ಆಶಯ‌

ಆಶಯ‌

ಕವನ

ಶೋಧ...

ನನ್ನ ಕೈಯ ಬೊಗಸೆ ತುಂಬ ಇರುವ
ಇಂದು ಈಗ ಇಂದು ಈಗ
ನಿನ್ನೆಯಾಗುವುದನ್ನೆ ನಾನು
ಹಾಗೆ ಸುಮ್ಮನೆ ದಿಟ್ಟಿಸುತ್ತಾ
ನಾಳೆಗಾಗಿ ಕಾಯುತ್ತೇನೆ.

ಯಾರೋ ಕೊಟ್ಟ ಇಷ್ಟು ಅನ್ನ
ಹಣ್ಣೆಲೆಯ ಮೇಲೆ ಇಟ್ಟು
ತಿಂದರೆ ಮುಗಿಯಿತೆಂದು ನೆನೆದು
ಹಳಸುವವರೆಗೆ ಕಾಯುತ್ತೇನೆ.

ಸಂತೆ ಪೇಟೆ ಬೀದಿ ಸುತ್ತಿ
ಇಷ್ಟ ಪಟ್ಟು ಬಣ್ಣ ಮೆಚ್ಚಿ
ಕೊಂಡು ಮಡಚಿ ತೂಗುಹಾಕಿ
ಕರೆಯದ ಸಮಾರಂಭಕ್ಕಾಗಿ ಎತ್ತು ಇಟ್ಟು ಬಟ್ಟೆ ನಾನು
ಬೆತ್ತಲಾಗಿ ಕಾಯುತ್ತೇನೆ.

ದಾರಿಯಲ್ಲಿ ಸಿಕ್ಕ ಚಿನ್ನ
ಚಿನ್ನವೆಂದು ಖಚಿತಗೊಳಲು
ಉಜ್ಜಿ ಉಜ್ಜಿ ತಿಕ್ಕಿ ತೀಡಿ
ಹಾಳು ಮಾಡಿದ್ದಕ್ಕೆ ನಾನು
ಮಮ್ಮಲ ಮರಗುತ್ತೇನೆ.

ಬಾಲ್ಯದಂದು ಹರೆಯಕ್ಕಾಗಿ
ಹರೆಯದಂದು ಯವನಕ್ಕಾಗಿ
ಮಡದಿ, ಮಗುವು, ಆಸ್ತಿಗಾಗಿ
ದುಡಿದು ಸತ್ತು ಸುಣ್ಣವಾಗಿ
ಮತ್ತೆ ಬಾಲ್ಯ ಬರುವುದೆಂದು
ಆಸೆಯಿಂದ ಕಾಯುತ್ತೇನೆ.

ದಿಗಿಲಿನಿಂದ ದಿನವ ನೂಕಿ
ಕಂಡ ಭೂತವನ್ನು ಮರೆತು
ಇಂದು ಎಂಬ ಮುತ್ತ ನಾನು
ನಾಶ ಮಾಡಿ ವ್ಯರ್ಥ ಮಾಡಿ
ಕಾಣದ ನಾಳೆಗಾಗಿ ನಾನು
ತಳಪಾಯ ಹಾಕುತ್ತಾ ಕಾಯುತ್ತೇನೆ.

ಸುಡು ಬೇಸಿಗೆಯಂದು
ಜಿಟಿ ಜಿಟಿ ಮಳೆಗಾಗಿ
ಮಳೆ ಬಂದಾಗ ಮಾಗಿ ಚಳಿಗಾಗಿ
ಚುಮು ಚುಮು ಚಳಿ ಬಂದಾಗ
ಗಮ ಗಮ ವಸಂತಕಾಗಿ
ಬರುವ ಕಾಲಕ್ಕಾಗಿ ನಾನು ಎಂದೂ ಕಾಯುತ್ತೇನೆ...........

ರವೀ............