ಶನಿವಾರ ಆಫೀಸ್ ಗೆ ರಜೆ ಆದದ್ದರಿಂದ ಸ್ವಲ್ಪ ತಡವಾಗಿ ಎದ್ದು, ಮುಖ ತೊಳೆದುಕೊಂಡು ಹಾಲ್ ನಲ್ಲಿ ಇದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ನನ್ನ ಗೆಳೆಯ ಇನ್ನೂ ನಿದ್ದೆ ಮಾಡುತ್ತಾ ಇದ್ದ. ಮದಿರೆ ಇನ್ನೂ ಅವನ ದೇಹವನ್ನು ಬಿಟ್ಟು ಹೋಗಿರಲಿಲ್ಲ.ನನ್ನ ಪತ್ನಿ ಟೀ ತಂದು ಕೊಟ್ಟಳು. ಅವಳಿಗೆ ಆಗಲೇ ಗೊತ್ತಾಗಿತ್ತು, ಇವನು ಯಾರೋ ಕುಡುಕ ಅಂತ.ಆದರೂ "ಯಾರ್ ರೀ ಅದು?" ಅಂತ ಕೇಳಿದಳು. "ಅವನು ನನ್ನ ಊರಿನ ಚಡ್ಡಿ ಗೆಳೆಯ, ನಿನ್ನೆ ಊರಿಂದ ತಡವಾಗಿ ಬಂದು, ಮೆಜೆಸ್ಟಿಕ್ ನಲ್ಲಿ ಬಸ್ ಸಿಗಲಾರದೇ ಪರದಾಡತಾ ಇದ್ದ. ಹ್ಯಾಗೂ ನಾನು ಆಫೀಸ್ ಗೆ ಮ್ಯಾನೇಜರ್ ನೋಡೋಕೆ ಅಂತ ಹೊಗಿದ್ನಲ್ಲ, ಹಾಗೆ ಬರಬೇಕಾದ್ರೆ ಮೆಜೆಸ್ಟಿಕ್ ಗೆ ಹೋಗಿ ಕರ್ಕೊಂಡು ಬಂದೆ. ಪಾಪ ಸುಸ್ತು ಅಂತ ಕಾಣುತ್ತೆ, ಮಲಗಿದಾನೆ" ಅಂತ ಸುಳ್ಳು ಹೇಳಿದೆ. "ನಿಮಗೆ ಸರಿಯಾಗಿ ಸುಳ್ಳು ಹೇಳೋಕೂ ಬರೋದಿಲ್ಲ" ಅಂತ ನನ್ನಮಂಪರು ಪರೀಕ್ಷೆ ಮಾಡಿದವಳ ಹಾಗೆ ಹೇಳಿ ಅವಳು ಅಡಿಗೆ ಮನೆಗೆ ಹೋದಳು. ನಾನು ಹಾಗೆ ಟೀ ಹೀರುತ್ತ ಗೆಳೆಯನ ಮುಖವನ್ನು ನೋಡಿದೆ, ಹಳೆಯದೆಲ್ಲ ಜ್ಞಾಪಕಕ್ಕೆ ಬಂತು.
ನಾನು ಹುಟ್ಟಿ ಬೆಳೆದದ್ದು ಬಿಜಾಪುರದ ತಾಳಿಕೋಟೆ ಎಂಬ ಊರಿನಲ್ಲಿ. ನನ್ನ ತಂದೆ ಪ್ರಾಥಮಿಕ ಶಾಲೆಯ ಮೇಸ್ಟ್ರು ಆಗಿದ್ದರು. ಆಗ ಶಿವಪ್ಪ ದೇಸಾಯಿ ಅನ್ನುವರು ಆ ಊರಿಗೆ ದೊಡ್ಡ ಶ್ರೀಮಂತರು. ಅವರದ್ದು ನೂರಾರು ಎಕರೇ ಜಮೀನು ಇತ್ತು. ಹಾಗೆಯೇ ಅವರು ಉದಾರಿಗಳು ಕೂಡ ಆಗಿದ್ದರು. ಕಷ್ಟದಲ್ಲಿದ್ದವರಿಗೆ ಧನ ಸಹಾಯ ಹಾಗೂ ಬಡವರಿಗೆ ಆಗಾಗ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಆರತಿಗೊಬ್ಬ ಮಗಳು ಮತ್ತು ಕೀರ್ತಿಗೊಬ್ಬ ಮಗ ಎಂಬಂತೆ, ಅವರಿಗೆ ಇಬ್ಬರು ಮಕ್ಕಳು. ಅವರ ಪತ್ನಿ ಎರಡನೆ ಮಗುವನ್ನು ಹೆತ್ತು ೩ ವರ್ಷವಾದಾಗ ತೀರಿ ಹೋಗಿದ್ದರು. ಈರಪ್ಪ ಅಂದರೆ ನನ್ನ ಗೆಳೆಯ ಅವರ ಹಿರಿಯ ಮಗ. ಸರೋಜ ಅವನ ತಂಗಿ. ನಮ್ಮಿಬ್ಬರ ಪರಿಚಯ ಅಂಗನವಾಡಿಯಿಂದ ಶುರು ಆಗಿ, ಪರಿಚಯ ಸ್ನೇಹವಾಗಿ ಎಲ್ಲಿಯೂ ಬಿರುಕಿಗೆ ಅವಕಾಶ ಕೊಡದೇ ಈಗ ಹತ್ತನೆಯ ಕ್ಲಾಸ್ ವರೆಗೂ ಬಂದಿತ್ತು. ನಾನು ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದೆ. ಅವರು "ಈರಪ್ಪ ಹೆಂಗ್ ಓದ್ತಾನ. ಆಂವ ಚೊಲೊ ಮಾರ್ಕಸ್ ತಗೊಳದ ಹೋದ್ರೂ ಪರ್ವಾಗಿಲ್ಲ, ಆದ್ರ ಫೇಲ್ ಮಾತ್ರ ಆಗಬಾರದ್. ಒಟ್ಟಿನ್ಯಾಗ ನನ್ನ ಈ ಆಸ್ತಿನ ಚಂದಗ ನೋಡ್ಕೊಂಡು ಹೋಗುವಂಗ ಆಗ್ಬೇಕ್" ಅಂತ ಹೇಳ್ತಾ ಇದ್ರು. "ಕಾಕಾ ರ್ ನೀವ್ ಏನು ಚಿಂತೀ ಮಾಡ್ ಬ್ಯಾಡ್ರಿ. ಈರಪ್ಪ ಬಾಳ ಶಾಣ್ಯ ಆದಾನ" ಅಂತ ನಾನು ಅವರಿಗೆ ಸಮಜಾಯಿಸಿ ಕೊಡ್ತಾ ಇದ್ದೇ.
ಶಾಲೆಯಲ್ಲಿ ಈರಪ್ಪ ನನ್ನಷ್ಟೇನೂ ಜಾಣ ಅಲ್ಲದೇ ಹೋದರೂ, ಫೇಲ್ ಎಂದೂ ಆಗಿರಲಿಲ್ಲ. ಕೆಲವೊಮ್ಮೆ ಪರೀಕ್ಷೆಯಲ್ಲಿ ಅವನು ಕಾಪೀ ಮಾಡುತ್ತಾ ಇದ್ದುದು ಉಂಟು. ಆದರೆ ಎಂದೂ ಸಿಕ್ಕಿ ಬಿದ್ದಿರಲಿಲ್ಲ. ಈ ಸಲ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆ ಶುರು ಆಗುವುದರಲ್ಲಿ ಇತ್ತು. ನಾನು ಅವನಿಗೆ ಮುಂಚೇನೆ ಹೇಳಿದ್ದೆ "ಲೇ, ಈರಪ್ಪ ಕಾಪೀ ಮಾಡಾಕ್ ಹೋಗ್ ಬ್ಯಾಡಲೆ ಸಿಕ್ರ ಕಷ್ಟ ಆಕ್ಕೇತಿ". ಅದಕ್ಕೆ ಅವನು "ಚಿಂತೀ ಮಾಡ ಬ್ಯಾಡ, ನಂಗೇನೂ ಆಗಂಗಿಲ್ಲ" ಅಂತ ದೊಡ್ಡ ಭರವಸೆ ಕೊಟ್ಟಿದ್ದ. ಆದರೆ ಗಣಿತ ಪರೀಕ್ಷೆ ನಡೀತಾ ಇರಬೇಕಾದ್ರೆ, ಇವನ ಪ್ಯಾಂಟ್ ನ ಕಿಸೆಯಲ್ಲಿ ಇದ್ದ ಕಾಪೀ ಚೀಟಿಗಳು ಆ ದಿನ ಇನ್‌ವಿಜೈಲೇಟರ್ ಆದ ಬಸಪ್ಪ ಮಾಸ್ತರ್ ಅವರ ಕೈಯ್ಯಲ್ಲಿ ಸಿಕ್ಕಿ ಬಿಟ್ಟವು. ಶಿವಪ್ಪ ದೇಸಾಯಿ ಅವರ ಮಗ ಆಗಿದ್ದರಿಂದ ಅವನನ್ನು ಡಿಬಾರ್ ಮಾಡದೇ, ಅವರು ಇಡೀ ಕ್ಲಾಸ್ ನ ಹುಡುಗ-ಹುಡುಗಿಯರ ಮುಂದೆ ಅವನಿಗೆ ಚೆನ್ನಾಗಿ ಬೈದು ಪರೀಕ್ಷೆ ಬರೆಯಲು ಬಿಟ್ಟರು. ಇವನಿಗೆ ದೊಡ್ಡ ಅವಮಾನ ಆದ ಹಾಗೆ ಆಯ್ತು. ನಾಗರ ಹಾವು ಚಿತ್ರದ ರಾಮಾಚಾರಿ ಪಾತ್ರವೇ ತಾನು ಎಂಬಂತೆ ಮಾಸ್ತರ್ ಗೆ ಬುದ್ಧಿ ಕಲಿಸಬೇಕು ಅಂತ ನಿಶ್ಚಯ ಮಾಡಿಕೊಂಡು, ಮರುದಿನ ತಾನು ಮಾಡಿದ ಪ್ಲ್ಯಾನ್ ಬಗ್ಗೆ ನನಗೆ ಬಂದು ಹೇಳಿದ. ಅವನು ಒಂದು ತರಹ ಹಠವಾದಿ, ಒಮ್ಮೆ ತಲೆಯಲ್ಲಿ ಬಂತು ಅಂದ್ರೆ ಅದನ್ನು ಮಾಡದೇ ಬಿಡ್ತಾ ಇರಲಿಲ್ಲ. ನನಗೆ ಭಯವಾಗಿ "ಬ್ಯಾಡಲೆ, ಕಲಿಸಿದ ಗುರುಗೆ ಹಂಗೆಲ್ಲ ಮಾಡಬಾರ್ದು" ಅಂತ ಹೇಳಿದ್ರು ಕೇಳದೇ "ನಂಗ್ ಅವಮಾನ ಮಾಡಿದಲ್ಲ, ಆಂವ ಜೀವನದಾಗ ಮರಿಬಾರ್ದು ಹಂಗ್ ಮಾಡ್ತೇನಿ ನೋಡು" ಅಂತ ಹೇಳಿ ಹೊರಟು ಹೋದ. ಮುಂದೆ ವಿಜ್ಞಾನ ವಿಷಯದ ಪರೀಕ್ಷೆ ನಡೀತಾ ಇತ್ತು. ಅವನು ಅಂದುಕೊಂಡಂತೆ ಆ ದಿನ ಕೂಡ ಬಸಪ್ಪ ಮಾಸ್ತರ್ ರೇ ಇನ್‌ವಿಜೈಲೇಟರ್ ಆಗಿದ್ರು. ಇವನು ಮೊದಲೇ ಪ್ಲ್ಯಾನ್ಮಾಡಿದ ಹಾಗೆ, ತನ್ನ ಪ್ಯಾಂಟ್ ನ ಎರಡು ಕಿಸೆಗಳನ್ನು ಕತ್ತರಿಸಿ, ಒಳ ಚಡ್ಡಿ ಹಾಕದೆ ಬಂದಿದ್ದ. ಅವರಿಗೆ ಬೇಕಂತಲೇ ಅನುಮಾನ ಬರುವ ಹಾಗೆ ನಟಿಸುತ್ತಾ ಕೂತ. ಅವರು ಹತ್ತಿರ ಬಂದವ್ರೆ "ಲೇ, ಈರಪ್ಪ ಮೇಲೆ ಏಳು. ನಾನು ನಿನ್ನ ಪ್ಯಾಂಟ್ ಕಿಸೆ ಚೆಕ್ ಮಾಡಬೇಕು" ಅಂತ ತಮ್ಮ ಕೈಯ್ಯನ್ನು ಅವನ ಪ್ಯಾಂಟ್ ಒಳಗೆ ಹಾಕಿಯೇ ಬಿಟ್ಟರು. ಅವರಿಗೆ ಕತ್ತಲಲ್ಲಿ ಹಾವು ಮುಟ್ಟಿದ ಹಾಗೆ ಆಗಿ "ಶಿವ ಶಿವ, ಲೇ ಈರಾ. ಕೆಟ್ಟ ಸೂಳೆ ಮಗನೆ, ನಡಿಲೆ ನಿಮ್ಮ ಅಪ್ಪನ ಹತ್ರ" ಅಂತ ಎಳೆದುಕೊಂಡು ಶಿವಪ್ಪ ದೇಸಾಯಿಯವರಿಗೆ ದೂರು ಸಲ್ಲಿಸಿದರು.
ದೇಸಾಯಿಯವರಿಗೆ ಸಿಟ್ಟು ಬಂದು ಎಲ್ಲರ ಎದಿರು ಮಗನಿಗೆ ಬಾಸುಂಡೆ ಬರುವ ಹಾಗೆ ಹೊಡೆದು "ಏನೋ, ಹುಡುಗ ತಪ್ಪ ಮಾಡ್ಯಾನ ಈ ಸಲ ಕ್ಷಮಿಸಿ ಬಿಡ್ರಿ. ಮುಂದ್ ಹಿಂಗ್ ಆಗಲಾರದ ಹಂಗ್ ನಾ ನೋಡ್ಕೋಂತೀನಿ" ಅಂತ ದಯನೀಯವಾಗಿ ಕೇಳಿಕೊಂಡಾಗ ಬಸಪ್ಪ ಮಾಸ್ತರ್ ರಿಗೇ ಬೇರೆ ದಾರಿ ಕಾಣಲಾರದೇ "ಆಯ್ತು" ಅಂತ ಹೇಳಿ ಹೋದ್ರು. ಅವನು ಹೇಗೋ ೧೦ನೆಯ ತರಗತಿ ಪಾಸ್ ಮಾಡಿದ. ಮುಂದೆ ಪಿ.ಯು. ಶಿಕ್ಷಣಕ್ಕೆ ನಮ್ಮ ಊರಲ್ಲಿ ಕಾಲೇಜ್ ಇಲ್ಲದ ಕಾರಣ ಬಾಗಲಕೋಟೆಗೆ ಹೋಗಬೇಕಾಯಿತು. ಈರಪ್ಪ ಕಾಲೇಜ್ ಸೇರಿದ ಮೇಲೆ ಪೂರ್ತಿ ಬದಲಾದ. ಓದುವುದನ್ನು ಬಿಟ್ಟು ಬೇರೆಲ್ಲ ಮಾಡ್ತಾ ಇದ್ದ. ಅವನ ಮಿತ್ರ ಮಂಡಳಿಯೇ ಬೇರೆ ಆಗಿತ್ತು. ಪರಿಣಾಮ ಅವನು ಪಿ.ಯು. ಪರೀಕ್ಷೆಯಲ್ಲಿ ಫೇಲ್ ಆದ. ನಾನು ಪಾಸ್ ಆಗಿ ಮುಂದೆ ಬಿ.ಎಸ್ಸಿ. ಮಾಡುವ ಯೋಚನೆಯಲ್ಲಿದ್ದೆ. ಆದರೆ ಮನೆಯಲ್ಲಿ ಸ್ವಲ್ಪ ಹಣಕಾಸಿನ ಅಭಾವವಿತ್ತು. ಅದಕ್ಕೆ ನಾನು ಮತ್ತು ನಮ್ಮ ತಂದೆ, ದೇಸಾಯಿ ಅವರ ಹತ್ತಿರ ಹೋಗಿ ಕೇಳಿದಾಗ ಅವರು ಹೆಚ್ಚು ಯೋಚನೆ ಮಾಡದೇ ಧನಸಹಾಯ ಮಾಡಿದರು. ನಾನು ಅವರಿಗೆ "ಕಾಕಾ ನಾ ನಿಮ್ಮ ರೊಕ್ಕಾನ ನಂಗ ಕೆಲ್ಸಾ ಸಿಕ್ಕ್ ಕೂಡ್ಲೇ ಕೊಡ್ತೀನಿ" ಅಂತ ಹೇಳಿದೆ. ಅದಕ್ಕೆ ಅವರು "ನನ್ನ ಮಗ ಅಂತು ಚಂದಗ ಓದಲಿಲ್ಲ. ನೀ ಚಂದಗ ಓದಿ ಮುಂದ ಬಾ" ಅಂತ ಹೇಳಿದ್ರು.
ನಾನು ಬಿ.ಎಸ್ಸಿ. ಮುಗಿಸಿ, ಬೆಂಗಳೂರಿಗೆ ಕೆಲಸ ಹುಡುಕಲು ಬಂದೆ. ಅವನು ಪಿ.ಯು. ಪರೀಕ್ಷೆ ಪಾಸ್ ಆಗಲಾರದೇ ಇನ್ನೂ ಉಂಡಾಡಿ ಗುಂಡನ ಹಾಗೆ ಊರು ಸುತ್ತತಾ ಇದ್ದ. ದೇಸಾಯಿಯವರಿಗೆ ಮಗನ ಸ್ಥಿತಿ ನೋಡಿ ಚಿಂತೆ ಆಗಿತ್ತು. ಆಗಲೇ ಸರೋಜಾಗೇ ೧೮ ತುಂಬಿತ್ತು. ಸರಿ ಇನ್ನೇಕೆ ತಡ ಅಂತ, ತಮ್ಮ ಪರಿಚಯದ ಸ್ನೇಹಿತರ ಮಗನಿಗೆ ಮದುವೆ ಮಾಡಿ ಕೊಟ್ಟು ಬಿಟ್ಟರು. ಹಾಗೆ ಅಳಿಯನ ಹೆಸರಿನಲ್ಲಿ ಸ್ವಲ್ಪ ಜಮೀನು ಕೂಡ ಬರೆದು ಕೊಟ್ಟಿದ್ದರು. ಅವನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ಸರೋಜ ಕೂಡ ಬೆಂಗಳೂರಿಗೆ ಬರುವ ಹಾಗಾಯಿತು. ಇನ್ನು ದೇಸಾಯಿಯವರಿಗೆ ಉಳಿದದ್ದು ಮಗನ ಚಿಂತೆ, ಅವರು ಅವನಿಗೆ ಸರಿಯಾಗಿ ಓದಿ ಸ್ವಲ್ಪ ಆಸ್ತಿ ಕಡೆ ಗಮನ ಕೊಡು ಅಂತ ಹೇಳ್ತಾ ಇದ್ರೂ, ಅವನು ಅದಕ್ಕೆ ತಲೆ ಕೆಡಿಸಿಕೊಳ್ಳಲಾರದೇ ತನ್ನ ಮಿತ್ರರೊಂದಿಗೆ ಕಾಲಹರಣ ಮಾಡ್ತಾ ಇದ್ದ. ಇದೆ ಚಿಂತೆಯಲ್ಲಿ ಒಂದು ದಿನ ದೇಸಾಯಿಯವರು ತಮ್ಮ ಕಡೆ ಉಸಿರು ಎಳೆದರು. ನನಗೆ ಈ ಸಮಾಚಾರ ಕೇಳಿ ತುಂಬಾ ದುಃಖವಾಯಿತು. ನನಗೆ ಆಗಲೇ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತ್ತು. ಒಮ್ಮೆ ಊರಿಗೆ ಹೋದಾಗ ನಾನು ಈರಪ್ಪನನ್ನು ಭೇಟಿಯಾಗಿ "ನೋಡೋ, ಈರಪ್ಪ. ಹಿಂಗೆಲ್ಲ ಸಮಯ ಹಾಳ ಮಾಡಿದ್ರ ಏನು ಸಿಗಂಗಿಲ್ಲ. ಇನ್ನೂ ಇಷ್ಟೊಂದು ಆಸ್ತಿ ಐತಿ, ನಿನಗ ಓದಾಕ ಮನಸ್ಸ್ ಇಲ್ಲ ಅಂದ್ರ ಪರ್ವಾಗಿಲ್ಲ. ಕೊನೆಗೆ ಇದನ್ನ ಸರಿಯಾಗಿ ನೋಡ್ಕೋ" ಅಂತ ಬುದ್ಧಿವಾದ ಹೇಳಿದೆ. ಅದಕ್ಕೆ ಅವನು "ನೀ, ಯಾವಲೇ ಇದನ್ನೆಲ್ಲ ಕೇಳಾಕ" ಅಂದಾಗ ನನ್ನ ತಲೆ ತಿರುಗಿದಂತಾಗಿ "ಏನಾದ್ರ್ ಮಾಡ್ಕೊಂಡು ಹಾಳಾಗಿ ಹೋಗು" ಅಂತ ಹೇಳಿ ಬೆಂಗಳೂರಿಗೆ ಬಂದೆ. ಇದಾದ ಒಂದು ತಿಂಗಳ ನಂತರ ನಮ್ಮ ತಂದೆಗೆ ಮೈಸೂರಿಗೆ ವರ್ಗವಾಯಿತು. ಆಮೇಲೆ ನಾನು ಹಲವಾರು ವರ್ಷಗಳ ವರೆಗೆ ಊರಿನ ಕಡೆ ಹೋಗಲೇ ಇಲ್ಲ. ಒಮ್ಮೆ ನಮ್ಮ ಸಿಬ್ಬಂದಿಯೊಬ್ಬರ ಮದುವೆಗೆ ಅಂತ ಬಿಜಾಪುರಕ್ಕೆ ಹೋದಾಗ, ಹಾಗೆ ನಮ್ಮ ಊರಿನ ಸಮಾಚಾರವನ್ನು ಕೇಳಿದೆ. ಆವಾಗ ಗೊತ್ತಾಗಿದ್ದು, ಈರಪ್ಪ ಎಲ್ಲ ಆಸ್ತಿ ಮಾರಿ ಎಲ್ಲಿಗೋ ಹೊರಟು ಹೋದ ಅಂತ.
ಆಗ ಊರು ಬಿಟ್ಟು ಹೋದವನು ಈಗ ನನ್ನ ಮನೆಯ ಸೋಫಾದ ಮೇಲೆ ಹಾಯಾಗಿ ಮಲಗಿದ್ದ. ನನ್ನ ತಲೆಯಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. ಇವನು ೪ ವರ್ಷಗಳ ವರೆಗೆ ಏನು ಮಾಡ್ತಾ ಇದ್ದ? ಬೆಂಗಳೂರಿಗೆ ಏಕೆ ಬಂದ? ಅಷ್ಟೊಂದು ಕುಡಿದು ಪೋಲೀಸ್ ರ ಕೈಯ್ಯಲ್ಲಿ ಯಾಕೆ ಸಿಕ್ಕಿಹಾಕಿಕೊಂಡ? ನನ್ನ ಮೊಬೈಲ್ ನಂಬರ್ ಯಾಕೆ ಕೊಟ್ಟ? ಯಾಕೆ ತನ್ನ ಹೆಸರನ್ನ ಪುಟ್ಟಣ್ಣ ಅಂತ ಹೇಳಿಕೊಂಡ? ಮತ್ತು ಈ ವಾಸಂತಿ ಯಾರು? ಅವನು ಎದ್ದ ಮೇಲೆ ಕೇಳಿದರಾಯಿತು ಅಂತ ನಾನು ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾ ಕೂತೆ.