ಆನ್ಲೈನ್ ಮಾಧ್ಯಮ
ಈ ಲೇಖನ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭ ಗ್ರಂಥಕ್ಕಾಗಿ ಬರೆದದ್ದು. ನನಗೆ ಕೊಡಲಾಗಿದ್ದ ವಿಷಯ 'ಆನ್ಲೈನ್ ಮಾಧ್ಯಮ'. ಲೇಖನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೊ. ಹಂ ಪ ನಾ ಅವರ ಸಂಪಾದಕತ್ವದಲ್ಲಿ, ಜಿ ಎನ್ ಮೋಹನ್ ರವರ ಸಹ ಸಂಪಾದಕತ್ವದಲ್ಲಿ ಹೊರತಂದಿರುವ ಸುಂದರ ಪುಸ್ತಕ 'ಪುನರಾವಲೋಕನ'ದಲ್ಲಿ ಪ್ರಕಟವಾಗಿದೆ. ಲೇಖನ ಬರೆಯುವ ವೇಳೆ ಹಲವು ಕೆಲಸಗಳ ನಡುವೆ ನನಗೆ ಹೆಚ್ಚು ಸಮಯ ಮಾಡಿಕೊಳ್ಳಲಾಗಲಿಲ್ಲ. ಸಾಧ್ಯವಾದಷ್ಟೂ ಸರಳವಾದ ಮಾಹಿತಿ ಸೇರಿಸುವ ಪ್ರಯತ್ನ ಮಾಡಿದ್ದೇನೆ. ಲೇಖನವನ್ನು ಅಂತರ್ಜಾಲದ ಎಲ್ಲ ಓದುಗರಿಗಾಗಿ ಸಂಪದದಲ್ಲಿ ಪ್ರಕಟಿಸುತ್ತಿರುವೆ. ಪ್ರತಿಕ್ರಿಯೆಗಳಿಗೆ ಸ್ವಾಗತ.
ದೂರದ ಕಾಸರಗೋಡಿನ ಹಳ್ಳಿಯೊಂದರ ಸ್ಕೂಲಿನ ಮಾಸ್ತರರಿಗೆ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಕನ್ನಡದಲ್ಲಿ ಬರೆದು ತಿಳಿಸಿ ಹಂಚಿಕೊಳ್ಳುವ ಉತ್ಸಾಹ. ಸಾಗರದ ಬಳಿಯ ಚಿಕ್ಕ ಊರೊಂದರಲ್ಲಿ ದಟ್ಟ ಹಸುರಿನ ನಡುವೆ ಮನೆ ಮಾಡಿಕೊಂಡಿರುವ ಕೃಷಿಕರೋರ್ವರಿಗೆ ನಿತ್ಯ ತಮ್ಮ ಸುತ್ತಮುತ್ತ ಆಗುವ ಅನುಭವದ ಕುರಿತು ಬರೆದಿಡುವ ಆಸಕ್ತಿ. ಹಾಸನದಲ್ಲಿ ಇಂಜಿನೀಯರಿಂಗ್ ಓದುತ್ತಿರುವ ಪುತ್ತೂರಿನ ಹುಡುಗಿಗೆ ತನ್ನ ಭಾವನೆಗಳನ್ನು ಬರೆದಿಡುವ ಹವ್ಯಾಸ, ಹಂಚಿಕೊಳ್ಳುವ ಆಸೆ. ಸಾಮಾಜಿಕ ಕಾಳಜಿಯುಳ್ಳ ಧಾರವಾಡದ ಜರ್ನಲಿಸಂ ಮಾಸ್ತರರಿಗೆ ಜಿಲ್ಲೆಯಲ್ಲಿ ಸುದ್ದಿಯಾಗದ ಬಡ ರೈತರ ಕಷ್ಟಗಳು, ಸಹಜ ಕೃಷಿ ಅನುಸರಿಸಿದ ರೈತರ ಯಶೋಗಾಥೆ, ನೆಲೆಯಿಲ್ಲದೆ ಆಗಾಗ ಊರಿಗೆ ಕಾಲಿಡುವ ವನ್ಯಜೀವಿಗಳ ಪಾಡು ಇವೆಲ್ಲವನ್ನೂ ಬರೆದು ಹಂಚಿಕೊಳ್ಳುವ ಮನಸ್ಸು.
ಹೀಗೆ ಹಲವರಿದ್ದಾರೆ. ಇವರೆಲ್ಲರಿಗೂ ಮುಖ್ಯವಾಹಿನಿಯಲ್ಲಿ ಬರೆದು ಹಂಚಿಕೊಳ್ಳುವ ಅವಕಾಶ ಸಿಗುವುದು ಕಡಿಮೆ. ಸಿಕ್ಕರೂ ಬರೆಯಬೇಕೆಂದು ಎಣಿಸಿದ್ದೆಲ್ಲವನ್ನೂ ಬರೆದಿಡುವಷ್ಟು ಜಾಗ ಸಿಗಲಾರದು. ಕೆಲವೊಮ್ಮೆ ವಿಷಯಗಳನ್ನು ಹಂಚಿಕೊಳ್ಳಲು ವಾರಗಳಷ್ಟು ಸಮಯ ತಡೆಯಲೂ ಆಗದು. ತಮ್ಮ ಮನಸ್ಸಿಗೆ ಹತ್ತಿರವಾದ ವಿಷಯಗಳನ್ನು ಬರೆದಿಡಲು, ಹಂಚಿಕೊಳ್ಳಲು ಇವರಿಗೆಲ್ಲ ಸಿಕ್ಕ ಸುಲಭದ ಮಾರ್ಗ ಆನ್ಲೈನ್ ಮಾಧ್ಯಮ.
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವಂತೆ ಅದು ನಮಗೆಲ್ಲ ಹಲವು ಹೊಸ ಬಾಗಿಲುಗಳನ್ನು ತೆರೆಯುತ್ತ ಬಂದಿದೆ. ಜಗತ್ತು ಮಾಹಿತಿ ಹಂಚಿಕೊಳ್ಳುತ್ತಿದ್ದ ರೀತಿ ಬದಲಾಗಿದೆಯಲ್ಲದೆ ಮಾಹಿತಿ ಹಂಚಿಕೊಳ್ಳುವ ಹತ್ತು ಹಲವು ಹೊಸ ದಾರಿಗಳು ಒದಗಿಬಂದಿವೆ. ಹಿಂದೊಮ್ಮೆ ಪತ್ರದ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳನ್ನು ವಾರಗಟ್ಟಲೆ ಕಾದು ತಿಳಿಯಬೇಕಿತ್ತು. ಈಗ ಕ್ಷಣಮಾತ್ರದಲ್ಲಿ ತಲುಪುವ ಇ-ಮೇಯ್ಲ್ ಅಥವ ಎಸ್ ಎಮ್ ಎಸ್ ವಿಷಯವನ್ನು ಕೂಡಲೆ ತಿಳಿಸಿಬಿಡುತ್ತದೆ. ಹಾಗೆಯೇ, ಬರೆದಿಟ್ಟ ವಿಷಯ, ಸುದ್ದಿ, ಸಾಹಿತ್ಯ ಅಥವ ವಿಚಾರ ಕ್ಷಣಮಾತ್ರದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳುವುದೂ ಸಾಧ್ಯ! ದಿನ ಮುಗಿಯುವುದರೊಳಗೆ ಅದನ್ನೋದಿದವರ ಅಭಿಪ್ರಾಯಗಳು ನಿಮಗೆ ತಲುಪಿಬಿಡಬಹುದು. ಇದು ಆನ್ಲೈನ್ ಮಾಧ್ಯಮ, ಹೊಸತೊಂದು ಮಾಧ್ಯಮ!
ಸರಿ, ಈ ಮಾಧ್ಯಮ ಬಳಸಲು ಏನೆಲ್ಲ ಬೇಕು? ಮೊದಲಾಗಿ ಕಂಪ್ಯೂಟರ್ ಬಳಸಲು ಗೊತ್ತಿರಬೇಕು. ತಮ್ಮ ಬಳಕೆಗೆ ಸಾಕಾಗುವಷ್ಟು ಕಂಪ್ಯೂಟರ್ ಕಲೆತಿದ್ದರೂ ಸಾಕು. “ಈ ವಯಸ್ಸಿನಲ್ಲೇನು ಕಂಪ್ಯೂಟರ್ ಕಲಿಯುವುದು" ಎಂದುಕೊಂಡವರು ಕೂಡ ಕಾಲಕ್ರಮೇಣ ಕಂಪ್ಯೂಟರ್ ಕಲೆತದ್ದಲ್ಲದೆ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಿರುವವರಿದ್ದಾರೆ. ಇನ್ನು ಇಂಗ್ಲೀಷ್ ಗೊತ್ತಿರಲೇಬೇಕಿಲ್ಲ. ಕನ್ನಡದಲ್ಲಿ ಓದು ಬರಹ ತಿಳಿದಿದ್ದರೆ ಸಾಕು. ಇಂಟರ್ನೆಟ್ ಸಂಪರ್ಕ – ಬೇಕೇ ಬೇಕು. ಹತ್ತಾರು ಮೊಬೈಲ್ ಫೋನ್ ಕಂಪೆನಿಗಳಿರುವ ಈ ಕಾಲಕ್ಕೆ ಇಂಟರ್ನೆಟ್ ಸಂಪರ್ಕ ಪಡೆಯುವುದು ಕಷ್ಟವಿಲ್ಲ. ಮೊಬೈಲ್ ಫೋನ್ ಸಂಪರ್ಕ ಇರುವ ಕರ್ನಾಟಕದ ಯಾವುದೇ ಊರಿನಲ್ಲೂ ಇಂಟರ್ನೆಟ್ ಸಂಪರ್ಕ ಸಿಗದೇ ಇರದು.
ಬ್ಲಾಗ್
ಇಂಗ್ಲೀಷಿನ ಪದ 'ವೆಬ್ ಲಾಗ್' ಎಂಬುವುದರ ರೂಪಾಂತರ 'ಬ್ಲಾಗ್'. ಬ್ಲಾಗ್ ಎಂದರೆ ಎನೋ ಒಂದಷ್ಟು ಬರೆದಿಟ್ಟದ್ದು ಎಂಬರ್ಥ ಬರುವಂತೆ. ಬರೆದದ್ದು ಸಾಹಿತ್ಯವೇ ಆಗಿರಬೇಕಿಲ್ಲ. ಮನಸ್ಸಿಗೆ ತೋಚಿದ್ದು ಬರೆದಿಟ್ಟರೂ ಅದೊಂದು ಬ್ಲಾಗ್ ಆದೀತು. ದಿನ ನಿತ್ಯ ಡೈರಿಯಲ್ಲಿ ಬರೆದಿಡುವ ಹವ್ಯಾಸ ಹಲವರಿಗಿದ್ದೀತು. ಡೈರಿಯಲ್ಲಿ ಬರೆದಿಡುವುದರ ಡಿಜಿಟಲ್ ರೂಪಾಂತರ - 'ಬ್ಲಾಗ್'. ಆದರೆ ಕಾಲಕ್ರಮೇಣ ಬ್ಲಾಗ್ ಎನ್ನುವುದು ಮನಸ್ಸಿಗೆ ತೋಚಿದ್ದನ್ನು ಬರೆದಿಡುವುದಷ್ಟಕ್ಕೇ ಸೀಮಿತವಾಗದೆ ಗಂಭೀರ ಚಿಂತನೆ, ಸಾಹಿತ್ಯ, ತಂತ್ರಜ್ಞಾನ ಕುರಿತ ವಿಷಯಗಳಿಗೆ ಕೂಡ ವಿಸ್ತಾರಗೊಂಡಿದೆ. ಇಂಟರ್ನೆಟ್ಟಿನಲ್ಲಿ ಈಗ ಎಲ್ಲೆಲ್ಲೂ ಬ್ಲಾಗುಗಳು ಕಾಣಸಿಗುವುದು. ಹುಡುಕಿದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಒಂದೊಂದು ಬ್ಲಾಗ್ ಸಿಗುವುದು. ವಿವಿಧ ಭಾಷೆಗಳಲ್ಲೂ ಬ್ಲಾಗುಗಳಿವೆ.
ಕನ್ನಡ ಭಾಷೆಯೊಂದರಲ್ಲೇ ಈಗ ಸಾವಿರಾರು ಬ್ಲಾಗು ಗಳಿವೆ. ಇಂಗ್ಲೀಷಿನಲ್ಲಿ ಮಿಲಿಯನ್ನುಗಟ್ಟಲೆ ಬ್ಲಾಗುಗಳಿವೆ.
ಬ್ಲಾಗ್ ಅಂದಾಕ್ಷಣ ಬರೆದದ್ದೆಲ್ಲವೂ ಎಲ್ಲರಿಗೂ ಕಾಣಲೇಬೇಕು ಎಂದಿಲ್ಲ. ಗೆಳೆಯರೊಂದಿಗೆ ಮಾತ್ರ ಹಂಚಿಕೊಳ್ಳುವ ಸೌಲಭ್ಯ ಕೂಡ ಉಂಟು.
ಸಮುದಾಯ ಮಾಧ್ಯಮಗಳು, ಪೋರ್ಟಲ್
ಇಂಟರ್ನೆಟ್ಟಿನಲ್ಲಿ ಹೆಚ್ಚಿನ ಜನರಿಗೆ ತಲುಪುವ ಕ್ಷಮತೆಯುಳ್ಳ ಮಾಧ್ಯಮ ಸಮುದಾಯ ಮಾಧ್ಯಮ. ಇವುಗಳಿಗೆ ಪೋರ್ಟಲ್ಲುಗಳೆಂದೂ ಕರೆಯುತ್ತಾರೆ. ಈ ರೀತಿಯ ಮಾಧ್ಯಮ ಅದರಲ್ಲಿ ಪಾಲ್ಗೊಳ್ಳುವ ಸಮುದಾಯದಿಂದ ನಡೆಯುತ್ತದೆ. ಸಮುದಾಯದಲ್ಲಿ ಪಾಲ್ಗೊಳ್ಳುವ ಬರಹಗಾರರು, ಓದುಗರ ಸಮೂಹವೇ ಮಾಧ್ಯಮದ ಮೂಲಕ ತಲುಪುವ ಮಾಹಿತಿ, ಸಾಹಿತ್ಯದ ಕರ್ತೃಗಳು ಕೂಡ.
೨೦೦೪ರಲ್ಲಿ ಪ್ರಾರಂಭವಾದ ಗ್ಲೋಬಲ್ ವಾಯ್ಸಸ್ ಎಂಬ ಸಮುದಾಯ ಪೋರ್ಟಲ್ ಈಗ ಜಗತ್ತಿನ ಹಲವು ದೇಶಗಳಿಂದ ಬರೆಯುವ ಸಾಧಾರಣ ಪ್ರಜೆಗಳಿಂದ ಸಿಗುವ ಮಾಹಿತಿಯ ಭಂಡಾರ. ಇದೇ ರೀತಿಯ ಹಲವು ಪೋರ್ಟಲ್ಲುಗಳಿವೆ. ಭಾರತೀಯ ಭಾಷೆಗಳಲ್ಲೂ ಇವೆ. ಕನ್ನಡದಲ್ಲಿ 'ಸಂಪದ' ಇದೆ. ಮರಾಠಿಯಲ್ಲಿ 'ಮನೋಗತ' ಇದೆ.
ವಿಕಿಪೀಡಿಯ
ಇಂಟರ್ನೆಟ್ಟಿನಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರ ಹೊರಬರುತ್ತಿರುತ್ತದೆ. ಆದರೆ ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ಯೋಜನೆ ಇಂಟರ್ನೆಟ್ಟಿನಲ್ಲಿ ಹೊಸತೊಂದು ರೀತಿಯ ಚಳುವಳಿಯನ್ನೇ ಹುಟ್ಟುಹಾಕಿಬಿಟ್ಟಿತು. ಜ್ಞಾನ ಪ್ರತಿಯೊಬ್ಬರ ಸ್ವತ್ತು, ಇದು ಎಲ್ಲರಿಗೂ ಲಭ್ಯವಾಗಬೇಕು ಎಂಬ ಧ್ಯೇಯ ಇಟ್ಟುಕೊಂಡು ಪ್ರಾರಂಭವಾದ ಯೋಜನೆ - ವಿಕಿಪೀಡಿಯ. ಇದೊಂಡು ಮುಕ್ತ ಜ್ಞಾನ ಭಂಡಾರ, ಮಾಹಿತಿ ಕೋಶ, ಹಾಗು ವಿಶ್ವಕೋಶ. ಈ ವಿಶ್ವಕೋಶದಲ್ಲಿ ಪ್ರತಿಯೊಬ್ಬರೂ ಬರೆಯಬಹುದು, ಪಾಲ್ಗೊಳ್ಳಬಹುದು. ಆದರೆ ಬರವಣಿಗೆಗೆ ಸಂಹಿತೆಗಳಿವೆ. ಸಂಹಿತೆಗೆ ಹೊಂದದ ಪುಟಗಳನ್ನು ಮೊದಲು ಗುರುತು ಮಾಡಿ ನಂತರ ಸೂಕ್ತವಾಗಿ ಸರಿಪಡಿಸಲಾಗುತ್ತದೆ. ಆಸಕ್ತಿ ಹುಟ್ಟಿಸುವ ವಿಷಯವೆಂದರೆ ಸಂಹಿತೆಗಳನ್ನು ರೂಪಿಸುವವರೂ ಇದರಲ್ಲಿ ಪಾಲ್ಗೊಳ್ಳುವವರೇ. ಸಂಹಿತೆಗೆ ಹೊಂದದ ಪುಟಗಳನ್ನು ಗುರುತು ಮಾಡುವವರೂ ಇದರಲ್ಲಿ ಪಾಲ್ಗೊಳ್ಳುವವರೆ. ಒಟ್ಟಾರೆ ಪ್ರಜಾತಂತ್ರವಿದ್ದಂತೆ.
ಮೈಕ್ರೊ ಬ್ಲಾಗಿಂಗ್, ಸೋಶಿಯಲ್ ನೆಟ್ವರ್ಕ್
ಇಂಟರ್ನೆಟ್ಟಿನಲ್ಲಿ ನಿತ್ಯ ಬ್ಲಾಗ್ ಬರೆಯುತ್ತಿರುವ ಮಂದಿಯನ್ನು ಅಂಕಿಗಳಲ್ಲಿ ಅಳೆಯುವ ಸಾಹಸ ಮಾಡಿದರೆ ಸುಲಭವಾಗಿ ಹಲವು ಮಿಲಿಯನ್ ದಾಟುವುದು. ಬರೆಯುವವರೇ ಇಷ್ಟಿದ್ದು ನಿತ್ಯ ಮಾಹಿತಿ ಮಹಾಪೂರವೇ ಹರಿದುಬರುತ್ತಿದ್ದಂತೆ ಬರೆದದ್ದೆಲ್ಲವೂ ಎಲ್ಲರಿಗೂ ತಲುಪದು. ಜೊತೆಗೆ ಇಂಟರ್ನೆಟ್ಟಿನಲ್ಲಿ ಗೂಗಲ್ ಮುಂತಾದ ಸರ್ಚ್ ಇಂಜಿನ್ ಬಳಸಿ ಓದುವವರಿಗೆ ಓದಲು ಸಿಗುವುದು ತೀರ ಹೆಚ್ಚಿನ ಸರಕು. ಇಷ್ಟೆಲ್ಲ ಓದಲು ಸಿಗುವಾಗ ಸಾಧಾರಣವಾಗಿ ಓದುಗರಿಗೆ ಇರಬಹುದಾದ ವ್ಯವಧಾನ ಕಡಿಮೆ. ಪ್ರತಿಯೊಬ್ಬರಿಗೂ ಲೇಖನ, ಬ್ಲಾಗ್ ಬರೆಯುವ ಆಸಕ್ತಿಯೂ ಇರಲಿಕ್ಕಿಲ್ಲ. ಅಥವ ಕೂಡಲೆ ಒಂದೆರಡು ವಾಕ್ಯಗಳಲ್ಲಿ ಏನೋ ಹೇಳಿಬಿಡಬೇಕು, ತನ್ನ ಬಳಿ ಇದ್ದ ಚಿತ್ರ, ಹಾಡು ಅಥವ ವೀಡಿಯೋ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು ಎನ್ನುವವರಿಗೆ ಮೈಕ್ರೋ ಬ್ಲಾಗಿಂಗ್ (ಒಂದೆರಡು ವಾಕ್ಯಗಳಲ್ಲೇ ಬರೆದಿಡುವುದು ಎಂದರ್ಥ) ಅಥವ ಸೋಶಿಯಲ್ ನೆಟ್ವರ್ಕ್ ವೆಬ್ಸೈಟುಗಳು ಬಳಕೆಗೆ ಬರುವುದು. ಈ ರೀತಿಯ ಹೊಸ ಪೀಳಿಗೆಯ ಸೈಟುಗಳು ಎಷ್ಟು ಜನಪ್ರಿಯವಾಗಿಬಿಟ್ಟಿವೆಯೆಂದರೆ ಈಗಿನ ಒಂದು ಜನಪ್ರಿಯ ಸೋಶಿಯಲ್ ನೆಟ್ವರ್ಕ್ ಕುರಿತಾದ "ಸೋಶಿಯಲ್ ನೆಟ್ವರ್ಕ್" ಎಂಬ ಹಾಲಿವುಡ್ ಸಿನಿಮಾ ಕೂಡ ಬಂದಿದೆ. ಅಷ್ಟೇ ಅಲ್ಲದೆ, ಕಳೆದ ತಿಂಗಳು ನೀಡಲಾದ ಅಕಾಡಮಿ ಪ್ರಶಸ್ತಿಗಳಲ್ಲಿ ಕೆಲವನ್ನು ಈ ಸಿನಿಮಾ ಕೂಡ ಬುಟ್ಟಿಗೆ ಹಾಕಿಕೊಂಡಿತು.
ಮುಂಬೈನಲ್ಲಿ ಉಗ್ರವಾದಿಗಳು ಎಲ್ಲಂದರಲ್ಲಿ ಶೂಟ್ ಮಾಡುತ್ತ ಅಟ್ಟಹಾಸ ಮೆರೆಯುತ್ತಿದ್ದಾಗ ಪ್ರತಿಕ್ಷಣ ಮಾಹಿತಿ ಒದಗಿದ್ದು ಮೈಕ್ರೋ ಬ್ಲಾಗಿಂಗ್ ಸೈಟುಗಳಲ್ಲಿ. ಸುದ್ದಿ ಚಾನಲ್ಲುಗಳು ಟಿವಿಯಲ್ಲಿ ಪ್ರಸಾರ ಮಾಡುವ ಮುನ್ನ ಬಹುಮುಖ್ಯ ಮಾಹಿತಿ ಇಂಟರ್ನೆಟ್ಟಿನಲ್ಲಿ ಲಭ್ಯವಾಗಿತ್ತು.
ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣಗಳು ಟ್ವಿಟ್ಟರ್ ಮತ್ತು ಐಡೆಂಟಿಕಾ. ಸೋಶಿಯಲ್ ನೆಟ್ವರ್ಕ್ ತಾಣಗಳು ಫೇಸ್ ಬುಕ್ ಮತ್ತು ಆರ್ಕುಟ್.
ಮೊಬೈಲಿನಲ್ಲಿ ಮಾಹಿತಿ ಜಗತ್ತು
ಇಂಟರ್ನೆಟ್ ಬಳಸಲು ಈಗ ಕಂಪ್ಯೂಟರ್ ಇರಲೇಬೇಕೆಂದಿಲ್ಲ. ಹೆಚ್ಚು ಬಳಕೆಯಲ್ಲಿರುವ ಮೊಬೈಲು ಫೋನುಗಳನ್ನು ಬಳಸಿ ಇಂಟರ್ನೆಟ್ಟಿಗೆ ಸಂಪರ್ಕ ಪಡೆಯಬಹುದು. ಇತ್ತೀಚೆಗೆ ಜನಪ್ರಿಯವಾಗುತ್ತಿರುವ 'ಸ್ಮಾರ್ಟ್ ಫೋನು'ಗಳು ಈ ಹಿಂದೆ ಕಂಪ್ಯೂಟರ್ ಬಳಕೆಯಿಂದ ಮಾತ್ರ ಸಾಧ್ಯವಾಗುತ್ತಿದ್ದ ಸುಮಾರು ಎಲ್ಲ ನಿತ್ಯದ ಮಾಹಿತಿ ಜಗತ್ತಿನ ಅವಶ್ಯಕತೆಗಳನ್ನು ಪೂರೈಸುತ್ತಿವೆ. ಆನ್ಲೈನ್ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಳ್ಳುವುದು ಮತ್ತಷ್ಟು ಸುಲಭವಾಗಿದೆ.
ಕೈಯಲ್ಲಿದ್ದ ಮೊಬೈಲು ಹಿಡಿದು ತೆಗೆದ ಫೋಟೋ ಒಂದನ್ನು ಕ್ಷಣಮಾತ್ರದಲ್ಲಿ ಆನ್ಲೈನ್ ಮಾಧ್ಯಮವೊಂದರ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳುವುದು ಸಾಧ್ಯ. ಮೊಬೈಲಿನಿಂದಲೇ ಬರವಣಿಗೆಯ ಮೂಲಕ ಕೂಡ ಮಾಹಿತಿ ಹಂಚಿಕೊಳ್ಳುವ ಅವಕಾಶವಿದೆ. ಭಾಗವಹಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ನಡೆಯುತ್ತಿರುವುದನ್ನು ಅಲ್ಲೇ ಕುಳಿತು ಮೊಬೈಲ್ ಮೂಲಕವೇ ಜಗತ್ತಿಗೆ ಪ್ರಸಾರ ಮಾಡಬಹುದಾದಷ್ಟು ಈಗ ತಂತ್ರಜ್ಞಾನ ಮುಂದುವರೆದಿದೆ.
ಆನ್ಲೈನ್ ಮಾಧ್ಯಮಗಳಲ್ಲಿ ಕನ್ನಡ
ಕನ್ನಡ ಆನ್ಲೈನ್ ಮಾಧ್ಯಮಗಳಲ್ಲಿ ಹೆಚ್ಚು ಕಂಡುಬಂದಲ್ಲಿ ಕನ್ನಡಕ್ಕೆ ಮಾತ್ರವಲ್ಲ, ಇಡಿ ಜಗತ್ತಿಗೆ ಪ್ರಯೋಜನವಾಗುವುದು ಎಂದರೆ ಉತ್ಪ್ರೇಕ್ಷೆ ಎನಿಸಬಹುದು. ಆದರೆ ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ, ಇಲ್ಲಿನ ನೆಲದಲ್ಲಿ, ಮಣ್ಣಿನಲ್ಲಿ ಹುದುಗಿರುವ ಮೌಲ್ಯ ಮಹತ್ವದ್ದು. ಅದು ಯಕ್ಷಗಾನವೇ ಇರಬಹುದು, ವಿಜಯನಗರ ಸಾಮ್ರಾಜ್ಯದ ಪರಂಪರೆಯಿರಬಹುದು, ಅಥವ ರಾಜ್ಯದ ಸಾಮಾನ್ಯ ಕೃಷಿಕರು ಕಂಡುಕೊಂಡಿರುವ ಹೊಸ ದಾರಿಗಳಿರಬಹುದು - ಇವೆಲ್ಲ ಹೊರಗಿನ ಜಗತ್ತಿಗೆ ತಲುಪಲೇಬೇಕಾದ ಮಾಹಿತಿ. ಹಾಗೆಯೇ ಹೊರಗಿನ ಜಗತ್ತಿನಿಂದ ರಾಜ್ಯಕ್ಕೂ ತಲುಪಬೇಕಾದ ಮಾಹಿತಿ ಬಹಳಷ್ಟಿದೆ.
ಕಳೆದ ಕೆಲವು ವರ್ಷಗಳು ಅನ್ಲೈನ್ ಮಾಧ್ಯಮದಲ್ಲಿ ಕನ್ನಡ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಕಂಪ್ಯೂಟರಿನಲ್ಲಿ ಕನ್ನಡ ಬಳಸಲು ಸುಲಭವಾಗಿಸುವ ನಿರ್ದಿಷ್ಟಮಾನ 'ಯೂನಿಕೋಡ್' ಹೆಚ್ಚಿನಂತೆ ಬಳಕೆಯಲ್ಲಿ ಮೂಡಿಬರುತ್ತಿದೆ. ಕನ್ನಡ ವಿಕಿಪೀಡಿಯ ಹಲವು ಕನ್ನಡ ಸ್ವಯಂಸೇವಕರ ಪ್ರಯತ್ನದಿಂದಾಗಿ ಹತ್ತು ಸಾವಿರಕ್ಕೂ ಹೆಚ್ಚಿನ ಲೇಖನಗಳನ್ನು ತುಂಬಿಕೊಂಡಿದೆ. ಕನ್ನಡದ ಹಲವು ಮ್ಯಾಗಝೀನುಗಳು, ಪತ್ರಿಕೆಗಳು ವಿಶಿಷ್ಟವಾಗಿ ಆನ್ಲೈನ್ ಮಾಧ್ಯಮಕ್ಕೇ ಮೀಸಲಾಗಿ ಹುಟ್ಟಿಕೊಂಡಿವೆ. ಅವಧಿ ಮ್ಯಾಗ್, ಕೆಂಡಸಂಪಿಗೆ ಮೊದಲಾದ ಅನ್ಲೈನ್ ಪತ್ರಿಕೆಗಳಿವೆ. 'ಸಂಪದ' ಮೊದಲಾದಂತೆ ಕನ್ನಡದ ಸಮುದಾಯ ಪೋರ್ಟಲ್ಲುಗಳಿವೆ. ದಿನಪತ್ರಿಕೆಗಳ ಹಲವು ವೆಬ್ಸೈಟುಗಳು ನಿತ್ಯ ಸುದ್ದಿಯನ್ನು ಕನ್ನಡದಲ್ಲಿ ಆನ್ಲೈನ್ ಮಾಧ್ಯಮದಲ್ಲೂ ಬಿತ್ತರಿಸುತ್ತಿವೆ. ಕನ್ನಡ ಪ್ರಭ, ಪ್ರಜಾವಾಣಿ ಮುಂತಾದ ಪತ್ರಿಕೆಗಳು, ದಟ್ಸ್ ಕನ್ನಡ ಪೋರ್ಟಲ್ ಆನ್ಲೈನ್ ಮಾಧ್ಯಮದಲ್ಲಿ ಬಿತ್ತರಿಸುವ ಸುದ್ದಿ ಜನಪ್ರಿಯ. ಕೆಲವೊಂದು ಪೋರ್ಟಲ್ಲುಗಳು ಸುದ್ದಿಯನ್ನು ಮೊಬೈಲ್ ಫೋನಿಗೂ ರವಾನಿಸುವ ವ್ಯವಸ್ಥೆಯನ್ನು ಕಲ್ಪಿಸಿವೆ.
ಈಗಿನಂತೆ ಸಾವಿರದ ಐನೂರಕ್ಕೂ ಹೆಚ್ಚಿನ ಕನ್ನಡ ಬ್ಲಾಗುಗಳಿವೆ.
ಸಾಧ್ಯತೆಗಳು
ಕೃಷಿಕರೊಬ್ಬರ ಹೊಸತೊಂದು ಆವಿಷ್ಕಾರ – ಎಳನೀರು ತೆಗೆಯುವ ಉಪಕರಣ. ಸಾಲಿಗ್ರಾಮಕ್ಕೆ ಭೇಟಿ ಕೊಟ್ಟವರೊಬ್ಬರು ಇದರ ಕುರಿತು ಬರೆದು ತಮ್ಮ ಬ್ಲಾಗಿನಲ್ಲಿ ಹಾಕಿಕೊಂಡರು. ಸುದ್ದಿಪತ್ರಿಕೆಯೊಂದರಲ್ಲಿ ಬರೆದದ್ದು ಮರುದಿನಕ್ಕೆ ಸಿಗದೇ ಇರುವಂತಾದೀತು. ಆದರೆ ಇವರು ಬರೆದ ಪುಟ ಇಂಟರ್ನೆಟ್ಟಿನಲ್ಲಿ ಇದೀಗ ಶಾಶ್ವತವಾಗಿ ಸಿಗಬಹುದಾದ ಮಾಹಿತಿ ಪುಟ. ಈ ಉಪಕರಣವನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಇದರ ಜೊತೆಗೊಂದು ವೀಡಿಯೋ ಕೂಡ! ಇದನ್ನು ಎಷ್ಟು ಹಣ ಕೊಟ್ಟು ಕೊಳ್ಳಬಹುದು, ಎಲ್ಲಿ ಕೊಳ್ಳಬಹುದು ಎಂಬ ಮಾಹಿತಿ ಕೂಡ ಲಭ್ಯ!
ಇದೊಂದು ಉದಾಹರಣೆಯಷ್ಟೆ. ಆನ್ಲೈನ್ ಮಾಧ್ಯಮದಲ್ಲಿ ಸಾಧ್ಯತೆಗಳು ಅಪಾರ. ಹೊಸತೊಂದು ಓದುಗರ ಸಮೂಹವನ್ನೇ ಕಂಡುಕೊಳ್ಳಬಹುದು ಎಂಬುದು ಮೇಲ್ನೋಟಕ್ಕೆ ಅನ್ನಿಸಬಹುದಾದ ಸಂಗತಿಯಾದರೂ ಆನ್ಲೈನ್ ಮಾಧ್ಯಮ ತನ್ನದೇ ಆದ ಹೊಸ ಬಾಗಿಲುಗಳನ್ನು ತೆರೆಯುತ್ತದೆ.
ಸಮಸ್ಯೆಗಳು
ಕಂಪ್ಯೂಟರಿನಲ್ಲಿ ಕನ್ನಡವನ್ನು ಚೆಂದ ಓದಲು ಬೇಕಾದ ಅಕ್ಷರಗಳ ಆಕೃತಿಗಳನ್ನು ಸರಿಯಾಗಿ ಒಟ್ಟುಗೂಡಿಸಿದ 'ಫಾಂಟು'ಗಳು ಕನ್ನಡದಲ್ಲಿ ಈಗಲೂ ಲಭ್ಯವಿಲ್ಲ! ಕಂಪ್ಯೂಟರಿನಲ್ಲಿ ಕನ್ನಡಕ್ಕೆ ಸರಿಯಾದ ನಿಘಂಟು ಅಥವ ಪದಕೋಶ ಲಭ್ಯವಿಲ್ಲ. ಮೈಸೂರು ವಿಶ್ವವಿದ್ಯಾಲಯ ಹೊರತಂದ ವಿಶ್ವಕೋಶ ಆನ್ಲೈನ್ ಮಾಧ್ಯಮದಲ್ಲಿ ಲಭ್ಯವಾದರೆ ಕನ್ನಡಕ್ಕೆ ಆಗಬಹುದಾದ ಪ್ರಯೋಜನ ಅಪಾರ! ಜೊತೆಗೆ ಪುಸ್ತಕರೂಪದಲ್ಲಿ ಲಭ್ಯವಿರುವ ಹಲವು ನಿಘಂಟುಗಳೂ ಆನ್ಲೈನ್ ಮಾಧ್ಯಮದಲ್ಲಿ ಲಭ್ಯವಾದಲ್ಲಿ ಆನ್ಲೈನ್ ಮಾಧ್ಯಮದಲ್ಲಿ ಕನ್ನಡ ಮತ್ತಷ್ಟು ವೇಗದಲ್ಲಿ ಬೆಳೆಯುತ್ತ ಹೋಗುವುದು ಖರೆ.
Comments
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by gururaj.bv
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by kavinagaraj
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by abdul
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by abdul
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by partha1059
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by gopaljsr
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
ಉ: ಆನ್ಲೈನ್ ಮಾಧ್ಯಮ
In reply to ಉ: ಆನ್ಲೈನ್ ಮಾಧ್ಯಮ by kpbolumbu
ಉ: ಆನ್ಲೈನ್ ಮಾಧ್ಯಮ