ಆತ್ಮದೊಳಗಿನ ಆತ್ಮ “ಪ್ರೇಮ”

ಆತ್ಮದೊಳಗಿನ ಆತ್ಮ “ಪ್ರೇಮ”

ಪ್ರೇಮಕ್ಕೆ ನಾಮವಿರದ ಕಳಂಕ ಅಂಟಿದೆ
ಪ್ರೇಮದ ಅರ್ಥ ನೇಣಿಗೆ ಶರಣಾಗಿದೆ
ಎಲ್ಲೆಲ್ಲೊ ಅಳಿದ-ಉಳಿದ ಪ್ರೇಮವೂ
ಮತ್ತೆ ಮತ್ತೆ ಸಾಯುತ್ತಿದೆ, ನರಳಿ

ಹೆತ್ತ ತಾಯಿಯೂ ಪ್ರೇಮಿ, ಹೆತ್ತಾಗ
ಮತ್ತವಳೇ ಕಾಲಕಸ, ಚರ್ಮ ಸೊರಗಿದಾಗ
ಮಕ್ಕಳು ಅಲ್ಲೆಲ್ಲೋ ದೂರದಲ್ಲಿ ಜಂಟಿ
ತಾಯಿ ಇಲ್ಲಿ, ಇದೇ ಮಣ್ಣಲ್ಲಿ ಒಂಟಿ-ಪ್ರೇಮಿ

ಮೊದಲ ಪ್ರೇಮದ ಸಂಕೇತ ಮುತ್ತು
ಮತ್ತದರ ಮತ್ತು, ಎಂದೆಲ್ಲ ಬಡಬಡಿಸಿ
ಪ್ರೇಮಕ್ಕೆ ಪಾಮ್ ಆಯಿಲಿನ ತಿಂಡಿ ತಿನಿಸಿ
ಸಂಜೆಗೆ, ಪ್ರೇಮದ ಹೆಸರಲ್ಲಿ ಬರಿಯ!!!

ಹುಬ್ಬಿಗೂ ಕಣ್ಣಿಗೂ ಎತ್ತಣದ ಸಂಬಂದ,
ಆದರೂ ಸುಮ್ಮನೆ ಕಣ್ಣಿನ ಮೇಲೆ ಎಂದಿಗೂ ತಟಸ್ಥ,
ಕಣ್ಣು ಅಳುವಾಗ ಹುಬ್ಬು ಮರುಗಿ ಮಲಗಿದಂತೆ
ಪ್ರೇಮವೆಂದರೆ ಅದೇ ??

ಎದೆಯೊಳಗಿನ ಭಾವದ ಸಾಗರದಲ್ಲಿ, ಒಂದೊಂದು ಮೀನಿಗೂ
ಒಂದೊಂದು ಹೆಸರಿಟ್ಟು, ಗಾಳ ಹಾಕದೆ
ಮೀನು ಎಗರಿ ಎಗರಿ ಹೊರ ಬರುವುದು
ನೀರಿನ ಹಂಗಿಲ್ಲದೆ ಇನ್ನೊಂದು ಎದೆಗೆ ಹಾರಿ ಕೂರಲು

ಮನದ ಒಳಗಿನ ಗಾಳಿ, ಸುಂಯಿ ಗುಟ್ಟುವಾಗ
ತಂಗಾಳಿಯೊಂದು, ಸುಮ್ಮನೆ ಬಂದು ಅಪ್ಪಿದ ಹಾಗೆ
ಮಾತೆಲ್ಲ ಮರೆತು, ಮೌನವೂ ಕರಗಿ, ಭಾವ ಜಿನುಗಿ
ಮಳೆ ಬಿದ್ದು, ನೆಲ ತಣಿಯೊ ಹಾಗೆ

ಹಣತೆಗೆ ಗೊತ್ತು, ಬೆಂಕಿ ತನ್ನನು ಸುಡುವುದೆಂದು
ಆದರೂ ಪ್ರೇಮ, ಬೆಂಕಿಯ ಮೇಲೆ, ಅದರ ಬೆಳಕಿನ ಮೇಲೆ,
ಹಣತೆಯ ಜೀವದೊಳಗೆ, ಹುಟ್ಟಿದ ಪ್ರೇಮದ ಬೆಂಕಿಗೆ
ಬೇಕು ಒಲವಿನ ಎಣ್ಣೆಯ ಓರತೆ, ಎಲ್ಲರಿಗೂ ಪ್ರೇಮ ಪಸರಿಸಲು

ಕಣ್ಣಿರದ ಕಪ್ಪು ಹುಡುಗಿಗೂ, ಕಣ್ಣಿರುವ ಬಿಳಿ ಹುಡುಗನಿಗೂ
ಪ್ರೇಮವಾದರೆ, ಅದು ಪ್ರೇಮ, ಬರಿಯ ಪ್ರೇಮ,
ಪ್ರೇಮಕ್ಕೆ ಯಾವುದರ ಹಂಗಿಲ್ಲ,,,,,,, ಹಾಗೆಂದು
ಪ್ರೇಮಕ್ಕೆ ದೇಹವೇ ಬೇಕೆಂದಲ್ಲ,

ಆತ್ಮದೊಳಗಿನ ಆತ್ಮ “ಪ್ರೇಮ”

Comments