ಇತ್ತ ಹೆಜ್ಜೆ ಊರದಿರು
ಕವನ
ನಿನ್ನ ನೆನೆಪುಗಳು ಸೊರಗುವಷ್ಟು
ಮನಸ್ಸು ಬಾವಲಿಯಾಗುವಷ್ಟು
ಕತ್ತಲು ಸರಿದೋಗುವಷ್ಟು
ಕನಸುಗಳು ಕರಗುವಷ್ಟು
ಆಸೆಗಳು ಬತ್ತುವಷ್ಟು
ಭಾಶೆಗಳು ಬದಲಾಗುವಷ್ಟು
ನಾನು ಕಾಯಲಾರೆ
ನಮ್ಮಿಬ್ಬರ ಪ್ರೀತಿಗೆ
ಬೆಳದಿಂಗಳ ಚಂದ್ರನನ್ನು
ಹೊಳೆಯುವ ತಾರೆಗಳನ್ನು
ಚಲಿಸುವ ಮೋಡಗಳನ್ನು
ಕಲಕಲಿಸುವ ಕಡಲನ್ನು
ಬೆಳಗುವ ಹಣತೆಯನ್ನು
ಮಿನುಗುವ ಮಿಣುಕುಹುಳುಗಳನ್ನು
ಸಾಕ್ಷಿಯನ್ನಾಗಿ ತರಲಾರೆ
ಈಗಲೇ ಸೋತು ಸೊರಗಿದ್ದೇನೆ
ಇನ್ನೆಚ್ಚು ಸಮಯ
ನಾ ಕಾಯಲಾರೆ ಹುಡುಗ
ನಿನ್ನ ನೆನಪುಗಳೆಂಬ
ಬೆಚ್ಚನೆಯ ಮಣ್ಣಹೊದ್ದು
ಮೌನವಾಗಿ ಮಲಗಿಬಿಡುತ್ತೇನೆ
ಮತ್ತೆ ದಾಸವಾಳವಾಗಿ
ಚಿಗುರೊಡೆಯಲಾರೆ
ನೀ ಬರುತ್ತೇನೆಂದರೂ
ನನ್ನ ಆಸೆಗಳು ನಿನ್ನನ್ನು
ನಿರ್ದಾಕ್ಷಿಣ್ಯವಾಗಿ ಹೊರಗಟ್ಟಿಬಿಡುತ್ತವೆ
ನೀನು ಅವಮಾನ ಪಡುವುದನ್ನು
ನಾನು ಸಹಿಸಲಾರೆ
ದಾರಿ ತಪ್ಪಿಯೂ ಎಂದು
ಇತ್ತ ಕಡೆ ಹೆಜ್ಜೆ ಊರದಿರು.