ಆರ್.ನಾಗೇಂದ್ರ ರಾವ್ ಎಂಬ ಮರೆಯಲಾಗದ ಕಲಾವಿದ
ನೀವು ಹಳೆಯ ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದರೆ ನಿಮಗೆ ಖಂಡಿತವಾಗಿಯೂ ಆರ್.ನಾಗೇಂದ್ರ ರಾವ್ (ಆರ್ ಎನ್ ಆರ್) ಅವರ ಪರಿಚಯವಿದ್ದೇ ಇರುತ್ತದೆ. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ' ದಲ್ಲಿ ರಾವಣನ ಪಾತ್ರ ಮಾಡಿದ ವ್ಯಕ್ತಿಯೇ ಇವರು. ಆ ಚಿತ್ರದಲ್ಲಿ ನಟನೆ ಮಾತ್ರವಲ್ಲ, ಸಂಗೀತ ನಿರ್ದೇಶನವನ್ನೂ ನಾಗೇಂದ್ರ ರಾವ್ ಅವರು ಮಾಡಿದ್ದರು. ಈ ವರ್ಷ ಜೂನ್ ೨೩ ರಂದು ಇವರ ೧೨೫ನೇಯ ಹುಟ್ಟು ಹಬ್ಬದ ದಿನ. ಇವರು ಕನ್ನಡದ ಮೊದಲ ಬಹುಭಾಷಾ ನಟರು, ನಿರ್ದೇಶಕರು. ಇಂದು ಇವರನ್ನು ನೆನಪಿಸಿಕೊಳ್ಳುವವರು ಕಮ್ಮಿ. ಈ ಕಾರಣಕ್ಕಾಗಿಯೇ ಅವರದೊಂದು ಪುಟ್ಟ ಪರಿಚಯ ಮಾಡಿಕೊಡುತ್ತಿರುವೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಟ್ಟೆಹಳ್ಳಿಯಲ್ಲಿ ೧೮೯೬ರ ಜೂನ್ ೨೩ರಂದು ಜನಿಸಿದರು ನಾಗೇಂದ್ರ ರಾವ್. ಇವರ ತಂದೆ ರಟ್ಟೆಹಳ್ಳಿ ಕೃಷ್ಣರಾವ್ ಹಾಗೂ ತಾಯಿ ರುಕ್ಮಿಣಿ ದೇವಿ. ತಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರದಿಂದ ಅವರು ಕೆಲಸ ಬಿಟ್ಟು ಮೈಸೂರಿಗೆ ಬರುತ್ತಾರೆ. ಬಾಲ್ಯದಿಂದಲೂ ನಟನೆಯಲ್ಲಿ ಬಹಳ ಆಸಕ್ತಿ ಇದ್ದ ಬಾಲಕ ನಾಗೇಂದ್ರ ರಾವ್ ‘ಇಂದಿರಾನಂದ’ ಎಂಬ ನಾಟಕದಲ್ಲಿ ಪುಟ್ಟ ಪಾತ್ರ ಮಾಡುತ್ತಾರೆ. ಹೀಗೆ ಅವರ ಕಲಾವಿದನ ಬದುಕು ಮುಂದಡಿಯಿಡುತ್ತದೆ. ಸಂಗೀತವನ್ನು ಕಲಿಯುತ್ತಾರೆ. ನಾಟಕಗಳನ್ನು ಬರೆದು ನಿರ್ದೇಶಿಸಿ, ಅಭಿನಯಿಸುತ್ತಾರೆ. ಒಂದು ರೀತಿಯಲ್ಲಿ ಸವ್ಯಸಾಚಿಯಂತೆ ಕೆಲಸ ಮಾಡುತ್ತಾರೆ. ರಾಜಸೂಯ ಯಾಗ, ದಾನಶೂರ ಕರ್ಣ, ವೀರ ಅಭಿಮನ್ಯು ಮುಂತಾದ ನಾಟಕಗಳನ್ನು ಬರೆದು ಅವುಗಳಲ್ಲಿ ಅಭಿನಯಿಸುತ್ತಾರೆ ನಾಗೇಂದ್ರ ರಾಯರು.
೧೯೩೧ರಲ್ಲಿ ಭಾರತದಲ್ಲಿ ಚಲನ ಚಿತ್ರದ ಯುಗ ಪ್ರಾರಂಭವಾಯಿತು. ಮೊದಲಿಗೆ ಮೂಕಿ ಚಿತ್ರಗಳು ನಂತರ ಟಾಕಿ ಚಿತ್ರಗಳು ಪ್ರಾರಂಭವಾದುವು. ನಾಗೇಂದ್ರ ರಾಯರಿಗೆ ತಮ್ಮ ಭವಿಷ್ಯ ಚಿತ್ರರಂಗದಲ್ಲಿದೆ ಎಂದು ಮನಸ್ಸಿನಲ್ಲಿ ಅನಿಸುತ್ತಿತ್ತು. ಆ ಸಮಯದಲ್ಲಿ ಚಲನ ಚಿತ್ರಗಳು ಹೆಚ್ಚಾಗಿ ಈಗಿನ ಮುಂಬೈ (ಬಾಂಬೆ) ಯಲ್ಲಿ ತಯಾರಾಗುತ್ತಿದ್ದುವು. ಭಾಷಾ ತೊಡಕು ಇದ್ದರೂ ಹಿಂಜರಿಯದೇ ಮುಂಬೈಗೆ ಹೊರಟೇ ಬಿಟ್ಟರು. ಪರಿಚಯದವರಿಂದ ಹಣಕಾಸಿನ ನೆರವನ್ನು ಪಡೆದುಕೊಂಡು ಮುಂಬೈಗೆ ತೆರಳಿದರು. ಇದರಿಂದ ಇವರ ಭಾಗ್ಯದ ಬಾಗಿಲು ತೆರೆಯಿತು.
ಮುಂಬೈಗೆ ತೆರಳಿದ ನಾಗೇಂದ್ರರಾಯರಿಗೆ ‘ಇಂಪೀರಿಯಲ್ ಕಂಪೆನಿ’ಯ ಇರಾನಿ (ಮೊದಲ ಟಾಕಿ ಚಿತ್ರ ‘ಆಲಮ್ ಆರಾ’ ದ ನಿರ್ಮಾತೃ) ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಅವರ ಕಂಪೆನಿಯ ಮೂಲಕ ರಾಯರು ತೆಲುಗು ಹಾಗೂ ತಮಿಳು ಚಿತ್ರದಲ್ಲಿ ನಟಿಸುತ್ತಾರೆ. ‘ಪಾರಿಜಾತ ಪುಷ್ಪಾಪಹರಣಂ’ ಎಂಬ ತಮಿಳು ಚಿತ್ರದಲ್ಲಿನ ಇವರ ನಾರದರ ಪಾತ್ರವು ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಮುಂದಿನ ಚಿತ್ರದ ಚಿತ್ರೀಕರಣಕ್ಕೆ ಸ್ವಲ್ಪ ಸಮಯ ಇದ್ದುದರಿಂದ ನಾಗೇಂದ್ರರಾಯರು ಮೈಸೂರಿಗೆ ಹಿಂದಿರುಗುತ್ತಾರೆ. ಅಲ್ಲಿ ಅವರಿಗೆ ಖ್ಯಾತ ನಟ, ನಿರ್ದೇಶಕ ಸುಬ್ಬಯ್ಯ ನಾಯ್ಡು ಅವರ ಪರಿಚಯವಾಗುತ್ತದೆ. ನಂತರ ನಡೆದದ್ದು ಇತಿಹಾಸ.
ಆ ಸಮಯ ಸುಬ್ಬಯ್ಯ ನಾಯ್ಡು ಅವರು ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ ಯನ್ನು ಸ್ಥಾಪಿಸಿದ್ದರು. ನಾಗೇಂದ್ರರಾಯರು ಇದರ ಪಾಲುದಾರರಾಗಿ ಸೇರಿಕೊಳ್ಳುತ್ತಾರೆ. ಆ ಸಮಯ ನಾಗೇಂದ್ರರಾಯರಿಗೆ ರತ್ನಾಬಾಯಿ ಎಂಬುವವರೊಂದಿಗೆ ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿದ್ದರು. ಸುಬ್ಬಯ್ಯ ನಾಯ್ಡು ಅವರ ಆತ್ಮೀಯತೆಯು ಅವರನ್ನು ಮತ್ತೆ ಮುಂಬೈಗೆ ಹೋಗಲು ಬಿಡುವುದಿಲ್ಲ. ಮುಂಬೈ ಚಿತ್ರ ಲೋಕಕ್ಕೆ ಗುಡ್ ಬೈ ಹೇಳುತ್ತಾರೆ.
ಬೆಂಗಳೂರಿನ ‘ಸೌತ್ ಇಂಡಿಯನ್ ಫಿಲ್ಮ್ ಕಂಪೆನಿ' ಕನ್ನಡದ ಮೊದಲ ಟಾಕಿ ಚಿತ್ರವಾದ ‘ಸತಿ ಸುಲೋಚನ' ತಯಾರಿಸಿದ ಸಮಯದಲ್ಲಿ ನಾಗೇಂದ್ರರಾವ್ ಅವರು ಅದರಲ್ಲಿ ರಾವಣನ ಪಾತ್ರ ಮಾಡುತ್ತಾರೆ. ಸಂಗೀತ ನಿರ್ದೇಶನದ ಹೊಣೆಯನ್ನೂ ಹೊತ್ತುಕೊಳ್ಳುತ್ತಾರೆ. ಈ ಚಿತ್ರದ ನಂತರ ನಾಗೇಂದ್ರರಾಯರು ತಮ್ಮ ಮೆಚ್ಚಿನ ನಾಟಕ ರಂಗಕ್ಕೆ ಮರಳುತ್ತಾರೆ. ‘ಭೂಕೈಲಾಸ' ನಾಟಕದಲ್ಲಿ ನವೀನ ಪ್ರಯೋಗಗಳನ್ನು ಮಾಡಿ ಆ ನಾಟಕ ಯಶಸ್ವಿಯಾಗುವಂತೆ ಮಾಡುತ್ತಾರೆ.
೧೯೪೯ರಲ್ಲಿ ನಾಗೇಂದ್ರ ರಾಯರು ‘ವಸಂತಸೇನೆ' ಎಂಬ ಚಲನ ಚಿತ್ರವನ್ನು ಪಾಲುದಾರಿಕೆಯಲ್ಲಿ ತಯಾರಿಸಿ ಅದರಲ್ಲಿ ಶಕಾರನ ಪಾತ್ರ ಮಾಡುತ್ತಾರೆ. ನಾಗೇಂದ್ರರಾಯರು ಈ ಚಿತ್ರದಲ್ಲಿ ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳ ಉಸ್ತುವಾರಿಯನ್ನೂ ಹೊತ್ತಿದ್ದರು. ನಂತರ ರಾಯರು ಹಿಂದಿರುಗಿ ನೋಡಿದ್ದೇ ಇಲ್ಲ. ಮಹಾತ್ಮಾ ಕಬೀರ್, ಜಾತಕ ಫಲ, ಪ್ರೇಮದ ಪುತ್ರಿ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು ಮುಂತಾದ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ಗಾಳಿಗೋಪುರ, ವೀರಕೇಸರಿ, ನಕ್ಕರೆ ಅದೇ ಸ್ವರ್ಗ, ಸಾಕ್ಷಾತ್ಕಾರ, ಹಣ್ಣೆಲೆ ಚಿಗುರಿದಾಗ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಾರೆ. ಕನ್ನಡ ಮಾತ್ರವಲ್ಲ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳನ್ನೂ ನಿರ್ದೇಶಿಸಿದ ಖ್ಯಾತಿ ಇವರದ್ದು. ‘ಹಣ್ಣೆಲೆ ಚಿಗುರಿದಾಗ’ ಚಿತ್ರದ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಕರ್ನಾಟಕ ಸರಕಾರದಿಂದ ಇವರಿಗೆ ಲಭಿಸುತ್ತದೆ. ಈ ಚಿತ್ರದಲ್ಲಿ ನಟಿಸುವಾಗ ರಾಯರಿಗೆ ೭೨ ವರ್ಷ.
ನರಸಿಂಹ ರಾಜು ಜೊತೆ ನಟಿಸಿದ ‘ಪ್ರೊಫೆಸರ್ ಹುಚ್ಚೂರಾಯ' ಚಿತ್ರ ಇವರ ನಟನೆಯ ಕೊನೆಯ ಚಿತ್ರ. ನಟನೆ, ನಿರ್ಮಾಣ, ನಿರ್ದೇಶನ, ಚಿತ್ರಕಥೆ, ಗೀತೆ ರಚನೆ ಹೀಗೆ ಹಲವಾರು ವಿಭಾಗಗಳಲ್ಲಿ ಕೈಯಾಡಿಸಿದ ಖ್ಯಾತಿ ನಾಗೇಂದ್ರರಾಯರಿಗೆ ಸಲ್ಲುತ್ತದೆ. ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ನ ಮೊದಲ ಪ್ರಾಂಶುಪಾಲರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ‘ಇದು ನನ್ನ ಕಥೆ' ಎಂಬುವುದು ಇವರ ಆತ್ಮಕಥೆ.
ಚಿತ್ರರಂಗದಲ್ಲಿನ ಇವರ ಸಾಧನೆಯನ್ನು ಗಮನಿಸಿದ ಭಾರತ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ರಾಯರು ದೆಹಲಿಗೆ ಹೋಗಲೇ ಇಲ್ಲ. ಅದಕ್ಕೆ ಕಾರಣ ಅವರ ದ್ವಿತೀಯ ಪತ್ನಿಯ ಅನಾರೋಗ್ಯ. ಇವರ ಮೊದಲ ಮಡದಿ ರತ್ನಾಬಾಯಿ ಕ್ಯಾನ್ಸರ್ ಕಾಯಿಲೆಗೆ ಬಲಿಯಾದ ಬಳಿಕ ಇವರು ‘ಸತಿ ಸುಲೋಚನ' ಸಮಯದಲ್ಲಿ ಪರಿಚಯವಾದ ಸಹಕಲಾವಿದೆ ಕಮಲಾಬಾಯಿಯನ್ನು ಮದುವೆಯಾಗಿದ್ದರು. ನಾಗೇಂದ್ರರಾಯರಿಗೆ ಆ ಸಮಯದಲ್ಲೇ ಮೊದಲ ಪತ್ನಿಯಿಂದ ಮೂವರು ಮಕ್ಕಳಿದ್ದರು (ಆರ್ ಎನ್ ಜಯಗೋಪಾಲ್, ಸುದರ್ಶನ್, ಕೃಷ್ಣ ಪ್ರಸಾದ್). ಆದರೆ ಕಮಲಾಬಾಯಿಯವರಿಗೆ ಮಕ್ಕಳಾಗಲಿಲ್ಲ. ದತ್ತಕಕ್ಕೆ ಓರ್ವ ಪುತ್ರನನ್ನು ತೆಗೆದುಕೊಂಡರೂ ಅವನೂ ಅಕಾಲ ಮೃತ್ಯುವಿಗೆ ಗುರಿಯಾಗುತ್ತಾನೆ. ಕಮಲಾಬಾಯಿಯವರಿಗೆ ಒಂದು ಶಸ್ತ್ರಚಿಕಿತ್ಸೆಯಾದಾಗ ವೈದ್ಯರ ನಿರ್ಲಕ್ಷದ ಪರಿಣಾಮ ಅವರ ಎರಡೂ ಕಾಲುಗಳನ್ನು ಕತ್ತರಿಸಿ ತೆಗೆಯಬೇಕಾಗುತ್ತದೆ. ಆದರೆ ನಾಗೇಂದ್ರರಾಯರು ತಮ್ಮ ಪತ್ನಿಗೆ ಹೀಗಾಯಿತಲ್ಲ ಎಂದು ಅವರನ್ನು ನಿರ್ಲಕ್ಷಿಸದೇ ಸಾಯುವ ತನಕ ಸೇವೆ ಮಾಡುತ್ತಾರೆ. ಆ ಸಮಯದಲ್ಲಿ ನಾಗೇಂದ್ರ ರಾಯರು ಖ್ಯಾತಿವೆತ್ತ ನಟರೂ, ನಿರ್ದೇಶಕರೂ ಆಗಿದ್ದರು. ಆದರೂ ತಮ್ಮ ಪತ್ನಿಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಡುಗೆ ಮಾಡಿ ಊಟ ಮಾಡಿಸಿ, ಸ್ನಾನ ಮಾಡಿಸಿ, ಕಡೆಗೆ ಕೂದಲನ್ನು ಬಾಚಿ ಜಡೆಕಟ್ಟುವ ತನಕ ಎಲ್ಲ ಸೇವೆಯನ್ನು ಅವರು ತಮ್ಮ ಪತ್ನಿಗಾಗಿ ಮಾಡಿದರು. ಏಕೆಂದರೆ ಅವರನ್ನು ರಾಯರು ತುಂಬಾನೇ ಪ್ರೀತಿಸುತ್ತಿದ್ದರು. ೧೯೭೬ರಲ್ಲಿ ಇವರಿಗೆ ಪದ್ಮಶ್ರೀ ಪುರಸ್ಕಾರ ಬಂತು. ಇದು ಕನ್ನಡ ಚಿತ್ರರಂಗಕ್ಕೆ ಸಂದ ಮೊದಲ ಪದ್ಮಶ್ರೀ ಪ್ರಶಸ್ತಿ. ಪ್ರಶಸ್ತಿ ಪುರಸ್ಕಾರದ ದಿನ ಪತ್ರಿಕೆಗಳಲ್ಲಿ ನಾಗೇಂದ್ರರಾಯರ ಬಗ್ಗೆ ‘ರಾಷ್ಟ್ರಮಟ್ಟದಲ್ಲಿ ಹಾರಾಡಿದ ಕನ್ನಡ ಬಾವುಟ ; ನಾಗೇಂದ್ರ ರಾವ್ ಅವರಿಗೆ ಪದ್ಮಶ್ರೀ ಗೌರವ’ ಎಂದು ಮುದ್ರಿತವಾಗಿತ್ತು. ಆದರೆ ನಾಗೇಂದ್ರರಾಯರು ಕಂಟೋನ್ ಮೆಂಟ್ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳುವುದನ್ನು ಗಮನಿಸಿದ ಓರ್ವರು ಗಾಬರಿಯಾಗಿ ‘ಸ್ವಾಮೀ, ನೀವಿಂದು ಡೆಲ್ಲಿಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಳ್ಳಲು ಹೋಗಬೇಕಿತ್ತಲ್ಲವೇ?' ಎಂದರು. ಅದಕ್ಕೆ ನಾಗೇಂದ್ರ ರಾಯರು ಕೊಟ್ಟ ಉತ್ತರವು ಹೀಗಿತ್ತು ‘ನನ್ನ ಪದ್ಮಶ್ರೀ ಮನೆಯಲ್ಲಿದ್ದಾಳಪ್ಪಾ, ಅವಳನ್ನು ಚೆನ್ನಾಗಿ ನೋಡುವುದಕ್ಕಿಂತ ದೊಡ್ಡ ಗೌರವ- ಸನ್ಮಾನಗಳು ನನಗೆ ಬೇರೆ ಯಾವುದಿದೆ?’ ಎಂದರು. ಈ ಒಂದು ಮಾತು ನಾಗೇಂದ್ರ ರಾಯರ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಅವರ ಚಿತ್ರದಲ್ಲಿ ತೋರಿಸಿಕೊಂಡು ಬಂದ ಆದರ್ಶಗಳನ್ನು ಅವರು ಜೀವನದಲ್ಲೂ ಪಾಲಿಸಿದರು.
ಇಂತಹ ಮೇರು ವ್ಯಕ್ತಿ ಫೆಬ್ರವರಿ ೯,೧೯೭೭ರಂದು ನಿಧನ ಹೊಂದಿದರು. ಚಲನ ಚಿತ್ರರಂಗದ ಭೀಷ್ಮನ ಕಣ್ಮರೆಯಾಯಿತು. ಆದರೂ ಎನ್. ನಾಗೇಂದ್ರ ರಾವ್ ಅವರು ನಟಿಸಿದ, ನಿರ್ದೇಶಿಸಿದ ಅಂದಿನ ಕಪ್ಪು ಬಿಳುಪು ಚಿತ್ರಗಳು ಈಗಲೂ ನಮ್ಮ ಜೀವನದಲ್ಲಿ ವರ್ಣ ತುಂಬುತ್ತಿದೆ ಎನ್ನುವುದು ಸುಳ್ಳಲ್ಲ.
ಚಿತ್ರ ಕೃಪೆ: ಅಂತರ್ಜಾಲ ತಾಣ