ಇದೇನಿದು ನರಕ ವಾರ ?
ಬೆಳಗಿನ ಓಟದ ಸಮಯದಲ್ಲಿ ಎಂದಿನಂತೆ ಮಾಜಿ ಯೋಧರೊಬ್ಬರು ಜೊತೆಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಆ ಗೆಳೆಯರ ಬಳಿ ಮಾತನಾಡುತ್ತಿರುವಾಗ ಅವರು ನರಕ ವಾರ (Hell Week) ಬಗ್ಗೆ ಹೇಳಿದರು. ಅದರ ಬಗ್ಗೆ ಕುತೂಹಲ ಹೆಚ್ಚಾಗಿ ಅವರು ನೀಡಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಸಾಮಾನ್ಯವಾಗಿ ವಿಶ್ವದ ಅತ್ಯಂತ ಕಠಿಣ ಸೈನಿಕ ತರಬೇತಿಗಳಲ್ಲಿ ಮುಖ್ಯವಾಗಿ ಕಮಾಂಡೋ ತರಬೇತಿ ಶಿಬಿರಗಳಲ್ಲಿ 5.5 ( ಐದುವರೆ ) ದಿನಗಳ ಟ್ರೈನಿಂಗ್ ಇರುತ್ತದೆ. ಬಹುತೇಕ ನಮ್ಮ ಕಾಲ್ಪನಿಕ ನರಕದ ರೀತಿಯಲ್ಲಿಯೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಎಂದು ಅನುಭವದ ಮೂಲಕ ಅರ್ಥ ಮಾಡಿಸಲಾಗುತ್ತದೆ ಅದನ್ನು ಅನುಭವಿಸಿಯೇ ನೋಡಬೇಕು. ಪದಗಳಲ್ಲಿ ವರ್ಣಿಸುವುದು ಸ್ವಲ್ಪ ಕಷ್ಟವೇ ಆದರೂ.
ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಚ್ಚರಿಸಲಾಗುತ್ತದೆ. ಸುಮಾರು 20-30-40 ಕೆ.ಜಿಯ ತೂಕದ ವಸ್ತುವನ್ನು ನೀಡಿ ನೂರಾರು ಕಿಲೋಮೀಟರ್ ಗಳವರೆಗೆ ನಡೆಸಲಾಗುತ್ತದೆ. ಮಧ್ಯದಲ್ಲಿ ಯಾವುದೇ ನೀರು ಆಹಾರವನ್ನು ಕೊಡುವುದಿಲ್ಲ. ಅಷ್ಟು ದೂರ ನಡೆದ ನಂತರ ಇದ್ದಕ್ಕಿದ್ದಂತೆ ಭಕ್ಷ್ಯ ಭೋಜನಗಳನ್ನು ನೀಡಲಾಗುತ್ತದೆ. ಅದನ್ನು ಸವಿದು ಅರ್ಧ ಗಂಟೆಯ ನಂತರ ಮತ್ತೆ ಒಳ್ಳೆಯ ಊಟ ನೀಡಲಾಗುತ್ತದೆ ಅಂದರೆ ಮತ್ತೆ ತಿಂದು ದೇಹ ಹೇಗೆ ಒಗ್ಗಿಕೊಳ್ಳುತ್ತದೆ ಎಂಬುದು ಒಂದು ವಿಧಾನವಾದರೆ ಮುಂದೆ ಎರಡು ದಿನಗಳ ಕಾಲ ಯಾವುದೇ ಸಿದ್ಧಪಡಿಸಿದ ಆಹಾರ ನೀಡುವುದಿಲ್ಲ. ಕಾಡಿನಲ್ಲಿರುವ ಹಣ್ಣು ಕಾಯಿ ಎಲೆಗಳನ್ನೇ ತಿಂದು ಬದುಕಬೇಕಾಗುತ್ತದೆ. ಹಾಗೆಯೇ ದೊಡ್ಡ ದೊಡ್ಡ ಪ್ರಪಾತಗಳನ್ನ ನೀರಿನ ಪ್ರವಾಹಗಳನ್ನ ದಾಟಿ ಮುನ್ನಡೆಯಬೇಕಾಗುತ್ತದೆ.
ತೀವ್ರ ಚಳಿ ಮಳೆ ಗಾಳಿ ಬಿಸಿಲಿನ ವಾತಾವರಣಕ್ಕೆ ದೇಹವನ್ನು ನುಚ್ಚುಗುಜ್ಜಾಗುವಂತೆ ದಂಡಿಸಲಾಗುತ್ತದೆ. ಅನೇಕ ಬಾರಿ ಆಸೆಗಳನ್ನು ತೋರಿಸಿ ಅದನ್ನು ಕೊಡುವುದಿಲ್ಲ. ಒತ್ತಡ ಸೃಷ್ಟಿಸಿ ನಿರಾಸೆ ಮೂಡಿಸುತ್ತಾರೆ. ಇಷ್ಟೊಂದು ಕಠಿಣ ಪರಿಶ್ರಮ ಏಕೆಂದರೆ ನಿಜವಾದ ಯುದ್ಧಭೂಮಿಯಲ್ಲಿ ಅಥವಾ ಕಠಿಣ ಸಂದರ್ಭದಲ್ಲಿ ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಲು ಇದು ಸಹಾಯಮಾಡುತ್ತದೆ. ಕೇವಲ ಆಹಾರ ಮತ್ತು ದೈಹಿಕ ಶ್ರಮ ಮಾತ್ರವಲ್ಲ ನಿದ್ರೆಯ ಸಮಯವನ್ನು ಸಹ ಕಸಿದುಕೊಳ್ಳಲಾಗುತ್ತದೆ. ವಿಶ್ರಾಂತಿ ಅವಶ್ಯಕತೆಯನ್ನು ನಿರಾಕರಿಸಲಾಗುತ್ತದೆ.
ಸೋಮವಾರದಿಂದ ಶುಕ್ರವಾರದವರೆಗೆ ಆ ಇಡೀ ವಾರ ಕಾಲಿನಿಂದ ಶೂ ಸಹ ಬಿಚ್ಚಲು ಬಿಡುವುದಿಲ್ಲ. ಈ ತರಬೇತಿಯಲ್ಲಿ ಮೇಲಧಿಕಾರಿಗಳು ದಿಢೀರನೆ, ಇದ್ದಕ್ಕಿದ್ದಂತೆ ವಿರುದ್ಧ ಆದೇಶಗಳನ್ನು ಸಹ ಕೊಡುತ್ತಾರೆ. ಅದನ್ನು ಸಹ ಚಾಚೂ ತಪ್ಪದೇ ಪಾಲಿಸಬೇಕು. ಯಾವುದನ್ನು ಪ್ರಶ್ನಿಸುವಂತಿಲ್ಲ. ನರಕದಲ್ಲಿ ನಡೆಯಬಹುದಾದ ಅತ್ಯಂತ ಕ್ರೌರ್ಯದ ಘಟನೆಗಳನ್ನು ನಾವು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯವಿದೆಯೋ ಅಷ್ಟೇ ಪ್ರಮಾಣದಲ್ಲಿ ತರಬೇತಿ ಶಿಬಿರ ಇರುತ್ತದೆ.ಆದರೆ ಜೀವ ಹಾನಿಯಾಗದಂತೆ ಎಲ್ಲವೂ ವಾಸ್ತವಿಕವಾಗಿ ನಡೆಯುತ್ತದೆ. ಈ ಕಠಿಣ ತರಬೇತಿಯನ್ನ ಪಡೆದ ನಂತರ ಯೋಧ ಅಥವಾ ಕಮಾಂಡೋ ಹೆಚ್ಚು ಬಲಿಷ್ಠನಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ ಎಂಬ ಭರವಸೆ ಮೂಡುತ್ತದೆ.
ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಸಾಮಾನ್ಯರ ಜನರಾದ ನಾವುಗಳು ಈ ನರಕ ವಾರದಿಂದ ಎಷ್ಟು ದೂರವಿದ್ದೇವೆ ಅಥವಾ ಅದರ ಅನುಭವ ನಮಗೆ ಆಗಿದೆಯೇ ಎಂದು ಪ್ರಶ್ನಿಸಿಕೊಂಡಾಗ, ಹೌದು, ಕೆಲವು ಸಂದರ್ಭಗಳಲ್ಲಿ ಇಷ್ಟೇ ಪ್ರಮಾಣದ ನೋವುಗಳನ್ನು ಕೆಲವರು ಅನುಭವಿಸಿರುವ ಸಾಧ್ಯತೆ ಇದೆ. ಆದರೆ ಶೇಕಡ 90ರಷ್ಟು ಜನ ಇಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಿರುವುದಿಲ್ಲ. ಹಾಗೆ ಈ 90 ಭಾಗದಲ್ಲಿ ಒಂದು 40ರಷ್ಟು ಜನ ತುಂಬಾ ಸುಖವಾಗಿಯೇ ಇರುತ್ತಾರೆ. ಶ್ರೀಮಂತರ, ಕೆಲವು ರಾಜಕಾರಣಿಗಳ, ದೊಡ್ಡ ಅಧಿಕಾರಿಗಳ, ಉದ್ಯಮಿಗಳ ಮಕ್ಕಳು ಸಾಮಾನ್ಯವಾಗಿ ಇಷ್ಟೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿ ಇರುವುದಿಲ್ಲ. ಅದರಿಂದಾಗಿಯೇ ಅವರ ನಡವಳಿಕೆಗಳು ಸ್ವಲ್ಪ ಉಡಾಫೆಯಾಗಿ ಮತ್ತಷ್ಟು ಜೀವ ವಿರೋಧಿಯಾಗಿ ಇನ್ನೊಂದಿಷ್ಟು ಅಹಂಕಾರದಿಂದಲೂ ಕೂಡಿರುತ್ತದೆ.
ಹೆಚ್ಚು ಶ್ರಮ ಹೆಚ್ಚು ಲಾಭ (More pain More gain ) ಎಂಬ ಇಂಗ್ಲಿಷ್ ನಾಣ್ಣುಡಿ ಮತ್ತು ಕನ್ನಡದ " ಕೈ ಕೆಸರಾದರೆ ಬಾಯಿ ಮೊಸರು " ಎಂಬ ಕನ್ನಡ ಗಾದೆಯು ಇದೇ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ. ಏಕೆಂದರೆ ನಾವು ಎಷ್ಟು ಶ್ರಮ ಪಡುತ್ತಿವೋ ಅಷ್ಟರಮಟ್ಟಿಗೆ ಸಾಮಾನ್ಯವಾಗಿ ನಮಗೆ ಪ್ರತಿಫಲ ಸಿಗುತ್ತದೆ. ಇದಕ್ಕೆ ಕೆಲವೊಮ್ಮೆ ಅಪವಾದವು ಇದೆ. ಬದುಕಿನಲ್ಲಿ ನಿಜವಾದ ಸುಖದ ಅನುಭವವಾಗಬೇಕಾದರೆ ಕಷ್ಟದ ಅನುಭವವು ಸಹ ಬೇಕಾಗುತ್ತದೆ. ಆಗ ಮಾತ್ರ ನಿಜಕ್ಕೂ ಸುಖದ ಆಳ ಅನುಭವ ಅರಿವಾಗುತ್ತದೆ. ಅದನ್ನು ನಿಮಗೆ ಮತ್ತೊಮ್ಮೆ ನೆನಪಿಸಲು ಈ ಲೇಖನ.
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ