ಆಧುನಿಕ ಮಹಿಳೆ: ಗಂಡ, ಮನೆ, ಮಕ್ಕಳು ಮತ್ತು ಕಚೇರಿ

ಕಾಲದೊಂದಿಗೆ ನಮ್ಮ ಜೀವನ ಶೈಲಿಗಳೂ ಬದಲಾಗಿವೆ. ಒಂದು ಕಾಲದಲ್ಲಿ ನಾವು ಕೃಷಿ ಬಿಟ್ಟು ಮತ್ತೇನನ್ನೂ ಯೋಚಿಸುತ್ತಿರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಎಕ್ರೆಗಟ್ಟಲೆ ಭತ್ತದ ಗದ್ದೆಗಳಿದ್ದವು. ಕೃಷಿಕರಿಗೆ ಸೇರಿದ ತೋಟಗಳು, ಗದ್ದೆಗಳು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದವು. ನಮ್ಮಲ್ಲಿ ಇಷ್ಟು ಸಾಗುವಳಿಯಿದೆ, ಇಷ್ಟು ಮುಡಿ ಅಕ್ಕಿಯಾಗುತ್ತದೆ ಇವೆಲ್ಲಾ ಪ್ರತಿಷ್ಟೆಯ ವಿಷಯಗಳಾಗಿದ್ದವು. ಕಾಲಾನುಕ್ರಮೇಣ ಭತ್ತದ ಜಾಗದಲ್ಲಿ ಅಡಿಕೆ ಬಂತು, ಉಪ ಬೆಳೆಗಳು ಬಂದವು ಗದ್ದೆಗಳು ಕಂಬಳಕ್ಕಷ್ಟೇ ಮೀಸಲಾದವು. ಪೇಟೆಗಳಲ್ಲಿ ಈಗ ಗದ್ದೆ ಇಲ್ಲವೇ ಇಲ್ಲ ಅಂತಹ ಪರಿಸ್ಥಿತಿ ಬಂದಿದೆ. ಇದ್ದರೂ ಸಾಗುವಳಿ ಮಾಡುವವರು ಯಾರು? ಈ ಕೆಲಸದಾಳುಗಳ ಕೊರತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಯಂತ್ರಗಳು ತಕ್ಕಮಟ್ಟಿನ ಕೆಲಸವನ್ನು ಕಮ್ಮಿ ಮಾಡಿದೆಯಾದರೂ ಕೆಲಸದವರ ಕೊರತೆಯಿದೆ.
ಅಂದು ಮಹಿಳೆ ಕೇವಲ ಮನೆಕೆಲಸ ಮಾಡಲು, ಮಕ್ಕಳನ್ನು ಹೆರಲು ಮತ್ತು ಅವರ ಲಾಲನೆ ಪಾಲನೆ ಮಾಡಲು ಎಂಬ ಪರಿಸ್ಥಿತಿ ಇತ್ತು. ಆದರೆ ಇಂದು ಇದು ಬದಲಾಗಿದೆ. ಗಂಡಸರಂತೇ ಹೆಂಗಸರೂ ಮನೆಯಿಂದ ಹೊರ ಬಂದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಾ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಮಹಿಳೆಯರು ಕೇವಲ ಮನೆವಾರ್ತೆಗಳಿಗೇ ಸೀಮಿತರಾಗಿದ್ದರು. ಹೆಣ್ಣು ಹುಟ್ಟಿದರೆನೇ ಸಾಲ ಬಾಧೆ ಕಾಡುತ್ತಿತ್ತು, ಯಾಕೆಂದರೆ ವರದಕ್ಷಿಣೆಯ ಭೂತ ಹಾಗೆ ಜೋರಾಗಿತ್ತು. ಮದುವೆಗೆ ಹುಡುಗ ಹುಡುಕುವುದಕ್ಕಿಂತಲೂ ಕಮ್ಮಿ ವರದಕ್ಷಿಣೆ ತೆಗೆದುಕೊಳ್ಳುವ ವರ ಬೇಕಿತ್ತು. ವಧುವಿನ ಹೆತ್ತವರಿಗೆ ಹುಡುಗ ಏನು ಕಲಿತಿದ್ದಾನೆ, ಏನು ಕೆಲಸ ಮಾಡುತ್ತಿದ್ದಾನೆ ಇದರ ಕಡೆಗೆ ಗಮನವಿರುತ್ತಿದ್ದುದು ಕಮ್ಮಿ. ಅವರ ಗಮನವೆಂದರೆ 'ಬದಿ' (ವರದಕ್ಷಿಣೆ) ಎಷ್ಟು ಬೇಕಂತೆ? ಎಂಬ ವಿಷಯದ ಮೇಲೆಯೇ. ಕಮ್ಮಿ ತಕೊಂಡರೇನು ಬಂತು ಮದುವೆಯಾದ ಒಂದು ತಿಂಗಳಿಗೇ ಮಗಳು ಮನೆಗೆ ವಾಪಾಸ್. ಕೇಳಲು ಹೋದರೆ ಇನ್ನಷ್ಟು ಹಣ ಬೇಕು, ಪೇಟೆಯಲ್ಲೊಂದು ಮನೆ, ಓಡಾಡಲು ಬೈಕ್, ಕಾರು ಯಾವುದಾದರೂ ನೆಪ ಇರುತ್ತಿತ್ತು. ಹೆಣ್ಣಿನ ಹೆತ್ತವರೊಂದಿಗೆ ಹೆಣ್ಣು ಕೂಡಾ ಪಾಪ ಕಣ್ಣೀರಲ್ಲೇ ಕೈ ತೊಳೆಯಬೇಕಾಗುತ್ತಿತ್ತು.
ಹೆಣ್ಣು ಕೇವಲ ಮನೆಗೆ, ಮಕ್ಕಳನ್ನು ನೋಡಿಕೊಳ್ಳಲು ಮಾತ್ರ ಸೀಮಿತ ಎಂಬ ಭಾವನೆ ಕಾಲ ಕಳೆದಂತೆ ಬದಲಾಗುತ್ತಾ ಬಂದಿತು. ಹೆಣ್ಣು ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಳ್ಳಲಾರಂಭಿಸಿದರು. ಕಲಿತು ಉತ್ತಮ ಉದ್ಯೋಗ ಪಡೆದು ನಾವು ಯಾವ ಗಂಡಸರಿಗೂ ಕಮ್ಮಿ ಇಲ್ಲ ಎಂದು ತೋರಿಸಲಾರಂಭಿಸಿದರು. ಇದರಿಂದಾಗಿ ಎಲ್ಲರೂ ವಿದ್ಯಾವಂತರಾದರು. ಆದರೂ ಕೆಲವು ಮಂದಿ ಹಿರಿಯರಿಗೆ ವರದಕ್ಷಿಣೆ ಪಡೆದುಕೊಳ್ಳುವುದು ಒಂದು ಪ್ರತಿಷ್ಟೆಯ ಸಂಗತಿಯೇ ಆಗಿ ಹೋಗಿತ್ತು. ಮೊದಲಿಗೆ ನಗದು, ನಂತರ ಬಂಗಾರ ಮತ್ತು ಈಗೀಗ ಭರ್ಜರಿಯಾಗಿ ನಾವು ಹೇಳಿದ ಕಡೆ, ಕರೆದಷ್ಟು ಮಂದಿಗೆ ಮದುವೆ ಮಾಡಿ ಕೊಡಿ ಎಂದು ತಮ್ಮ ಆಟ ಶುರು ಮಾಡಿದರು. ಮದುವೆಯ ಹಾಲ್ ಬಾಡಿಗೆಯೇ ೨ -೫ ಲಕ್ಷಕ್ಕೆ ಆಗಿದೆ. ಊಟ, ಸಭಾಭವನದ ಡೆಕೋರೇಶನ್ ಖರ್ಚು ಎಲ್ಲಾ ಸೇರಿದ್ರೆ ೧೦-೨೦ ಲಕ್ಷ ದಾಟಬಹುದೇನೋ? ಹೀಗೆ ವಧುವಿನ ಮನೆಯವರು ಹಂತ ಹಂತವಾಗಿಯೇ ತುಳಿತಕ್ಕೆ ಒಳಗಾಗುತ್ತಾ ಬಂದಿದ್ದಾರೆ.
ಆದರೆ ಸಮಯದೊಂದಿಗೆ ಹಲವಾರು ಬದಲಾವಣೆಗಳೂ ಆಗಿವೆ. ಹುಡುಗಿಯರು ಉತ್ತಮ ಕೆಲಸದಲ್ಲಿದ್ದಾರೆ. ತಿಂಗಳ ಸಂಬಳ ಲಕ್ಷಕ್ಕೆ ತಲುಪಿದೆ. ಗಂಡು ಹೆಣ್ಣು ಸಮಾನವಾಗಿ ಬದುಕುವ ಕಾಲ ಬಂದಾಗಿದೆ ಎಂದು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಬದಲಾವಣೆ ದುಡಿಯುವ ಹೆಣ್ಣು ಮಕ್ಕಳ ಡಬಲ್ ಕೆಲಸಕ್ಕೆ ನಾಂದಿಯಾಗಿದೆ ಏನೋ ಎಂಬ ಅನುಮಾನವೂ ಕಾಡುತ್ತಿದೆ.
ಏಕೆಂದರೆ ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಪೆಪ್ಸಿಕೋದಂತಹ ಬೃಹತ್ ಕಂಪೆನಿಯ ಮುಖ್ಯಸ್ಥೆಯಾಗಿದ್ದ ಇಂದ್ರಾ ನೂಯಿಯವರು ಇದೇ ರೀತಿಯ ಅಬಿಪ್ರಾಯದ ಮಾತುಗಳನ್ನು ಆಡಿದರು. ಕಚೇರಿಯಲ್ಲಿ ಕೆಲಸದ ಒತ್ತಡ, ಮನೆಯಲ್ಲಿ ಪತಿ ಮಕ್ಕಳ ಬೇಕು-ಬೇಡಗಳ ನಿರ್ವಹಣೆ, ಮನೆಯವರ ಯೋಗಕ್ಷೇಮದ ಚಿಂತೆ, ಅಡುಗೆ ಕೆಲಸ, ಮನೆಯ ಸ್ವಚ್ಛತೆ...ಹೀಗೆ ಮಹಿಳಾ ಉದ್ಯೋಗಿಗಳನ್ನು ಕಾಡುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಯು ಪೆಪ್ಸಿಕೋದಂಥಹ ಕಂಪೆನಿಯ ಮುಖ್ಯಸ್ಥೆಯಾಗಿದ್ದ ಮಹಿಳೆಗೇ ಕಾಡುವುದಾರರೆ ಸಾಮಾನ್ಯ ಮಹಿಳೆಯರ ಪಾಡೇನು?
ಜಗತ್ತಿನ ಅತ್ಯಂತ ಪ್ರಭಾವಶಾಲಿ ಮಹಿಳೆಯಾದ ಭಾರತ ಮೂಲದ ಇಂದ್ರಾ ನೂಯಿ, ತಮಗೂ ಕಚೇರಿ ಮತ್ತು ಮನೆ ಎರಡನ್ನೂ ನಿಭಾಯಿಸುವುದು ಕಷ್ಟ ಎಂದು ಒಪ್ಪಿಕೊಂಡಿದ್ದಾರೆ. ಮಹಿಳೆ ಎಲ್ಲವನ್ನೂ ತನ್ನಿಷ್ಟದಂತೆಯೇ ನಡೆಸಲು ಸಾಧ್ಯವಿಲ್ಲ. ನಾವು ಹಾಗೆ ಮಾಡಬಲ್ಲೆವು ಎಂಬಂತೆ ನಟಿಸುತ್ತೇವೆ. ನನ್ನನ್ನು ಉತ್ತಮ ತಾಯಿ ಎಂದು ನನ್ನ ಪುತ್ರಿಯರು ಹೇಳುವುದೂ ಕೂಡಾ ಅನುಮಾನ ಎಂದು ನೋವಿನ ಮಾತುಗಳಿಂದ ನೂಯಿ ಹೇಳುತ್ತಾರೆ. ನಾನು ಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಪೋಷಿಸುವ ಪ್ರಯತ್ನದಲ್ಲಿ ಎಷ್ಟೋ ಸಲ ಅಪರಾಧ ಮನೋಭಾವದಿಂದ ಕುಗ್ಗಿ ಹೋಗಿದ್ದೇನೆ. ಕೆಲಸದ ಒತ್ತಡದಲ್ಲಿ ಮಕ್ಕಳಿಬ್ಬರ ಶಾಲಾ ಕಾರ್ಯಕ್ರಮಗಳಿಗೆ ಹಾಜರಾಗದೇ ಇದ್ದುದೂ ನನ್ನಲ್ಲಿ ಬೇಸರ ತರಿಸಿದೆ.
ಇಂದ್ರಾ ನೂಯಿಯವರು ಹೇಳಿದ ಮಾತುಗಳು ಎಲ್ಲಾ ದುಡಿಯುವ ಮಹಿಳೆಯರಿಗೆ ಅನ್ವಯವಾಗುತ್ತವೆ ಎಂದಲ್ಲ ಆದರೆ ಬಹುತೇಕ ಮಂದಿ ಈ ಸಂಕಷ್ಟವನ್ನು ಒಪ್ಪುತ್ತಾರೆ. ಪ್ರತಿದಿನವೂ ಮಹಿಳೆಯರಲ್ಲಿ ಪತ್ನಿಯಾಗಬೇಕೋ ಅಥವಾ ತಾಯಿಯಾಗಬೇಕೋ ಎಂಬ ದ್ವಂದ್ವಗಳು ಕಾಡುತ್ತವೆ. ನಮ್ಮ ಬದುಕಿನ ಹೆಚ್ಚಿನ ಸಮಯ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲೇ ವ್ಯಯಿಸಬೇಕಾಗುತ್ತದೆ. ನಿಮ್ಮ ಮಕ್ಕಳನ್ನು ಬೆಳೆಸಬೇಕಾದ ಸಮಯದಲ್ಲೇ ನೀವು ನಿಮ್ಮ ವೃತ್ತಿಯನ್ನೂ ಬೆಳೆಸಬೇಕಾಗುತ್ತದೆ. ಯೌವನಕ್ಕೆ ಕಾಲಿಡುತ್ತಿರುವ ಮಕ್ಕಳಿಗೂ ಸಾಂಗತ್ಯ ಬೇಕು ಅತ್ತ ಕಡೆ ಮಧ್ಯ ವಯಸ್ಸು ದಾಟುತ್ತಿರುವ ಗಂಡನಿಗೂ ಬೇಕು. ಪೋಷಕರಿಗೂ ವಯಸ್ಸಾಗಿರುತ್ತದೆ. ಅವರನ್ನೂ ನೋಡಿಕೊಳ್ಳ ಬೇಕಾಗುತ್ತದೆ. ಇವೆಲ್ಲಾ ಗೋಜಲಾಟಗಳ ನಡುವೆ ಕೆಲಸಕ್ಕೂ ಸಮಯ ನೀಡ ಬೇಕಾಗುತ್ತದೆ.
ಈ ಎಲ್ಲಾ ಮಾತುಗಳು ಈಗಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಅಂದರೆ ಗಂಡ-ಹೆಂಡತಿ ಇಬ್ಬರೂ ದುಡಿಯಲೇ ಬೇಕಾದ ಕಾರಣಗಳಿಂದ ಮಹತ್ವ ಪಡೆಯುತ್ತವೆ. ಮಹಿಳೆಯರು ಈ ವಿಷಯದಲ್ಲಿ ಗಟ್ಟಿಗರು. ಕೊನೆಗೆ ಇಂದ್ರಾ ನೂಯಿಯವರ ಮಾತಿನೊಂದಿಗೇ ಈ ಲೇಖನ ಮುಗಿಸುತ್ತೇನೆ.
೧೮ ವರ್ಷಗಳ ಹಿಂದೆ ನಿರ್ದೇಶಕ ಮಂಡಳಿಯಲ್ಲಿ ತಮ್ಮನ್ನು ಪೆಪ್ಸಿಕೋ ಮುಖ್ಯಸ್ಥೆಯಾಗಿ ಘೋಷಿಸಿದ ಗಳಿಗೆಯನ್ನು ಅವರು ನೆನಪು ಮಾಡಿಕೊಂಡರು. 'ನಾನು ಆನಂದಪರವಶನಾಗಿದ್ದೆ. ನಾನು ಸಾಗಿ ಬಂದ ಹಾದಿಯನ್ನು ನೋಡಿ. ಅಮೆರಿಕಾದ ಖ್ಯಾತ ಕಂಪೆನಿಯ ಪ್ರಮುಖಳಾಗುವುದು ನನ್ನಲ್ಲಿ ವಿಶೇಷವಾದುದ್ದೇನೋ ಅಡಗಿದೆ’ ಎಂದು ಅಂದುಕೊಂಡಿದ್ದೆ. ಆದರೆ ಈ ದೊಡ್ಡ ಸುದ್ದಿಗೆ ನನ್ನ ಅಮ್ಮನ ಪ್ರತಿಕ್ರಿಯೆ ಏನಿತ್ತು ಗೊತ್ತಾ? ‘ಸುದ್ದಿ ಇರಲಿ, ಸ್ವಲ್ಪ ಹೊರಗೆ ಹೋಗಿ ಹಾಲು ತರುತ್ತೀಯಾ?' ಎಂದರಂತೆ.
(ಮಾರ್ಚ್ ೩ ಅಂತರಾಷ್ಟ್ರೀಯ ಮಹಿಳಾ ದಿನ. ಆ ನೆನಪಿನಲ್ಲಿ ಈ ಲೇಖನ.)
ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು