ಇದು ಮುಂಬೈ ನಗರದ ’ಶಾನ್,” ಎಂದು ಹೇಳಬಹುದಾದ ಕಟ್ಟಡಗಳಲ್ಲೊಂದು-’ ಏರ್ ಇಂಡಿಯಾ ಬಿಲ್ಡಿಂಗ್ ’ !

ಇದು ಮುಂಬೈ ನಗರದ ’ಶಾನ್,” ಎಂದು ಹೇಳಬಹುದಾದ ಕಟ್ಟಡಗಳಲ್ಲೊಂದು-’ ಏರ್ ಇಂಡಿಯಾ ಬಿಲ್ಡಿಂಗ್ ’ !

ಬರಹ

ನಾನು ಸುಮಾರು ವರ್ಷಗಳಿಂದ ’ನಾರಿಮನ್ ಪಾಯಿಂಟ್” ಜಾಗಕ್ಕೆ, ಆಗಾಗ ಬಂದು ಹೋಗುತ್ತೇನೆ. ಹಿಂದೆ, ’ಏರ್ ಇಂಡಿಯಾ ಬಿಲ್ಡಿಂಗ್’ ಮೊದಲು ಬಂತು. ನಂತರ ಬದಿಯಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡ, ಅದರ ಮಾಲೀಕ್, ರಾಮನಾಥ ಗೋಯಂಕ ಬದುಕಿರುವಾಗಲೇ ಅಸ್ತಿತ್ವಕ್ಕೆ ಬಂತು. ಆಮೇಲೆ, ಒಬಿರಾಯ್ ಶೆರಟನ್, ಎನ್ . ಸಿ. ಪಿ. ಎ. ರಂಗಮಂದಿರ, ಎನ್ . ಸಿ. ಪಿ. ಎ. ವಾಸದ ಕಟ್ಟಡ, ಇತ್ಯಾದಿಗಳು ನಿಧಾನವಾಗಿ ಮುಗಿಲಿನ ಕಡೆ, ತಲೆಯೆತ್ತಿದವು. ಭೋರ್ಗರೆಯುತ್ತಾ ತನ್ನ ದೈತ್ಯ ಅಲೆಗಳನ್ನು ತಂದು ದಡಕ್ಕೆ ಎರಚುತ್ತಿದ್ದ ಅರಬ್ಬೀ ಸಮುದ್ರದ ಆರ್ಭಟವನ್ನು ಮಾನ್ಸೂನ್ ಕಾಲದಲ್ಲಿ ನೋಡಿ ಆನಂದಿಸಬೇಕು. ನೀರಿನ ಅಲೆಗಳ ಸತತವಾದ ಹೊಡೆಯುವಿಕೆಯಿಂದ ದಡದ ಕೃತ್ರಿಮ ಸಿಮೆಂಟ್ ದಾರಿಯ ಭೂಮಿ, ಬಿರುಕುಬಿಟ್ಟಿತ್ತು. ಅರಿಯದೆಯೇ ಅದರಲ್ಲಿ ಬಿದ್ದಿರೋ, ಮತ್ತೆ ಮೇಲೇಳಲು ಕ್ರೆನ್ ತರಬೇಕಾಗಬಹುದು, ಹಾಗಿತ್ತು ಅಂದಿನ ಪರಿಸರ.

ನಾನು ಮೊನ್ನೆ ಅಲ್ಲಿಗೆ ಯಾಕೋ ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಸ್ವಲ್ಪ ಬಿಡುವಾದಾಗ ಹತ್ತಿರ ನಿಂತು ನೋಡಿದಾಗ, ಅದೆಷ್ಟು ಚೆನ್ನಾಗಿಮಾಡಿದ್ದಾರೆ. ಕೊಳಕು ಸ್ವಲ್ಪಕಡಿಮೆಯಾಗಿದೆ. ಸಿಮೆಂಟ್ ದಾರಿಯ ಪಕ್ಕದಲ್ಲಿ, ಸಿಮೆಂಟ್ ಕಟ್ಟೆಯಮೇಲೆ ಕೂಡ್ರುವ ಜನ, ಆನಂದವಾಗಿ, ಸಮುದ್ರದ ಏರಿಳಿತಗಳನ್ನು ನೋಡುತ್ತಾ ಕುಳಿತಿದ್ದರು. ’ಒಬೆರಾಯ್ ಕಟ್ಟಡ,” ಈಗ ಚೆನ್ನಾಗಿ ಕಾಣಿಸುತ್ತಿದೆ. ಆತಂಕಿಗಳ ಮುಖಕ್ಕೆ ಮಂಗಳಾರತಿಮಾಡಿದ್ದಾರೋ ಎಂಬಂತೆ, ಎಲ್ಲವೂ ಅಚ್ಚುಕಟ್ಟಾಗಿವೆ. ಆದರೆ, ಮತ್ತೆ ಎಂದು ಎಲ್ಲಿ, ಎನು ಕಾದಿದೆಯೋ ಹೇಳುವುದು ಕಷ್ಟ !

ಜೆ. ಆರ್. ಡಿ. ಟಾಟರವರು ಛೇರ್ಮನ್ ಆಗಿದ್ದ ಸಮಯದಲ್ಲಿ ನಮ್ಮ ’ಏರ್ ಇಂಡಿಯ” ವಿಶ್ವದಲ್ಲೇ ವಿಶ್ವಾಸನೀಯ, ಹಾಗೂ ಅತಿಧಿಸತ್ಕಾರಕ್ಕೆ ಮೀಸಲಾಗಿದ್ದ ವಿಮಾನ ಸಂಸ್ಥೆಯಾಗಿತ್ತು. ಮಾನ್ಯ, ಮೊರಾರ್ಜಿ ದೇಸಾಯಿಯವರ ಪಂತಪ್ರಧಾನಿಯ ನಾಯಕತ್ವದಲ್ಲಿ, ಜೆ. ಆರ್. ಡಿ. ಟಾಟರವರನ್ನು ಏರ್ ಇಂಡಿಯ ನಾಯಕತ್ವದಿಂದ ಕೆಳಗಿಳಿಯಲು ಒತ್ತಾಯಿಸಿದ್ದರಿಂದ, ಮುಂದೆ ಬಂದ ಅಧಿಕಾರಿಗಳ, ಕಾರ್ಯಾಚರಣೆಗಳು, ಅಷ್ಟೇನೂ ಉತ್ತಮ ಮಟ್ಟದ್ದಾಗಿರದೆ, ದಿನೇ-ದಿನೇ, ಅಧೋಗತಿಶುರುವಾಗಿ, ಈಗ ವಿಶ್ವದ ಅತಿ ಅಪನಂಬಿಕೆಗೆ ಹೆಸರುವಾಸಿಯಾದ, ವಿಮಾನ ಕಂಪೆನಿಯಾಗಿ ಹೆಸರು ಕೆಡೆಸಿಕೊಂಡಿದೆ !

ಇದೆಲ್ಲವನ್ನೂ ಹಾಗೂ ಮುಂಬೈನ ಆಗುಹೋಗುಗಳನ್ನು ಶಾಂತಚಿತ್ತದಿಂದ ಗಮನಿಸುತ್ತಾ, ಬೇಸರದ ನಿಟ್ಟುಸಿರು ಬಿಡುತ್ತಿದೆಯೇನೊ ಅನ್ನುವಂತೆ, ತನ್ನ ಭವ್ಯತೆಯನ್ನು ಹಾಗೆಯೇ ಕಾದಿರಿಸಿಕೊಂಡು, ನೇರವಾಗಿ ನಿಂತಿದೆ-ಏರ್ ಇಂಡಿಯಾ ಭವನ !

-ಚಿತ. ವೆಂ