ಆದರ್ಶ ಅಧಿಕಾರಿ
ಇಂದು ಆದರ್ಶ ಅಧಿಕಾರಿ ಡಾ. ಆನಂದ್ (ಭಾ.ಆ.ಸೇ.) ಇವರ ಬಗ್ಗೆ ತಿಳಿದುಕೊಳ್ಳೋಣ. ನನ್ನ ಹುದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರ ಅಧೀನದಲ್ಲಿ ಬರುತ್ತದೆ. ಈಗ ಬರೆಯುತ್ತಿರುವ ಲೇಖನ ಆದರ್ಶ ಅಧಿಕಾರಿ ಡಾ. ಆನಂದ್ ಕುರಿತು (ಭಾರತೀಯ ಆಡಳಿತ ಸೇವೆ.) ಇವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಂ.ಬಿ.ಬಿ.ಎಸ್, ಎಂ.ಡಿ, ಮಾಡಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಆಡಳಿತ ಸೇವೆ ಹುದ್ದೆಗೆ ಆಯ್ಕೆಯಾಗಿ, ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ 33 ವರ್ಷ ಸೇವಾವಧಿಯಲ್ಲಿ ಅನೇಕ ಅಧಿಕಾರಿಗಳ ಅಧೀನದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ನನ್ನ ವಿವೇಚನೆಗೆ ಅನುಸಾರ ಅಧಿಕಾರಿಗಳನ್ನು ಮೂರು ಬಗೆಯಾಗಿ ಗುರುತಿಸಿಕೊಂಡಿದ್ದೇನೆ.
1. ಮೊದಲನೇ ವರ್ಗ ಸಿಟ್ಟಿನ ಅಧಿಕಾರಿ : ತಮ್ಮ ಅಧೀನದ ಇಲಾಖೆಯಲ್ಲಿ ಬರುವ ಇಲಾಖೆಗಳ, ಸಾರ್ವಜನಿಕರ ಕೆಲಸದಲ್ಲಿ , ದೋಷ , ಕೊರತೆ ನೋಡಿ ಸರಿಪಡಿಸುವ ವರ್ಗ. ಈ ವರ್ಗದ ಅಧಿಕಾರಿಗಳು ಸದಾ ಕೋಪ, ನಿಷ್ಠುರ ಸ್ವಭಾವದವರು. ಇವರ ಮುಖದಲ್ಲಿ ಶಾಂತಿ ಸಮಾಧಾನವಿಲ್ಲ. ತಮ್ಮ ಅಧೀನದ ಸಿಬ್ಬಂದಿಗಳು ಶಾಂತಿ, ಸಮಾಧಾನದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಇವರ ನಿಷ್ಟುರದ ಮಾತುಗಳಿಂದ ಅಧೀನದ ಸಿಬ್ಬಂದಿಗಳೂ ಅಶಾಂತಿಯಿಂದ ಕೆಲಸ ಮಾಡುವುದರಿಂದ ಬಹಳಷ್ಟು ತಪ್ಪುಗಳಾಗುವ ಸಂದರ್ಭ ಅಧಿಕ. ಇದರಿಂದ ಮತ್ತಷ್ಟು ಅಸಮಾಧಾನವಾಗುತ್ತದೆ. ಯಾರು ದೋಷಗಳನ್ನು, ಕೊರತೆಗಳನ್ನು ನೋಡುತ್ತಾರೋ ಅವರಿಗೆ ಸಹಜವಾಗಿ ಶಾಂತಿ ಸಮಾಧಾನ ಇರುವುದಿಲ್ಲ. ದ್ವೇಷ, ಕೋಪ ಮನೆ ಮಾಡಿರುತ್ತದೆ. ಅದೇ ರೀತಿ ದ್ವೇಷದಿಂದ ನೋಡಿದಾಗ ಒಳ್ಳೆಯದು ಕಾಣದೆ ಕೇವಲ ದೋಷ ಮತ್ತು ಕೊರತೆಗಳು ಕಾಣುತ್ತವೆ. ಹಾಗಾಗಿ ಇವರು ದೋಷಗಳನ್ನು ಕೊರತೆಗಳನ್ನು ನೋಡಿ ಕೋಪಗೊಳ್ಳುತ್ತಾರೆ ಅಥವಾ ದೋಷ, ಕೊರತೆಗಳನ್ನು ನೋಡಿದಾಗ ಸಹಜವಾಗಿ ದ್ವೇಷ, ಕೋಪ ಉಂಟಾಗುತ್ತದೆ. ಇದು ತತ್ವ. ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚು.
2. ಎರಡನೇ ವರ್ಗ ದುರಾಸೆ ಅಧಿಕಾರಿಗಳು: ಇವರು ಆಮಿಷಕ್ಕೆ ಒಳಗಾಗಿ ಕೆಲಸ ಮಾಡುವವರು. ಇವರು ಅಧಿಕಾರ ದರ್ಪ ತೋರಿಸುವುದು. ದುರ್ಮಾರ್ಗದಿಂದ ಹಣ ಗಳಿಸುವುದು. ಇಂತಹವರು ತಮ್ಮ ಸಮೀಪ ಸಿಬ್ಬಂದಿ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ಇವರ ವ್ಯವಹಾರ ಬಹಿರಂಗವಾಗುತ್ತದೆ ಅಂತ. ಇವರ ಸಮೀಪ ಇವರ ಆಮಿಷ ಪೂರೈಸುವ ಸಿಬ್ಬಂದಿಗಳ ಒಡನಾಟ ಇರುತ್ತದೆ. ಆದರೆ ಡಾಕ್ಟರ್ ಆನಂದ್ ಸರ್ ಅವರು ಇದಕ್ಕೆ ವ್ಯತರಿಕ್ತ. ಇದಕ್ಕೆ ಒಂದು ಘಟನೆ. ನಾನು ಪ್ರಭಾರ ಉಪ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ನಡೆದ ಘಟನೆ. ನನಗೆ ಆದೇಶ ನೀಡುವಾಗ ಹೇಳಿದ್ದು, ನಿಮ್ಮ ಮೇಲೆ ವಿಶ್ವಾಸವಿದೆ ಅದಕ್ಕಾಗಿ ಪ್ರಭಾರ ನೀಡಿದ್ದೇನೆ ಅಂತ ಹೇಳಿದ್ದು. ಇದರಿಂದ ಪ್ರತೀ ಬಾರಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದೆ. ಎಲ್ಲಿ ವಿಶ್ವಾಸಕ್ಕೆ ಧಕ್ಕೆಯಾಗಿಬಿಡುತ್ತೊ ಅನ್ನುವ ಭಯ ಕಾಡುತ್ತಿತ್ತು. ಏಕೆಂದರೆ ವಿಶ್ವಾಸದಂತಹ ಸಂಪತ್ತು ಬೇರೊಂದಿಲ್ಲ. ಎರಡನೇ ಘಟನೆ. ನಾನು ಪ್ರಭಾರ ಉಪ ಕಾರ್ಯದರ್ಶಿಯಾಗಿ ಜವಾಬ್ದಾರಿ ತೆಗೆದುಕೊಂಡ ದಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭಡ್ತಿ ಆದೇಶಗಳಿಗೆ ಸಹಿಯಾಯಿತು. ಭಡ್ತಿ ಪಡೆದ ಸಿಬ್ಬಂದಿ ಹಾರ ತಂದು ಡಾ. ಆನಂದ್ ಸರ್ ಅವರಿಗೆ ಸನ್ಮಾನಿಸಲು ಹೊರಗೆ ನಿಂತಿದ್ದರು. ಮಾನ್ಯರು ತಮ್ಮ ಪಿಎ ಮೂಲಕ ಈ ವಿಷಯ ತಿಳಿದಾಗ, ಅವರು ಹಾಗೆ ಹೋಗಲು ಹೇಳಿದರು. ಕೊನೆಗೆ ಹಾರ ಹಾಕುವುದಿಲ್ಲ, ಮಾತನಾಡುತ್ತೇವೆ ಎಂದಾಗ, ಆಯ್ತು ಎಂದು ಕರೆದರು. ಶುಭ ಹಾರೈಸಿ ಕಳುಹಿಸಿದರು. ಇದು ನನ್ನ ಕಣ್ಮುಂದೆ ಇದೆ. ಹಾರವನ್ನು ಕೂಡ ಸ್ವೀಕರಿಸದ ಸ್ವಚ್ಛ ಹಸ್ತದ ಅಧಿಕಾರಿ.
3. ಮೂರನೆಯ ವರ್ಗ ಶಾಂತಿ ಸಮಾಧಾನದಿಂದ ಕೆಲಸ ಮಾಡುವ ಅಧಿಕಾರಿ ವರ್ಗ: ತಮ್ಮ ಅಧೀನದ ಸಿಬ್ಬಂದಿಗಳ ಮುಖದಲ್ಲಿ ಶಾಂತಿ ಸಮಾಧಾನದಿಂದ ಕೆಲಸ ಮಾಡಿಸುವ ವರ್ಗ ಡಾಕ್ಟರ್ ಆನಂದ್ ರವರು. ಈ ವರ್ಗದ ಅಧಿಕಾರಿ. ಇವರಿಗೆ ಕೋಪ ಬಂದಿದ್ದನ್ನು ಜಿಲ್ಲೆಯ ಯಾವುದೇ ಸಿಬ್ಬಂದಿ ಕಂಡಿಲ್ಲ. ಬೆಳಗ್ಗೆಯಿಂದ ಕೆಲವೊಮ್ಮೆ ರಾತ್ರಿ ಹತ್ತು ಗಂಟೆವರೆಗೂ ಕೆಲಸ ನಿರ್ವಹಿಸುತ್ತಾರೆ. 10:00 ಗಂಟೆಯ ಸಮಯದಲ್ಲೂ ಮುಖದಲ್ಲಿ ಆದೇ ಶಾಂತಿ, ಸಮಾಧಾನ, ಹಸನ್ಮುಖ. ಇದಕ್ಕೆ ಕಾರಣ ಏನು ಅಂತ ಬಹಳ ದಿನ ಚಿಂತಿಸಿದೆ. ಆಗ ನನಗೆ ಕೆಲವೊಂದು ವಿಚಾರ ಹೊಳೆಯಿತು.
1. ಇವರು ಇರುವುದರಲ್ಲಿ ಒಳ್ಳೆಯದನ್ನು ನೋಡುವ ಸ್ವಭಾವ. ದೋಷ ನೋಡುವುದಿಲ್ಲ ಅಂತ ಅಲ್ಲ. ಒಳ್ಳೆಯತನದಿಂದ ದೋಷ ಸರಿಪಡಿಸುವ ವಿಧಾನ ಅದ್ಭುತ. ಒಳ್ಳೆಯದನ್ನು ಗುರುತಿಸಿ ಪ್ರಸಂಶೆ ಮಾಡಿ, ಅದರ ಆಧಾರದಲ್ಲಿ ದೋಷ ಸರಿಪಡಿಸಲು ಕ್ರಮ ವಹಿಸುತ್ತಾರೆ. ಆಗ ಅಧೀನ ಸಿಬ್ಬಂದಿ ಉತ್ಸಾಹದಿಂದ ಶಾಂತಿ, ಸಮಾಧಾನ ಕಳೆದುಕೊಳ್ಳದೆ, ಕೆಲಸ ಮಾಡುವಂತಹ ಸನ್ನಿವೇಶ ಸೃಷ್ಟಿ ಆಗುತ್ತದೆ. ಇದಕ್ಕೆ ಉದಾಹರಣೆಯಾಗಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ನಿರ್ವಹಿಸಿದ ರೀತಿ. ದಕ್ಷಿಣ ಕನ್ನಡ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಎರಡನೇ ಸ್ಥಾನ ಬಂದಿತ್ತು. ಅದಕ್ಕೆ ಎಲ್ಲಾ ಅಧಿಕಾರಿಗಳಿಗೂ, ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೂ, ಪ್ರಶಂಸೆ, ಅಭಿನಂದನೆಯ ಮಾತುಗಳನ್ನು ಆಡಿ, ಹೇಗೆ ಮಾಡಿದರೆ ಒಂದನೇ ಸ್ಥಾನಕ್ಕೆ ಬರಬಹುದು ಅನ್ನುವುದರ ಕುರಿತು ವಿಶ್ಲೇಷಣಾತ್ಮಕವಾಗಿ ಹೇಳಿದರು. ಉತ್ತರ ಪತ್ರಿಕೆ ವಿಶ್ಲೇಷಣೆ ಹೇಗೆ ಮಾಡಬೇಕು?. ಕಲಿಕೆಯಲಿ ಹಿಂದುಳಿದವರಿಗೆ ಏನು ಮಾಡಬೇಕು?. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಜಿಲ್ಲಾ ಪಂಚಾಯತ್ ನ ವಿ.ಸಿ.ರೂಂ ಬಳಸಿಕೊಂಡು ಆಯ್ದ ಶಿಕ್ಷಕರಿಂದ ಸಂಜೆ ವೇಳೆ ಬೋಧನೆ ಮಾಡಿಸಲು ವ್ಯವಸ್ಥೆ ಮಾಡಿರುತ್ತಾರೆ. ಅದರ ಸದುಪಯೋಗ ಮಾಡಿಕೊಳ್ಳಲು ಶಾಲೆಗಳಲ್ಲಿ ಸೌಲಭ್ಯ ಇಲ್ಲದ ಕಡೆ, ತಮ್ಮ ಅಧೀನದ ಗ್ರಾಮ ಪಂಚಾಯಿತಿನಲ್ಲಿ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ.. ಇನ್ನೊಂದು ಉದಾಹರಣೆ ಗ್ರಾಮ ಪಂಚಾಯತ್ ಪ್ರಗತಿ ಪರಿಶೀಲನೆ ಸಭೆಯಲ್ಲಿ , ತಾವು ಭೇಟಿ ನೀಡಿದ ಗ್ರಾಮ ಪಂಚಾಯಿತಿನಲ್ಲಿ ಯಾವುದಾದರೂ ವಿಶೇಷತೆ ಅಥವಾ ಸಾಧನೆ ಇದ್ದರೆ, ಅದನ್ನು ಪ್ರಪಂಶಿಸಿ, ಅದರ ಆಧಾರದಲ್ಲಿ ಬೇರೆ ಕಡೆಯ ಗ್ರಾಮ ಪಂಚಾಯಿತಿ ಯ ದೋಷ ಸರಿಪಡಿಸಲು ಸೂಚನೆ ನೀಡುತ್ತಿದ್ದರು. ಬರೀ ಸೂಚನೆಯಲ್ಲ , ಅನು ಪಾಲನೆಯು ಕೂಡ ಅಷ್ಟು ಬಿಗಿ. ಸರಿಪಡಿಸುವ ಜವಾಬ್ದಾರಿ ವಹಿಸಿದವರು ಕಂಡಲ್ಲಿ, ಅದರ ಪ್ರಗತಿಯ ವಿಶ್ಲೇಷಣೆ ಮಾಡುವುದು ಅವರ ವಿಶೇಷತೆ. ಯಾರು ದೋಷಗಳನ್ನು, ಕೊರತೆಗಳನ್ನು ನೋಡುವುದಿಲ್ಲವೋ ಅವರು ಸಂತೋಷ ಶಾಂತಿಯಿಂದ ಇರುತ್ತಾರೆ ಅಥವಾ ಶಾಂತಿಯಿಂದ ನೋಡಿದಾಗ ದೋಷ ಕೊರತೆಗಳು ಕಾಣುವುದಿಲ್ಲ. ಇದು ತತ್ವ.
2. ಇವರ ಇನ್ನೊಂದು ಗುಣ ವಿಷಯದ ಆಳಕ್ಕೆ ಇಳಿಯುವುದು. ಒಮ್ಮೆ ಜಿಲ್ಲಾ ಮಟ್ಟದ ಮೊಟ್ಟೆ ಬಿಡುಗಡೆ ಸಮಾರಂಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಇಲ್ಲಿ ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮದ ಉದ್ಘಾಟನೆ ಮಾನ್ಯ ಆನಂದ್ ಸರ್ ರವರು ಉದ್ಘಾಟನೆ ನೆರವೇರಿಸಿ, ತಮ್ಮ ಕೈಯಾರ ಎಲ್ಲ ಮಕ್ಕಳಿಗೂ ಮೊಟ್ಟೆ ಬಡಿಸಿದರು ಮತ್ತು ಮಕ್ಕಳಿಗೆ ಬಡಿಸುವ ಊಟವನ್ನು ಮಾಡಿದರು. ಆಗ ಮಕ್ಕಳನ್ನು ಕುರಿತು ಮಾತನಾಡುವಾಗ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಬಂದ ಉತ್ತರದ ಮೇಲೆ ಉಪ ಪ್ರಶ್ನೆಗಳನ್ನು ಹಾಕಿದರು. ಕೊನೆಗೆ ಹೇಳಿದರು ವಿಷಯದ ಆಳಕ್ಕೆ ಹೋಗಬೇಕಾದರೆ ಹೇಗೆ ಪ್ರಶ್ನೆಗಳನ್ನು, ಉಪ ಪ್ರಶ್ನೆಗಳನ್ನು, ನಮಗೆ ನಾವೇ ಕೇಳಿಕೊಳುತ್ತಾ ಉತ್ತರ ಹುಡುಕಬೇಕು?. ಅನ್ನುವುದನ್ನು ವಿವರಿಸಿದರು. ಈಗ ಎಲ್ಲರಲ್ಲೂ ಮೊಬೈಲ್ ಇದೆ google ನಲ್ಲಿ ಪ್ರಶ್ನೆ ಹಾಕಿದರೆ ಉತ್ತರ ಸಿಗುತ್ತದೆ. ಹೇಗೆ ಪ್ರಶ್ನೆಗಳು, ಉಪ ಪ್ರಶ್ನೆಗಳ ಮೂಲಕ ಆಳ ಜ್ಞಾನವಾಗುತ್ತದೆ ಎಂದು ಹೇಳಿದರು. ಅದಕ್ಕೆ ಉದಾಹರಣೆಯಾಗಿ ಮೊಟ್ಟೆಗೆ ಸಂಬಂಧಪಟ್ಟ ಪ್ರಶ್ನೆಗಳು, ಅದರ ಉಪಯೋಗದ ಪ್ರಜ್ಞೆಗಳು ಕೇಳಿದರು .
ನಾನು ಅದೃಷ್ಟವಶಾತ್ ಅವರ ಕೃಪೆಯಿಂದ ಮೂರು ತಿಂಗಳು ಪ್ರಭಾರ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಸೌಭಾಗ್ಯ ಒದಗಿತ್ತು. ಆಗ ಕಡತ ಮಂಡನೆಗೆ ಹೋದಾಗ, ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತೆ ತಯಾರು ಮಾಡಿಕೊಂಡು, ಅದಕ್ಕೆ ಆಧಾರ, ದಾಖಲೆ ಇಟ್ಟುಕೊಂಡು ಹೋಗಬೇಕಿತ್ತು. ಅದೇ ಹಸನ್ಮುಖದಿಂದ, ಶಾಂತಿಯಿಂದ, ಸಮಾಧಾನದಿಂದ ಪರಿಶೀಲಿಸಿ, ಹಲವು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು ಅಂಗೀಕಾರ ನೀಡುತ್ತಿದ್ದರು. ಯಾವುದೇ ಕಡತವನ್ನು ಅವಸರದಿಂದ ಮುಗಿಸುತ್ತಿರಲಿಲ್ಲ. ಹಾಗೆಯೆ ಯಾವ ಕಡತವು ಟೇಬಲ್ ಮೇಲೆ ಉಳಿಯುತ್ತಿರಲಿಲ್ಲ. ತಪ್ಪಾದರೆ ಅದೇ ನಗುಮುಖದಿಂದ ಹೇಗೆ ಮಾಡಬೇಕು?. ದಾಖಲೆ ಇಂತ ಕಡೆ ಇದೆ. ಹೀಗೆ ಮಾಡಿಕೊಂಡು ಬನ್ನಿ ಎಂದು ಹೇಳುತ್ತಿದ್ದರು. ಕಡತಗಳನ್ನು ಪದೇಪದೇ ಅಲೆದಾಡಿಸುವ ರೀತಿ ಮಾಡುತ್ತಿರಲಿಲ್ಲ. ಇದರಿಂದ ಅವರ ಅಧೀನ ಸಿಬ್ಬಂದಿಗಳಲ್ಲಿ ಅವರ ಬಳಿ ಹೋಗುವುದೆಂದರೆ ಎಲ್ಲರಿಗೂ ಸಂತೋಷವೆ. ಯಾರಿಗೂ ಭಯ ಆತಂಕ ಇರುತಿರಲಿಲ್ಲ .
3. ಕೆಲಸದಲ್ಲಿ ತನ್ಮಯತೆ: ಸಾರ್ವಜನಿಕರು ಎಷ್ಟೇ ಜನ ಇರಲಿ, ಒಬ್ಬರ ವಿಚಾರ ಚರ್ಚಿಸಲು ಶುರುಮಾಡಿದರೆ ಅದು ಮುಕ್ತಾಯವಾಗುವವರೆಗೂ ಬೇರೆ ಕಡೆ ಲಕ್ಷ್ಯ ಇಲ್ಲ. ಅಷ್ಟು ಆಳವಾಗಿ, ತನ್ಮಯತೆಯಿಂದ ವಿಚಾರಿಸಿ, ಪರಿಹಾರ ಸೂಚಿಸುವುದು. ಅದೇ ರೀತಿ ಕಡತ. ಒಂದು ಕಡತ ಹಿಡಿದರೆ ಅದರಲ್ಲೇ ತನ್ಮಯರಾಗಿಬಿಡುತ್ತಾರೆ. ಪಾತಂಜಲ ಮಹರ್ಷಿ ಸಂಯಮದ ಬಗ್ಗೆ ಯೋಗ ಶಾಸ್ತ್ರದಲ್ಲಿ ಹೇಳುತ್ತಾರೆ. ಧ್ಯಾನ, ಧಾರಣ ಮತ್ತು ಸಮಾಧಿ ಅನುಸರಿಸಿದರೆ ಅದು ಸಂಯಮ ಎಂದು. ಇದನ್ನು ಸರಳವಾಗಿ ಹೇಳಬೇಕೆಂದರೆ ನಮ್ಮನ್ನೇ ನಾವು ಮರೆತು, ಜಗತ್ತನ್ನು ಮರೆತು, ಮನಸ್ಸು ಒಂದು ವಿಷಯದಲ್ಲಿ ಮಗ್ನವಾದರೆ, ಮನಸ್ಸಿನ ತುಂಬಾ ಅದೇ ವಿಷಯ ತುಂಬಿಕೊಂಡರೆ, ಆ ವಿಷಯವೇ ತಾನಾದರೆ. ಉಪರಾಗ ಎಂದು ಪಾತಂಜಲ ಮಹರ್ಷಿ ಕರೆದನು. ಈ ಸ್ಥಿತಿಗೆ ಸಂಯಮ ಎನ್ನುವರು. ಮನಸ್ಸು ಆ ಸ್ಥಿತಿಯಲ್ಲಿ ಬೇರೆ ಯಾವುದೇ ಸುಖದ, ದುಃಖದ ತರಂಗಗಳು ಮನಸ್ಸಿನಲ್ಲಿ ಏಳದೆ ಇರುವುದರಿಂದ ಮನಸ್ಸು ಶಾಂತಿ, ಸಮಾಧಾನದಿಂದಿರುತ್ತದೆ. ಶಾಂತಿ ಎಂದರೆ ಸುಖ ದುಃಖ ಇಲ್ಲದ ಸ್ಥಿತಿ. ಆ ಸ್ಥಿತಿಯಲ್ಲಿ ಉಂಟಾಗುವ ವೃತ್ತಿ ಆನಂದ ಸಂತೋಷ. ಬಹುಶಃ ಹೆಸರಿಗೆ ತಕ್ಕಂತೆ ಇದೆ. ಈ ರೀತಿಯ ಮಗ್ನತೆಗೆ ಬೇಕಾಗಿರುವುದು ಕೆಲಸದ ಬಗ್ಗೆ ಪ್ರೇಮ ಮತ್ತು ಜಗತ್ತಿನ, ಜನರ, ವಸ್ತುಗಳ ಮೇಲೆ ಇರುವ ಪ್ರೇಮ. ಪ್ರೇಮ ಇದ್ದಾಗ ಮಾತ್ರ ಮಗ್ನತೆ ಸಾಧ್ಯ.
ಈ ಲೇಖನ ಬರೆದ ಉದ್ದೇಶ ನನ್ನನ್ನು ಗುರುತಿಸಿ, ಅವಕಾಶ ನೀಡಿದ್ದರು ಅಂತ ಅಲ್ಲ. ನೀವು ಶಾಂತಿ, ಸಮಾಧಾನದಿಂದ ಹಸನ್ಮುಖರಾಗಿ ಜೀವನ ಸಾಗಿಸಬೇಕಾದರೆ ಜೀವಂತ ಉದಾರಣೆ ನೀಡಿದ್ದೀನಿ. ಇದನ್ನು ಓದಿ, ಇದರಲ್ಲಿ ಇರುವ ಒಳ್ಳೆ ಅಂಶಗಳನ್ನು ನೀವು ಅಳವಡಿಸಿಕೊಂಡು, ನೀವು ಶಾಂತಿ ಸಮಾಧಾನ ಮತ್ತು ಹಸನ್ಮುಖರಾಗಿ ಜೀವನ ಸಾಗಿಸಿ. ಇದಕ್ಕೆ ಬೇಕಾಗಿರುವುದು ಪ್ರೇಮ, ಕೆಲಸದಲ್ಲಿ ಮಗ್ನತೆ, ತಿಳಿದುಕೊಳ್ಳುವ ಹಂಬಲ ಅಲ್ಲವೇ?
(ಚಿತ್ರದಲ್ಲಿ ಡಾ. ಆನಂದ್ ಅವರು ಕುಟುಂಬದ ಜತೆ)
ಚಿತ್ರ - ಬರಹ - ಎಂ.ಪಿ. ಜ್ಞಾನೇಶ್, ಮಂಗಳೂರು