ಇಡ್ಲಿ ದಿನದ ನೆನಪಿನಲ್ಲಿ…

ಇಡ್ಲಿ ದಿನದ ನೆನಪಿನಲ್ಲಿ…

ಮಾರ್ಚ್ 30 ಇಡ್ಲಿ ದಿನ. ಇಡ್ಲಿ ನಮ್ಮ ದಕ್ಷಿಣ ಭಾರತದ ಸಾಂಪ್ರದಾಯಿಕ ಹಾಗೂ ಅನಿವಾರ್ಯ ತಿಂಡಿ ಎಂದರೆ ತಪ್ಪಾಗಲಾರದು. ಏಕೆಂದರೆ ಯಾವುದೇ ಸಮಾರಂಭವಿರಲಿ ಇಡ್ಲಿ ತಯಾರಿಸಿ ಕೊಡುವುದು ಸುಲಭ. ಆರೋಗ್ಯದಾಯಕವೂ ಹೌದು. ಎಣ್ಣೆ, ಕರಿಯುವ ಕಾಟವಿಲ್ಲ. ಇಡ್ಲಿಯಲ್ಲೂ ನೂರಾರು ಬಗೆಯ ಇಡ್ಲಿಗಳಿವೆ. ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಈ ಲೇಖನವನ್ನು ನಿಮ್ಮ ಓದಿಗಾಗಿ ಇಲ್ಲಿ ನೀಡಿದ್ದೇನೆ. ಇಡ್ಲಿಯನ್ನು ತಿನ್ನುತ್ತಾ ಈ ಲೇಖನ ಓದಿದರೆ ಇನ್ನಷ್ಟು ಚೆನ್ನಾಗಿರುತ್ತದೆ.!!

ಮೃದುವಾದ ನಿನ್ನ ಮೈಮಾಟ 

ಚಂದ್ರನಿಗಿಂತಲೂ ಬಿಳುಪು,

ನಿನ್ನ ಹಾಲಿನಂತಹ ಹೊಳಪು.

ಕೈ ಸೋಕಿದರೆ ಸಾಕು ಬಳುಕಿಬಿಡುವೆ,

ಬಾಯಲಿಟ್ಟರೆ ಬೆಣ್ಣೆಯಂತೆ ಕರಗುವೆ.

ಬಿಸಿ ಬಿಸಿ ಸಾಂಬಾರಲ್ಲಿ ನೀ ಮಿಂದರೆ,

ಹೋಳಿ ಹಬ್ಬದ ನೆನಪೇ ಕಣ್ಣಿಗೆ.

ಗಟ್ಟಿ ಚಟ್ನಿ ಮೊಸರಿನೊಂದಿಗೆ ಸವಿದರೆ,

ಕೈ ಬಾಯಿಗೆ ನಿಲ್ಲದ ಯುದ್ಧದ  ಪರಿ...

ಜೊತೆಗೆ ಮನಸಿಗೆ ಹಬ್ಬವೇ ಸರಿ!! 

ಯಾವುದರ ಬಗ್ಗೆ ಈ ಪೀಠಿಕೆ ಅಂತಿರಾ?? 

ಅದೇ ನಮ್ಮ ದಕ್ಷಿಣ ಭಾರತದ ಪ್ರಸಿದ್ಧ ತಿಂಡಿ - "ಇಡ್ಲಿ".

ಇಡ್ಲಿ ಅಂದ್ರೆ ಜೊತೆಗೆ ನೆನಪಾಗೋದು ಕೊಬ್ಬರಿ ಚಟ್ನಿ, ಸಾಂಬಾರ್ ಮತ್ತು ಆ ತೂತಿನ ಉದ್ದಿನ ವಡೆ ಮರೆಯೊಕಾಗುತ್ತ? "ಇಡ್ಲಿ-ಉದ್ದಿನವಡೆ" ಅಂದ್ರೆ ಅದೆರಡಕ್ಕೂ ಒಂದು ಅವಿನಾಭಾವ ಸಂಬಂಧ. ಇದಕ್ಕೆ ಹಲವು ಹೆಸರು ಮತ್ತು ನಾನಾ ರುಚಿ. ಸಾದಾ ಇಡ್ಲಿ, ರವಾ ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ಮಸಾಲೆ ಇಡ್ಲಿ, ಮಿನಿ ಇಡ್ಲಿ, ಬುಲೆಟ್ ಇಡ್ಲಿ, ಪಾಲಕ್ ಇಡ್ಲಿ, ಮೆಂತ್ಯೆ ಇಡ್ಲಿ, ಸೌತೇಕಾಯಿ ಇಡ್ಲಿ, ಸಿಹಿ ಇಡ್ಲಿ....

ಈ ಹೆಂಗಳೆಯರ ಬೆಳಗಿನ ತಿಂಡಿ ಜೋಡಿಸುವ ಚಿಂತೆಗಂತೂ, ಇಡ್ಲಿ- ಉತ್ತಮ ಉಪಾಯ. ಇಡ್ಲಿ ಬೇಯಿಸಿ ಚಟ್ನಿ, ಸಾಂಬಾರ್ ಮಾಡಿದರೆ ಮುಗಿತು ತಿಂಡಿ ರೆಡಿ ಮತ್ತು ಅದೇ ಊಟದ ಡಬ್ಬಿಗೂ ಸೈ. 

ಸಂಜೆ ಇಡ್ಲಿ ಉಳಿದರೆ ಸ್ನ್ಯಾಕ್ಸ್ ಚಿಂತೆನೂ ಇಲ್ಲ, ಪುಡಿ ಮಾಡಿದ ಇಡ್ಲಿಗೆ ಒಗ್ಗರಣೆ ಹಾಕಿದ್ರೆ- "ಇಡ್ಲಿ ಉಪ್ಪಿಟ್ಟು" ಸಿದ್ಧ. ಅದೇ ಇಡ್ಲಿಯನ್ನು ಕರೆದರೆ "ಇಡ್ಲಿ-ಫ್ರೈ", ಅದ್ಕೆ ಮಸಾಲೆ ಹಾಕಿ ಫ್ರೈ ಮಾಡಿದರೆ "ಇಡ್ಲಿ-ಮಂಚೂರಿ".

ಹಿಟ್ಟು ಉಳಿದರೆ ಮರುದಿನಕ್ಕೆ ಅದಾಗೋದು - ಇಡ್ಲಿ ಅಥವಾ ದೋಸೆ. ಈ ಇಡ್ಲಿ, ದೋಸೆ, ಪಡ್ಡು ಒಂದೇ ತಾಯಿಯ ಮಕ್ಕಳಿದ್ದಂತೆ! ಹುಣ್ಣಿಮೆ/ಅಮಾವಾಸ್ಯೆ ಬಂದರಂತೂ ಅದೆಷ್ಟೋ ಮನೇಲಿ ಇಡ್ಲಿಯದ್ದೇ ರಾಜ್ಯಭಾರ. 

ಇಡ್ಲಿ ತಿಂತಿದ್ರೆ, ಯಾಕ್ರೀ ಹುಷಾರಿಲ್ವಾ ಅಂತ ಕೇಳೋರು ಇದ್ದಾರೆ!! ರೋಗಿಗಳಿಗಂತೂ ಇದು ಹೇಳಿ ಮಾಡಿಸಿದ ಉಪಹಾರ. ಆಸ್ಪತ್ರೆ, ಮದುವೆ ಮನೆ, ಹೋಟೆಲ್, ಕ್ಯಾಂಟಿನ್, ಪ್ರವಾಸ ಎಲ್ಲಿ ನೋಡಿದರೂ ಇಡ್ಲಿಯದ್ದೇ ಮುಂಚೂಣಿ. ಅತಿಥಿಗಳಿಗೆ ಇಡ್ಲಿ ಜೊತೆ ವಡೆ ಮಾಡಿದರೆ ಅದೊಂದು ಶ್ರೀಮಂತ ತಿಂಡಿ.

ಬೀದಿ ಬದಿಯ ತಳ್ಳೋಗಾಡಿಯಲ್ಲಿ, ಸಾಂಬಾರ್-ನಲ್ಲಿಯೇ ಮುಳುಗಿರುವ ಇಡ್ಲಿ ತಿಂತಿದ್ರೆ....ಅದೇ ಸ್ವರ್ಗ. ಕೆಲವರಿಗೆ ಇಡ್ಲಿ ಜೊತೆ ಚಟ್ನಿ / ಇಡ್ಲಿ-ಸಾಂಬರ್ / ಇಡ್ಲಿ-ಬೆಣ್ಣೆ / ಇಡ್ಲಿ-ಸಕ್ಕರೆ / ಇಡ್ಲಿ-ಉಪ್ಪಿನಕಾಯಿ ಇನ್ನೂ ಕೆಲವರಿಗೆ ಸಾಂಬಾರ್ ಅಲ್ಲಿ ಇಡ್ಲಿ ಕಲಿಸಿ ತಿನ್ನೋದೆ ಪ್ರಿಯ. ರುಚಿಗಷ್ಟೆ ಅಲ್ಲ, ಇಡ್ಲಿ ಮಾರಿ ಜೀವನ ನಡೆಸೋ ಕುಟುಂಬಗಳ ಹೊಟ್ಟೆಯನ್ನೂ ತುಂಬಿಸ್ತಾ ಇದೆ.

ಈ ಇಡ್ಲಿಯದ್ದು ಮುಗಿಯದ ಪುರಾಣ ಕಣ್ರೀ, ಯಾಕೆಂದ್ರೆ… ಇಡ್ಲಿಗೆ ತುದಿಯಿಲ್ಲ, ಇದರ ಪ್ರಸಿದ್ಧಿಗೆ ಪಾರವೇ ಇಲ್ಲ!!"

(ಸಂಗ್ರಹ)