ಆಹಾ! ಹಾಸ್ಯವೇ!

ಆಹಾ! ಹಾಸ್ಯವೇ!

ಬರಹ

ಇಂದು ’ಮೂರ್ಖರ ದಿನ’. ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುವ ದಿನ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!
ಹಾಸ್ಯವೆಂಬುದು ಜಾಣರಿಂದ, ಜಾಣರಿಗಾಗಿ ಇರುವ ಜಾಣತನ. ಯಾರನ್ನಾದರೂ ಈ ದಿನ ನಾವು ’ಮೂರ್ಖ’ರನ್ನಾಗಿಸಲು, ಅರ್ಥಾತ್ ಬೇಸ್ತುಬೀಳಿಸಲು ಜಾಣತನವನ್ನೇನೋ ಉಪಯೋಗಿಸಬೇಕು, ಸರಿಯೇ, ಆದರೆ ಆ ಜಾಣತನವು ಮೋಸವೇ ಹೊರತು ಹಾಸ್ಯವಲ್ಲ. ಹಲವು ಸಲ ಅದು ಅಪಹಾಸ್ಯ!
’ಮೂರ್ಖರ ದಿನ’ದ ಆಸುಪಾಸಿನಲ್ಲಿ ಮಾಧ್ಯಮಗಳಲ್ಲಿ ’ಹಾಸ್ಯ’ದ ಭರ್ಜರಿ ಬೆಳೆ. ಆದರೆ ಅವು ಬಹುತೇಕ ನಿರುಪಯುಕ್ತ ಕಳೆ. ಕೆಲವು ಕೊಳೆ. ಮತ್ತೆ ಕೆಲವಂತೂ ಹಾಸ್ಯದ ಕೊಲೆ! ಕನ್ನಡದ ಮಟ್ಟಿಗೆ ಹೇಳುವುದಾದರೆ, ಮಾಧ್ಯಮಗಳಲ್ಲಿ ’ಮೂರ್ಖರ ದಿನ’ದ ಸಂದರ್ಭದಲ್ಲಿ ಮಾತ್ರವಲ್ಲ, ಉಳಿದಂತೆಯೂ ಬೆಳಕು ಕಾಣುವ ತಥಾಕಥಿತ ಹಾಸ್ಯದ ಬೆಳೆಯಲ್ಲಿ ನಿರುಪಯುಕ್ತ ಕಳೆ ಮತ್ತು ಹಾಸ್ಯದ ಕೊಲೆಯೇ ಜಾಸ್ತಿ!
ಹಾಸ್ಯಪ್ರಜ್ಞೆಯನ್ನಾಗಲೀ ವಿಡಂಬನಾ ಚಾತುರ್ಯವನ್ನಾಗಲೀ ಹೊಂದಿರದವರು ಸೃಷ್ಟಿಸಿದ ಬೈರಿಗೆಗಳಿಂದ ಓದುಗ/ಕೇಳುಗ/ನೋಡುಗ ಕೊರೆಸಿಕೊಳ್ಳುವುದು, ನಗೆಹನಿಗಳನ್ನು ಹಿಗ್ಗಿಸಿ ’ನಗೆಬರಹ’ವೆಂದು ಪ್ರತಿಪಾದಿಸುವವರ ಅಂಥ ಬರಹಗಳನ್ನು ಓದುವ ಶಿಕ್ಷೆ ಅನುಭವಿಸುವುದು, ಚುಟುಕು-ಚೂರು-ತಟುಕು ಜೋಕು, ಎಸ್.ಎಂ.ಎಸ್.ಗಳಿಗೇ ತೃಪ್ತಿಪಟ್ಟುಕೊಳ್ಳುವುದು, ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗುವ ಆಂಗಿಕ ಚೇಷ್ಟೆಗಳನ್ನು ಹಾಸ್ಯಾಭಿನಯವೆಂದು ಸ್ವೀಕರಿಸಬೇಕಾದ ಅನಿವಾರ್ಯಕ್ಕೀಡಾಗುವುದು ಮತ್ತು (ಅಪ)ಹಾಸ್ಯghostಇಗಳನ್ನು ಹಾಸ್ಯದ ಉತ್ತುಂಗ ಶಿಖರವೆಂದು ಒತ್ತಾಯಪೂರ್ವಕವೆಂಬಂತೆ ಭಾವಿಸಿ, ನೂರೊಂದನೇ ಸಲ ಕೇಳುತ್ತಿರುವ ಜೋಕಿಗೇ ನಕ್ಕುನಲಿದಾಡುವುದು ಇವೇ ಕನ್ನಡದಲ್ಲಿಂದು ಓದುಗ/ಕೇಳುಗ/ನೋಡುಗನಿಗಿರುವ ಆಯ್ಕೆಗಳಾಗಿವೆ!
ಜೋಕು, ಶ್ಲೇಷೆ, ಅಂಗಚೇಷ್ಟೆ ಇವುಗಳನ್ನು ಮೀರಿದ ಹಾಸ್ಯವಿದೆ, ಹಾಸ್ಯವು ಕೇವಲ ತೆಳು ಪದರವಲ್ಲ, ಆಳ-ವಿಸ್ತಾರ ಹೊಂದಿರುವ ರಸಘಟ್ಟಿ, ವಿಡಂಬನೆಯೆಂಬುದು ಹಾಸ್ಯದ ಒಂದು ತೇಜೋಮಯ ಮುಖ ಎಂಬ ಸತ್ಯದ ಅರಿವಿನಿಂದಲೇ ಇಂದಿನ ಯುವ ಪೀಳಿಗೆಯನ್ನು ವಂಚಿಸುವ ಕೆಲಸವನ್ನು ನಮ್ಮ ಮಾಧ್ಯಮಗಳಿಂದು ಅರಿತೋ ಅರಿಯದೆಯೋ ಮಾಡುತ್ತಿವೆ. ಅಲ್ಲೊಂದು ಇಲ್ಲೊಂದು exception ಇರಬಹುದು, ಆದರೆ ಬಹುತೇಕ ಮಾಧ್ಯಮಸಂಸ್ಥೆಗಳು ಹಾಸ್ಯದ ವಿಷಯದಲ್ಲಿ ತೀರಾ ಲಘು ಧೋರಣೆ ಹೊಂದಿರುವುದಂತೂ ಸತ್ಯ. ಯುಕ್ತ ಧೋರಣೆಯ ಮಾತಿರಲಿ, ಕೆಲವು ಪತ್ರಿಕೆಗಳಿಗಂತೂ ಹಾಸ್ಯ ಸಾಹಿತ್ಯವೇ ಅಸ್ಪೃಶ್ಯ! ಕನ್ನಡದ ದೃಶ್ಯಮಾಧ್ಯಮದ ಹಾಸ್ಯಾಸ್ಪದ ಹಾಸ್ಯ ಕಾರ್ಯಕ್ರಮಗಳ ಬಗೆಗಂತೂ ಚರ್ಚಿಸದಿರುವುದೇ ಒಳ್ಳೆಯದು. ಏಕೆಂದರೆ, ಅವು ನೋಡುಗರನ್ನು ಎಷ್ಟು brain-wash ಮಾಡಿಟ್ಟುಬಿಟ್ಟಿವೆಯೆಂದರೆ, ಚರ್ಚೆಯು ದಿಕ್ಕು ತಪ್ಪುವ ಸಾಧ್ಯತೆಯೇ ಬಹಳ!
ಹಾಸ್ಯಲೇಖಕನಾಗಿ ನಾಲ್ಕು ದಶಕಗಳಿಂದ ಸಾಹಿತ್ಯಕೃಷಿ ಮಾಡುತ್ತಿರುವ ನನಗೆ ಹಾಸ್ಯದ ಇಂದಿನ ಪರಿಕಲ್ಪನೆಯನ್ನು ಗಮನಿಸಿದಾಗ ತೀವ್ರ ನಿರಾಶೆಯಾಗುತ್ತದೆ.