ಆಧುನಿಕ ಆತ್ಮಹತ್ಯೆಗಳು

ಆಧುನಿಕ ಆತ್ಮಹತ್ಯೆಗಳು

ಜಗತ್ತು ವೇಗ ಪಡೆದಂತೆ ತೋರುತ್ತಿದೆ. ವರ್ಷ ತಿಂಗಳಂತೆ, ತಿಂಗಳು ವಾರದಂತೆ, ವಾರ ದಿನದಂತೆ ಸಾಗುತ್ತಿರುವ ಅನುಭವ. ಉದಯ ಮತ್ತು ಅಸ್ತಮದ ಮಧ್ಯೆ ಸಮಯವೇ ಸಿಗದೆ ಜನರ ಓಡಾಟ. ಎಲ್ಲೂ ಬಿಡುವಿಲ್ಲ. ವೇಗದೊಂದಿಗೆ ಕೆಡುತ್ತಿರುವ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವಾಗಿದೆ. ಪರಿಣಾಮವಾಗಿ ಕುಸಿದು ಸಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ವೇದಿಕೆಯ ಮೇಲೆ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದ ಸುದ್ದಿ ಕೇಳುತ್ತಿದ್ದೇವೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೃದಯ ಸ್ತಂಭನದಿಂದ ಕುಸಿದು ಪ್ರಾಣ ಬಿಡುತ್ತಿದ್ದಾರೆ. 

ತಟ್ಟನೆ ಬರುವ ಸಾವಿಗೆ ವಯಸ್ಸಿನ ಮಿತಿಯಿಲ್ಲ. ಬಡವ - ಶ್ರೀಮಂತ ಎಂಬ ಭೇದವಿಲ್ಲ. ಜಾತಿಯ ಪರಿಧಿಯೂ ಇಲ್ಲ. ಹಿಂದಿನ ಕಾಲದಲ್ಲಿ ತೀವ್ರವಾದ ಸೋಂಕು ಇಲ್ಲವೇ ಸಾಂಕ್ರಾಮಿಕ ರೋಗಗಳಿಂದ ಜನ ಸಾಯುತ್ತಿದ್ದದ್ದು ಸತ್ಯ. ಇಂದು ವೈದ್ಯಕೀಯ ಲೋಕದ ಆವಿಷ್ಕಾರಗಳು ಅವುಗಳನ್ನು ತಡೆಗಟ್ಟಲು ಸಮರ್ಥವಾಗಿದೆ. ಆದರೆ ಆಧುನಿಕ ಯುಗದ ಸವಾಲಾಗಿರುವ ಇಂದಿನ ಸಾವುಗಳಿಗೆ ವೈದ್ಯಕೀಯ ಲೋಕವೇ ನಿರುತ್ತರವಾಗಿದೆ. 

ಹೃದಯ ಸಂಬಂಧಿ ರೋಗದಿಂದ ಇಂದು ಜಗತ್ತಿನಲ್ಲಿ ವಾರ್ಷಿಕ 17.9 ಮಿಲಿಯನ್ ಮಂದಿ ಪ್ರಾಣಬಿಡುತ್ತಿದ್ದಾರೆ. 2020ರಲ್ಲಿ ಭಾರತ ಸುಮಾರು 4.77 ಮಿಲಿಯನ್ ಸಾವಿಗೆ ಸಾಕ್ಷಿಯಾಗಿದೆ. ನಮ್ಮ ರಾಜ್ಯದಲ್ಲಿ ವರ್ಷಕ್ಕೆ 96,150 ಹೃದಯ ಸಂಬಂಧಿ ಸಾವುಗಳು ಆಘಾತಕಾರಿ ಅಂಶವಾಗಿದೆ. ಮಧುಮೇಹ ಸಮಾಜದ ಬೆನ್ನೆಲುಬನ್ನೇ ದುರ್ಬಲಗೊಳಿಸುತ್ತಿದೆ. ಜಗತ್ತಿನಲ್ಲಿ 422 ಮಿಲಿಯನ್ ಮಧುಮೇಹ ರೋಗಿಗಳಿರುವ ಬಗ್ಗೆ ಅಂಕಿಅಂಶಗಳು ಬೆಳಕು ಚೆಲ್ಲುತ್ತದೆ. ಸುಮಾರು 1.5 ಮಿಲಿಯನ್ ಸಾವುಗಳು ಪ್ರತಿವರ್ಷ ದಾಖಲಾಗುತ್ತಿದೆ. ಇನ್ನು ಕ್ಯಾನ್ಸರ್ ಅಂತೂ ಭಯಾನಕವಾಗಿ ಮಾನವ ಕುಲವನ್ನು ಕಾಡುತ್ತಿದೆ. 2020 ರಲ್ಲಿ ನಮ್ಮ ದೇಶದಲ್ಲಿ 14.61 ಲಕ್ಷ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿದ್ದು, ಅದೇ ಕಾರಣಕ್ಕಾಗಿ 8 ಲಕ್ಷ ಜನ ತನ್ನ ಪ್ರಾಣ ತೆತ್ತಿರುವುದು ವಿಷಾದನೀಯ.

ಜಾತಿ- ಧರ್ಮ, ದೇಶ- ವಿದೇಶ, ಮೇಲು- ಕೀಳು, ಬಡವ- ಬಲ್ಲಿದ ಎಂಬ ವಿಚಾರಕ್ಕಿಂತಲೂ ಭಯಾನಕವಾಗಿ ಕಾಡುತ್ತಿರುವ ಈ ಸಾವುಗಳು, ಭವಿಷ್ಯದಲ್ಲಿ ಮತ್ತಷ್ಟು ಭಯಾನಕವಾಗಲಿದೆ. ನಮ್ಮ ಮಕ್ಕಳ ಭವಿಷ್ಯ ಪ್ರಜ್ಞಾವಂತ ಸಮಾಜದಲ್ಲಿ ಭಯ ಹುಟ್ಟಿಸುತ್ತಿದೆ. ಬಹುತೇಕ ಅಂಶಗಳನ್ನು ಗಮನಿಸಿದಾಗ, ಈ ಎಲ್ಲಾ ಸಾವಿಗೆ ನಮ್ಮ ಆಹಾರ ಪದ್ಧತಿಯೇ ಕಾರಣವೆಂಬುವುದು ಸ್ಪಷ್ಟ. ನಮ್ಮ ದಿನ ನಿತ್ಯದ ಆಹಾರ ಕ್ರಮಕ್ಕೆ ಲಗಾಮಿಲ್ಲವಾಗಿದೆ. ನಾಲಗೆಯು ನಮ್ಮ ದೇಹವನ್ನು ಸೋಲಿಸುತ್ತಿದೆ. ಮುಖ್ಯವಾಗಿ ಸ್ವಸ್ಥ್ಯ ಸಮಾಜಕ್ಕಾಗಿ ಐದು ಬಿಳಿ ವಿಷ (5 white poisons) ಗಳನ್ನು ವರ್ಜಿಸುವುದು ಅನಿವಾರ್ಯವಾಗಬಹುದು. ಸಕ್ಕರೆ, ಉಪ್ಪು, ಹಾಲು, ಮೈದಾ ಮತ್ತು ವೈಟ್ ರೈಸ್ ಗಳೇ ಜೀವ ಹಿಂಡುತ್ತಿರುವ ಆ ಬಿಳಿ ವಿಷಗಳು. ಸಕ್ಕರೆ ನಾಲಗೆಯ ರುಚಿಗೆ ಅನಿವಾರ್ಯವಾಗಿ ಕಂಡರೂ ಅದು ದೇಹವನ್ನು ಛಿದ್ರಗೊಳಿಸುತ್ತಿದೆ. ಪ್ಯಾಟಿ ಲಿವರ್ (Fatty Liver), ಬೊಜ್ಜು, ರಕ್ತನಾಳ ಸಂಬಂಧಿ ಕಾಯಿಲೆಗಳು, ಮಧುಮೇಹ, ಕ್ಯಾನ್ಸರ್ ಇವೆಲ್ಲಾ ಸಕ್ಕರೆಯೊಂದಿಗೆ ಉಚಿತ ಕೊಡುಗೆಗಳಾಗಿವೆ. ಉಪ್ಪು ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುವುದು ನಿಸ್ಸಂಶಯ. ಕೀಲು ನೋವು, ಮೈ ಊತಗಳಿಗೆ ಬಹುಮುಖ್ಯ ಕಾರಣವೇ ಉಪ್ಪು. ಹಾಲು ಕೂಡಾ ದೇಹಕ್ಕೆ ಸಮಸ್ಯೆಯೊಡ್ಡುವುದು (ಹಸುವಿನ ಹಾಲು ಹೊರತು) ಖಂಡಿತಾ. ಸುಮಾರು 20 ವಯಸ್ಸಿನ ನಂತರ ಹಾಲು ಸೇವನೆ ವರ್ಜಿಸುವುವುದು ಅತ್ಯುತ್ತಮ ಎಂಬ ಅಭಿಪ್ರಾಯವಿದೆ. ಹಾಗಂತ ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ ಬಳಸುವುದರಲ್ಲಿ ತೊಂದರೆಯಾಗದು. ಇನ್ನು ತಿಂದರೆ ಯಾವುದೇ ಪ್ರಯೋಜನವಿಲ್ಲದೆ, ದೇಹಕ್ಕೆ ತೊಂದರೆ ಮಾತ್ರ ಕೊಡ ಬಲ್ಲ ವಸ್ತುವೆಂದರೆ ಮೈದಾ. ಫಿಝಾ, ಬರ್ಗರ್ ಮೊದಲಾದ ಮಾರುಕಟ್ಟೆಯಲ್ಲಿ ಸಿಗುವ ಶೇಕಡಾ 90 ರುಚಿಕರವಾದ ತಿಂಡಿಗಳು ಮೈದಾದಿಂದಲೇ ತಯಾರಾಗುತ್ತಿರುವುದು ಸ್ಪಷ್ಟ. ಅದೇ ರೀತಿ ವೈಟ್ ರೈಸ್ ಬಳಕೆಯೂ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ವರ್ತಮಾನ ಜಗತ್ತಿನಲ್ಲಿ ಸಂಭವಿಸುತ್ತಿರುವ ಸಡನ್ ಡೆತ್ ಗಳ ಬಗ್ಗೆ ಯೋಚಿಸಬೇಕಿದೆ. ಆಹಾರ ಪದ್ಧತಿಯಲ್ಲಿ ತೀವ್ರ ಕಾಳಜಿ ವಹಿಸಬೇಕಿದೆ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕಿದೆ. ನಮ್ಮ ದೇಹವನ್ನು ನಮಗರಿವಿಲ್ಲದಂತೆ ಸಾವಿಗೆ ತಳ್ಳುತ್ತಿರುವ ವಿಷ ವಸ್ತುಗಳು ಅನಿವಾರ್ಯವಲ್ಲ ಎಂಬ ಅರಿವು ಮೂಡಬೇಕಿದೆ. ನಾವು ಸೇವಿಸುತ್ತಿರುವ ಈ ಆಹಾರಗಳ ಮೂಲಕ ಸಾವನ್ನು ಆಹ್ವಾನಿಸುತ್ತಿದ್ದೇವೆ. ಒಂದರ್ಥದಲ್ಲಿ ಇದೊಂದು ಆಧುನಿಕ ಆತ್ಮಹತ್ಯೆಯೇ ಆಗಿದೆ ಎಂದರೆ ತಪ್ಪಾಗದು. ನಾವು ಎಚ್ಚೆತ್ತು ಕೊಳ್ಳಲೇಬೇಕು. ಇಲ್ಲವಾದಲ್ಲಿ ನಾಲಗೆಯನ್ನು ತೃಪ್ತಿ ಪಡಿಸುವುದರಿಂದ ಲಾಭಗಳಿಸುವುದು ವೈದ್ಯಕೀಯ ಲೋಕ ಹೊರತು ಮತ್ತೆಲ್ಲರೂ ಕಳಕೊಳ್ಳುವವರೇ…!

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ