ಆಲಿಕಲ್ಲು ಮಳೆ – ರೈತರ ಬದುಕಿಗೇ ಕಲ್ಲು

ಆಲಿಕಲ್ಲು ಮಳೆ – ರೈತರ ಬದುಕಿಗೇ ಕಲ್ಲು

ಮಾರ್ಚ್ 2023ರ ಮೂರನೆಯ ವಾರದಲ್ಲಿ ಉತ್ತರ ಕರ್ನಾಟಕದ ಕೆಲವೆಡೆ ಆಲಿಕಲ್ಲು ಮಳೆ ಅಪ್ಪಳಿಸಿದೆ. ಇದರಿಂದಾಗಿ ನೂರಾರು ರೈತರ ಹೊಲದಲ್ಲಿ ಬೆಳೆದು ನಿಂತ ಬೆಳೆ ನಷ್ಟವಾಗಿದೆ. ಅದಲ್ಲದೆ, ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವೆಡೆ ದ್ರಾಕ್ಷಿ ಬೆಳೆಯೂ ಹಾನಿಗೊಳಗಾಗಿದೆ. ಉತ್ತರಭಾರತದಲ್ಲಿಯೂ ಇದೇ ಸಮಯದಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಅಪಾರ ಬೆಳೆ ನಷ್ಟವಾಗಿದೆ.  ಈ ಹಿನ್ನೆಲೆಯಲ್ಲಿ, ಒಂಭತ್ತು ವರುಷಗಳ ಮುಂಚೆ, 2014ರಲ್ಲಿ ಪ್ರಕೃತಿ ಹೀಗೆಯೇ ಮುನಿದಾಗ ಅನ್ನದಾತರು ಅನುಭವಿಸಿದ್ದ ಜೀವಹಾನಿ ಮತ್ತು ಬೆಳೆಹಾನಿ ಹಾಗೂ ಅವರ ಸಂಕಟಗಳನ್ನು ಈ ಲೇಖನದಲ್ಲಿ ದಾಖಲಿಸಿದ್ದೇನೆ.
ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಾರ್ಚ್ 2014ರಲ್ಲಿ ಅಪ್ಪಳಿಸಿದ ಆಲಿಕಲ್ಲು ಮಳೆಯಿಂದಾಗಿ ಆಗಿರುವ ಬೆಳೆ ನಷ್ಟ ರೂಪಾಯಿ 890 ಕೋಟಿಗಿಂತ ಅಧಿಕ. ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬೀದರ್ ಸಹಿತ ಎಂಟು ಜಿಲ್ಲೆಗಳಲ್ಲಿ ಸಾವಿರಾರು ರೈತರ ಬದುಕು ತತ್ತರ. ಜಖಂಗೊಂಡ ಮನೆಗಳು ನೂರಾರು.
ಅನಂತರ 28 ಎಪ್ರಿಲ್ 2014ರಂದು ಜರಗಿದ ಕರ್ನಾಟಕ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸುಮಾರು 150 ಗ್ರಾಮಗಳನ್ನು “ವಿಪತ್ತು ಪೀಡಿತ ಗ್ರಾಮ”ಗಳೆಂದು ಘೋಷಿಸಲು ನಿರ್ಧರಿಸಲಾಗಿದೆ. ಆ ಸಭೆಯ ಇತರ ಮಹತ್ವದ ತೀರ್ಮಾನಗಳು: ಬಾಧಿತ ಗ್ರಾಮಗಳ ರೈತರ ಸಾಲದ ಬಡ್ಡಿ ಮನ್ನಾ ಮತ್ತು ಸಾಲದ ಅಸಲನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವುದು; ಪ್ರತಿ ಹೆಕ್ಟೇರಿಗೆ ಮಳೆಯಾಶ್ರಿತ ಜಮೀನಿಗೆ ರೂ.15,000, ನೀರಾವರಿ ಜಮೀನಿಗೆ ರೂ.25,000 ಮತ್ತು ತೋಟಗಾರಿಕಾ ಬೆಳೆಗೆ ರೂ.40,000 ಪರಿಹಾರ ನೀಡುವುದು. ಆದರೆ ಒಬ್ಬ ರೈತನಿಗೆ ಪರಿಹಾರದ ಮೊತ್ತವನ್ನು ಒಂದು ಹೆಕ್ಟೇರಿಗೆ ಸೀಮಿತಗೊಳಿಸಲಾಗಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ, ನಮ್ಮ ದೇಶದ ಇತರ ಆರು ರಾಜ್ಯಗಳ ಲಕ್ಷಗಟ್ಟಲೆ ರೈತರ ಬದುಕಿಗೆ ಅಬ್ಬರದ ಆಲಿಕಲ್ಲು ಮಳೆ ಕೊಳ್ಳಿಯಿಟ್ಟಿದೆ. 2014ರ ಫೆಬ್ರವರಿ 24ರಿಂದ ಮಾರ್ಚ್ 14 ವರೆಗೆ ಸುರಿದ ಆ ಪ್ರಚಂಡ ಮಳೆಯಿಂದಾಗಿ 5.5 ದಶಲಕ್ಷ ಹೆಕ್ಟೇರುಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ – ಪಂಜಾಬ್, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ.
ಆಲಿಕಲ್ಲು ಮಳೆಯ ಏಟಿನ ದಾರುಣ ಪ್ರಕರಣಗಳು ನೂರಾರು. ಮಧ್ಯಪ್ರದೇಶದ ದಾಮೊ ಜಿಲ್ಲೆಯ ರಾಮಘಡ ಹಳ್ಳಿಯ ರಘುವೀರ ಲಾಲ್ 22 ವಯಸ್ಸಿನ ಯುವರೈತ. ಈ ಹಂಗಾಮಿನಲ್ಲಿ ನಾಲ್ಕು ಹೆಕ್ಟೇರ್ ಜಮೀನಿನ ಗೇಣಿ (ಲೀಸ್) ವೆಚ್ಚ ಮತ್ತು ಬೀಜ ಹಾಗೂ ಗೊಬ್ಬರಗಳಿಗಾಗಿ ಆತ ಲೇವಾದೇವಿದಾರನಿಂದ ಪಡೆದಿದ್ದ ಸಾಲ ರೂ.1.5 ಲಕ್ಷ. ಹೊಲದಲ್ಲಿ ಬೆಳೆದು ನಿಂತಿದ್ದ ತೊಗರಿ ಮತ್ತು ಉದ್ದಿನ ಬಂಪರ್ ಬೆಳೆಯಿಂದ ಆ ಸಾಲ ತೀರಿಸಿ, ಚೆನ್ನಾಗಿ ಬದುಕುವ ಕನಸು ಆತನದು. ಆದರೆ 2014 ಮಾರ್ಚ್ 10ರ ರಾತ್ರಿ ಅಲ್ಲಿ ಸುರಿಯಿತು ಆಲಿಕಲ್ಲುಭರಿತ ಮಳೆ. ಬೆಳೆಯ ಗತಿ ಏನಾಯಿತೆಂದು ನೋಡಲಿಕ್ಕಾಗಿ ರಾತ್ರಿ 9 ಗಂಟೆಗೆ ಹೊಲಕ್ಕೆ ನಡೆದ ರಘುವೀರ ಲಾಲ್ ಮರಳಿ ಬರಲೇ ಇಲ್ಲ. ಹಾಗಾಗಿ ಅವನ ತಂದೆ ಬಚ್ಚೇ ಲಾಲ್ ಹೊಲಕ್ಕೆ ಹೋದರು. ಅಲ್ಲಿ ಆ ತಂದೆ ಕಂಡದ್ದು ಮರದಿಂದ ನೇತಾಡುತ್ತಿದ್ದ ತನ್ನ ಒಬ್ಬನೇ ಒಬ್ಬ ಮಗನ ಶವವನ್ನು. ಅಲ್ಲೇ, ಅವರೂ ಇನ್ನೊಂದು ಮರಕ್ಕೆ ನೇಣು ಹಾಕಿಕೊಂಡರು. ಗಂಡನನ್ನೂ ಮಗನನ್ನೂ ಒಟ್ಟಾಗಿ ಕಳೆದುಕೊಂಡ ತಾಯಿ ನಾನಿ ಬಾಯಿ “ನನಗೇನೂ ಗೊತ್ತಾಗುತ್ತಿಲ್ಲ” ಎಂದು ಬಿಕ್ಕಳಿಸುತ್ತಾಳೆ.
ಮಹಾರಾಷ್ಟ್ರದ ನಾಸಿಕದ ದರೇಗಾಂವ್ ಗ್ರಾಮದ 42 ವರುಷ ವಯಸ್ಸಿನ ಆತ್ಮಾರಾಮ್ ಪವಾರ್ ಅವರದು ವಿಸ್ತಾರವಾದ ಜಮೀನು. ಆಲಿಕಲ್ಲು ಮಳೆಯಿಂದಾಗಿ ಅವರ ರೂಪಾಯಿ 15 ಲಕ್ಷದ ದಾಳಿಂಬೆ ಬೆಳೆ ನಾಶ. ಈ ಆಘಾತ ಸಹಿಸಿಕೊಳ್ಳಲಾಗದೆ ಅವರೂ ವಿಷ ಸೇವಿಸಿ, ಇಹಲೋಕ ತ್ಯಜಿಸಿದ್ದಾರೆ.
ಇದು ಒಬ್ಬಿಬ್ಬರು ರೈತರ ಕತೆಯಲ್ಲ. ರೈತ ಮುಖಂಡರ ಹೇಳುವಂತೆ ಆಲಿಕಲ್ಲು ಮಳೆ ತಮ್ಮ ಬದುಕಿಗೆ ನೀಡಿದ ಹೊಡೆತ ತಾಳಲಾಗದೆ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಸುಮಾರು 100. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರವೊಂದೇ 47 ರೈತರ ಆತ್ಮಹತ್ಯೆ ದಾಖಲಿಸಿದೆ.
ನಾಗಪುರದ ಬೊರ್ಗಾಂವ್ ಗ್ರಾಮದ ದಿಲೀಪ ಪದ್ಮರಾವ್ ಪಾಟೀಲರು “ನಿಮಗಾದ ನಷ್ಟ ಎಷ್ಟು?” ಎಂಬ ಪ್ರಶ್ನೆಗಿತ್ತ ಉತ್ತರ “ಐದಾರು ಲಕ್ಷ ರೂಪಾಯಿ”. ನಿಧಾನವಾಗಿ ಅವರು ಲೆಕ್ಕಾಚಾರಕ್ಕೆ ತೊಡಗಿದರು. “ಐದಾರು ಲಕ್ಷ ರೂಪಾಯಿ ನಷ್ಟ ನಾನು ಕಳೆದುಕೊಂಡ ಕಿತ್ತಳೆ ಫಸಲಿನದು. ನನ್ನ ತೋಟದ 750 ಕಿತ್ತಳೆ ಗಿಡಗಳಲ್ಲಿ ಹೆಚ್ಚಿನವು ಆಲಿಕಲ್ಲಿನ ಹೊಡೆತಕ್ಕೆ ನೆಲಕಚ್ಚಿವೆ; ಉಳಿದವು ತೊಗಟೆ ಕಳಕೊಂಡಿವೆ. ಒಂದು ನೂರು ಗಿಡಗಳು ಉಳಿದಾವು. ಹತ್ತು ವರುಷದ ಆ ಕಿತ್ತಳೆ ಗಿಡಗಳಿಗೆ ಇನ್ನೂ 15 ವರುಷ ಆಯುಸ್ಸಿತ್ತು. ಅವನ್ನು ಬೆಳೆಸಲು 8ರಿಂದ 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೆ. ಎಲ್ಲ ಕಳಕೊಂಡೆ” ಎಂದರು ಹತಾಶೆಯಿಂದ. ಅವರು ಹೊಸ ಕಿತ್ತಳೆ ಸಸಿಗಳನ್ನು ನೆಟ್ಟರೆ ಫಸಲಿಗಾಗಿ ಇನ್ನೂ ಆರು ವರುಷ ಕಾಯಬೇಕು; ಅದಕ್ಕಾಗಿ ಪುನಃ ರೂ.6 ಲಕ್ಷದಿಂದ ರೂ.7 ಲಕ್ಷ ವೆಚ್ಚ ಮಾಡಬೇಕು. ಗೋಧಿ ಮತ್ತು ಕಡಲೆ ಬೆಳೆಸಿದ್ದರು ಪಾಟೀಲ್; ಅವೆರಡೂ ಬೆಳೆ ನಾಶವಾಗಿವೆ. ಮಾತ್ರವಲ್ಲ, ಹೊಸದಾಗಿ ನಿರ್ಮಿಸಿದ ದನದ ಕೊಟ್ಟಿಗೆಯ ಚಾವಣಿ ಹಾರಿ ಹೋಗಿದೆ; ಷೆಡ್ಡಿನಲ್ಲಿ ಪೇರಿಸಿಟ್ಟಿದ್ದ ಮೇವು ಹಾಳಾಗಿ ಹೋಗಿದೆ. “ಇದೆಲ್ಲ ಲೆಕ್ಕಾಚಾರದಿಂದ ಏನಾಗಲಿಕ್ಕಿದೆ? ನನಗಾಗಿರುವ ಇಷ್ಟೆಲ್ಲ ನಷ್ಟಕ್ಕೆ ಸರಕಾರ ಪರಿಹಾರ ಕೊಡುತ್ತದೆಯೇ?” ಎಂದು ಕೇಳುತ್ತಾರೆ ದಿಲೀಪ ಪದ್ಮರಾವ್ ಪಾಟೀಲ್.
ಈ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ. ಯಾರ ಉತ್ತರಕ್ಕೂ ಕಾಯದೆ, ಚಿಂದಿಚಿಂದಿಯಾದ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದಾರೆ ಇಂತಹ ಲಕ್ಷಗಟ್ಟಲೆ ಅನ್ನದಾತರು. ಅವರ ಆತ್ಮವಿಶ್ವಾಸ ನಮಗೆಲ್ಲರಿಗೂ ಬದುಕಿನ ದೊಡ್ದ ಪಾಠವಾಗಲಿ.  

 
ಫೋಟೋ 1ಮತ್ತು 3: ಆಲಿಕಲ್ಲು ಮತ್ತು ಅಕಾಲಿಕ ಮಳೆಯಿಂದಾಗಿ ಹಾನಿಯಾದ ಹೊಲದಲ್ಲಿ ರೈತ
ಫೋಟೋ 2: ಆಲಿಕಲ್ಲು ಮಳೆ ಸುರಿದು ಹಾನಿಯಾದ ಬೆಳೆ  
ಫೋಟೋ 1-2-3 ಕೃಪೆ: ಟ್ರಿಬ್ಯೂನ್ ಇಂಡಿಯಾ, ವಲ್ಡ್ ಅಟ್ಲಾಸ್ ಮತ್ತು ಹಿಂದುಸ್ಥಾನ್ ಟೈಮ್ಸ್