ಆ ಕರಾಳ ರಾತ್ರಿ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. ‘ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.’
ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ… ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು.
ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲಿಸುತ್ತಲಿದ್ದಾರೆ. ಇಲ್ಲಿ ಉಳ್ಳವರು ಉಳ್ಳವರಾಗಿಯೇ ಇರುತ್ತಾರೆ. ಇಲ್ಲದವರು ಕೊನೆಯವರೆಗೂ ಏನೂ ಇಲ್ಲದೆ ಸಾಯುತ್ತಾರೆ. ಸಾಲದು ಎಂಬಂತೆ ತಮ್ಮ ಧಾರಿದ್ರ್ಯದ ಮಲವನ್ನು ಮುಂದಿನ ಮಕ್ಕಳ ತಲೆಗೂ ಕಟ್ಟಿ ಹೊರಡುತ್ತಾರೆ. ಎಲ್ಲರೂ ಗೌರಾನ್ವಿತವಾಗಿ, ಉಳ್ಳವರಾಗಿ, ಸಮಾನರಾಗಿ ಬದುಕುವ ಕಾಲ ಬರುವುದೇ ಇಲ್ಲವೇ. ? ಮನಸ್ಸು ವಾಸ್ತವ ಮತ್ತು ಆದರ್ಶದ ಆಲೋಚನೆಗಳ ಮಧ್ಯೆ ಲೋಲಕದಂತೆ ಚಲಿಸುತ್ತಿದೆ. ಇದಕ್ಕೆ ಕೊನೆ ಹಾಡಬೇಕು. ಹೌದು ಇಂದು ಈ ರಾತ್ರಿ ಹೊರಟು ಬಿಡಬೇಕು. ಈ ರಾತ್ರಿ ನನ್ನ ಪಾಲಿಗೆ ಮಹಾರಾತ್ರಿ ಯಾಗಲಿದೆ. ಮನೆ ಬಿಟ್ಟು ಹೊರಡುತ್ತಿದ್ದೇನೆ. ನನ್ನವರನ್ನು ಬಿಟ್ಟು. ನನ್ನಲಿರುವ ನಾನುವನ್ನು ಬಿಟ್ಟು. ಯಾರನ್ನೋ ಉದ್ಧಾರ ಮಾಡಲು.
ಹಾಗಾದರೆ ಕಣ್ಣ ಮುಂದಿನ ದಾರಿ ಯಾವುದು. ? ದಾರಿ ಬೇಕಿರುದು ಅಲ್ಪನಿಗೆ. ನನಗೆ ಉದ್ದೇಶವಿದೆ, ವಿಳಾಸವಿಲ್ಲ. ಸರಿ ಎಲ್ಲರೂ ನಿದ್ರೆ ಹೋಗುವವರೆಗೂ ಕಾಯುವ. ರಾತ್ರಿ ಮನೆ ಬಿಟ್ಟು ಹೊರಟ ಮಹಾನುಭಾವರನ್ನು ಮನದಲ್ಲಿ ನೆನೆದೆ. ಬುದ್ದ!! ಗೌತಮ ಬುದ್ದ !!
ನಿನ್ನ ಆಶಿರ್ವಾದ ನನ್ನ ಮೇಲಿರಲಿ. ಮನೆಯಿಂದ ಹೊರಡುವಾಗ ನೊಂದುಕೊಳ್ಳಲು ನಿನ್ನಷ್ಟು ಬಂಧಿಯಾಗಿಲ್ಲ. ಹದಿನೆಂಟನೇ ವಯಸ್ಸಿಗೆ ಆದರ್ಶದ ತೆವಲು ಹತ್ತಿಸಿಕೊಂಡು ಹೊರಟಿದ್ದೇನೆ. ಪಾಪ ನಿನ್ನ ಮಡದಿ. ಗಂಡ ಹೇಳದೆ ಕೇಳದೆ ರಾತ್ರೋ-ರಾತ್ರಿ ಓಟ ಕಿತ್ತಿದ್ದಾನೆಂದರೆ ಅವಳ ಸ್ಥಿತಿ ಏನಾಗಿರಬೇಡ. ಅಯ್ಯಾ ಕರುಣಾಮಯಿ!! ಪುಟ್ಟ ಮಗು ‘ಅಪ್ಪ ಎಲ್ಲಿ. ?’ ಎಂದು ನಿನ್ನ ಮಡದಿಯನ್ನು ಪೀಡಿಸುವ ಚಿತ್ರ, ನಿನ್ನ ಜೀವಿತಕಾಲದಲ್ಲಿ ಬಾಧಿಸಲೇ ಇಲ್ಲವೇ. ಇಲ್ಲ!! ಬುದ್ಧ ರೈಟು. ಇಂತಹ ಪಾಶಗಳು ನೂರೆಂಟಿವೆ.
ಗಡಿಯಾರದ ಸಣ್ಣ ಮತ್ತು ದೊಡ್ಡ ಮುಳ್ಳುಗಳು ಹನ್ನೆರಡರ ಬಳಿ ಒಂದುಗೂಡಲು ನೋಡುತ್ತಿದ್ದವು. ಈ ಗಡಿಯಾರದ ಮುಳ್ಳುಗಳೋ, ಕತ್ತಿಯ ಅಲುಗಿನಷ್ಟು ಹರಿತವಾದಂತವು. ಅದೆಷ್ಟು ತಲೆಮಾರುಗಳನ್ನು ಕಡಿಯುತ್ತಾ ಸುತ್ತುತ್ತಲಿವೆ. ಹೊರಟು ಬಿಡಬೇಕು. ಇನ್ನೆಷ್ಟು ದಿನ ಮತ್ತು ರಾತ್ರಿಗಳು ನನ್ನನ್ನು ಅಣಕಿಸಿಯಾವು. ಕೋಣೆಯ ಬಾಗಿಲು ತೆಗೆದರೆ, ಎಲ್ಲರೂ ನಿದಿರೆಯಲ್ಲಿ ಬಂಧಿಯಾಗಿದ್ದಾರೆ. ಅಪ್ಪ ಅಮ್ಮನ ಪಾದ ಮುಟ್ಟಿ ನಮಸ್ಕರಿಸುವ ಮನಸ್ಸಾಗುತಿದೆ. ‘ ಬೇಡ ಬೇಡ ನಾನೇನು ಪವಾಡ ಪುರುಷನೇ. ? ಗೂರ್ಖನಂತೆ ಮಲಗುವ ಅಪ್ಪಯ್ಯನಿಗೆ ಕೆಮ್ಮಿದರೂ ಎಚ್ಚರವಾಗಿ ಬಿಡುತ್ತದೆ. ಮತ್ತೆ ಸಂಬಂಧಗಳ ಬಂಧನದಲ್ಲಿ ಸಿಲುಕದಿದ್ದರೂ,ಅಪ್ಪಯ್ಯನ ಕಪಿಮುಷ್ಠಿಗೆ ಗೋಣು ಕೊಡಬೇಕಾಗುತ್ತದೆ. ಹಿಡ್ಕಂಡ್ ಬಿಡ್ತಾನೆ. ’ ಈ ಯಾಂತ್ರಿಕ ಯುಗದಲ್ಲೂ, ಕಾರ್ಯ ಸಿದ್ಧಿಗಾಗಿ ರಾತ್ರಿ-ಹೊತ್ತೇ ಮನೆಯಿಂದ ಹೊರಬೀಳುವ ಅಲ್ಪಬುದ್ಧಿಗೆ ಕಾರಣ ತಿಳಿಯಲಿಲ್ಲ. ಮತ್ತೊಮ್ಮೆ ಮೋಹಿತನಾಗಿ ಬಹುಪಯೋಗಿ ವಸ್ತುಗಳ ಕಡೆ ನೋಡಿದೆ. ನನ್ನನ್ನು ಕಟ್ಟಿ ಹಾಕುವ ಸಾಮರ್ಥ್ಯ ಅವುಗಳಿಗಿರಲಿಲ್ಲ. ನಿಶ್ಯಬ್ದ ಕಾಪಾಡಿಕೊಂಡು ಬಾಗಿಲು ತೆಗೆದು ಹೊರಬಂದೆ. ನನ್ನ ಕಂತ್ರಿ ನಾಯಿ ಜಿಮ್ಮಿ ಬಾಗಿಲ ಬಳಿಯೇ ಮಲಗಿದ್ದಾನೆ. ಮುಖ ಎತ್ತಿ ನೋಡಿ ಪುನಃ ಮಲಗಿದ. ಬಾಲ ಅಲ್ಲಾಡಿಸುತ್ತಾ, ತಾನು ಎಚ್ಚರವಿರುವುದಾಗಿಯೂ,
ಬೀದಿ ಕಾಯುತ್ತಿರುವುದಾಗಿಯೂ ಸಂಜ್ನೆ ಮಾಡಿದ. ಅದರ ಹತ್ತಿರ ಹೋಗಿ ಕುಳಿತೆ. ಮಲಗಿದ್ದಲ್ಲಿಂದಲೇ ಕಣ್ ತೆರೆದು ನೋಡಿ ಪುನಃ ಕಣ್ ಮುಚ್ಚಿತು. ಮೊದಲಿಂದಲೂ ನನಗೆ ಎಳ್ಳಷ್ಟೂ ಗೌರವ ಕೊಟ್ಟಿರದಿದ್ದ ಪ್ರೀತಿಯ ಕಂತ್ರಿ ನಾಯಿ. ‘ ಲೋ ಜಿಮ್ಮಿ, ಇತಿಹಾಸ ಪುರುಷನಾಗಲು ಮತ್ತು ಜನಗಳ ಉದ್ದಾರ ಮಾಡಲು ಹೊರಟಿದ್ದೇನೆ. ಹೂವಿನೊಡನೆ ನಾರೂ ಸ್ವರ್ಗ ಸೇರಿದಂತೆ, ಇತಿಹಾಸದಲ್ಲಿ ನಿನ್ನ ಹೆಸರೂ ಮೂಡುವುದು.’ ಮೆಲ್ಲಗೆ ಅದರ ಕಿವಿಯಲ್ಲಿ ಉಸುರಿದೆ. ಅದು ತನ್ನ ಜಾಗದಿಂದ ಎದ್ದು , ಬೇರೆಡೆಗೆ ಹೋಗಿ ಮೂರು ಸುತ್ತು ಹಾಕಿ ಮಲಗಿತು. ಪಾಪ ನಿಧ್ರಾಭಂಗವಾಗಿರಬೇಕು.
ರಸ್ತೆಯ ಮೇಲೆ ಬಂದು ನಿಂತರೆ, ಎಲ್ಲಾ ದಿಕ್ಕುಗಳೂ ಕಾರ್ಗತ್ತಲ ಕೂಪಗಳು. ಕಾಕತಾಳೀಯವು ಎಂಬಂತೆ ಅದೊಂದು ಅಮಾವಾಸ್ಯೆಯ ರಾತ್ರಿ. ಕತ್ತಲೆ ಕತ್ತಲು. ತಲೆಯಲ್ಲಿ ಆದರ್ಶಗಳ ಕಾರು-ಬಾರು ನಡೆಯುತ್ತಿವೆ. ಕತ್ತಲನ್ನು ಅಸ್ಪ್ರುಷ್ಯನಂತೆ ಕಂಡು, ಭೇದಿಸಲಾಗದೇ ಸದಾ ಬೆಳಕಿನ ಹಂಗಿನಲ್ಲಿ ಬದುಕಿದ್ದವನಿಗೆ, ಕತ್ತಲಿನ ಜೊತೆ ಅಂಟಿಕೊಂಡಿರುತ್ತಿದ್ದ ಭಯದ ನೆನಪಾಯಿತು. ಮನಸ್ಸು ಅಧೀರನಾಗಲು ಯತ್ನಿಸಿತು. ತಪ್ಪಿಸಿಕೊಳ್ಳಲು ಅದಕ್ಕೊಂದು ಕಾರಣ ಬೇಕಿತ್ತಷ್ಟೆ. ‘ಛೇ ಮಹಾನ್ ಆಗಲು ಹೊರಟವನು ಕೆಮ್ಮು-ಶೀತಗಳಿಗೆ ಅಂಜುವುದೇ. ? ಸಲ್ಲದು.’ ಒಬ್ಬಂಟಿಯಾಗಿ ಭವಿಷ್ಯದ ದಿನಗಳನ್ನು ನೆನೆಯುತ್ತಾ ತೋಚಿದ ದಿಕ್ಕೆನೆಡೆಗೆ ನಡೆಯುತ್ತಾ ಸಾಗಿದೆ. ಒಂದಷ್ಟು ಬೀದಿ ನಾಯಿಗಳು ಬೊಗುಳಲು, ಬಾಯಿ ಬರದೇ ನೋಡುತ್ತಾ ನಿಂತವು. ವಿಚಿತ್ರವೆನಿಸಿತು. ಊರಿನ ಅಕ್ಷಯ ಬಾಗಿಲನ್ನು ದಾಟುವಾಗ, ಅದ್ಯಾಕೋ ಅಳುಕು ಮೂಡಿತು.
ಈ ಅಕ್ಷಯ ಬಾಗಿಲು ಊರಿನ ಸರಹದ್ದಿಗೆ ಇದ್ದ ಕಾವಲು ಅಲ್ಲವೇ. ? ಹಿಂದೊಮ್ಮೆ ತರಹಾವೇರಿ ದೆವ್ವ ಭೂತದ ಕಥೆಗಳು ಊರಿನಲ್ಲಿ ಹರಿದಾಡುತ್ತಿದ್ದವು. ದೇವರನ್ನು ಆಹ್ವಾನಿಸಿ ಕೇಳಿದಾಗ, ಅಕ್ಷಯ ಹಾಳಾಗಿದೆಯೆಂದು ಹೇಳಿದ್ದರಿಂದ; ಹೊಸದಾಗಿ ಶಾಂತಿ ಮಾಡಿಸಿ; ಪ್ರಮುಖ ದ್ವಾರಗಳಿಗೆಲ್ಲಾ ಕಂಬ ಹಾಕಿಸಿದರಲ್ಲವೆ. ಕಟ್ಟಿದ್ದ ಮಾವಿನ ಎಲೆಯ ತೋರಣದ ಪಳಯುಳಿಕೆಗಳು ಕಾಣಿಸಿದವು. ಅಕ್ಷಯವನ್ನು ದಾಟುತ್ತಿದ್ದಂತೆ ಮನಸ್ಸಿನಲ್ಲಿ ಅಸಾಧ್ಯ ವೇದನೆ ಶುರುವಾಯಿತು. ಹಿಂದೆ ತಿರುಗದಂತೆ ಸರ-ಸರ ಹೆಜ್ಜೆ ಹಾಕುತ್ತಾ ಸಾಗಿದೆ. ಗೆಳೆಯ ಪಿಲ್ಟು ಹೇಳುತ್ತಿದ್ದ ಡೋಂಗಿ ಮಾತುಗಳು ನೆನಪಾದವು. ‘ ಕತ್ತಲಲ್ಲಿ ನಡೆಯುವಾಗ ದೆವ್ವಗಳು ಕಾಲಿನ ಹಿಮ್ಮಡಿಯನ್ನು ಮುಸುತ್ತಾ ಹಿಂಬಾಲಿಸುತ್ತವೆ. ಧೈರ್ಯವಾಗಿದ್ದರೆ ಪ್ರಾಬ್ಲಮ್ಮು ಇಲ್ಲ. ಅಕಸ್ಮಾತ್ ಹೆದರಿ ಮೈ ನಡುಗಿಸಿದರೆ, ಹಿಮ್ಮಡಿ ಅದುರುತ್ತಿದ್ದಂತೆ ಮುಸುತ್ತಿರುವ ಭೂತ, ಹಿಮ್ಮಡಿಯ ಮೂಲಕವೇ ಮೈ ಸೇರಿಕೊಂಡು ಬಿಡುತ್ತದೆ.’ ನೆನಪಿನ ಎಳೆಗಳಿಂದ ಕಿತ್ತುಕೊಂಡು ಬಂದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದವು. ಅಯ್ಯೋ ಅವೆಲ್ಲಾ ನೆನಪಾದದ್ದಾದರೂ ಯಾಕಪ್ಪಾ. ? ಕಾಲಿನ ಹಿಮ್ಮಡಿಗಳಲ್ಲಿ ತುರಿಕೆ ಪ್ರಾರಂಭವಾಯಿತು. ಕಚಗುಳಿ ಇಟ್ಟಂತಾಗುತ್ತಿತ್ತು. ಹಿಮ್ಮಡಿಯನ್ನು ಒಂದು ಮರಕ್ಕೆ ತೀಡಿದೆ. ನಡೆಯುತ್ತಿರುವಾಗ ಗಮನವೆಲ್ಲಾ ಕಾಲಿನ ಹಿಮ್ಮಡಿಯ ಮೇಲೆಯೇ ಹೋಯಿತು. ಸ್ವಲ್ಪ-ಸ್ವಲ್ಪ ದೂರಕ್ಕೂ ಹಿಮ್ಮಡಿಯನ್ನು ನೆಲಕ್ಕೆ ತೀಡುತ್ತಿದ್ದೆ. ಯಾರೋ ಮುಸುತ್ತಿರುವಂತೆಯು ಭಾಸವಾಯಿತು. ತಿರುಗಿ ನೋಡಿದರೆ ಕತ್ತಲಲ್ಲಿ ಯಾರೂ ಕಾಣಲಿಲ್ಲ. ಕಾಲನ್ನು ಹಿಂದಕ್ಕೆ ಜಾಡಿಸಿದೆ. ಯಾರೂ ಇರಲಿಲ್ಲ. ಯಾರಿರಲು ಸಾಧ್ಯ. ? ಕಥೆ ಹೇಳುತ್ತಿದ್ದ ಪಿಲ್ಟುವಿಗೆ ಮೊದಲು ಜಾಡಿಸಬೇಕು ಎಂದುಕೊಂಡೆ.
‘ಲೋ ಮರಿ ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗ್ತಿದ್ದಿ ’ ಹಿಂದಿನಿಂದ ಯಾರೋ ಕೂಗಿದ ಸದ್ದು.
***1***
ಕತ್ತಲ ಕಾಡಿನಲ್ಲಿ ಮನುಷ್ಯಜೀವಿಯ ಶಬ್ದ ಮಾತ್ರದಿಂದಲೇ ಉಸಿರು ನಿಂತ ಹಾಗಾಯಿತು. ತಿರುಗಿ ನೋಡುವುದಿರಲಿ, ನಿಲ್ಲಲೂ ಭಯವಾಯಿತು. ಓಡಬೇಕು ಅನ್ನಿಸಿದರೂ ಓಡಲಿಲ್ಲ. ಜೋರು ಹೆಜ್ಜೆ ಹಾಕುತ್ತಾ ನಡೆದೆ. ಎದೆ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು.
‘ಅಯ್ಯೋ ನಿಲ್ಲಯ್ಯಾ. ಕೂಗುವುದು ಕೇಳಿಸದೇನು. ?’
ನಿಂತೆನಾದರೂ ತಿರುಗಲು ಧೈರ್ಯ ಸಾಕಾಗಲಿಲ್ಲ. ತರಗೆಲೆಗಳ ಸರ-ಸರ ಶಬ್ದದಿಂದ, ಹಿಂದಿನಿಂದ ಹತ್ತಿರಾಗುತ್ತಿರುವುದು ತಿಳಿಯಿತು. ಬಂದಿದ್ದೇ ನನ್ನ ಮುಂದೆ ನಿಂತುಬಿಟ್ಟಿತು. ಗಂಟು ಹಾಕಿಕೊಂಡಿದ್ದ ಉದ್ದನೆಯ ಕೂದಲುಗಳು, ಗುಳಿ ಕಣ್ಣುಗಳು, ಹಿಂದುಮುಂದಾದ ಕಾಲುಗಳು, ಅಸಾಧ್ಯವಾಗಿ ಬೆಳೆದಿದ್ದ ಕೈ ಉಗುರುಗಳು, ದೇಹವನ್ನು ಸುತ್ತುವರೆದಿದ್ದ ಹಳದಿ ಬೆಳಕು. ಥೇಟು ದೆವ್ವಗಳ ಬಗ್ಗೆ ಮನಸ್ಸು ಕಲ್ಪಿಸಿಕೊಳ್ಳುತ್ತಿದ್ದ ಹಾಗೆಯೇ ಇತ್ತು ನನ್ನ ಮುಂದಿನ ಆಕೃತಿ. ಒಂದ್ ನಿಮ್ಷ. ಇದು ಮನಸ್ಸಿನ ಕಲ್ಪನೆಗಳಿಂದ ನಿರ್ಮಿತವಾದ ನನ್ನದೇ ಕಲ್ಪನೆಯ ಆಕಾರವೋ. ? ಭೂತಗಳು ಹುಟ್ಟುವುದು ಭಯದಲ್ಲಿ ಅಲ್ಲವೇ. ? ಹಾಗಾದರೇ ನನ್ನ ಮುಂದೆ ಹಲ್ಲು ಕಿರಿಯುತ್ತಾ ನಿಂತಿರುವ ಆಕೃತಿ; ಅಲ್ಲಲ್ಲಾ ವಿಕೃತಿಯಾದರೂ ಎಂಥಹುದು. ?
‘ಹೋ! ರಾಮಪ್ಪನ ದೊಡ್ ಮಗನಲ್ಲವೇ ನೀನು. ನಮ್ಮೂರ ಹಳ್ಳಿ ಸ್ಕೂಲು ಬಿಟ್ಟು, ಪ್ಯಾಟೆ ಸ್ಕೂಲಿಗೆ ಸೇರಿಸಿದ್ದನಲ್ಲವೇ ನಿಮ್ಮಪ್ಪ. ಪಾಪ ನಿನ್ನನ್ನು ಡಾಕ್ಟರು ಮಾಡಬೇಕಂತ ಬಹಳ ಕಷ್ಟ ಪಡುತ್ತಿದ್ದ.’ ವಿಕೃತಿಯ ಬಾಯಿಂದ ಲೋಕಾಭಿರಾಮವಾಗಿ ಬಂದ ಮಾತುಗಳು ನನ್ನನ್ನು ಅರ್ಥವಾಗದ ಪ್ರಶ್ನೆಗಳ ಮುಂದೆ ತಂದು ನಿಲ್ಲಿಸಿದವು. ‘ನನ್ನ ಗುರುತು ಸಿಗಲಿಲ್ಲವೇನೋ? ನಾನಯ್ಯ ಫೇಮಸ್ ಜಾಲರಿ-ಮನೆ ರಾಜ’
ಜಾಲರಿ-ಮನೆ ರಾಜನೇ! ಮನಃಪಟಲದಿಂದ ನುಗ್ಗಿ ಬಂದ ಒಂದಷ್ಟು ಸೀನರಿಗಳು ಕಣ್ಣ ಮುಂದೆ ನಿಂತವು. ಹುಣಸೇ ಮರದ ಟೊಂಗೆಯಲ್ಲಿ ನೇತಾಡುತ್ತಿದ್ದ, ಹೆಣದಿಂದ ಶುರುವಾದ ಕಥೆ ಸ್ವಲ್ಪ ಹಿಂದಕ್ಕೆ ಹೋಯಿತು. ರಾಜ ನಮ್ಮುರಿನ ಡಬಲ್ ಡಿಗ್ರಿ ಹೋಲ್ಡರ್ . ವಿದ್ಯಾವಂತ!! ಬುದ್ದಿವಂತ!! ಸಮಾಜಶಾಸ್ತ್ರ, ತತ್ವಶಾಸ್ತ್ರ ಗಳನ್ನು ಸ್ವಂತ ಆಸಕ್ತಿಯಿಂದ ಕಲಿತು ವಿದ್ವಾಂಸನೆಂದು ಗುರುತಿಸಿಕೊಂಡಿದ್ದವನು. ಅವನ ಮಾತುಗಳೆಂದರೇ ಕಡ್ಡಿ ತುಂಡು ಮಾಡಿದಂತೆಂದು ಎಲ್ಲರೂ ಹೊಗಳುತ್ತಿದ್ದರು. ಸಖತ್ ಕ್ಲಾರಿಟಿ. ಸೈಕೊ ನನ್ಮಗ ಅಂತ ಕೆಲವು ಉರಿದು ಬೀಳುತ್ತಿದ್ದುದು ಇತ್ತು.
ಹೌದು!! ನನಗಾಗ ಹದಿನಾಲ್ಕು. ಚಿಕ್ಕವನು. ಹೂವು ಕೀಳಲೆಂದು ಹಿತ್ತಲಿಗೆ ಹೋಗುತ್ತಿದ್ದವನನ್ನು, ಅಮ್ಮ ತಡೆದು ನಿಲ್ಲಿಸಿ, ಹಿತ್ತಲಿಗೆ ಹೋಗಕೂಡದೆಂದು ತಾಕೀತು ಮಾಡಿದಳು. ಇಷ್ಟೆಲ್ಲಾ ಹೇಳಿದ ಮೇಲೆ ಸುಮ್ಮನಿರುವವನೆ. ಅದೇನು ನೋಡಿಯೇ ಬಿಡೋಣವೆಂದು ಕದ್ದು ಮುಚ್ಚಿ ಹಿತ್ತಲ ದಾಸವಾಳ ಗಿಡದ ಬಳಿ ಹೋದೆ. ಅಲ್ಲಿಂದ ಹತ್ತಿರದಲ್ಲಿಯೇ ಹುಣಸೇ ಮರದ ಟೊಂಗೆಗೆ ನೇತಾಡುತ್ತಿದ್ದ ದೇಹವನ್ನು ನೋಡಿ ದಿಕ್ಕು ತೋಚದಾಯ್ತು. ನಾಲಗೆ ಹೊರಚಾಚಿ ಕಚ್ಚಿಕೊಂಡಿದ್ದು, ರುಂಡ ಮುರಿದು, ಇನ್ನೇನು ದೇಹ ಕೆಳಗೆ ಹರಿದು ಬೀಳುತ್ತಿದೆಯೇನೋ. ಎನಿಸಿತು. ಮನದೊಳಗೇ ಸದ್ದಿಲ್ಲದೇ ಕಿರುಚಿಕೊಂಡು ಮನೆಯ ಕಡೆಗೆ ಓಡಿದೆ. ಸಾವನ್ನು ಸಮರ್ಥಿಸಿಕೊಳ್ಳಬಲ್ಲ ಯಾವುದೇ ಕಾರಣಗಳನ್ನು ರಾಜನಿಂದ ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಆತ್ಮಹತ್ಯೆಗೆ ಕಾರಣ ಸಿಗದೇ ತಲೆ ಕೆರೆದುಕೊಂಡ ಜನಗಳು, ಕೊಲೆ ಎಂದು ಗುಲ್ಲೆಬ್ಬಿಸಿದರು. ಒಟ್ಟಿನಲ್ಲಿ ರಾಜನ ದುರಂತ ಅಂತ್ಯ(. ?)ವಾಗಿತ್ತು.
ಒಂದಷ್ಟು ದಿನ ಭೂತವಾಗಿ ಊರಿನ ಜನಗಳನ್ನು ಕಾಡುತ್ತಿದ್ದನೆಂದು ಊಹಾ-ಪೋಹಾಗಳು ಹೊಗೆಯಾಡಿದವು. ದನ ಮೇಯಿಸುತ್ತಿದ್ದ ಕುಂಟ ಪರಶುರಾಮ, ತೋಟದಲ್ಲಿ ಹುದುಗಿದ್ದ ರಾಜನ ಸಮಾಧಿಯ ಮೇಲೆ ತಿಳಿಯದೇ ಮಲಗಿದ್ದಾಗಿಯು; ಗಾಳಿ ಸೇರಿಕೊಂಡವನಂತೆ ಒರಳಾಡಿದ್ದಾಗಿಯೂ; ಅವನ ಧ್ವನಿಯು ರಾಜನ ಧ್ವನಿಯಂತೆ ಬದಲಾಗಿದ್ದಾಗಿಯೂ; ಇತ್ಯಾದಿ. ಇನ್ನು ಮುಂತಾದವು. ಇಷ್ಟೆಲ್ಲಾ ಭಯಾನಕ ಹಿನ್ನಲೆ ಇರುವ ಒಂಟಿಮನೆ ರಾಜನ ಭೂತದ ಮುಂದೆ ತಾನು ಜೀವಂತವಾಗಿ ನಿಂತಿರುವುದೇ ಅದ್ಭುತವೆನಿಸಿತು. ಭಯ-ಉದ್ವೇಗಗಳಿಂದ ದೇಹ ಶಕ್ತಿಹೀನವಾದಂತಾಗಿ ಬಾಯಿ ಒಣಗಿತು. ರಾತ್ರಿಯಲ್ಲೂ ಮೈ ಬೆವರಿ, ಮುಖ ಒರೆಸಿಕೊಳ್ಳುವಾಗ ಬೆವರ ಹನಿಗಳ ಸ್ಪರ್ಷವಾಯಿತು.
‘ಹೆದರಬೇಡ ಹುಡುಗ, ದೆವ್ವವಾಗಿದ್ದವನ್ನು ನಿನ್ನನ್ನು ಫಿಸಿಕಲ್ ಆಗಿ ಮುಟ್ಟಿಕೊಳ್ಳಲು ಸಾಧ್ಯವೇ..? ನಿನ್ನ ಮನಸ್ಸಿನಲ್ಲಿನ ಭಯವನ್ನೇ ಬಂಡವಾಳ ಮಾಡಿಕೊಂಡು, ನಾನಾ ವಿಕಾರ ಕಲ್ಪನೆಗಳಿಂದ ಹುಟ್ಟುವ ಅನಾಹುತಗಳಿಗೆ ನಿನ್ನನ್ನೇ ಸೂತ್ರಧಾರನನ್ನಾಗಿಸಿ ಮಜಾ ನೋಡಬಹುದು. ಧೈರ್ಯವಾಗಿರು ಮಾರಾಯ.’ ಆತ್ಮೀಯ ನುಡಿಗಳಿಂದ ಕೊಂಚ ಸಮಾಧಾನವಾಯಿತು. ಹೇಗಿದ್ದರೂ ಈ ರಾತ್ರಿಯಲ್ಲಿ ಎಲ್ಲಿಯೂ ತಪ್ಪಿಸಿಕೊಳ್ಳುವಂತಿಲ್ಲ. ಪ್ರಶ್ನೆ ಮಾಡುವ ಮನಸ್ಸಾಯಿತು. ನನ್ನದೂ ಹೆಚ್ಚು ಕಮ್ಮಿ, ದೆವ್ವದ ಹಾದಿಯೇ. ‘ ರಾಜಣ್ಣ ನಿನ್ನ ಸಾವು ಈವತ್ತಿಗೂ ಜನಗಳ ನಿದ್ದೆ ಕೆಡಿಸಿರುವಂತದ್ದು. ಎಲ್ಲಾ ಇದ್ದು, ಆತ್ಮಹತ್ಯೆಯಂತಹ ಕೀಳುಮಟ್ಟದ ಯೋಚನೆ ಬಂದದ್ದಾದರೂ ಯಾಕೆ ?’
‘ ಬಹಳಷ್ಟು ಸಾವಿನ ಕಾರಣಗಳು ಗುಪ್ತವಾಗಿರುತ್ತವೆ. ಸತ್ತವನ ಇತಿಹಾಸ ಕೆದಕಿ, ಅವನ ಸಾವಿನ ಕಾರಣ ತಿಳಿಯ ಬಯಸುತ್ತಾರೆ. ನಿನಗೆ ಗೊತ್ತಾ..? ಸಾವಿನ ಜೊತೆ, ಅವನ ಸತ್ಯಗಳೂ ಮಣ್ಣಾಗಿರುತ್ತವೆ. ಮೊದಲನೇ ಸಾರಿ ನೇಣು ಬಿಗಿದು ಕೊಳ್ಳಲು ಹಗ್ಗ ಸರಗುಣಿಕೆ ಮಾಡಿದೆ. ಧೈರ್ಯ ಸಾಕಾಗಲಿಲ್ಲ. ಹಗ್ಗವನ್ನು ಹಾಗೇ ಬಿಟ್ಟು ಬಂದೆ. ಬದುಕಿನ ಮೇಲೆ ಆಸೆ ಜಾಸ್ತಿಯಾಯಿತು. ಸಾಯುವ ಪ್ರೋಗ್ರಾಮು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದರೆ ಸಾವಿನ ಬಾಗಿಲು ತಟ್ಟಿ ವಾಪಾಸು ಬಂದವನಲ್ಲವೇ. ? ನಾ ಬಿಟ್ಟರೂ, ಸಾವು ನನ್ನನ್ನು ಬಿಡಲಿಲ್ಲ. ಕೂತಲ್ಲಿ ನಿಂತಲ್ಲಿ ಸಾವಿನಾಚೆಯದನ್ನು ನೋಡುವ ತವಕ. ಬಿಗಿದಿಟ್ಟು ಬಂದಿದ್ದ ಹಗ್ಗವನ್ನು ಉಳಿಸಿದ್ದೇ ತಪ್ಪಾಯಿತೇನೊ. ?
ಅದನ್ನು ಸುಟ್ಟು ಹಾಕಿ ಬಿಡಬೇಕಾಗಿತ್ತು. ಹಗ್ಗ ತಾನೆ ತಾನಾಗಿ ಮರಕ್ಕೆ ಕಟ್ಟಿಕೊಂಡು ಬಾ ಬಾ ಎಂದು ರೋಧಿಸುವಂತೆ ಭಾಸವಾಗುತ್ತಿತ್ತು. ಸರಗುಣಿಕೆಯ ಹಗ್ಗ ಗಾಳಿಯಲ್ಲಿ ಮೇಲಕ್ಕೆ ಬಂದು, ಕೈ ಬೀಸಿ ಕರೆವಂತೆ ನಟಿಸುತ್ತಿತ್ತು. ಹಿಂದು ಮುಂದು ನೋಡದೆ ಕುಣಿಕೆಗೆ ಕತ್ತು ಕೊಟ್ಟೆ. ಎಲ್ಲವೂ ಮುಗಿದು ಹೋಯಿತು.
ಪಾಪ ಎನಿಸಿತು. ಆದರೂ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಕ್ಕೆ, ಮೂಲ ಕಾರಣ ತಿಳಿಯಲಿಲ್ಲ. ಅಮಾವಾಸ್ಯೆ ರಾತ್ರಿಯಲಿ, ಕಾರ್ಗತ್ತಲ ಕಾಡಿನಲಿ, ನಾಲ್ಕೈದು ವರುಷ ಮುಪ್ಪಿನ ದೆವ್ವದೊಂದಿಗೆ ನಡೆದು ಹೋಗುತ್ತಿದ್ದುದು ರೋಮ ನಿಮಿರಿಸುವ ವಾಸ್ತವ. ಕೈ-ಚಿವುಟಿಕೊಂಡೆ. ಹ್ಹಾ ನೋವಾಗುತ್ತಿದೆ. ಕಪಾಳಕ್ಕೆ ಹೊಡೆದುಕೊಂಡೆ. ಹೌದು ಇದು ಕನಸಲ್ಲ.
******** 2 **********
‘ ಅಲ್ಲೋ ಹುಡುಗ ಇಷ್ಟು ಹೊತ್ತಿನಲ್ಲಿ ಎಲ್ಲಿಗ್ ಹೋಗ್ತಿದಿಯೋ. . ?’
‘ ಒಂದಷ್ಟು ಪ್ರಶ್ನೆಗಳಿವೆ. ಉತ್ತರ ಹುಡುಕಲು ಹೊರಟಿದ್ದೇನೆ.’
ನನ್ನ ತಲೆಯಲ್ಲಿದ್ದ ತಳಮಳಗಳನ್ನು ವಿವರಿಸಿದೆ. ಅವನ ಆತ್ಮಹತ್ಯೆಯ ಕಾರಣ ನನಗೆ ಅರ್ಥವಾಗದಂತೆ, ನನ್ನ ಫಲಾಯನದ ಮೂಲ ಅವನಿಗೆ ತಿಳಿಯಲಿಲ್ಲ.
‘ಓಹೋ ಸಾಧು-ಸನ್ಯಾಸಿಯಾಗುವ ಸ್ಕೀಮು. ಹಹಹ ಈ ಕಾಡಿನಲ್ಲಿ ಗುಹೆ ಹುಡುಕ್ತಿದಿಯೇನೊ. ?’
‘ ಛೆಛೆ ಗುಹೆಯೊಳಗೆ ಸೇರಿಕೊಳ್ಳುವ ಪುಕ್ಕಲರು, ಪ್ರಪಂಚಕ್ಕೆ ಹೆದರಿ ತಾಯಿಗರ್ಭಕ್ಕೆ ವಾಪಾಸು ಹೋಗಿ ಕುಳಿತಂತೆ. ಮೂಕಜ್ಜಿ ಹೇಳಿದ್ದು ಕೇಳಿಲ್ಲವಾ..? ಕಣ್ಣು ಮುಚ್ಚಿ ಸಾಕ್ಷಾತ್ಕಾರ ಪಡೆಯುವ ಸ್ವಾರ್ಥವಿಲ್ಲ. ಜನಗಳ ಹತ್ತಿರ ಹೋಗಬೇಕು. ಕಷ್ಟಗಳಿಗೆ ಪರಿಹಾರ ಕಂಡುಹಿಡಿಯಬೇಕು; ಸಂಘಟಿಸಬೇಕು; ಜೀವನದ ಅರ್ಥ ತಿಳಿಯಬೇಕು; ತಿಳಿಸಬೇಕು.’
‘ ಹೊಸದೊಂದು ಜಾತಿ!! ಜ್ಞಾನ ಬರ್ತಾ ಇದ್ದಂಗೆ ಬಂದು ಹೊಸ ಜಾತಿ ಕಟ್ಟು. ಅದರ ಹೆಸರಲ್ಲಿ ಮತ್ತೆ ಜನ ಹೊಡೆದಾಡಲಿ.’
‘ಇಲ್ಲಾ!! ಜಾತಿ-ಗೀತಿ ಇಲ್ಲ. ಅದಕ್ಕೂ ದೊಡ್ಡದು.’
‘ ಚಿಕ್ಕ ವಯಸ್ಸಿಗೆ ಹುಟ್ಟಿಕೊಂಡ ಈ ದುಷ್ಚಟದ ಹಿಂದಿನ ಪ್ರೇರಣಾಶಕ್ತಿ ಯಾವುದಪ್ಪ. ?’
ಪ್ರಶ್ನೆಯಲ್ಲ, ಕೊಂಕು ಮಾತು ಅಷ್ಟೇ..
‘ ಧಾರಿದ್ರ್ಯದಲ್ಲಿ, ಬಡತನದಲ್ಲಿ ಹುಟ್ಟಿದ ಮಗು ಕೊನೆಯವರೆಗೂ ಅದರಲ್ಲಿಯೇ ಮುಳುಗಿ-ಎದ್ದು ಸಾಯುತ್ತದೆ. ಸಿರಿವಂತನ ಮನೆಯಲ್ಲಿ, ಸಂಸ್ಕಾರವಂತನ ಮನೆಯಲ್ಲಿ ಹುಟ್ಟಿದವನು; ಕಷ್ಟ-ನೋವುಗಳ ಸೋಂಕು ಇಲ್ಲದೆ, ಸುಖ-ಭೋಗದಿಂದ ಜೀವನ ನಡೆಸುವನು. ತಮ್ಮದಲ್ಲದ ಸ್ವತ್ತಿಗೆ ವಾರಸುದಾರರು ಒಂದೆಡೆಯಾದರೆ, ತಮ್ಮದಲ್ಲದ ಧಾರಿದ್ರ್ಯಕ್ಕೆ ಬಲಿಪಶುಗಳು ಇನ್ನೊಂದೆಡೆ’
‘ ಸಮಾನತೆ ಸಮಸ್ಯೆ!! ನಾನೆಲ್ಲೋ ಪ್ರಗತಿಪರ-ಸನ್ಯಾಸತ್ವ ಅಂದುಕೊಂಡೆ. ಇದು ಕ್ರಾಂತಿಕಾರಿ ;ಲಾಲ್ ಸಲಾಂ ಬಯಕೆ. ಇದ್ದವರ ಬಳಿ ಇರುವುದೆಲ್ಲವನು ದೋಚಿ, ಇಲ್ಲದವರಿಗೆ ದಾನ ಮಾಡುವುದು.’
ನನ್ನ ಮನಸ್ಸಿನ ತಳಮಳಗಳು ಇದಕ್ಕೆ ಅರ್ಥವಾದಂತೆ ಕಾಣಲಿಲ್ಲ.
’ ಕೀಳು ಜಾತಿಯವನು ಅನಿಸಿಕೊಂಡಿದ್ದ ದುರ್ಗಪ್ಪ ಗೊತ್ತಲ್ಲ ನಿನಗೆ. ಆ ಸಾಹುಕಾರ್ ಮಂಜೇಗೌಡನ ತೋಟದ ಆಳು. ಮೊನ್ನೆ ಖಾಯಿಲೆಯಿಂದ ಸತ್ತ. ಹುಟ್ಟಿದಾಗಿನಿಂದಲೂ ತೋಟದ ಆಳಾಗಿದ್ದವನು. ಮಗಳ ಮದುವೆಗೆಂದು ಸಾಹುಕಾರನಿಂದಲೇ ಸಾಲ ಪಡೆದು ಬಡ್ಡಿಗಾಗಿ ದಿನಗೂಲಿ ಮಾಡುತ್ತಿದ್ದ. ಬದುಕಿದ್ದ!! ಸತ್ತ!! ಅವನು ಸ್ವತಂತ್ರನಾಗಲಿಲ್ಲ. ಇಷ್ಟು ದಿನ ಬದುಕಿದ್ದಾದರೂ ಯಾವ ಪುರುಷಾರ್ಥಕ್ಕೆ. ಮನೆ ಮನೆಗೊಂದು ವಿಚಿತ್ರ ಕಥೆಗಳಿವೆ. ಕೆಲವರು ನೋವಿನ ಜೊತೆ ಹುಟ್ಟುವರು. ರಣ-ರಣ ನರಳುತ್ತಾ ಒಂದು ದಿನ ಸತ್ತು ಹೋಗುವರು. ಅವರೇನು ತಪ್ಪು ಮಾಡಿದ್ದರು. ಮತ್ಯಾರೋ ವಂಚಕ!! ಜೀವನ ಪೂರ್ತಿ ಅವರಿವರನ್ನು ದೋಚುತ್ತಾ ಬದುಕುವನು. ಒಂದು ದಿನ ಎಲ್ಲರಂತೆ ಸತ್ತು ಹೋಗುವನು. ಬದಲಾಗುವುದೇ ಇಲ್ಲ. ಇಲ್ಲಿ ಏನೂ ಬದಲಾಗುವುದಿಲ್ಲ. ಯಾವುದೋ ಲಿಂಕು ಮಿಸ್ ಆಗಿದೆ. ಅದನ್ನು ಹುಡುಕಬೇಕು. ’
‘ ಪುನರ್ಜನ್ಮ, ಪ್ರಾರಬ್ಧಕರ್ಮಗಳು ಅಂದ್ರೆ ಗೊತ್ತೇನಯ್ಯಾ. ? ಮನುಷ್ಯರ ಸಕಲ-ಕ್ರಿಯಾಕರ್ಮಗಳನ್ನೂ, ಆಗು-ಹೋಗುಗಳನ್ನು ನ್ಯಾಯಸಮ್ಮತವಾಗಿ ವಿಶ್ಲೇಷಿಸಲು ಇರುವ ಸರಳ ಸೂತ್ರ ಇದು. ಒಬ್ಬ ಬರೀ ನೋವು-ಕಷ್ಟಗಳನ್ನು ಅನುಭವಿಸುತ್ತಿದ್ದಾನೆ ಅಂದ್ರೆ, ಅದು ಅವನ ಪ್ರಾರಬ್ಧಕರ್ಮ. ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಗಳಿಗೆ ಪ್ರಾಯಶ್ಚಿತ್ತ ಅನುಭವಿಸುತ್ತಿರುವ ಎಂದರ್ಥ. ಕೆಲವರಿಗೆ ಜೀವನದ ಒಂದು ಇನ್ನಿಂಗ್ಸು ಚೆನ್ನಾಗಿದ್ರೆ, ಇನ್ನೊಂದು ಇನ್ನಿಂಗ್ಸು ಹಾಳಾಗಿ ಹೋಗಿರುತ್ತೆ. ಎಲ್ಲರಿಗೂ ಪಾಪ-ಪುಣ್ಯಗಳ ಲೆಕ್ಕಾಚಾರಗಳಿಗನುಗುಣವಾಗಿ, ಜನುಮ-ಜನುಮಗಳವರೆಗೂ ನೋವು-ನಲಿವುಗಳನ್ನು ಸಮಾನವಾಗಿ ಹಂಚಿರಲಾಗುತ್ತದೆ. ’
‘ ಹಂಗಾದ್ರೆ, ಒಬ್ಬ ಕಣ್ಮುಂದೆ ಸಿಕ್ಕಾಪಟ್ಟೆ ಕಷ್ಟ ಪಡ್ತಿದಾನೆ, ತೊಂದರೆಯಲ್ಲಿದ್ದಾನೆ ಅಂದ್ರೆ ಅದಕ್ಕೆ ಮರುಗುವ ಅವಶ್ಯಕತೆ ಇಲ್ಲವಾ.?’
‘ ಖಂಡಿತಾ ಇಲ್ಲ. ಅದು ಅವನ ಪ್ರಾರಬ್ಧಕರ್ಮ ಅನುಭವಿಸಲಿ ಬಿಡು. ಸಾಯಲಿ ನಿಂಗೇನು. ಅವನಿಗೆ ಸಹಾಯ ಮಾಡಬೇಕು ಅಥವಾ ಸರ್ವಾಂಗೀಣ ಉದ್ಧಾರ ಮಾಡಬೇಕು ಅನ್ನೋದು ನಿನ್ನ ಆಂತರ್ಯ . ಅದು ಒಬ್ಬನ ವಿವೇಚನೆಗೆ ಬಿಟ್ಟಿದ್ದು. ಆದರೆ ಪ್ರಕೃತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿದೆ ಅಂತ ದೂಷಿಸುತ್ತಾ, ಇಲ್ಲದವರನ್ನು ನೋಡಿ ಪುಗಸಟ್ಟೆ ಕನಿಕರ ತೋರಿಸುವುದು ಮತ್ತು ಇದ್ದವರನ್ನು ನೋಡಿ ಉರಿದುಕೊಳ್ಳೋದು. ಎರಡೂ ಮೂರ್ಖತನ. ಸೃಷ್ಟಿಯ ಸಂಕೀರ್ಣ ನಿಯಮಗಳನ್ನು ಪ್ರಶ್ನಿಸಬಾರದು.’
‘ಅಯ್ಯೋ!! ಒಬ್ಬ ಸ್ಯಾಡಿಸ್ಟು., ಹಲ್ಕಾ ನನ್ಮಗ. ಕೆಟ್ಟದ್ದನ್ನೇ ಮಾಡುತ್ತಾ ಮೆರೆಯುತ್ತಿದ್ದರೆ ಶಿಕ್ಷಿಸುವಂತಿಲ್ಲವಾ. ?’
‘ಖಂಡಿತಾ ಬೇಡ.’
’ ಅವರವರ ಸಮಾಧಾನಕ್ಕೆ!! ಅದಾಗಲೇ ಕಾನೂನು-ನಿಯಮ-ನ್ಯಾಯ ವ್ಯವಸ್ಥೆ ಇದೆ ಆಲ್ವಾ. ಅಲ್ಲಿ ಅಪರಾಧಿ ಆಗೋದು!! ತಪ್ಪಿಸಿಕೊಳ್ಳೋದು!! ಒಬ್ಬನ ಅಪರಾಧಕ್ಕೆ ಬಲಿಪಶು ಆಗೋದು .. ಎಲ್ಲಾ ಸೃಷ್ಟಿಯ ಬ್ಲೂ ಪ್ರಿಂಟ್ ಗಳು. ನಮ್ಮ ಕಣ್ಮುಂದೆ ನಡೆಯುವ ಪ್ರತಿಯೊಂದು ಘಟನೆ, ಸನ್ನಿವೇಶಗಳು ಹೀಗೆ ಆಗಬೇಕೆಂದು ಬರೆದಿಟ್ಟಿರುವಂಥವು. ಎಲ್ಲರೂ ತಮ್ಮ ಇಚ್ಛೆಯಂತೆಯೇ ಬದುಕುತ್ತಿದ್ದೇವೆಂಬ ಭ್ರಮೆಯಲ್ಲಿದ್ದಾರೆ. ತಮ್ಮ ತಮ್ಮ ಮಿತಿಯಲಿ ಹೆಂಗೋ ಬದುಕಿರುವವರಿಗೆ, ದೇವರು ತೋರಿಸ್ತೇನೆ!! ಶಾಂತಿ ಕೊಡ್ತೇನೆ ಅನ್ನೋದು ಎಷ್ಟು ಸರಿ. ? ನೀವು ಬದುಕುತ್ತಿರುವ ರೀತಿಯೇ ಸರಿ ಇಲ್ಲ ಎನ್ನುತ್ತಾ, ಹುಟ್ಟಿನಿಂದ ಬಂದ ನಂಬಿಕೆಗಳನ್ನು ಪ್ರಶ್ನಿಸೋದು ಸರಿಯಾ..? ಸಾಯೋರು ಸಾಯಲಿ, ಕೊಲ್ಲುವವರು ಕೊಲ್ಲಲಿ,ನರಳುವವರು ನರಳಲಿ, ನಗುವವರು ನಗಲಿ. ’
‘ನಿನ್ನ ಹಂಗೇ ಬುದ್ಧ, ಗಾಂಧಿ, ಏಸು ಎಲ್ಲರೂ ಯೋಚನೆ ಮಾಡಿ, ಸುಮ್ನೆ ಇದ್ದಿದ್ರೆ. ?’
‘ ಏನಾಗಿರೋದು. ?’
ತಕ್ಷಣ ನನಗೆ ಏನೂ ಹೊಳೆಯಲಿಲ್ಲ. ಹೌದಲ್ವಾ ಏನ್ ಮಹಾ ಆಗಿರೋದು. ಒಂದು
ಕ್ಷಣ ಸೋತು ಬಿಟ್ಟೆನಾ .. ಇಲ್ಲ ಇಲ್ಲ. ‘ನಾವು ಸರಿಯಿಲ್ಲ ಅಂತ, ಒಬ್ಬರು ಬೊಟ್ಟು ಮಾಡಿ ತೋರಿಸದೇ ಇದ್ದರೆ, ಈವತ್ತಿಗೆ ಮನುಷ್ಯ ಶಿಸ್ತಿಲ್ಲದೆ, ಧರ್ಮಹೀನನಾಗಿ ಕಾಡುಪ್ರಾಣಿಯಂತೆ ಬದುಕಬೇಕಿತ್ತಲ್ಲವೇ. ?’
ಇದ್ದಕ್ಕಿದ್ದಂತೆ ಜೋರು-ಜೋರಾಗಿ ಕೇಕೆ ಹಾಕುತ್ತಾ ನಗಲು ಪ್ರಾರಂಭಿಸಿದ. ಆಕಾಶದಲ್ಲಿ ಬೆಳ್ಳಿ ಚುಕ್ಕಿ ಮೂಡಿರುವ ಕಡೆ ಕೈ-ಮಾಡಿ ತೋರಿಸಿದ. ನಾನು ಬಿಟ್ಟು ಹೊರಟಿದ್ದ ಊರಿಗೇ, ಇನ್ನೊಂದು ದಿಕ್ಕಿನಿಂದ ಬಂದು ಸೇರಿದ್ದೆ. ಕತ್ತಲಲ್ಲಿ
ಚಕ್ರಾಕಾರವಾಗಿ ಸುತ್ತಿರಬೇಕು. ಊರಿನ ಅಕ್ಷಯ ಬಾಗಿಲೊಳಗೆ ಬರಲಾಗದೆ, ಕೋತಿಯಂತೆ ಕುಣಿಯಲು ಪ್ರಾರಂಭಿಸಿದ ರಾಮಣ್ಣ. ಪ್ರೇತ-ಕುಣಿತವನ್ನು ನೋಡಿ ದಿಗಿಲಾಯಿತು. ಅವನ ಕಣ್ಣುಗಳು ಹೊತ್ತಿ ಉರಿಯಲಾರಂಭಿಸಿದವು. ಬೆಂಕಿಯ ಶಾಖಕ್ಕೆ ತಲೆಗೂದಲುಗಳು ಚಟಾರನೆ ಸದ್ದು ಮಾಡುತ್ತಾ ಸುಡುತ್ತಿತ್ತು. ಕೂದಲು ಸುಡುವ ಘಾಟು ವಾಸನೆ ಮೂಗಿಗೆ ಬಡಿಯಿತು. ಕಿರುಚಾಡುತ್ತಾ ಬಾಯನ್ನು ಊರಗಲ ತೆಗೆದ. ಅಲ್ಲಿಂದಲೂ ಬೆಂಕಿ ಬಂತು. ದೇಹಕ್ಕೆ-ದೇಹವೇ ಹೊತ್ತಿ ಉರಿಯಲು ಪ್ರಾರಂಭಿಸಿ, ನೋವಿನಿಂದ ಕುಣಿಯುತ್ತಾ, ಕ್ಷಣಮಾತ್ರದಲ್ಲಿಯೇ ಬೆಂಕಿಯಚೆಂಡು ಬೂದಿಯ ಕುರುಹೂ ಇಲ್ಲದಂತೆ ಉರಿದು ಹೋಯಿತು. ಎದ್ದೆನೋ- ಬಿದ್ದೆನೋ ಎಂದೂ ನೋಡದೆ ಮನೆಯತ್ತ ಓಡಿದೆ. ಸದ್ದು ಮಾಡದಂತೆ ಮನೆಯೊಳಗೆ ನುಗ್ಗಿ, ಹಾಸಿಗೆಯ ಮೇಲೆ ಮಕಾಡೆ ಮಲಗಿದೆ
********* 3 *********
ಕಣ್ಣು ತೆರೆದರೆ ಬೆಳಗಾಗಿದೆ. ರಾತ್ರಿ ನಡೆದದ್ದೆಲ್ಲಾ ಒಂದೊಂದಾಗಿ ನೆನಪಾಗತೊಡಗಿದವು. ಎಂಥಾ ಬೆಪ್ಪು-ತಕ್ಕಡಿ ನಾನು. ಹಾಸಿಗೆ ಸುತ್ತಿ, ಹಿತ್ತಲ ಕಡೆಗೆ ಹೊರಟೆ. ಅದೇ ಸೂರ್ಯ, ಅದೇ ಬೆಳಗು ಹೊಸತೇನೂ ಕಾಣಲಿಲ್ಲ.
ಅಮ್ಮ ಕಾಪಿ ತುಂಬಿದ ಲೋಟ ಕೈಗಿಟ್ಟು, ತನ್ನ ಎಂದಿನ ಬೈಗಳಗಳ ಸುಪ್ರಭಾತ ಹಾಡುತ್ತಾ ಒಳನಡೆದಳು. ರಾತ್ರಿಯ ಆದರ್ಶದ ಮತ್ತು ಇಳಿದಿರಲಿಲ್ಲವಾದ್ದರಿಂದ ಮೊದಲು ಕುಡಿಯಲು ನಿರಾಕರಿಸಿದೆನಾದರೂ, ಸದ್ದಿಲ್ಲದೇ ಕುಡಿದು ಮುಗಿಸಿದೆ. ಅಪ್ಪ ಅದಾಗಲೇ ತೋಟ ಸುತ್ತಿ, ತೆಂಗಿನ ಗರಿಗಳನ್ನು ಹೊತ್ತುತಂದು, ಹಿತ್ತಲ ಬಯಲಿನಲ್ಲಿ ಹರಡುತ್ತಿದ್ದವನು, “ ಕಾಪಿ ತಾರಮ್ಮಾ” ಎಂದು ಬೆವರಿದ ಮುಖ ಒರೆಸಿಕೊಳ್ಳುತ್ತಾ ಒಳ ಬಂದ. ಮುಖ ನೋಡಿದೆ. ಪಾಪ ಜೀವ ಸೋತುಬಿಟ್ಟಿದೆ.
ಈ ಮುದಿ ಹಸುಗಳಿಗೆ ಆಸರೆಗೋಲಿನಂತೆ ಇರುವುದು ಬಿಟ್ಟು, ಆದರ್ಶದ ಬೆನ್ನತ್ತಿ ಹೊರಟಿದ್ದು ಸರಿಯಾ. ? ತಪ್ಪು ತಪ್ಪು!!
ಕಪಾಳಕ್ಕೆ ಹೊಡೆದುಕೊಂಡೆ. ನೋವಾಯಿತು.
ಒಂದ ನಿಮಿಷ!! ರಾತ್ರಿ ಪೂರಾ ಕಂಡದ್ದು ಕನಸಲ್ಲಾ ತಾನೆ. ಅದು ಹೇಗೆ ಕನಸಿರಲು ಸಾಧ್ಯ. ಕೈ ಚಿವುಟಿಕೊಂಡಿದ್ದು,
ಕಪಾಳಕ್ಕೆ ಹೊಡಿದು ಕೊಂಡಿದ್ದು, ನೋವಾಗಿದ್ದು,
ಕೂದಲು ಸುಟ್ಟ ವಾಸನೆ ಬಂದದ್ದು!!
ಇವೆಲ್ಲಾ ಸುಳ್ಳೇ. ?
ಯಾಕಾಗಬಾರದು. . ?
ಕನಸಲ್ಲಿಯೂ ಇದು ಕನಸೇ ಎಂದು ಪರೀಕ್ಷಿಸಿಕೊಳ್ಳವಂತಿಲ್ಲ ಎಂದೇನು ಇಲ್ಲವಲ್ಲ. ಬೆವರಿನ ಸ್ಪರ್ಷವನ್ನು ಅನುಭವಿಸಿದ್ದು
ಭಯದಂತಹ ತೀವ್ರತರವಾದ ಭಾವಗಳೇ ಕನಸಿನಲ್ಲಿ ನಿಜವಾಗಿಯು ಕಾಡುವಾಗ, ಬೆವರಹನಿಯ ಸ್ಪರ್ಷ ಯಾವ ಲೆಕ್ಕ. ಮನೆಯಿಂದ ಹೊರಟಿದ್ದು; ಪುನಃ ಮನೆಯೊಳಗೆ ಬಂದು ಮಲಗಿದ್ದು; ಬೆಳಗಿನವರೆಗೂ ನಿದ್ದೆ ಮಾಡಿದ್ದು; ಇವೆಲ್ಲಾ ಕನಸೇ? ಇರಬಹುದಲ್ಲವೇ..? ಎಲ್ಲಿಂದ ಶುರುವಾಗಿರಬಹುದು ತೆಪ್ಪಗೆ ಮಲಗಿದ್ದವನನ್ನು ಎಬ್ಬಿಸಿಕೊಂಡು ಹೊರಟ ಕನಸು, ಕಥೆ ಮುಗಿಯುತ್ತಿದ್ದಂತೆ ಪುನಃ ತಂದು ಮಲಗಿಸಿ ಹೋಯ್ತು. ಕನಸಲ್ಲೂ ಕೈ ಚಿವುಟಿಕೊಂಡೆನೆ. ಕನಸಲ್ಲೂ ಮಲಗಿದ್ದೆನೆ. ಹಾಗಾದರೆ ಕನಸಿನದ್ದೆಲ್ಲಾ ಸುಳ್ಳೇ. ?
‘ ರಾತ್ರಿ ಯಾರೋ. ? ಹೊರಗೆ ಹೋಗಿದ್ದು. ಬಾಗಲು ಅಗಳಿ ಹಾಕಿ ಬಂದು ಮಲಗಬಾರದೇ..? ಬೇಜವಾಬ್ದಾರಿ ಮಕ್ಳು’ ಅಮ್ಮ ತನ್ನ ಪಾಡಿಗೆ ತಾನು ಬಯ್ಯುತ್ತಿದ್ದಳು
-ಅರೆಯೂರು ಚಿ.ಸುರೇಶ್