ಇದಕ್ಕೆಲ್ಲಾ “ಮಂಗಳ”ವಿದೆಯೇ?

ಇದಕ್ಕೆಲ್ಲಾ “ಮಂಗಳ”ವಿದೆಯೇ?

ಬರಹ

‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ.


        ಆದರೂ ವ್ಯಾಸೆಕ್ಟಮಿ, ಟ್ಯುಬೆಕ್ಟಮಿಗಳಂತಲ್ಲದ ಈ “ಆಪರೇಷನ್ ಜಾಕ್‌ಪಾಟ್” ಆಮಂತ್ರಣಕ್ಕೆ ಯಾರು ತಾನೇ ಜೊಲ್ಲು ಸುರಿಸರು? ಮತಾಂತರ, ಪಕ್ಷಾಂತರಗಳ ನಂತರದ ಈ ಪಿಡುಗಿಗೆ “ಮಿಂಡಾಂತರ” ಎಂದು ಹೆಸರಿಡಬಹುದು! ಯಾವ ಪಕ್ಷ ಅಧಿಕಾರ ಕೊಡುತ್ತದೋ ಅದಕ್ಕೆ ಸೆರಗು ಹಾಸುವ ಬಹಿರಂಗ ದಂಧೆ! ರಾಜಕೀಯ ಪಕ್ಷಗಳಲ್ಲೂ ಅಷ್ಟೆ, ವಿಶಿಷ್ಟ ಧ್ಯೇಯಾದರ್ಶವೆನ್ನುವುದೇನೂ ಹೊಳೆದು ಹೋಗುತ್ತಿಲ್ಲವಲ್ಲಾ!


        ಇವರನ್ನು ನೋಡಿ, ದೇಶದ ಮತದಾರ ಮಹಾಜನತೆಯಲ್ಲೇ ಮಾನ-ಮರ‍್ಯಾದೆಗಳಿಲ್ಲವೆಂಬ ತೀರ‍್ಮಾನಕ್ಕೆ ಬರಬಾರದು. ನಮ್ಮ ಬಹುತೇಕ ಶಾಸಕವರೇಣ್ಯರು ಆಯಾ ಕ್ಷೇತ್ರ ಜನತೆಯ ನಿಜವಾದ ಸಂಖ್ಯಾ ಮೌಲ್ಯವನ್ನು ಪ್ರತಿನಿಧಿಸುವುದೇ ಇಲ್ಲ! ಆ ಬಹತೇಕರಿಗೆ ಕ್ಷೇತ್ರದ ಬಹುಮತದ (ಶೇ. 50+) ಜನಾದೇಶವಿರುವುದಿಲ್ಲ. ಅವರೇ ಸಾಕಿಕೊಂಡ ಶೇ. ಸುಮಾರು 25-30 ಫಲಾನುಭವಿಗಳಲ್ಲದೆ ಉಳಿದವರು ಇವರನ್ನು ಮೂಸಿನೋಡುವುದೂ ಅನುಮಾನ. ಆದರೂ ಮಂತ್ರಿಗಿರಿಗಾಗಿ ಬೀದಿ ಗೂಂಡಾಗಿರಿ ನಡೆಯುತ್ತದೆ!


        ಸಭ್ಯ ಸಮಾಜವನ್ನು ಅಣಕಿಸುತ್ತಿರುವುದು ಈ ಶಾಸಕ ಮಹನೀಯರಲ್ಲ; ಅಂಥವರು ಮಾತ್ರವೇ ಆರಿಸಿ ಬರಲು ಅವಕಾಶ ಕಲ್ಪಿಸುವ ನಮ್ಮ ಪ್ರಜಾಪ್ರತಿನಿಧಿ ಕಾಯ್ದೆ! ಅದು ತಿದ್ದುಪಡಿಯಾಗಬೇಕು. ಆದರೆ ಆ ಅಧಿಕಾರವನ್ನೂ ಅಂತಹ ರಾಜಕಾರಣಿಗಳ ಮುಷ್ಟಿಗೇ ಒಪ್ಪಿಸಿ ಕೂತಿದ್ದೇವೆ!