.
ಮತ್ತೊಂದು ಸಲ ಇತ್ತೀಚೆಗೆ ಬೇಲೂರಿನ ರಸ್ತೆಯೊಂದರಲ್ಲಿ ನಡೆಯುತ್ತಿದ್ದಾಗ ಒಂದು ಟೀ ಅಂಗಡಿಯ ಮುಂದೆ ದುಃಖದಿಂದ ಮಲಗಿದ್ದ ಮೇಕೆ ಮರಿಯನ್ನು ಕಂಡು ಮಮತೆಯಿಂದ ಅದರ ಹತ್ತಿರ ಹೋಗಿ ಕಟ್ಟಿರುವ ಅದನ್ನು ತೊಡೆಯ ಮೇಲೆ ಮಲಗಿಸಿ, ಇದರ ಕಣ್ಣೀರಿಗೆ ಕಾರಣವೇನೆಂದು ಆ ಅಂಗಡಿಯವರನ್ನು ಕೇಳಲು, ಅಂಡಿಯ ಮುಂದೆ ಕುಳಿತಿರುವ ವ್ಯಕ್ತಿಯೊಬ್ಬರು ಹೇಳಿದ ಮಾತುಕೇಳಿ ಕರುಳು ಚುರ್ ಎಂದಿತು, ಹಿಂದಿನ ದಿನದ ಅವರ ಹಬ್ಬವೊಂದಕ್ಕೆ ಕಡಿಯಲೆಂದು ಇದರ ತಾಯಿಯನ್ನು ಬಳಸಿದರೆಂಬುದೇ ಆ ಮಾತು. ಮಗುವಿನ ತಾಯಿಯನ್ನು ಕೊಲ್ಲಲು ಯಾವ ಧರ್ಮದ ಪುಸ್ತಕವೂ ಹೇಳುವುದಿಲ್ಲವೆಂದು ಎಷ್ಟು ಹೇಳಿದರೂ ಕೇಳುವ ಮನಸ್ಸು ಅಲ್ಲಿ ಯಾರಲ್ಲೂ ಕಾಣಲಿಲ್ಲ. ಹೀಗಿದೆ ನಮ್ಮ ಪರಿಸರ ವ್ಯವಸ್ಥೆ, ಹೀಗೆ ಪ್ರತಿ ಘಟನೆಯಲ್ಲೂ ನಮ್ಮ ನವೀನ ಜನಾಂಗದ ಪರಿಸರನಾಶದ ಹಾಗೂ ಅವನತಿಯ ಕಡೆಗೆ ವಿಶ್ವವನ್ನು ನಡೆಸುತ್ತಿರುವ ವಿಚಾರಗಳನ್ನು ನೋಡಿದಾಗಲೆಲ್ಲಾ ಆ ಆದಿವಾಸಿಯ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿರುತ್ತವೆ. ಹೀಗೆ ನಮ್ಮ ಅಜ್ಞಾನದ ವತಿಯಿಂದ ಅವನತಿಯ ಅಂಚಿನಲ್ಲಿರುವ ಗೋವಿನ ತಳಿಗಳ ಬಗ್ಗೆ ಸ್ವಲ್ಪ ತಿಳಿಯೋಣ, ಅದಕ್ಕೂ ಮೊದಲು ನಾವು ಗೋವಿಗೂ ಭೂಮಿಗೂ ಇರುವ ಅನುಬಂಧ ತಿಳಿಯೋಣ. ಪುರಾಣಗಳ ಪ್ರಕಾರ ಭೂಮಿಯು ಸಾಗರದಲ್ಲಿ ಗೋವಿನಾಕಾರದಲ್ಲಿದೆ. ತನ್ನ ಸುಖದುಃಖಗಳನ್ನು ಅರುಹಲು ಭೂದೇವಿಯು ಗೋವಿನ ರೂಪದಲ್ಲಿ ಶ್ರೀಮಹಾವಿಷ್ಣುವನ್ನು ಸಂದಿಸುತ್ತಾರೆ. ಆಕೆಯ ಮುಖವೇ ಭರತ ಖಂಡ, ಮುಂಗಾಲು ಶಂಖದಾಕಾರದಲ್ಲಿರುವ ಶಂಖದ್ವೀಪವಾದ ಆಫ್ರಿಕಾ ಖಂಡ, ಹಿಂಗಾಲು ಬಕನಹಾಗಿರುವ ಕ್ರೌಂಚದ್ವೀಪವಾದ ದಕ್ಷಿಣ ಅಮೇರಿಕಾ ಖಂಡ. ಬಾಲ ತಾವರೆಯ ಮೊಗ್ಗಿನ ಹಾಗಿರುವ ಪುಷ್ಕರ ದ್ವೀಪವಾದ ಉತ್ತರ ಅಮೇರಿಕಾ ಖಂಡದ ದಕ್ಷಿಣಭಾಗ. ಹೀಗೆ ವ್ಯಾಸರ ಕಣ್ಣಿನಿಂದ ಗೂಗಲ್ ಅರ್ತನ್ನು ಸಮೀಕ್ಷಿಸಿದಾಗ ಕಂಡ ಗೋರೂಪವನ್ನು ಗೋಪ್ರಿಯರೆಲ್ಲಾ ಆಸ್ವಾದಿಸಿ. ಗೋವಂಶದ ಮೂಲ ದಂಪತಿಗಳು ಕಶ್ಯಪ ಮಹರ್ಷಿ ಹಾಗು ಕಾಮಧೇನು. ಗೋವು ಪೂಜ್ಯನೀಯ, ಗೋವು ಜ್ಞಾನದ ಸಂಕೇತ, ಗೋವಿನ ಹೆಜ್ಜೆಹೆಜ್ಜೆಗೂ ಕರುಣೆಯಿರುತ್ತದೆ, ರೋಮರೋಮಕ್ಕೂ ಪ್ರೇಮವಿರುತ್ತದೆ. ಗೋವಿನಲ್ಲಿ ಮೂರುಕೋಟಿ ದೇವತೆಗಳಿರುತ್ತಾರೆ. ಗೋವು ಹುಲ್ಲನ್ನು ತಿಂದು ಹಾಲನ್ನು ಕೊಡುತ್ತದೆ. ಅದರ ಕರುವಿಗೆ ಬಿಟ್ಟು ಮಿಕ್ಕದ್ದು ಹಾಲಾದರೇ ಕರುವಿಗಿಡದೆ ಕುಡಿದರೇ ಹಾಲಾಹಲವಲ್ಲವೇ? ಮಹಾಭಾರತದ ರಾಜಸೂಯ ಸಮಯದಲ್ಲಿ ಬೀಮಗೋಪಾಲ ಸಂವಾದ ಹೇಳುವ ಹಾಗೆ ಇಂದಿಗೆ ೫೦೦೦ ವರ್ಷಕ್ಕೂ ಮುಂಚೆ ಭಾರತದಲ್ಲಿ ನೂರಾರು ಗೋತಳಿಗಳಿದ್ದವು. ಅಂದಿನ ಸಮಯದಲ್ಲಿ ರಾಜರ ಐಶ್ವರ್ಯವನ್ನು ಗೋವಿನ ಸಂಖ್ಯೆಯಲ್ಲಿ ಅಳೆಯುತ್ತಿದ್ದರು. ಆದರೆ ಈಗ ಅಳಿವಿನಂಚಿನಲ್ಲಿ ಊಳಿದಿರುವುದು ೩೩ ತಳಿಗಳು ಮಾತ್ರ. ಅವುಗಳು: ಗುಜರಾತಿನ ಗೀರ್, ಕಾಂಕ್ರೇಜ್, ಮಹರಾಷ್ಟ್ರದ ದೇವನಿ, ನಾಗೋರಿ, ಡಾಂಗಿ, ಗೌಳವ್, ಖಿಲಾರಿ, ಆಂದ್ರಪ್ರದೇಶದ ಪುಂಗನೂರು, ಒಂಗೋಲ್, ಉತ್ತರ ಪ್ರದೇಶದ ಪೋನ್ವಾರ್, ಗಂಗಾತೀರಿ, ಖೇರಿಗರ್, ಬಿಹಾರದ ಬಚೌರ್, ತಮಿಳುನಾಡಿನ ಬರಗೂರು, ಅಂಬ್ಲಾಚೆರಿ, ಮಧ್ಯಪ್ರದೇಶದ ಮಾಳ್ವಿ, ನಿಮರಿ, ಕೇನ್‌ಕಾಥ, ರಾಜಾಸ್ಥಾನದ ರಾಠಿ, ಥಾರ್‌ಪಾರ್ಕರ್, ಕೇರಳದ ವೇಚೂರು, ಪಂಜಾಬಿನ ಸಾಹಿವಾಲ್, ಸಿಂಧಿ, ಪಶ್ಚಿಮ ಬಂಗಾಳದ ಸಿರಿ, ಹರಿಯಾಣದ ಹರಿಯಾಣಿ, ಕರ್ನಾಟಕದ ಹಳ್ಳಿಕಾರ್, ಮಲೆನಾಡು ಗಿಡ್ಡ, ಜವಾರಿ, ಕಾಸರಗೋಡು, ಅಮೃತ ಮಹಲ್, ಕಂಧಾರಿ, ಕೃಷ್ಣಾ, ಕಂಗಾಯಂ, ಸ್ವದೇಶಿ ವೇದಜ್ಞಾನದಿಂದ ಬೆಳೆದುಬಂದ ಈ ಎಲ್ಲ ತಳಿಗಳು ಶಕ್ತಿಶಾಲಿ ಹಾಗು ರೋಗ ನಿರೊದಕ ಹಾಲಿನುತ್ಪಾದನೆಗೆ ಹೆಸರಾಗಿ ವಿದೇಶಿಯರೂ ಒಪ್ಪವಂತಾಗಿದೆ. ವಿದೇಶಿ ವಿಜ್ಞಾನದ ಕೃತಕ ಗರ್ಭದಾರಣೆಯ ಅಪ್ರಾಕೃತ ವಿದಾನಗಳಿಂದ ಈದಿನ ಈ ಎಲ್ಲ ೩೩ ತಳಿಗಳೂ ವಿನಾಶದ ಅಂಚಿನಲ್ಲಿದೆ. ವಿದೇಶಿ ವಿಕೃತ ಗೋಮಾಂಸ ಭಕ್ಷಕರ ಸಲುವಾಗಿ ನಾವಿಂದು ಈ ಗೋಮಾತೆಯನ್ನು ಕ್ರೂರಹಿಂಸೆಗೆ ಗುರಿಮಾಡುತ್ತಿದ್ದೇವೆ. ನಾವೆಲ್ಲ ಇಲ್ಲೇ ಹುಟ್ಟಿ ಬೆಳೆದ ಭಾರತೀಯರಾಗಿ ಜಾತಿ ಪಂಥ ಮತಗಳನ್ನು ಮೀರಿ ವಿಶ್ವಮಾನವರಾಗಿ ಒಂದಾಗಿ ಗೋಮಾತೆಯ ರಕ್ಷಣೆಯನ್ನು ಮಾಡೋಣ ಈ ಎಲ್ಲ ತಳಿಗಳನ್ನು ಉಳಿಸೋಣ.
ಪ್ರಾಕೃತಿಕ ಪರಿಸರದ ಉಳಿವಿಗಾಗಿ ಶ್ರಮಿಸೋಣ.
ಅಹೋರಾತ್ರ ನಟೇಶ ಪೋಲೆಪಲ್ಲಿ.