ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…!
ಭಾಷೆ ಎಂಬ ಭಾವ ಕಡಲಿಗೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು, ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು, ಅವರ ನಿಜ ಬಣ್ಣಗಳು - ಮನಸ್ಥಿತಿಗಳು - ವ್ಯಕ್ತಿತ್ವಗಳು - ಮುಖವಾಡಗಳು ಬೆತ್ತಲಾಗುತ್ತಿವೆ. ಅರ್ಥಮಾಡಿಕೊಳ್ಳಬೇಕಾಗಿರುವುದು ಸಾಮಾನ್ಯ ಜನರಾದ ನಾವು ಮಾತ್ರ. ವಾ....ವಾ...ವಾ...ವಾ...ವಾ… Super...... Super........ Super...,
ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ ಮತ್ತು ಪದ ಪ್ರಯೋಗ. ರಾಜಕಾರಣಿಗಳು - ಸಂಸ್ಕಾರವಂತರು ಮುಂತಾದವರಿಂದ ಸ್ವಚ್ಚಂದ ಭಾಷಾ ಪ್ರಯೋಗ. ಭಾಷೆಯಲ್ಲಿ ಇದ್ದ ಕೆಟ್ಟ ಮತ್ತು ಒಳ್ಳೆಯ ಪದಗಳ ಅಂತರ ಇಲ್ಲವಾಗಿಸಿದ ಮಹತ್ಸಾಧನೆ. ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ನಮ್ಮ ಮಕ್ಕಳು ಇದರಿಂದ ಪ್ರಭಾವ ಹೊಂದಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆ ಇದೆ..!
ಒಬ್ಬ ಹುಚ್ಚು ಶಾಸಕ - ಮಂತ್ರಿ - ಮಾಜಿ ಮಂತ್ರಿ ಸಾರ್ವಜನಿಕವಾಗಿ ಒಂದು ಅತ್ಯುತ್ತಮ ಭಾಷಾ ಪ್ರಯೋಗ. ಅದಕ್ಕೆ ಮತ್ತಷ್ಟು ಹುಚ್ಚು ನಾಯಕರ ಇನ್ಬೊಂದಿಷ್ಟು ಹುಚ್ವು ಭಾಷಾ ವಿರೋಧ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಉತ್ಕೃಷ್ಟ ಭಾಷಾ ಪ್ರಯೋಗದ ಪ್ರತಿಕ್ರಿಯೆ, ಅದನ್ನು ಮಾಧ್ಯಮಗಳು ಜನರಿಗೆ ಮತ್ತಷ್ಟು ಸ್ಪಷ್ಟವಾಗಿ ಅರ್ಥಮಾಡಿಸಲು ಹತ್ತಾರು ಸಲ ಮತ್ತೆ ಮತ್ತೆ ಪ್ರಸಾರ. Excellent..... Excellent.....Excellent......
ನಾವು ಚಿಕ್ಕ ವಯಸ್ಸಿನಿಂದ ಕಲಿತುಕೊಂಡು ಬಂದಿದ್ದ ಭಾಷಾ ಸಂಸ್ಕಾರದ ಸಭ್ಯತೆ ಸಂಯಮ ತಟ್ಟನೆ ಮಾಯ. ಹುಚ್ಚು ಹಿಡಿದಂತೆ ಕೂಗಾಟ ಹಾರಾಟ ಒದರಾಟಗಳೇ ಮಾಧ್ಯಮ ಲೋಕದ ಹೊಸ ಆಕರ್ಷಕ ಭಾಷೆ. ಪಿಂಪ್ - ವೇಶ್ಯೆ - ತಲೆ ಹಿಡುಕ - ಕಚ್ಚೆ ಹರುಕ - ಕೊಲೆಗಡುಕ - ನಾಲಿಗೆ ಕತ್ತರಿಸುತ್ತೇನೆ - ತಲವಾರು ಹಿಡಿಯುತ್ತೇನೆ. ಕೋಗಿಲೆಯ ಕುಹೂ ಕುಹೂ ಗಾನ ಕೇಳಿ ಆನಂದಿಸುವವರಿಲ್ಲ. ಹುಚ್ಚು ನಾಯಿ ಬೊಗಳಿದರೆ ಸಾವಿರಾರು ನಾಯಿಗಳು ಅದಕ್ಕಿಂತಲೂ ಜೋರಾಗಿ ಬೊಗಳುವ ಹೊಸ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹುಚ್ಚು ನಾಯಿಗೆ ಮಹತ್ವ ಕೊಡಬೇಕೋ ಅಥವಾ ಕೋಗಿಲೆಗೋ ಎಂಬ ಸೂಕ್ಷ್ಮತೆ ಸಹ ಈಗ ಜನರಲ್ಲೂ ಉಳಿದಿಲ್ಲ. ಸಂಜೆಯ ಚರ್ಚಾ ಕಾರ್ಯಕ್ರಮಕ್ಕೆ ಹುಚ್ವು ನಾಯಿಯೇ ಆಹಾರ. ಕೋಗಿಲೆಯ ಧ್ವನಿ ಕರ್ಕಶ.
ಅಗೋ ಅಲ್ಲಿ ನೋಡಿ, ನಿಮ್ಮ ಪಕ್ಕದಲ್ಲೇ ಆ ಎಳೆಯ ಕಂದ ತಾಯಿ ಎದೆ ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ನೋಡುತ್ತಿದೆ. ಅದಕ್ಕಿನ್ನೂ ಮಾತು ಬರುತ್ತಿಲ್ಲ. ಅದಕ್ಕೆ ಯಾವ ಭಾಷೆ ಕಲಿಸುತ್ತೀರಿ. ಒಂದು ಮಾತನ್ನು ಸ್ಪಷ್ಟವಾಗಿ ನೆನೆಪಿಡಿ. ಯಾರದೇ ಆಗಲಿ " ಬೈಗುಳದ ಭಾಷೆ ಆಡುವವನ ಯೋಗ್ಯತೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಹೇಳಿಸಿಕೊಂಡವನ ಯೋಗ್ಯತೆಯನ್ನಲ್ಲ."
ಸೂಳೆ ಎಂಬ ತಾಯ್ತನದ ಹೆಣ್ಣು ತನ್ನ ಅನಿವಾರ್ಯತೆಗೆ ತನ್ನ ದೇಹವನ್ನು ದುಡಿಸಿಕೊಂಡು ಜೀವಿಸಬಹುದು. ಅದು ಸೃಷ್ಟಿಯ ಮೂಲದಿಂದ ಆಕೆಯ ಸ್ವಾತಂತ್ರ್ಯವೂ ಹೌದು. ಆದರೆ ಇದೇ ಸಮಾಜದಲ್ಲಿ ಬೇರೆಯವರ ದೇಹವನ್ನು ತನ್ನ ಸುಖಕ್ಕಾಗಿ ಅಡವಿಟ್ಟು ಜೀವಿಸುತ್ತಿರುವ ಕಿರಾತಕರು ನಮ್ಮ ನಡುವೆಯೇ ಇದ್ದಾರೆ ಮತ್ತು ನಮ್ಮಿಂದಲೇ ಗೌರವವನ್ನೂ ಪಡೆಯುತ್ತಿದ್ದಾರೆ. ಆದ್ದರಿಂದ ಹುಚ್ಚು ನಾಯಿಗಳು ಬೊಗಳುವುದನ್ನು ತಡೆಯುವ ಸಾಮರ್ಥ್ಯ ಸದ್ಯ ನಮಗಿಲ್ಲ. ಅದನ್ನು ನಾಶ ಮಾಡಲೂ ಈ ಕ್ಷಣಕ್ಕೆ ಸಾಮಾನ್ಯರಾದ ನಮಗೆ ಆಗುವುದಿಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಹುಚ್ಚು ಹಿಡಿದಂತೆ ಆಡುತ್ತಿದೆ.
ಆದರೆ ನಾಗರಿಕ ಪ್ರಜ್ಞೆಯ ಸಭ್ಯತೆ ಸಂಯಮ ನಮ್ಮಲ್ಲಿ ಅಳವಡಿಸಿಕೊಂಡರೆ ಅದೇ ಹುಚ್ಚು ನಾಯಿ ಕಚ್ಚುವುದಕ್ಕೆ ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಯ ರೇಬೀಸ್ ಚುಚ್ಚುಮದ್ದಿನ ಚಿಕಿತ್ಸೆ. ಅದರಿಂದ ನಾವು ಸುರಕ್ಷಿತವಾಗುತ್ತೇವೆ. ಹುಚ್ಚು ನಾಯಿ ದೀರ್ಘಕಾಲ ಬದುಕದೇ ತನ್ನಿಂದ ತಾನೇ ಸಾಯುತ್ತದೆ. ಇಲ್ಲದಿದ್ದರೆ ಹುಚ್ಚು ನಾಯಿಗಳು ಕಚ್ಚಿ ಒಂದು ಇಡೀ ಸಮಾಜ ಹುಚ್ಚುಚ್ಚಾಗಿ ಆಡುತ್ತದೆ. ಮುಂದಿನ ಜನಾಂಗ ಸಂಪೂರ್ಣ ಹುಚ್ಚರಾಗುತ್ತಾರೆ. ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು..!
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ