ಆಫ್ ದಿ ರೆಕಾರ್ಡ್

ಆಫ್ ದಿ ರೆಕಾರ್ಡ್

ಪುಸ್ತಕದ ಲೇಖಕ/ಕವಿಯ ಹೆಸರು
ಗಣೇಶ್ ಕಾಸರಕೋಡು
ಪ್ರಕಾಶಕರು
ಅಮ್ಮ ಪ್ರಕಾಶನ, ರಾಜೀವ ಗಾಂಧಿ ರಸ್ತೆ, ಜರಗನ ಹಳ್ಳಿ, ಬೆಂಗಳೂರು-೫೬೦೦೭೮
ಪುಸ್ತಕದ ಬೆಲೆ
ರೂ. ೧೨೦.೦೦ ಮುದ್ರಣ: ೨೦೧೧

ಆಫ್ ದಿ ರೆಕಾರ್ಡ್ ಅನ್ನುವುದು ಪತ್ರಕರ್ತರ ವೃತ್ತಿ ಜೀವನದಲ್ಲಿ ಸದಾ ಕೇಳುವ ಪದ. ಸಮಾಜದ ಗಣ್ಯ ವ್ಯಕ್ತಿಗಳು ಪತ್ರಕರ್ತರ ಜೊತೆ ಮಾತನಾಡುವಾಗ ಗುಟ್ಟಾಗಿ ಕೆಲವು ವಿಷಯಗಳನ್ನು ಹೇಳಿ ಬಿಡುತ್ತಾರೆ. ಅವರದ್ದೇ ಓರಗೆಯ ಪತ್ರಕರ್ತರಾದ ಬಿ.ಗಣಪತಿಯವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ ‘ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರಿಗೆ ವೃತ್ತಿ ಜೀವನದ ಮೂರು ದಶಕಗಳ ಸಂಭ್ರಮ. ಸಿನೆಮಾ ಪ್ರಪಂಚಕ್ಕೆ ಒಬ್ಬ ಬೆರಗುಗಣ್ಣಿನ ಪತ್ರಕರ್ತನಾಗಿ ಅಡಿ ಇಟ್ಟ ಗಣೇಶರು ಇಂದು ಸಿನೆಮಾ ಲೋಕವೇ ಬೆರಗುಗಣ್ಣಿನಿಂದ ನೋಡುವಂತಹ ಪತ್ರಿಕಾ ಸಂಪಾದಕರಾಗಿ ಬೆಳೆದು ನಿಂತಿದ್ದಾರೆ. ಇದು ಅದೃಷ್ಟದ, ಜಾತಕದ ಮಹಿಮೆಯಲ್ಲ. ಅಕ್ಷರ ಪ್ರೀತಿ ಕೊಟ್ಟ ಆಸ್ತಿ. ಬರಹವನ್ನೇ ಬದುಕೆಂದು ಭಾವಿಸಿದ ನಿಷ್ಟೆಗೆ ಸಿಕ್ಕ ಪ್ರತಿಫಲ.’

ಗಣೇಶ್ ಕಾಸರಗೋಡು ಪತ್ರಕರ್ತರಾಗಿ ಅದರಲ್ಲೂ ಸಿನೆಮಾ ಪತ್ರಕರ್ತರಾಗಿ ಬಹುತೇಕ ಎಲ್ಲಾ ನಟ ನಟಿಯರ ಸಂಪರ್ಕ ಇದ್ದವರು. ಗಣೇಶ್ ಅವರೇ ಹೇಳಿಕೊಂಡಂತೆ ಅವರು ‘ಆಫ್ ದಿ ರೆಕಾರ್ಡ್’ ಪುಸ್ತಕ ಹೊರತರುತ್ತಾರೆ ಎಂದಾಕ್ಷಣ ಅವರ ಗೆಳೆಯರಿಗೆ ಗಾಬರಿ, ಮತ್ತೆ ಕೆಲವರಿಗೆ ಆತಂಕ, ಇನ್ನೂ ಕೆಲವರಿಗೆ ಭಯವಾಯಿತಂತೆ. ಆಫ್ ದಿ ರೆಕಾರ್ಡ್ ಅಂದರೆ ಅದು ಬೇರೊಬ್ಬರ ಬೆಡ್ ರೂಂಗೆ ಹಿಡಿದ ಚಾನೆಲ್ ಕೆಮರಾವಲ್ಲ. ವೈಯಕ್ತಿಕ ಬದುಕಿನ ಚರ್ವಿತ ಚರ್ವಣ ಲೈಂಗಿಕ ಹಗರಣವಲ್ಲ. ಹಾಡ ಹಗಲೇ ರಾತ್ರಿ ಬದುಕನ್ನು ತೆರೆದಿಡುವ ಪ್ರಯತ್ನವೂ ಅಲ್ಲ. ಇದೊಂದು ಗಣೇಶ್ ಕಾಸರಗೋಡು ಅವರ ವೃತ್ತಿ ಜೀವನದ ಹೊಸ ಸಾಹಸ. ಚಿತ್ರ ರಂಗದ ಗಣ್ಯಾತಿ ಗಣ್ಯರ ಆಫ್ ದಿ ರೆಕಾರ್ಡ್ ವಿಷಯಗಳೆಲ್ಲಾ ಈ ಪುಸ್ತಕದಲ್ಲಿ ಇವೆ. ಅದಕ್ಕೆ ಪುಸ್ತಕದ ರಕ್ಷಾಪುಟದಲ್ಲೇ ‘ಶ್ ! ಗುಟ್ಟು ನಿಮ್ಮಲ್ಲೇ ಇರಲಿ ಎಂದು ಮುದ್ರಿಸಿದ್ದಾರೆ. ಸುಮಾರು ೧೮೦ ಪುಟಗಳ ಈ ಪುಸ್ತಕ ಸಣ್ಣ ಸಣ್ಣ ಅಧ್ಯಾಯಗಳನ್ನು ಹೊಂದಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.