ಆಶಯ

ಆಶಯ

ಬರಹ

ನಿನ್ನೆ ಹುಟ್ಟಿದ ವರುಷ,
ಹುಟ್ಟುವಾಗಲೇ ಹರುಷ
ತರುವ ಸಂಕೇತ ತೋರಹತ್ತಿತ್ತು
ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ
ಸಂತಸಕ್ಕಿಂತ ಹೆಚ್ಚಿನ ವಿರಸ
ಅತ್ತು ಕರೆದು ದಣಿದು
ಮನತಣಿಸಿತು - ಇನ್ನೇನು ಸತ್ತಿತು
ಆಗದಿರಲಿ ಹೊಸ ವರುಷ ಹಳೆ ವರುಷ

ರಾಜಕೀಯ ದಳ್ಳುರಿ,
ಅಕ್ಕ ಪಕ್ಕದ ಮನೆಯವರೊಡನೆ ವೈಮನಸ್ಯ
ಪಕ್ಕದ ಮನೆಯ ಹುಡುಗರಿಗೆ
ನಮ್ಮ ಹುಡುಗರಿಂದ ಹೊಡೆತ
ಅವರಿಂದ ಮರುಹೊಡೆತದ ಬೆದರಿಕೆ
ಎಂದು ಕೊನೆಯಾಗುವುದೀ ಮಕ್ಕಳಾಟ
ದಿನ ಎದುರಿಸಿವುದೊಂದು ಪ್ರಾಣ ಸಂಕಟ
ನಾಳೆ ಸಾಯುತಿದೆ ಹಳೆ ವರುಷ
ಆಗದಿರಲಿ ಹೊಸ ವರುಷ ಹಳೆ ವರುಷ

ಅಲ್ಲಿ ನೋಡಲಿ ಒಬ್ಬನ ಗದ್ದಲ
ಇಲ್ಲಿ ನೋಡಲಿ ಇನ್ನೊಬ್ಬನ ಮುನಿಸು
ಎಂದಿಗೂ ಕನಸಾಗಿಯೆ ಉಳಿದ ನಮ್ಮ ಕನಸು
ಮಧ್ಯೆ ಪಕ್ಕದ ಮನೆಗೆ ಹೋಗಿರುವ
ಪರಮಾತ್ಮನಾಡಿಸುತಿಹ ಆಟ
ಕೆಲಸ ಕಾರ್ಯವಿಲ್ಲದೇ ಕಾಲ ಕಳೆಯುತಿಹ
ವಿರೋಧಿಗಳು ಆಡಿಸುವ ಬುಗುರಿಯಾಟ
ಹೆಚ್ಚುತಿದೆ ಅಮ್ಮನ ಬಡತನವೆಂಬ ಅನಾರೋಗ್ಯ
ಆಗದಿರಲಿ ಹೊಸ ವರುಷ ಹಳೆ ವರುಷ

ಅತ್ತ ಮಣ್ಣಿಗಾಗಿ ಪಕ್ಕದ
ಮನೆಯವರೊಂದಿಗೆ ನಿರಂತರ ಹೊಡೆದಾಟ
ನಿಸರ್ಗದತ್ತ ನೀರಿಗಾಗಿ
ಬೀದಿ ನಲ್ಲಿಯ ಪಕ್ಕ ಬಡಿದಾಟ
ನಿಸರ್ಗ ಆಗದಿಂದು ಚಿರಂಜೀವಿ
ಜಗಳ ಬಡಿದಾಟ ಹೊಡೆದಾಟ ಚಿರಂತನ
ಆಗದಿರಲಿ ಹೊಸ ವರುಷ ಹಳೆ ವರುಷ

ದಿನಂಪ್ರತಿ ಹೊಡೆದಾಟ ಬಡಿದಾಟ
ರಕ್ತಪಾತ, ದರೋಡೆ, ಕಳ್ಳತನ
ಕೊಲೆ ಸುಲಿಗೆ ಇವುಗಳದ್ದೇ ವರದಿ
ಶಾಂತಿಯ ಮಾತುಗಳಿಗಿಲ್ಲ ಸರದಿ
ಮಧ್ಯೆ ಸಿಲುಕಿ ನಲುಗಿ ಹೋಗುತಿಹ ಅಮ್ಮ
ಆಗದಿರಲಿ ಹೊಸ ವರುಷ ಹಳೆ ವರುಷ

ಇತ್ತ ಹಿರಿ ಕಿರಿಯ ಮಕ್ಕಳಲ್ಲಿ ವೈಮನಸ್ಯ
ನಿರ್ವಿಚಾರದ ವೈಚಿತ್ರ್ಯ
ಒಂದೇ ಮನೆಗೆ ಬೇಕಂತೆ ಎರಡು ಅಡುಗೆ ಕೋಣೆ
ಕಟ್ಟ ಬೇಕಂತೆ ಮಧ್ಯೆ ಗೋಡೆ
ಅದಕಾಗಿ ಮೇಲ್ಮಕ್ಕಳ ಜಗಳ
ಹತಾಶಳಾಗಿಹ ಅಮ್ಮನ ಕಳವಳ
ಹರಿದು ಹಂಚಿಹೋಗುತಿಹುದವಳ ಸೀರೆ
ಯಾರಿಗೆ ಇದೆ ಅವಳ ಮಾನದ ಪರಿವೆ
ಆಗದಿರಲಿ ಹೊಸ ವರುಷ ಹಳೆ ವರುಷ

ಬ್ರಾಹ್ಮಣರ ಸಂಪ್ರದಾಯದಂತೆ
ಶ್ರಾದ್ಧ ಬಯಸದ ವರುಷ
ಬೂದಿಯಿಂದೆದ್ದು ಬರುವ ಫೀನಿಕ್ಸಿನಂತೆ
ನಾಳೆ ಮರು ಹುಟ್ಟುವುದು ಇನ್ನೊಂದು ವರುಷ
ಮನ ಆಶಿಸುವುದು ಸಂತಸ
ಆಗದಿರಲಿ ಹೊಸ ವರುಷ ಹಳೆ ವರುಷ

ಹೊಸ ಚಿಣ್ಣನಾದರೂ ತರಲಿ
ಎಲ್ಲರ ಮನೆ ಮನಕೂ ಸಂತಸ ಸಮೃದ್ಧಿ
ಆಗದಿರಲಿ ಹೊಸ ವರುಷ ಹಳೆ ವರುಷ