ಆ ಹೊತ್ತು ಆಗಮಿಸುತ್ತಿದೆ... (ಭಾಗ 1)

ಆ ಹೊತ್ತು ಆಗಮಿಸುತ್ತಿದೆ... (ಭಾಗ 1)

ಕವನ

ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, 

ಬೆಚ್ಚಿ ಬೀಳಿಸುವ ಕೆಲವು ಸಂಜ್ಞೆಗಳು 

ಜನಸಮೂಹದ ಮುಂದೆ, ಹಿಂಜರಿಯದೆ,  

ಅನಿಷ್ಟಸೂಚಕ ವರ್ತನೆಗಳೊಂದಿಗೆ 

ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, 

"ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು 

ನಿಮಗಿದೆಯೇ?"

ತರುವಾಯ ಸ್ಥಗಿತಗೊಂಡ ಸಂಶಯವು, 

ಪ್ರಚೋದಿಸಿತು ನನ್ನನ್ನು ಚಿಂತನಾಗ್ರಸ್ಥನಾಗಲು... 

 

ಓಹ್ ಹೌದು...! ಮತ್ತು ಆ ಸಂಜ್ಞೆಗಳು, 

ಪ್ರತಿಯೊಬ್ಬರೂ ಅರಿಯಲೇ ಬೇಕು. 

ಆದ್ದರಿಂದ, ಆ ದುರ್ದೆಶೆಗಳು ಸಂಭವಿಸುವ ಮೊದಲೇ,  

ಅವರು ಅವುಗಳನ್ನು ಗುರುತಿಸಬಹುದು!

 

ಮತ್ತು ಆ ಹೊತ್ತು ಲಜ್ಜೆಯಿಲ್ಲದೆ ಪ್ರತಿಪಾದಿಸುತಿತ್ತು:

ವಿಶ್ವಾಸಾರ್ಹರನ್ನು ಸುಳ್ಳುಗಾರರನ್ನಾಗಿ, 

ಮತ್ತು ದ್ರೋಹಿಗಳನ್ನು ಪ್ರಾಮಾಣಿಕವಾದಿಗಳನ್ನಾಗಿ!

ಅಪರಾಧಿಗಳು ಶಾಸಕರಾಗುವುದನ್ನು,  

ಮತ್ತು ನ್ಯಾಯ ತೀರ್ಪುಗಳ ಮೇಲೆ ಧನದ ಪ್ರಭಾವ ಬೀರುವುದನ್ನು!

ಸುಳ್ಳುಗಾರರ ಮಾತುಗಳು ಉತ್ಸುಕತೆಯಿಂದ ಕೇಳಲಾಗುವುದನ್ನು, 

ಮತ್ತು ನೀತಿಬೋಧೆಗಳು ಬಹಿರಂಗವಾಗಿ ನಿರಾಕರಿಸಲಾಗುವುದನ್ನು !

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"

 

ಕೇಳಿ ಕಿವುಡರೇ! ಸಮಯ ತ್ವರಿತವಾಗಿ ಹಾದು ಹೋಗುತ್ತಿದೆ... 

ಕೊನೆಗೂ, ಹಿಂದೆ ನುಡಿದ ಆ ಹೊತ್ತಿನ ಸಂಜ್ಞೆಗಳು ಈಗ ಕಾಣಸಿಗುತ್ತಿದೆ!

ಖ್ಯಾತ ವಂಚಕರು ಮಾರುಕಟ್ಟೆಗಳನ್ನು ನಿಯಂತ್ರಿಸುವುದು, 

ಮತ್ತು ಸಿಂಹಾಸನಗಳನ್ನು ಕಪಟಿಯರಿಂದ ಅಲಂಕರಿಸಲಾಗುವುದು;

ಬಡ್ಡಿಭರಿತ ಸಾಲಯೋಜನೆಗಳು ಜಗತ್ತನ್ನು ಆಳುವುದು, 

ಬಡವರನ್ನು ಇನ್ನೂ ಬಡವರಾಗಿ ಮತ್ತು ಧನಿಕರನ್ನು ಇನ್ನೂ ಧನಿಕಗೊಳಿಸುವುದು;

ರಾಸಾಯನಿಕಗಳು ಆಕಾಶದಿಂದ ವರ್ಷಿಸುವುದು,

ಮತ್ತು ಮಳೆಗಳು ಶಾಪವಾಗಿ ಬರಗಳನ್ನು ಫಲಿಸುವುದು;

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"

 

ಇಗೋ ಮಾನವಕುಲದವರೇ! ಕಣ್ಣುಗಳನ್ನು ತೆರೆದು ನೋಡಿ!

ಅಂತರ್ಜಾಲದ ವಾಹಿನಿಗಳು ಬಿಡುವಿಲ್ಲದೆ ಕಾರ್ಯಶೀಲಗೊಂಡರೂ, 

ರಕ್ತಸಂಬಂಧಗಳು ಕಾರಣವಿಲ್ಲದೆ ಛಿದ್ರಗೊಳ್ಳುತ್ತಿರುವುದು!

ವಿಶಾಲವಾದ ಪ್ರಪಂಚವು ಕುಗ್ಗಿ ಜಾಗತಿಕ ಗ್ರಾಮವೊಂದಾಗಿದ್ದರೂ,

ಅಸ್ವಸ್ಥ ನೆರೆಯವರನ್ನು ಭೇಟಿಸಲು ಪುರುಸೊತ್ತು ಇಲ್ಲವಾಗುತ್ತಿರುವುದು!

ಇದೊಂದು ಕಾಲಕ್ಕೆ ಅಪಾಯಕಾರಿ ಬೆದರಿಕೆಯಾಗಿದೆ:

ಗಗನಚುಂಬಿ ಕಟ್ಟಡಗಳ ವಾಸ್ತುಶಿಲ್ಪವು ಅಲಂಕಾರಿಕ ವಿನ್ಯಾಸ ಹೊಂದರೂ, 

ವೃದ್ಧ ಹೆತ್ತವರು ವ್ರದ್ಧಾಶ್ರಮಗಳಲ್ಲಿ ಕೊಳೆಯುತ್ತಿರುವುದು!

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"

 

ಪುಸ್ತಕಗಳು ಇದ್ದಕ್ಕಿದ್ದಂತೆ ಹೇರಳವಾಗುವುದು, 

ಆದರೂ, ಅನಕ್ಷರತೆ ಎಲ್ಲದೆಡೆಗೆ ಹರಡುವುದು;

ಶತಮೂರ್ಖರಿಗೆ ಮಾನ-ಮರ್ಯಾದೆ ದೊರೆಯುವುದು, 

ಮತ್ತು ವಿದ್ವಾ0ಸರ ಸಲಹೆಗಳು ತಳ್ಳಿ ಹಾಕಲಾಗುವುದು;

ಲೌಕಿಕ ಲಾಭಕ್ಕಾಗಿ ಜ್ಞಾನವನ್ನು ಕಲಿಯಲಾಗುವುದು, 

ಮತ್ತು ಕಪಟಿ ಬೋಧಕರ ಸಂಖ್ಯೆಯೂ ಏರುವುದು;

ಅಲ್ಲದೆ, ತಮ್ಮದೇ ಆದ ಉಪದೇಶಗಳನ್ನು ತಮ್ಮ ಬದುಕಿನಲ್ಲಿ 

ಅನುಸರಿಸಲು ಬೋಧಕರೇ ವಿಫಲರಾಗುವುದು;

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"

 

ಅವರು ಕಿವುಡರು, ಮೂಕರು ಮತ್ತು ದೃಷ್ಟಿ ಹೀನರು;

ನೂರಾರು ಸಂಜ್ಞೆಗಳು ತೋರಿದ ಬಳಿಕವೂ, 

ಪಶ್ಚಾತ್ತಾಪ ಪಡೆದು ಸದ್ಮಾರ್ಗಕ್ಕೆ ಹಿಂದಿರುಗುವುದಿಲ್ಲ!

ಅವರೇ ಆ ಹೊತ್ತನ್ನು ಆಳುವರು!!!

ಇವುಗಳಲ್ಲಿ ಯಾವ್ಯಾವ ಸಂಜ್ಞೆಗಳನ್ನು ನೀವು ನಿರಾಕರಿಸುತ್ತೀರಿ? 

ವಾಸ್ತವವಾಗಿ ಇವುಗಳೇ 

ಪ್ರಾಜ್ಞ ವಿವೇಕಿಗಳಿಗೆ ಪುರಾವೆಗಳು!

ಆ ಹೊತ್ತು ಶೀಘ್ರವೇ ಆಗಮಿಸುತ್ತಿದೆಂದು!!!

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್