ಇಮೋಜಿ ಭಾಷೆ

ಇಮೋಜಿ ಭಾಷೆ

ಪುಸ್ತಕದ ಲೇಖಕ/ಕವಿಯ ಹೆಸರು
ಕರ್ಕಿ ಕೃಷ್ಣಮೂರ್ತಿ
ಪ್ರಕಾಶಕರು
ಛಂದ ಪುಸ್ತಕ, ಬಗ್ಗೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೯, ಮೊ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ‘ಮಯೂರ' ಮಾಸ ಪತ್ರಿಕೆಗೆ ಬರೆದ ಅಂಕಣ ಬರಹಗಳು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಇತರೆ ಲೇಖನಗಳನ್ನು ಒಟ್ಟು ಸೇರಿಸಿಕೊಂಡು ಸೊಗಸಾದ ಪ್ರಬಂಧ ಸಂಕಲನವನ್ನು ಹೊರ ತಂದಿದ್ದಾರೆ. 

ಈ ಕೃತಿಯ ಬಗ್ಗೆ ಸಾಹಿತಿ ಕೆ ವಿ ಅಕ್ಷರ ಅವರು ಸೊಗಸಾದ ಬೆನ್ನುಡಿಯ ಮೂಲಕ ಕರ್ಕಿಯವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಅವರು “ದೃಕ್-ದೃಶ್ಯ-ವಿವೇಕ ಎಂಬ ಸುಪ್ರಸಿದ್ಧ ಪಠ್ಯವು ಹೇಳುವ ಪ್ರಕಾರ, ನಾವೆಲ್ಲ ಹಲವು ಕಣ್ಣುಗಳಲ್ಲಿ ನೋಡುತ್ತೇವೆ. ನಮ್ಮಲ್ಲಿ ಹಲವರಿಗೆ ಕನ್ನಡಕವು ಮೊದಲನೆಯ ಕಣ್ಣಾದರೆ, ಅದು ತೋರಿಸಿದ್ದನ್ನು ನೋಡುವುದು ಅದರೊಳಗಿನ ಕಣ್ಣು ಮತ್ತು ಆ ಕಣ್ಣು ಕಂಡಿದ್ದನ್ನು ಕಾಣುವುದು ಮನಸ್ಸು ಮತ್ತು ಆ ಮನಸ್ಸನ್ನು ಕಾಣುವುದು ಪ್ರಜ್ಞೆ. ಕರ್ಕಿ ಕೃಷ್ಣಪೂರ್ತಿಯವರ ಈ ಬರಹಗಳಲ್ಲಿ ನಮ್ಮೊಳಗೇ ಅಂತರ್ಗತವಾಗಿರುವ ಇಂಥ ಬಹುನೋಟಗಳ ಬೆರಕೆ ಕಾಣಸಿಗುತ್ತದೆ. ಇಂಥ ಹಲವು ಕಾಣ್ಕೆಗಳನ್ನು ಈ ಪ್ರಬಂಧಗಳು ಸಮಾನಾಂತರವಾಗಿ ಹೆಣೆಯುತ್ತ, ಈ ವಿಭಿನ್ನ ಕಣ್ಣುಗಳ ಇತಿಮಿತಿಗಳನ್ನು ಸಮಾನ ಅವಧಾರಣೆಯಿಂದ ನಮ್ಮ ಮುಂದಿರಿಸುತ್ತ, ನಮಗೆ ದಕ್ಕುವ ನಿಜವನ್ನು ಹುಡುಕಿಕೊಳ್ಳುವ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಕರ್ಕಿಯವರ ಈ ಪ್ರಬಂಧಗಳ ಒಂದು ಹೆಗ್ಗಳಿಕೆಯಾದರೆ, ಇವುಗಳನ್ನೋದುತ್ತ ನಾವು ನಮ್ಮದೇ ಪ್ರಬಂಧಗಳನ್ನು ಹೆಣೆದುಕೊಳ್ಳಬಹುದು ಎಂಬುದು ಇನ್ನೊಂದು ಅನುಕೂಲ. ಇವತ್ತಿನ ಕಾಲವೇ ಇಂಥ ನೋಟಗಳ ಬಹುತ್ವವನ್ನು ಬೇಡುತ್ತಿದೆಯೋ ಎನ್ನಿಸುವಷ್ಟು ಈ ಬರಹಗಳು ತಾವು ನೋಡುವ ಸಂಗತಿಗಳೊಂದಿಗೆ ಸಮಾಗಮಿಸಿದೆ.” ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಪುಸ್ತಕದ ಪರಿವಿಡಿಯನ್ನು ಎರಡು ಭಾಗ ಮಾಡಿದ್ದಾರೆ. ಪ್ರಕಟಿತ ಅಂಕಣಗಳ ಬರಹಗಳನ್ನು ಭಾಗ ಒಂದರಲ್ಲೂ ಅಪ್ರಕಟಿತ ಬರಹಗಳನ್ನು ಭಾಗ ಎರಡರಲ್ಲೂ ಮುದ್ರಿಸಿದ್ದಾರೆ. ಭಾಗ ಒಂದರಲ್ಲಿ ೧೪ ಬರಹಗಳೂ ಭಾಗ ಎರಡರಲ್ಲಿ ನಾಲ್ಕು ಬರಹಗಳೂ ಇವೆ. ಮೊದಲ ಭಾಗದ ಮೊದಲ ಪ್ರಬಂಧದಲ್ಲಿ ಜಪಾನ್ ದೇಶದ ‘ಮಾಂಗಾ’ ಎನ್ನುವ ಕಥೆ ಪುಸ್ತಕಗಳು ಮಾಡಿದ ಮೋಡಿಯ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ಮಾಂಗಾ ಕಥಾನಕಗಳು ಅಲ್ಲಿಯ ಜನರ ಜೀವನವನ್ನೇ ಬದಲಾಯಿಸಿವೆ ಎಂದಿದ್ದಾರೆ ಲೇಖಕರು. ‘ಮಾಯೆ ಎಂದರೇನು ಪ್ರಭುವೇ?’ ಎನ್ನುವ ಪ್ರಬಂಧದ ಆರಂಭದಲ್ಲಿ ಒಂದು ಪುಟ್ಟ ಆದರೆ ಬಹಳ ಅರ್ಥಪೂರ್ಣ ಕಥೆಯನ್ನು ಲೇಖಕರು ಹೇಳಿದ್ದಾರೆ. ಅದು ಹೀಗಿದೆ…

“ಲೋಕಸಂಚಾರದಲ್ಲಿದ್ದಾಗಲೊಮ್ಮೆ ನಾರದನು ವಿಷ್ಣುವನ್ನೊಂದು ಪ್ರಶ್ನೆ ಕೇಳಿದನಂತೆ- ‘ಈ ಮಾಯೆಯೆಂದರೆ ಏನು ಪ್ರಭುವೇ?’

ಪ್ರಶ್ನೆಗೆ ಉತ್ತರಿಸುವ ಬದಲು ವಿಷ್ಣು,

‘ಬಹಳ ಬಾಯಾರಿಕೆಯಾಗುತ್ತಿದೆ ನಾರದಾ, ಕುಡಿಯಲು ತುಸು ನೀರು ತಂದುಕೊಡುವೆಯಾ?’ ಎಂದು ಕೋರಿದನಂತೆ.

ಅಲ್ಲಿಂದ ಹೊರಟು, ನೀರಿಗಾಗಿ ಅರಸುತ್ತಿರುವಾಗ ನಾರದನಿಗೆ ಗುಡಿಸಲೊಂದು ಕಾಣುತ್ತದೆ. ಆ ಗುಡಿಸಲಿನಲ್ಲೊಂದು ಸುಂದರ ತರುಣಿಯಿರುತ್ತಾಳೆ. ‘ನೀರು ಬೇಕು' ಎಂದು ಕೇಳುವ ಬದಲು ‘ನೀನು ಬೇಕು' ಎಂದು ನಾರದ ಆಕೆಯನ್ನು ಕೇಳುವುದರಿಂದ ಆರಂಭಗೊಂಡು, ಅವರಿಬ್ಬರ ನಡುವೆ ಪ್ರೇಮಾಂಕುರ, ಮದುವೆ, ಸಂಸಾರ, ಮಕ್ಕಳು ಇತ್ಯಾದಿಗಳೆಲ್ಲಾ ಆಗಿ ವರ್ಷಗಳುರುಳುತ್ತವೆ. ಹೀಗಿರುವಾಗಲೊಂದು ದಿನ ಆ ಊರಲ್ಲಿ ಭೀಕರ ಪ್ರವಾಹ ಬಂದು ಊರಿಗೆ ಊರೇ ಮುಳುಗಿ ಹೋಗುತ್ತದೆ. ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಹೆಂಡತಿ ಮಕ್ಕಳನ್ನು ಉಳಿಸಿಕೊಳ್ಳಲು ಹರ ಸಾಹಸ ಮಾಡಿ ವಿಫಲನಾಗುತ್ತಾನೆ ನಾರದ. ನಡುವಲ್ಲಿ ಸಿಕ್ಕ ಮರದ ಬೊಡ್ಡೆಯೊಂದರ ಆಸರೆ ಪಡೆದು, ತಾನೊಬ್ಬ ಹೇಗೋ ಬಚಾವಾಗಿ ದಡಕ್ಕೆ ಬಂದು ಬಿದ್ದು ಏದುಸಿರು ಬಿಡುತ್ತಿರುವಾಗ, ಹಿಂದಿನಿಂದ ಮೆಲುದನಿಯೊಂದು ಕೇಳುತ್ತದೆ -

‘ನಾರದಾ ಕುಡಿಯಲು ನೀರು ತಂದೆಯಾ?’ ಇಂತಹ ಪುರಾಣದ ಕಥೆಗಳನ್ನು ತಮ್ಮ ಪ್ರಬಂಧದಲ್ಲಿ ಬಳಸಿಕೊಳ್ಳುವ ಮೂಲಕ ಕರ್ಕಿಯವರು ತಮ್ಮ ಬರಹವನ್ನು ಎಲ್ಲಾ ವಯೋಮಾನದವರು ಓದಲು ಪ್ರೇರೇಪಿಸುತ್ತಾರೆ. ‘ಟು ಕಿಲ್ ಅ ಬರ್ಡ್' ಎನ್ನುವ ಪ್ರಬಂಧದಲ್ಲಿ ‘ಹೊಸ ವಿಮಾನ ನಿಲ್ದಾಣ ರಚನೆ ಮಾಡುವ ಸಂದರ್ಭದಲ್ಲಿ ಹಕ್ಕಿಯ ಕಾಟವನ್ನು ಕಡಿಮೆ ಮಾಡಲು ಏನೆಲ್ಲಾ ಕಸರತ್ತು ನಡೆಯಿತು ಎನ್ನುವುದನ್ನು ಚಿತ್ರಿಸಿದ್ದಾರೆ. ಇದು ಒಂದಿಷ್ಟು ಹಾಸ್ಯಮಯವಾಗಿ ಕಂಡರೂ ವಿಮಾನ ಹಾರಾಟ ಮಾಡುವ ಸಂದರ್ಭದಲ್ಲಿ ಪುಟ್ಟ ಹಕ್ಕಿಯೂ ನೂರಾರು ಜನರ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಪ್ರಾಜೆಕ್ಟ್ ಟೆಕ್ನಿಕಲ್ ಮ್ಯಾನೇಜರ್ ಕೈಗೊಂಡ ನಾನಾ ಪ್ರಯೋಗಗಳು ಯಶಸ್ವಿಯಾದುವೇ ಎನ್ನುವುದನ್ನು ಈ ಪ್ರಬಂಧ ಓದಿಯೇ ತಿಳಿದುಕೊಳ್ಳಬೇಕು. 

೧೧೨ ಪುಟಗಳ ಈ ಪುಸ್ತಕದ ಮುಖಪುಟ ರಚಿಸಿದವರು ರಮೇಶ್ ಡಿ ಕೆ ಇವರು. ಕರ್ಕಿಯವರು ಈ ಪ್ರಬಂಧಗಳ ಸಂಕಲನವನ್ನು ತಮ್ಮ ಮಗಳಾದ ಅರ್ಘ್ಯಳಿಗೆ ಪ್ರೀತಿಯಿಂದ ಅರ್ಪಿಸಿದ್ದಾರೆ.