ಆಮೆಯ ರಕ್ಷಣೆ ಇಂದಿನ ತುರ್ತು

ಭೂಮಿಯ ಮೇಲೆ ಅತೀ ಹೆಚ್ಚು ಬದುಕುವ ಜೀವಿಗಳಲ್ಲಿ ಆಮೆಯೂ ಒಂದು. ಇವುಗಳು ೮೦ ರಿಂದ ೧೫೦ ವರ್ಷಗಳ ತನಕ ಬದುಕುತ್ತವೆ. ೨೦೦ ವರ್ಷಕ್ಕೂ ಅಧಿಕ ಕಾಲ ಬದುಕಿದ ಆಮೆಗಳೂ ಇವೆಯಂತೆ. ಆಮೆಗಳು ಸುಮಾರು ೧೭೫ ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಕಂಡು ಬಂದವು ಎನ್ನುತ್ತಾರೆ. ಇವುಗಳು ಸರೀಸೃಪ (Reptile) ವರ್ಗಕ್ಕೆ ಸೇರಿದ ಪ್ರಾಣಿಗಳಾಗಿವೆ. ಆಮೆಗಳ ವೈಶಿಷ್ಟ್ಯವೆಂದರೆ ಅವುಗಳು ನೀರಿನಲ್ಲಿ ಹಾಗೂ ಭೂಮಿಯ ಮೇಲೆ ಜೀವಿಸಬಲ್ಲುವು. ಆಮೆಗಳು ನೀರಿನ ಒಳಗಡೆ ಮುಳುಗಿದ್ದರೂ ಉಸಿರಾಡಲು ಅವುಗಳು ನೀರಿನ ಮೇಲ್ಮೈಗೆ ಬರಲೇ ಬೇಕು.
ಆಮೆಗಳ ಮೃದುವಾದ ದೇಹವು ಗಟ್ಟಿಯಾದ ಕವಚದಿಂದ ರಕ್ಷಿಸಲ್ಪಟ್ಟಿದೆ. ತಲೆ, ಬಾಲ ಮತ್ತು ಕೈಕಾಲುಗಳು ಮಾತ್ರ ಕವಚದಿಂದ ಹೊರ ಚಾಚಿಕೊಂಡಿರುತ್ತದೆ. ಆಮೆಯ ವೈರಿಗಳು ಹಿಡಿಯಲು ಬಂದಾಗ ಇವುಗಳು ತಮ್ಮ ಹೊರಚಾಚಿರುವ ಅಂಗಗಳನ್ನು ಚಿಪ್ಪಿನ ಒಳಗಡೆ ಎಳೆದುಕೊಂಡು ಬಿಡುತ್ತವೆ. ಇದರಿಂದ ಚಿಪ್ಪನ್ನು ಕಚ್ಚಲಾರದೇ ವೈರಿ ಜೀವಿಗಳು ಆಮೆಯನ್ನು ಬಿಟ್ಟು ಹೋಗುತ್ತವೆ. ಈ ಕವಚಗಳಿರುವ ಕಾರಣದಿಂದ ಆಮೆ ಬಹಳ ನಿಧಾನ ಗತಿಯಲ್ಲಿ ಚಲಿಸುತ್ತವೆ.
ನೀರಿನಲ್ಲಿ ವಾಸಿಸುವ ಆಮೆಗಳ ಪಾದಗಳು ಉಗುರು ರಹಿತವಾಗಿದ್ದು, ಅವುಗಳು ಜಾಲಪಾದಗಳಂತೆ ಕಾರ್ಯನಿರ್ವಹಿಸುತ್ತವೆ. ಆಮೆಯ ಬಾಯಿಯಲ್ಲಿ ಹಲ್ಲುಗಳಿರುವುದಿಲ್ಲವಾದರೂ ಅವುಗಳು ಗಟ್ಟಿಯಾದ ದವಡೆಗಳನ್ನು ಹೊಂದಿರುತ್ತವೆ. ಈ ಮೂಲಕ ಆಮೆಗಳು ಆಹಾರವನ್ನು ಸುಲಭವಾಗಿ ಜಗಿದು ತಿನ್ನುತ್ತವೆ.
ಎಲ್ಲಾ ಆಮೆಗಳ ಕವಚಗಳು ಗಟ್ಟಿಯಾಗಿರುವುದಿಲ್ಲ. ಕೆಲವು ಜಾತಿಯ ಆಮೆಗಳ ಮೇಲ್ಮೈ ಮೃದುವಾಗಿರುತ್ತವೆ. ಆಮೆಗಳು ನೀರಿನಲ್ಲಿ ವಾಸಿಸುವ ಸಣ್ಣ ಮೀನುಗಳು, ಕಪ್ಪೆಗಳು ಹಾಗೂ ಕೆಲವು ಜಾತಿಯ ಕೀಟಗಳನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ. ಟೆರಾಪಿನ್ (Terrapin) ಎಂಬ ಆಮೆಯ ಕವಚವು ವರ್ಣರಂಜಿತವಾಗಿರುತ್ತದೆ. ಇದರ ಕವಚವು ಕೆಂಪು, ಹಳದಿ ಮತ್ತು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಉದ್ದ ಕತ್ತನ್ನು ಹೊಂದಿರುವ ಕೆಲವು ಆಮೆಗಳು ಕಂಡು ಬರುತ್ತವೆ. ಇವುಗಳನ್ನು ಹಾವಾಮೆಗಳೆಂದು ಕರೆಯುತ್ತಾರೆ.
ಆಮೆಗಳು ಮೊಟ್ಟೆ ಇಡಲು ಬಿಸಿಲು ಚೆನ್ನಾಗಿ ಬೀಳುವ, ಮರಳು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಹೆಚ್ಚಾಗಿ ಈ ಸ್ಥಳವು ಸಮುದ್ರದ ನೀರಿಗೆ ಹತ್ತಿರವಾಗಿರುತ್ತದೆ. ಏಕೆಂದರೆ ಮೊಟ್ಟೆಯೊಡೆದ ಬಳಿಕ ಮರಿಗಳು ನೀರಿಗೆ ಹೋಗಲು ಸುಲಭವಾಗಲಿ ಎಂದು. ಮೊಟ್ಟೆಯೊಡೆದ ಸ್ಥಳವು ನೀರಿನಿಂದ ದೂರವಿದ್ದರೆ ಅವುಗಳು ಸಾಗುವಾಗ ಪಕ್ಷಿಗಳು ತಿನ್ನುತ್ತವೆ. ಈ ಕಾರಣದಿಂದ ಹೆಣ್ಣು ಆಮೆಯು ಮರಳಿನ ನೆಲದಲ್ಲಿ ಬಿಲ ತೋಡಿ ಅದರಲ್ಲಿ ಹಲವಾರು ಮೊಟ್ಟೆಗಳನ್ನು ಇಡುತ್ತದೆ. ಬಿಸಿಲಿನ ಶಾಖಕ್ಕೆ ತಂತಾನೇ ಕಾವು ಕೊಟ್ಟಂತಾಗಿ ಮೊಟ್ಟೆಗಳು ಒಡೆದು ಮರಿ ಹೊರಗೆ ಬರುತ್ತವೆ. ಹೊರಗೆ ಬಂದ ಮರಿಯು ಹಲವಾರು ಅಡಚಣೆಗಳನ್ನು ಅನುಭವಿಸಿ ಕೊನೆಗೆ ನೀರನ್ನು ತಲುಪುತ್ತವೆ. ನೀರಿನಲ್ಲೂ ಅದನ್ನು ತಿನ್ನಲು ದೊಡ್ಡ ಮೀನುಗಳು ಕಾಯುತ್ತಿರುತ್ತವೆ. ಶತ್ರುಗಳ ಕಾಟದಿಂದ ಆಮೆಗಳ ನಾಶವನ್ನು ಗಮನಿಸಿ ಹಲವಾರು ಸ್ವಯಂ ಸೇವಾಸಂಸ್ಥೆಗಳು ಆಮೆಯ ರಕ್ಷಣೆಗಾಗಿ ಅವುಗಳ ಮೊಟ್ಟೆಗಳನ್ನು ಕಾಯುತ್ತವೆ. ಮೊಟ್ಟೆಗಳು ಒಡೆದು ಸುರಕ್ಷಿತವಾಗಿ ಮರಿಗಳು ಕಡಲು ತಲುಪುವವರೆಗೂ ಸ್ವಯಂ ಸೇವಕರು ರಕ್ಷಣೆ ಮಾಡುತ್ತಾರೆ. ವಿದೇಶಗಳಲ್ಲಿ ಕೆಲವೆಡೆ ಈ ಪ್ರಕ್ರಿಯೆಯನ್ನು ನೋಡಲು ಸಾವಿರಾರು ಮಂದಿ ಕಡಲ ತೀರದಲ್ಲಿ ಹಾಜರಿರುತ್ತಾರೆ.
ಆಮೆಯ ಮಾಂಸಕ್ಕಾಗಿ ಮಾನವನು ಅದನ್ನು ನಾಶ ಮಾಡುತ್ತಿದ್ದಾನೆ. ನಕ್ಷತ್ರ ಆಮೆಗಳೆಂಬ ಅಪರೂಪದ ತಳಿಯನ್ನು ಅವುಗಳ ಸುಂದರ ಚಿಪ್ಪಿಗಾಗಿ ಕೊಲ್ಲುತ್ತಿದ್ದಾನೆ. ಈ ಕಾರಣದಿಂದಾಗಿ ಆಮೆಗಳ ನಾಶವಾಗುತ್ತಿದೆ. ಆಮೆಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವುದನ್ನು ಮರೆಯಬಾರದು. ಪರಿಸರದಲ್ಲಿ ಸಮತೋಲನವಿರಬೇಕಾದಲ್ಲಿ ಆಮೆಗಳಂತಹ ಜೀವಿಗಳಿರುವುದೂ ಅತ್ಯಗತ್ಯ. ಈ ಕಾರಣದಿಂದ ಆಮೆಗಳ ರಕ್ಷಣೆ ಮಾಡೋಣ ಬನ್ನಿ...
ಚಿತ್ರ ಕೃಪೆ: ಅಂತರ್ಜಾಲ ತಾಣ