ಇನ್ನೊಂದು ಕಪ್ಪೆ ಕಥೆ

ಇನ್ನೊಂದು ಕಪ್ಪೆ ಕಥೆ

ಬರಹ

“ಒಂದೂರಲ್ಲಿ ಓಂದು ಬಾವಿ ಇತ್ತಂತೆ ,ಅದರಲ್ಲಿ ಒಂದು ಕಪ್ಪೆ ಇತ್ತಂತೆ, ಅದು ಬಾವಿನೇ ಲೋಕ ಅಂತ ಅನ್ಕೋಂಡಿತ್ತಂತೆ” ಎಂದು ನೀವು ನಿಮ್ಮ ಅಜ್ಜ-ಅಜ್ಜಿ ಬಾಯಲ್ಲಿ ಕೂಪ ಮಂಡೂಕದ ಕಥೆಯನ್ನು ಕೇಳಿರಬಹುದು. ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೆ, ಶಾಲೆಯಲ್ಲೋ, ಪುಸ್ತಕದಲ್ಲೋ ಓದಿರಬಹುದು ಅಥವ ಕೇಳಿರಬಹುದು.
ಮೇಲಿನ ಮಾತಿಗೆ ನಾನು ಅಪವಾದವೆಂದೇ ಹೇಳಬೇಕು.ನನ್ನ ಅಜ್ಜ “ದಿನಾಲು ಬ್ಯಾಂಕಿನ ಪಾಸ್ ಬುಕ್ ನ್ನನ್ನು ಆಗಾಗ ತೆಗೆದು ನೋಡುತ್ತಿದ್ದರೆ ಹಣವು ವೃದ್ಧಿಸುತ್ತದೆ “ ಎಂದು ನಂಬಿದ್ದರೋ ಏನೋ, ಆದ್ದರಿಂದ ಅವರಿಗೆ ಈ ಕಥೆಗಳನ್ನು ಹೇಳೋ ಸಮಯವಿರಲಿಲ್ಲ. ಶ್ರದ್ಧಾಳು ಮುಸಲ್ಮಾನರು ದಿನಕ್ಕೆ ಐದು ಬಾರಿ ನಮಾಜು ಮಾಡಿದರೆ, ಅವರನ್ನು ಮೀರಿಸಿ ನನ್ನ ಅಜ್ಜ ಆರು ಬಾರಿ ಪಾಸ್ ಬುಕ್ ಪರೀಕ್ಷೆ ಮಾಡುತಿದ್ದರು. ಅದ್ದರಿಂದ, ಈ ಕಥೆಯನ್ನು ನಾನು ಓದಿ ತಿಳಿದುಕೊಳ್ಳಬೇಕಾಯ್ತು.
ಈ ಕಥೆನೂ ಒಂದು ಬಾವಿ ಕಪ್ಪೆದೇ.ಆದರೆ ಇದು ಎರಡನೇ ತಲೆಮಾರಿನ ಬಾವಿ ಕಪ್ಪೆಗಳ ಕಥೆ. ಕಥೆ ಹಾಗಿರಲಿ, ಈ ಸೆಕೆಂಡ್ ಜೆನರೇಷನ್ ಕೂಪಮಂಡೂಕಗಳು ಎಲ್ಲಿಂದ ಬಂದವು ಅಂತ ಕೇಳುತ್ತೀದ್ದೀರಾ ? ಮರೆತೇ ಬಿಟ್ರಾ ? ಆ ಕಥೆಯ ಬಾವಿ ಕಪ್ಪೆಗೆ “ಈ ಬಾವಿನೇ ಲೋಕ ಅಲ್ಲ ,ಹೊರಗಡೆ ವಿಶಾಲವಾದ ಲೋಕವಿದೆ “ ಅಂತ ಹೇಳೋಕ್ಕೆ ಸಾಗರದಿಂದ ಬಂದಿತ್ತಲ್ಲ ಆ ಗಂಡು ಕಪ್ಪೆನೇ, ಬಾವಿಯಲ್ಲಿದ್ದ ಹೆಣ್ಣು ಕಪ್ಪೆ ಜೊತೆ ಸಂಸಾರ ಹೂಡಿಬಿಡ್ತು (ಏನಾದರೂ ನನ್ನ ಅಜ್ಜ ಕಥೆ ಹೇಳಿದ್ದರೆ “ಸಾಗರದಲ್ಲಿ ಕಪ್ಪೆಗಳೇ ಇಲ್ಲ , ಹೀಗಿರೋವಾಗ ಈ ಕಪ್ಪೆ ಅಲ್ಲಿಂದ ಬರೋಕ್ಕೆ ಹೇಗೆ ಸಾಧ್ಯ ?” ಅಂತ ಕೇಳುತಿದ್ದೆನೋ ಏನೋ ? ಅದಕ್ಕವರು “ಎರಡಕ್ಷರ ಓದ್ಬಿಟ್ಟಿದ್ದಾನೆ ಅಂತ ತಲಹರಟೆ ಮಾತಾಡ್ತಾನೆ ? ಸುಮ್ನೆ ಕಥೆ ಕೇಳು … ಅಂತ ಖಂಡಿತ ಗದರಿಸಿರೋರು), ಆ ಎರಡು ಕಪ್ಪೆಗಳ ಮರಿಗಳೇ ಈ ಕಥೆಯ ಕೂಪಮಂಡೂಕಗಳು.

ಆ ಗಂಡು ಕಪ್ಪೆಗೆ ಬಾವಿಯ ಬದುಕಿನ ಏಕತಾನತೆ ತುಂಬಾ ಬೇಸರ ತಂದಿತ್ತು . ಅದೇ ಸೊಳ್ಳೆ ಊಟ ,ಅದೇ ಪಾಚಿ . ಆದಷ್ಟು ಬೇಗ ಮತ್ತೆ ಸಾಗರಕ್ಕೆ ಮರಳಬೇಕೆನ್ನಿಸಿಬಿಟ್ಟಿತ್ತು. ತನ್ನಾಸೆಯನ್ನು ಹೆಣ್ಣು ಕಪ್ಪೆಗೆ ಹೇಳಿದರೆ “ನಾನು ಈ ಬಾವಿಲೇ ಹುಟ್ಟಿ ಬೆಳೆದಿರೋದು,ಬದುಕಿರೋ ಇನ್ನು ಸ್ವಲ್ಪ ಕಾಲ,ಇಲ್ಲೇ ಆರಾಮವಾಗಿರ್ತೀನಿ” ಎನ್ನುತ್ತಿತ್ತು.ತನ್ನ ಸಂಸಾರವನ್ನು ಬಿಟ್ಟು ಸಾಗರಕ್ಕೆ ಹೋಗಬೇಕೆಂದು ನಿರ್ಧರಿಸಿ ,ಬಾವಿಯಿಂದ ಹೊರಬರುವ ಬಗ್ಗೆ ಉಪಾಯಗಳನ್ನು ಯೋಚಿಸತೊಡಗಿತು.ಎಷ್ಟೇ ಯೋಚನೆ ಮಾಡಿದರೂ ತಲೆಗೆ ಏನೂ ಹೊಳೆಯಲಿಲ್ಲ . ಬೇಸರದಿಂದ ಸುಮ್ಮನಾಯಿತು.

ಕಪ್ಪೆ ಸಂಸಾರ ಬೆಳೀತಾ ಇರೋ ಹಾಗೆನೇ, ಒಂದು ಕಾಲದಲ್ಲಿ ಹಳ್ಳಿಯಾಗಿದ್ದ ಆ ಊರು ಈಗ ಒಂದು ಸಣ್ಣ ಪಟ್ಟಣವಾಗಿ ಬೆಳೆದಿತ್ತು. ಊರ ಸುತ್ತಮುತ್ತ ಇದ್ದ ಕಾಡನ್ನೆಲ್ಲಾ ಕಡಿದು ಮಾರಿ ದುಡ್ಡು ಮಾಡಿಕೊಂಡು ಐಷಾರಾಮಿನ ಬಾಳ್ವೆ ಮಾಡ್ತಾ ಇದ್ರು. ಇದರ ಪರಿಣಾಮವಾಗಿ , ಕಾಲಕಾಲಕ್ಕೆ ಆಗುತ್ತಿದ್ದ ಮಳೆ ಕೈಕೊಟ್ಟು ,ಕುಡಿಯುವ ನೀರಿಗೆ ತೊಂದರೆಯಾಗಿತ್ತು.ಜನರು ವಿಧಿಯಿಲ್ಲದೇ ಧೂಳು ತುಂಬಿದ , ಕಪ್ಪೆಗಳಿದ್ದ ಬಾವಿ ನೀರನ್ನು ಕುಡಿಯುವ ಪರಿಸ್ಥಿತಿ ಒದಗಿಬಂದಿತ್ತು. ಬಾವಿಯ ನೀರಿಗೆ ಕೊಡಗಳನ್ನು ಇಳಿಸಿದಾಗ , ಬಾವಿಯಲ್ಲಿದ್ದ ಗಂಡು ಕಪ್ಪೆ ಇದೇ ಸರಿಯಾದ ಸಮಯವೆಂದು ಯೋಚಿಸಿ,ಒಂದು ಬಿಂದಿಗೆಯೊಳಗೆ ಕುಳಿತು, ಬಾವಿಯಿಂದ ಹೊರಕ್ಕೆ ಬಂದುಬಿಟ್ಟಿತು.
(ಆಮೇಲೆ ಅದರ ಕಥೆ ಏನಾಯ್ತೆಂದು ಯೋಚಿಸೋಕ್ಕೆ ನಾನು ಹೋಗಿಲ್ಲ ಒಂದು ಕೊಡ ನೀರು ಹಾಳು ಮಾಡ್ತಲ್ಲ ಅಂತ ನೀರು ಸೇದಿದವರು ಅದನ್ನು ಕೊಂದಿರಲೂ ಬಹುದು ಅಥವ ಸಾಗರವನ್ನು ಸೇರಿ ಅದು ಸಂತೋಷದಿಂದಿರಬಹುದು. ಅದರ ಪಾತ್ರ ಈ ಕಥೆಯಲ್ಲಿ ಮುಗಿಯಿತು ಅಂದುಕೊಳ್ಳಿ.)
ತಂದೆ ಬೀಡಿ ಸೇದೋದನ್ನು ನೋಡಿ ಮಕ್ಕಳು ಕಲಿಯೋ ಹಾಗೆ , ಕಪ್ಪೆ ಮರಿಗಳೆಲ್ಲ ಒಂದೊಂದಾಗಿ ಬಾವಿ ಬಿಟ್ಟು ಓಡಿಹೋಗೋಕ್ಕೆ ಶುರುಮಾಡಿಬಿಟ್ವು.ಆದ್ರೆ ಒಂದು ಕಪ್ಪೆ ಮರಿ ಮಾತ್ರ ಬಾವಿಯಲ್ಲೇ ಉಳಿದುಕೊಂಡುಬಿಡ್ತು.ಬಹುಶಃ ತನ್ನ ತಾಯಿಯನ್ನು ತುಂಬಾ ಹಚ್ಕೊಂಡು ಬಿಟ್ಟಿತ್ತು ಅನ್ಸತ್ತೆ ಅಥವ ಹೊರಗಿನ ಪ್ರಪಂಚವನ್ನು ಧೈರ್ಯವಿರಲಿಲ್ಲವೇನೋ ?
ನನ್ನ ಈ ಕಥೆಯ ನಾಯಕನಾದ ಈ ಕಪ್ಪೆಗೆ “benefit of the doubt “ ಕೊಟ್ಟು, ಅದು ಹೋಗದಿದ್ದಕ್ಕೆ ತಾಯಿಯ ಮೇಲಿನ ಪ್ರೀತಿ ಅಂತಲೇ ನಂಬೋಣ. ತಾಯಿ ಕಪ್ಪೆಗೂ ಅಷ್ಟೆ, ಆ ಮರಿಕಪ್ಪೆಯ ಮೇಲೆ ಅತಿಯಾದ ಮಮತೆ , ಅಕ್ಕರೆ.ಆ ಕಪ್ಪೆ ಮರಿಗೆ ಹೊರಗಿನ ಲೋಕದ ಬಗ್ಗೆ ಆ ಗಂಡು ಕಪ್ಪೆ ಹೇಳಿದ ಕಥೆಗಳನ್ನೆಲ್ಲಾ ಪ್ರತಿ ರಾತ್ರಿ ಮಲಗುವ ಮುನ್ನ ಹೇಳ್ತಾ ಇತ್ತು.ಹೊರಗೆ ಸಿಕ್ಕೋ ಬಗೆಬಗೆಯ ಕೀಟಗಳ ರುಚಿ,
ಕೆರೆಯಲ್ಲಿ ಈಜೋವಾಗ ಸಿಕ್ಕೋ ಆನಂದ , ಮಳೆ ಹನಿಯೊಂದು ಬಾಯೊಳಕ್ಕೆ ಹೋದಾಗ ಸಿಕ್ಕೋ ಸಂತೋಷದ ಅನುಭೂತಿ, ಹಾವಿನಿಂದ ಪಾರಾದ ಶೌರ್ಯದ ಕಥೆಗಳು, ಹೀಗೆ ಬೇಕಾದಷ್ಟು ವಿಚಾರಗಳನ್ನು ಹೇಳುತ್ತಿತ್ತು. (ಆ ಕಥೆಗಳನೆಲ್ಲಾ ಒಟ್ಟುಗೂಡಿಸಿದ್ದರೆ J K Rowling (harry potter ನ ಕರ್ತೃ) ಕೂಡ ಆಶ್ಚರ್ಯಪಟ್ಟು ತಲೆದೂಗುವಂತೆ ಮಾಡಬಹುದಿತ್ತೇನೋ ?)
ಮರಿಕಪ್ಪೆ ಆ ಕಥೆಗಳನ್ನು ಕೇಳುತ್ತಾ ನಿದ್ದೆಹೋಗುತ್ತಿತ್ತು. ಆ ತಾಯಿ ಕಪ್ಪೆತನ್ನ ಮರಿಗೆ ತಾನು ಕಂಡಿರದ ಲೋಕದ ಕನಸುಗಳನ್ನು ಧಾರೆಯೆರೆದಿತ್ತು.ಈಗ ಅದು ಅದರ ಮರಿಯ ಕನಸುಗಳಾಗಿದ್ದವು.
ಕಾಲಚಕ್ರ ಉರುಳುತ್ತಿತ್ತು,ವೃದ್ಧಾಪ್ಯ ಬಂದು ತೀರಿಕೊಂಡಿತು.ಈಗ ಬಾವಿಯಲ್ಲಿ ಮರಿ ಕಪ್ಪೆಯೊಂದೇ ಉಳಿದುಬಿಟ್ಟಿತು.ಅದರ ಸಂಗಾತಿ ತಾಯಿಯ ಕನಸುಗಳು ಮಾತ್ರ.ಅದನ್ನೆ ದಿನಾಲು ನೆನೆದು ಬೇಸರವನ್ನು ದೂರ ಮಾಡಲು ಪ್ರಯತ್ನಿಸುತ್ತಿತ್ತು. ಚಂದ್ರನ ಬಿಂಬವು ನೀರಿನಲ್ಲಿ ಬಿದ್ದಾಗ , ಅದರ ಮೇಲೆ ಹಾರುತ್ತಿತ್ತು. ಆ ಚಂದ್ರನ ಕಾಂತಿಯಲ್ಲಿ ಬೆಳಕಿನಲ್ಲಿ ಮಿಂದು ಅಷ್ಟೇ ರೂಪವಂತನವೆನೆಂದು ನಂಬಿತ್ತೇನೋ.ನಾಲಿಗೆ ಚಾಚಿ ಸೊಳ್ಳೆ ಹಿಡಿಯೋ ಹಾಗೆ ನಕ್ಷತ್ರಗಳನ್ನು ಹಿಡಿಯೋ ಪ್ರಯತ್ನ ಮಡುತ್ತಿತ್ತು, ಚೈತ್ರದಲ್ಲಿ ಬಾವಿಯ ಪಕ್ಕದ ಸಂಪಿಗೆ ಮರದ ಹೂವು ಬಾವಿಯೊಳಕ್ಕೆ ಬಿದ್ದಾಗ , ಯಾವಾಗಲೂ ನನ್ನ ಬಾವಿ ಹೀಗೆ ಘಮಘಮಿಸಬಾರದೆ ? ಎಂದು ಕೊರಗುತ್ತಿತ್ತು.ಜೋರಾಗಿ ಮಳೆ ಬಂದು ಈ ಬಾವಿ ತುಂಬಿಬಿಡಬಾರದೇ ? ಎಂದು ನಿಟ್ಟುಸಿರು ಬಿಡುತ್ತಿತ್ತು. ಇವೆಲ್ಲಾ ಹುಚ್ಚುತನ ವೆನ್ನಿಸಿದರೂ ಬಾವಿಯೊಳಗಿರುವಾಗ ಇನ್ನೇನು ತಾನೆ ಯೋಚಿಸಲಾದೀತು ?

ತಂದೆಯಂತೆ ಬಾವಿಯಿಂದ ಹೊರಹೋಗುವ ಯೋಚನೆ ಬಂದರೂ ,ದಾರಿ ಕಾಣಲಿಲ್ಲ. ಏಕೆಂದರೆ ಈಗ ಆ ಊರಿಗೆ ಕೊಳವೆ ಬಾವಿಗಳು , ಮಿನೆರಲ್ ವಾಟರ್ ಬಾಟ್ಲಿಗಳೆಲ್ಲ ಬಂದಾಗಿತ್ತು. ಒಳ್ಳೆ ನೀರು ಸಿಕ್ಕೋವಾಗ ,ಈ ಧೂಳು ನೀರನ್ನು ಹುಡುಕಿಕೊಂಡು ಯಾರು ತಾನೇ ಬರ್ತಾರೆ ?
ಮರಿಕಪ್ಪೆ ದಿನಾಲು ಜೋರಾಗಿ ಹಾಡ್ತಾ ಇತ್ತು(ವಟಗುಟ್ಟುತ್ತಿತ್ತು ಅಂತ ಓದಿಕೊಳ್ಳಿ). ಯಾವುದಾದರೂ ಹೆಣ್ಣು ಕಪ್ಪೆನ
ಹಾಡಿನಿಂದ ಮರುಳುಮಾಡಬೇಕು ಅಂತ ಇರಬೇಕು. ಇದನ್ನು ಯಾರು ಅದಕ್ಕೆ ಹೇಳಿಕೊಟ್ಟರು ಅಂತ ನನ್ನನು ಕೇಳ್ಬೇಡಿ. ”ಪ್ರಕೃತಿಸಹಜ ಗುಣ” ವೆಂಬ ಅರ್ಥಗರ್ಭಿತ ಪದ ಉಪಯೋಗಿಸುತ್ತಾರಲ್ಲ, ಅದೇನೆ ಇದು ಅಂದುಕೊಳ್ಳಿ.ಪ್ರಶಾಂತವಾದ ಆ ಬೆಳದಿಂಗಳಿನ ರಾತ್ರಿಯಲ್ಲಿ ಎಲೆಗಳ ಮಧ್ಯದಿಂದ ಗಾಳಿ ನುಸುಳುವ ಸದ್ದು ಕಪ್ಪೆಯ ವಟಗುಟ್ಟುವಿಕೆಯಲ್ಲಿ ಕರಿಗಿಹೋಗಿತ್ತು. ಆ ಕರ್ಕಶ ಧ್ವನಿ ವಾತವರಣದ ಪ್ರಶಾಂತತೆಯನ್ನು ಹಾಳುಗೆಡವುತ್ತಿತ್ತು. ಧಪ್ ಎಂದು ಬಾವಿಯೊಳಕ್ಕೆ ಏನೋ ಬಿದ್ದಂತಾದಾಗ , ಕಪ್ಪೆ ಯು ತನ್ನ ಗಾಯನವನ್ನು ನಿಲ್ಲಿಸಿತು. ಅದರ ಮನಸ್ಸಿನಲ್ಲಿ ಭಯ ಉಂಟಾಗತೊಡಗಿತು. ಯಾವುದಾದರೂ ಹಾವು ಬಾವಿಯೊಳಕ್ಕೆ ಬಿದ್ದಿದ್ದರೆ ಏನು ಗತಿ ?
ಆ ವಸ್ತು ಬಿದ್ದ ರಭಸಕ್ಕೆ ಕದಡಿದ ನೀರು ತಿಳಿಯಾದ ಮೇಲೆ ಧೈರ್ಯಮಾಡಿ ಗಂಭೀರ ಧ್ವನಿಯಲ್ಲಿ “ಯಾರದು ?” ಎಂದಿತು.
ಒಂದು ಸೌಮ್ಯವಾದ ಧ್ವನಿಯೊಂದು “ನಾನೊಂದು ಕೆರೆ ಕಪ್ಪೆ, ನಿನ್ನ ಇಂಪಾದ ಹಾಡನ್ನು ಕೇಳಿ , ಮರುಳಾಗಿ ಇಲ್ಲಿಗೆ ಬಂದುಬಿಟ್ಟೆ”
ಎಂದು ಉತ್ತರಿಸಿತು. ಮರಿಕಪ್ಪೆಯ ಹೃದಯಸ್ತಂಭನವು ಸ್ತೀಮಿತಕ್ಕೆ ಬಂದ ಮೇಲೆ, ಹುಡುಗಿಯರೊಂದಿಗೆ ಮಾತನಾಡುವಾಗ ಕಾಲೇಜು ಹುಡುಗನೊಬ್ಬ ತೋರುವ ಪೊಳ್ಳು ಗಾಂಭೀರ್ಯದೊಂದಿಗೆ “ ಇಲ್ಲಿ ಹತ್ತಿರ ಯಾವುದಾದರೂ ಕೆರೆ ಇದೆಯೇ ? ಈ ಬಾವಿಯಿಂದ ನಾನು ಕೂಡ ಹೊರಹೋಗಬೇಕಾಗಿದೆ. ನನ್ನ ತಾಯಿ ಹೇಳಿರುವ ಹೊರಗಿನ ಲೋಕವನ್ನು ನೋಡಬೇಕಿದೆ “ ಎಂದು ಹೇಳುತ್ತಾ ತನ್ನ ತಾಯಿಯ ಕಥೆಗಳನ್ನು ವಿವರಿಸತೊಡಗಿತು. “ ಅಯ್ಯೋ , ಸಾಕು ಮಾಡು ಹೊರಗಿನ ಪ್ರಪಂಚದ ಬಗ್ಗೆ ನಿನಗೇನು ಗೊತ್ತು ? “ ಕೆರೆ ಕಲುಷಿತ ನೀರಲ್ಲಿ ಈಜಲು ಹೊರಟರೆ , ಅದರಲ್ಲಿ ಬೆರೆತ ವಿಷದಿಂದ ಪ್ರಾಣವೇ ಹೋಗಿಬಿಡುತ್ತದೆ , ಮುಂಚೆಯಾದರೋ ದೇಹದಲ್ಲಿ ಗಾಳಿ ತುಂಬಿಸಿಕೊಂಡು ಆ ಪೆದ್ದು ಹಾವುಗಳಿಗೆ ಮೋಸ ಮಾಡಬಹುದಿತ್ತು,ಆದ್ರೆ ಈಗ ಅದ್ಯಾವುದೋ ಒಂದು ನಾಲ್ಕು ಗೋಳಾಕಾರದ ಕಾಲಿನ ಪ್ರಾಣಿಗಳು ನಮ್ಮ ಚಪ್ಪಟ್ಟೆ ಮಾಡಿಬಿಡುತ್ತದೆ. ಆ ಪ್ರಾಣಿ ಕೆರೆ ಬದಿಯಲ್ಲಿರೋ ರಸ್ತೆಯಲ್ಲಿ ಮಾತ್ರ ಸಂಚರಿಸುತಿರುತ್ತವೆ, ಅವುಗಳಿಂದ ಅದೆಷ್ಟು ಕಪ್ಪೆಗಳು ವಿಕಾರವಾಗಿ ಸತ್ತಿವೆಯೋ ಲೆಕ್ಕವೇ ಇಲ್ಲ. ನಾನು ಪ್ರಾಣ ಭೀತಿಯಿಂದ ಆ ಕೆರೆಯನ್ನು ಬಿಟ್ಟು ಬರಬೇಕಾಯಿತು” ಎಂದು ಎಡಬಿಡದೇ ತನ್ನ ಕಥೆಯನ್ನು ಹೇಳಿ ಮುಗಿಸಿತು.

“ಹಾಗಾದರೆ ನಾನು ಕೇಳಿ ದ್ದೆಲ್ಲಾ ಸುಳ್ಳೇನು ? ಹೊರಗೆ ನನಗೆ ಸ್ವರ್ಗ ಕಾದಿದೆ ಅಂತ ತಿಳಿದು , ಒಂದಲ್ಲ ಒಂದು ದಿನ ಹೊರಬರುವೆನೆಂದು ನಂಬಿದ್ದೆ ,ನನ್ನೆಲ್ಲಾ ಕನಸುಗಳು ನುಚ್ಚುನೀರಾಯ್ತು” ಎಂದು ಬೇಸರದಿಂದ ಹಲುಬಿತು. ಕೆರೆ ಕಪ್ಪೆಗೆ ಏನೂ ತೋಚದಂತಾಯಿತು. ಆದರೂ ಸಮಾಧಾನ ಹೇಳುತ್ತ “ಸ್ವರ್ಗ ಅನ್ನೋದು ಅಲ್ಲೂ ಇಲ್ಲ , ಇಲ್ಲೂ ಇಲ್ಲ . ನನಗೆ ನನ್ನ ಪ್ರಾಣ ಉಳಿದರೆ ಅದೇ ಸ್ವರ್ಗ , ನಿನಗೆ ಏಕಾಂತ ಕಳೆದು ಸ್ವಚ್ಛಂದವಾಗಿ ಬದುಕಿದರೆ ಅದೇ ಸ್ವರ್ಗ . ನಾನು ಇದ್ದ ಜಾಗದಲ್ಲಿ ಸ್ವರ್ಗ ಕಾಣೋ ಪ್ರಯತ್ನ ಮಾಡ್ತೀನಿ.ನೀನೂ ಪ್ರಯತ್ನ ಮಾಡು ” ಸಂತೈಸಿತು.
ಮರಿಕಪ್ಪೆ ಸುಮ್ಮನಿತ್ತು. ಬಾವಿಯ ಬಾಯೆಡೆ ಕಣ್ಣು ಹಾಯಿಸಿದಾಗ ಚಂದ್ರ ತನ್ನನ್ನು ನೋಡಿ ನಗುತ್ತಿರುವಂತೆನ್ನಿಸಿತು. ಬಾವಿಯಲ್ಲೇ ಸ್ವರ್ಗವೋ ಅಥವ ಹೊರಗಿನ ಸವಾಲುಗಳು ತುಂಬಿದ ವಿಶಾಲ ಪ್ರಪಂಚ ಸ್ವರ್ಗವೋ ? ಎಂದು ಯೋಚಿಸತೊಡಗಿತು. ಏನೂ ಹೊಳೆಯಲಿಲ್ಲ. ಬಾವಿಗೆ ಕೊಡ ಬೀಳುವವರೆಗೆ ಈ ಪ್ರಶ್ನೆ ಅಸಂಬದ್ಧವೆನ್ನಿಸಿ, ಮತ್ತೆ ತನ್ನ ತಾಯಿಯ ಕನಸುಗಳ ಲೋಕದಲ್ಲಿ ಮುಳುಗಿತು.
( ಇಲ್ಲಿಯವರೆಗೂ ಕಷ್ಟಾಪಟ್ಟು ಇದನ್ನು ಓದಿದವರಿಗೆ ನನ್ನ ವಂದನೆಗಳು ,ಜೊತೆಗೆ “God father“ ಅಥವ “matrix” ನಂತೆ trilogy ಬರೆಯೋ ದುಸ್ಸಾಹಸಕ್ಕೆ ಖಂಡಿತಾ ಕೈಹಾಕೋದಿಲ್ಲ ಎಂಬ ಅಭಯವೂ ಇದೆ)