ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೩)

ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೩)

               ಅರ್ಧ ಘಂಟೆಯ ನಂತರ ಅವನಿಗೆ ಎಚ್ಚರವಾಗಿ ಎದ್ದು ಕೂತ. ತಾನೆಲಿದ್ದೇನೆ ಎಂಬುದರ ಅರಿವು ಅವನಿಗಾಗದೆ ಅತ್ತ ಇತ್ತ ನೋಡಿದ. ಕೊನೆಗೆ ದಿನಪತ್ರಿಕೆಯಲ್ಲಿ ಮುಳುಗಿದ್ದ ನನ್ನ ಮುಖ ನೋಡಿ ಅವನಿಗೆ ಅರ್ಥವಾಯಿತು. ತನಗೆ ಸಂಕೋಚವೋ ಎಂಬಂತೆ ನೆಲದ ಕಡೆ ನೋಡುತ್ತಾ ಕೂತ. ನಾನೇ ಅವನತ್ತ ದೃಷ್ಟಿ ಬೀರಿ "ಮತ್ತೇನಪ್ಪ, ಈಗ ಹೆಂಗೈತಿ. ಮದಿರೆ ನಿನ್ನ್ ಮೈ ಬಿಟ್ಟು ಹೋದಳೋ ಹೆಂಗ್" ಅಂತ ಕೇಳಿದೆ. ಅವನು "ಸಾರೀ, ಕ್ಷಮಿಸಿಬಿಡು. ನಾ ನಿಂಗ ಬಾಳ ತ್ರಾಸ್ ಕೊಟ್ಟೆ ಅಂತ ಕಾಣತ್ತ" ಅಂತ ವೇದನೆಯಿಂದ ನುಡಿದ. "ಆಗಿದ್ದ್ ಆತು, ನೀ ಲಗುನ ಎದ್ದ ರೆಡೀ ಆಗ್. ನನಗ ನಿನ್ನ ಜೊತಿ ಮಾತಾಡುದ್ ಐತಿ" ಅಂತ ನಾನು ಹೇಳಿದೆ. ಅವನು ರೆಡೀ ಆಗಿ ಬಂದು ಕುಳಿತ. ನಾನು ನನ್ನಾಕೆಗೆ ತಿಂಡಿ ಮತ್ತು ಟೀ ತೆಗೆದುಕೊಂಡು ಬರಲು ಹೇಳಿದೆ. ಅದಕ್ಕೆ ಅವನು "ಟೀ ಸಾಕ, ತಿಂಡಿ ಹೊರಗ ಮಾಡುಣ, ಅಲ್ಲೇ ಬೇಕಾದ್ರ ಮಾತಾಡುಣ" ಅಂದ. ನನಗೂ ಅದೇ ಸಮಂಜಸವಾಗಿ ತೋರಿ ಆಯ್ತು ಅಂದೆ. ಅವನ ಟೀ ಮುಗಿದ ಬಳಿಕ ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಉಪಹಾರ ದರ್ಶಿನಿಗೆ ಅವನನ್ನು ಕರೆದುಕೊಂಡು ಹೋದೆ. "ಏನಪ್ಪ್ ನಿನ್ನ ಕಥೆ? ನಿನ್ನೆ ರಾತ್ರಿ ಅಷ್ಟ ಯಾಕ ಕುಡಿದ ಪೊಲೀಸರ ಕೈಯ್ಯಾಗ ಸಿಕ್ಕಿದ್ದಿ? ಮತ್ತ ನನ್ನ ನಂಬರ್ ಯಾಕ್ ಕೊಟ್ಟಿದ್ದಿ? ಈ ವಾಸಂತಿ ಯಾರ್?" ಅಂತ ನನ್ನ ತಲೆಯಲ್ಲಿ ಹೊಯ್ದಾಡುತ್ತಿದ್ದ ಪ್ರಶ್ನೆಗಳನ್ನು ಅವನ ಮುಂದೆ ಇಟ್ಟೆ. ಯಾವುದೇ ವ್ಯಕ್ತಿ ತನ್ನ ಬಗ್ಗೆ ಮೊದಲನೆಯ ಭೇಟಿಯಲ್ಲೇ ನಕಾರಾತ್ಮಕವಾಗಿ ಹೇಳಲಾರ. ಇವನು ಕೂಡ ಹಾಗೆಯೇ. "ನೋಡ್ ನೀ ನನ್ನ ಹಳೇ ದೋಸ್ತ. ಅದಕ್ಕ ನಾ ನಿಂಗ ಈ ವಿಚಾರ ಹೇಳ್ತೀನಿ. ಆದ್ರ ನೀ ಇದರ ಬಗ್ಗೆ ಬೇರೆ ಯಾರ್‍ಗೂ ಹೇಳಬಾರ್ದು" ಅಂತ ಹೇಳಿ ನನಗೆ ಕುತೂಹಲ ಹುಟ್ಟಿಸಿದ. 

"ನಾ ಬೆಂಗಳೂರಿಗೆ ಬಂದು ೪ ವರ್ಷ ಆತು. ಊರಾಗಿನ ಆಸ್ತಿ ಮಾರಿ ನಾ ಇಲ್ಲೇ ಒಂದು ಇನ್‌ವೆಸ್ಟ್ ಮೆಂಟ್  ಬಿಸ್ನೆಸ್ ಶುರು ಮಾಡಿದೆ. ಬಿಸ್ನೆಸ್ ಚೊಲೊ ನಡೀತು. ಆಮ್ಯಾಗ ರಿಯಲ್ ಎಸ್ಟೇಟ್  ಧಂಧೆ ಕೂಡ ಸ್ಟಾರ್ಟ್ ಮಾಡಿದೆ. ಅದ್ರಾಗು ಮಸ್ತ್ ರೊಕ್ಕಾ ಬಂತು. ಈಗ ಸದ್ಯಕ್ಕ್ ನಾನು ಪ್ರೊಡ್ಯೂಸರ್ ಕಮ್ ಡೈರೆಕ್ಟರ್ ಆಗಿ ಕೆಲ್ಸಾ ಮಾಡಾಕತ್ತೇನಿ. ಬೆಂಗಳೂರಿನ ಔಟ್ ಸ್ಕರ್ಟನಲ್ಲಿ ೫೦ ಎಕರೇ ಜಮೀನು ಖರೀದಿ ಮಾಡೇನಿ. ಅದನ್ನ ಲೇಯೌಟ್ ಮಾಡಿ ಮಾರಬೇಕು ಅಂತ ಪ್ಲಾನ್ ಐತಿ. ಇನ್‌ವೆಸ್ಟ್ ಮೆಂಟ್  ಬಿಸ್ನೆಸ್ ಸೂಪರ್ ಆಗಿ ಹೊಂಟೈತಿ. ಅದರಾಗ್ ರೊಕ್ಕಾ ಹಾಕಿದವರಿಗೆ ಇಲ್ಲಿ ವರೆಗೆ ೧೫ ರಿಂದ ೨೦ ಪರ್ಸೆಂಟ್ ಬರು ಹಂಗ ಮಾಡೇನಿ. ಇನ್ನ ಈ ಫಿಲ್ಮ್ ಬಗ್ಗೆ ಹೇಳುದಂದ್ರ ನಾ ಆಲ್‌ರೆಡೀ ಒಂದ ಕನ್ನಡ ಫಿಲ್ಮ್ ಮಾಡೇನಿ. 'ಹುಡುಕಾಟ' ಅಂತ ಅದರ ಹೆಸರು. ನೀ ಅದರ ಬಗ್ಗೆ ಕೇಳಿರಬಹುದು. ಅದು ಮೊನ್ನೆ ೨೪ ದಿನ ಓಡಿತು. ಈಗ ಇನ್ನೊಂದು ಫಿಲ್ಮ್ ಪ್ರೊಡ್ಯೂಸ್ ಅಂಡ್ ಡೈರೆಕ್ಟ್ ಮಾಡ್ತಾ ಇದೀನಿ" ಅಂತ ಹೇಳಿ ತಿಂಡಿ ತಿನ್ನೋಕೆ ಶುರು ಮಾಡಿದ. ನಾನು ಅವನ ದುರವಸ್ಥೆ ಬಗ್ಗೆ ಕೇಳಿದ್ರೆ, ಅವನು ತನ್ನ ಸಾಧನೆಗಳ ಪಟ್ಟಿ ಕೊಟ್ಟಿದ್ದ. ನಾನೇನು ಹೊಟ್ಟೆ ಕಿಚ್ಚು ಪಡಲಿಲ್ಲ, ಯಾಕೆ ಅಂದರೆ ಮುಂಚೆಯಿಂದ  ಅವನ ಹತ್ತಿರ ದುಡ್ಡು ಇತ್ತು. ಊರಲ್ಲಿ ಇದ್ದಾಗ ಅದನ್ನು ಅವನು ದುಂಧು ವೆಚ್ಚ ಮಾಡಿ ಹಾಳು ಮಾಡುತ್ತಿದ್ದ. ಆದರೆ ಈಗ ಅದೇ ಹಣವನ್ನು ಅವನು ತನ್ನ ಬುದ್ಧಿ ಉಪಯೋಗಿಸಿ ವಿನಿಯೋಗ ಮಾಡಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾನಲ್ಲ ಅಂತ ತಿಳಿದು ಸಂತೋಷ ಆಯಿತು. ಆದರೂ ನಾನು ಕೇಳಿದ ಪ್ರಶ್ನೆಗಳಿಗೆ ಇದು ಸರಿಯಾದ ಉತ್ತರವಲ್ಲ ಎಂದು ತಿಳಿದು, ಪುನಃ ಅವನಿಗೆ "ಅದೆಲ್ಲ ಸರಿ ಈರಪ್ಪ. ಆದ್ರೆ ನೀ ಯಾಕ್ ನಿನ್ನೆ ಪೋಲೀಸ್ ಠಾಣೆ ಒಳಗೆ ಇದ್ದಿ. ಏನಾಗಿತ್ತು? ನನ್ನ ನಂಬರ್ ಯಾಕ್ ಕೊಟ್ಟಿ? ವಾಸಂತಿ ಯಾರು?" ಅಂತ ಕೇಳಿದೆ. ಈಗ ಅವನಿಗೆ ಎಚ್ಚರವಾದಂತಾಗಿ "ಹೇಳ್ತೇನಿ, ಆದ್ರ ನೀ ಯಾರ್‍ಗೂ ಹೇಳಬಾರ್ದೂ" ಅಂತ ಮತ್ತೆ ಹೇಳಿದ. ನಾನು "ಆತಪ್ಪಾ, ನಾ ಯಾರ್‍ಗೂ ಹೇಳಂಗಿಲ್ಲ. ಅದೇನಾತೂ ಅಂತ ಹೇಳು" ಅಂತ ಸ್ವಲ್ಪ ಜೋರು ಮಾಡಿದೆ. 

"ನಾ ಫಿಲ್ಮ್ ಲ್ಯಾಂಡ್ ಗೆ ಬರಾಕ ಕಾರಣ, ದಿವಂಗತ ಶ್ರೀ ಪುಟ್ಟಣ್ಣ ಕಣಗಾಲ್ ಅವರು. ನಾ ಅವರ ಎಲ್ಲ ಫಿಲ್ಮ್ ನೋಡೇನಿ. ನನಗ ಅವರ ಡೈರೆಕ್ಶನ್ ಸ್ಟೈಲ್ ಬಾಳ ಇಷ್ಟ ಆತು. ಮತ್ತ ಈಗಿನ ಕನ್ನಡ ಫಿಲ್ಮ್ ಇಂಡಸ್ಟ್ರಿಯ ಸ್ಥಿತಿ ನೋಡಿ, ನಾನ ಯಾಕ ಒಳ್ಳೆಯ ಫಿಲ್ಮ್ಸ್ ಮಾಡಬಾರದು, ಅಂತ ಡಿಸೈಡ್ ಮಾಡಿ ಈ ಫೀಲ್ಡ್ ಗೆ ಬಂದೆ. ನಾ ಮಾಡು ಯಾವುದ ಕೆಲ್ಸಾ ಇರ್‍ಲಿ, ಅದರಾಗ ಮೊದಲನೆಯ ಪ್ರಾಶಸ್ತ್ಯ ಕೇವಲ ಕನ್ನಡಿಗರಿಗೆ ಮಾತ್ರ. ನಾನು 'ಹುಡುಕಾಟ' ಫಿಲ್ಮ್ ಮಾಡಬೇಕಾದ್ರ ಬಾಳ ಜನ ಅಂದ್ರು, ಹೀರೊಯಿನ್ ನ ಪರಭಾಷೆಯಿಂದ ಕರಸ್ರಿ ಅಂತ. ಆದ್ರ ನಾ ಯಾರ ಮಾತು ಕೇಳಲಿಲ್ಲ. ನಾನ ಪ್ರತಿಯೊಬ್ಬ ಆಕ್ಟರ್ ನ ಸೆಲೆಕ್ಟ್ ಮಾಡಿ ಮೊದಲನೆಯ ಮೂವೀ ಮಾಡಿದೆ. ಎಲ್ರೂ ಕನ್ನಡದವ್ರು. ಆ ಮೂವೀ ಮಾಡಬೇಕಾದ್ರ ನನ್ನ ಹೆಸರನ್ನ ಈರಪ್ಪ ಇಂದ ಪುಟ್ಟಣ್ಣ ಅಂತ ನಾನ ಚೇಂಜ್ ಮಾಡಿದ್ದೆ. ಗಾಂಧಿನಗರದಾಗ ನನ್ನ ಜನ ಗುರ್ತಿಸೋದು ಅದ ಹೆಸರಿಂದ. ಮಧು ಅನ್ನುದ ನನ್ನ ಚಿತ್ರದ ನಾಯಕಿಯ ಹೆಸರು. ಅವಳನ್ನ ನಾನ ಸೆಲೆಕ್ಟ್ ಮಾಡಿದ್ದ. ಅವಳಿಗೆ ವಾಸಂತಿ ಅಂತ ಸ್ಕ್ರೀನ್ ನೇಮ್ ಕೊಟ್ಟಿದ್ದೂ ನಾನ. ಫರ್ಸ್ಟ್ ಫಿಲ್ಮನಿಂದ ನನಗ ಅವಳ ಮ್ಯಾಗ ಪ್ರೀತಿ ಶುರು ಆಗಿತ್ತು. ಆದರ ಆವಾಗ ಹೇಳಾಕ ಆಗಲಿಲ್ಲ. ನನ್ನ ಸೆಕೆಂಡ್ ಮೂವೀಗೂ ಅವಳೇ ನಾಯಕಿ. ನಿನ್ನೆ ಗಟ್ಟಿ ಧೈರ್ಯ ಮಾಡಿ ರಾಜಾಜಿನಗರದಲ್ಲಿ ಇರೋ ಅವಳ ಮನೆಗೆ ಹೋಗಿ ನನ್ನ ಪ್ರೀತಿ ವಿಚಾರ ಹೇಳಿ, ನಾ ನಿನ್ನ ಮದುವೆ ಆಗ್ತೀನಿ ಅಂತ ಅಂದೆ. ಅದಕ್ಕೆ ಅವಳು 'ಸರ್, ನೀವು ನನಗೆ ಮೆಂಟರ್ ಇದ್ದ ಹಾಗೆ. ನಾ ನಿಮ್ಮನ್ನ ಆ ದೃಷ್ಟಿಯಿಂದ ನೋಡೇ ಇಲ್ಲ. ನನಗೆ ಇನ್ನೂ ನನ್ನ ಪ್ರೊಫೆಶನ್ ನಲ್ಲಿ ಮುಂದೆ ಬರಬೇಕು ಅಂತ ತುಂಬಾ ಆಸೆ ಇದೆ. ಸೋ ನನಗೆ ಇಷ್ಟು ಬೇಗನೆ ಮದುವೆ ಆಗೋಕೆ ಇಷ್ಟ ಇಲ್ಲ. ಒಂದು ವೇಳೆ ನಿಮಗೆ ನನ್ನ ಮೇಲೆ ಆ ರೀತಿ ಪ್ರೀತಿ ಇದ್ರೆ ಹೇಳಿ, ನಾನು ನಿಮಗೆ ಕೋ-ಆಪರೇಟ್ ಮಾಡ್ತೀನಿ' ಅಂತ ಹೇಳಿದಾಗ ನನಗ ಆಶ್ಯರ್‍ಯ ಮತ್ತ ದುಃಖ ಎರಡೂ ಆಗಿ ಬಾರ್ ಗೆ ಕುಡಿಯೋಕೆ ಹೋದೆ. ಡ್ರಿಂಕ್ಸ್ ಸ್ವಲ್ಪ ಜಾಸ್ತಿ ಆಗಿ ಇಷ್ಟೆಲ್ಲಾ ಅನಾಹುತ ಆತು. ಆಮೇಲೆ ಠಾಣೆ ಒಳಗ ನಿನಗ ಯಾರರ ಪರಿಚಯದವರು ಇದ್ರ ಫೋನ್ ಮಾಡಬಹುದು ಅಂತ ಕೇಳಿದ್ರು. ನಾ ಅಮಲಿನಲ್ಲಿ ವಾಸಂತಿ... ವಾಸಂತಿ... ಅಂತ ಕೂಗ್ತಾ ಇದ್ದೇ. ಆದ್ರೆ ಯಾವಾಗೋ ಒಮ್ಮೆ ಮಧು ಅಂತ ಕೂಗಿದೆ ಅಂತ ಕಾಣುತ್ತೆ" ಎಂದು  ತನ್ನ ಮಾನಸ ಸರೋವರದ ವೇದನೆಯ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ. ಪೋಲೀಸ್ ರು ಅವನ ಪ್ರೇಯಸಿ ವಾಸಂತಿ ಅಲಿಯಾಸ್ ಮಧು ಗೆ ಫೋನ್ ಮಾಡೋಕೆ ಹೋಗಿ, ಮಧುಕರ್ ಗೆ ಫೋನ್ ಮಾಡಿದ್ದರು. 

ಅವನಾಡಿದ ಮಾತುಗಳ ಬಗ್ಗೆ ನಾನು ಅಲ್ಲೇ ಮೆಲುಕು ಹಾಕ್ತಾ ಕೂತೆ. ಇವನು ನಿಜ ಹೇಳ್ತಾ ಇದಾನಾ ಅಥವಾ ಸುಳ್ಳು ಹೇಳ್ತಾ ಇದಾನಾ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದೇಲ್ಲ ಇವನು ಹೇಗೆ ಮಾಡಿದ. ನನ್ನ ಎದುರು ಅವನೆಂದು ಇಲ್ಲೀವರೆಗೆ ಸುಳ್ಳು ಆಡಿರಲಿಲ್ಲ. ಆದ್ರೆ ಆಗಿನ ಸಮಯಾನೆ ಬೇರೆ, ಈಗಿನ ಸಮಯಾನೆ ಬೇರೆ. ನಾನು ಒಂದು ಸಣ್ಣ ಖಾಸಗಿ ಜಾಹೀರಾತು ಕಂಪನೀಯಲ್ಲಿ ಕೆಲಸ ಮಾಡ್ತಾ ಇದ್ದೆ. ಸಂಬಳ ಪರವಾಗಿಲ್ಲ, ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ಸಾಗಿಸುವಷ್ಟು ಬರ್ತಾ ಇತ್ತು. ಸೇವಿಂಗ್ಸ್ ಕೂಡ ಸ್ವಲ್ಪ ಇತ್ತು. ಆದರೆ ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಿಸಬೇಕು ಎಂಬ ಕನಸು, ಇನ್ನೂ ಕನಸಾಗಿಯೆ ಇತ್ತು. ಹಾಗೆನೆ ನನ್ನ ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಆಗಿ ಒಂದು ಬಂಗಾರದ ನೆಕ್‌ಲೇಸ್ ಕೊಡಿಸಬೇಕೆಂದು ನಾನು ಪ್ರತಿ ತಿಂಗಳು ಸ್ವಲ್ಪ ಹಣ ಅವಳಿಗೆ ಗೊತ್ತಾಗಲಾರದ ಹಾಗೆ  ಉಳಿತಾಯ ಮಾಡ್ತಾ ಇದ್ದೆ. ಮದುವೆ ಆಗಿ ೨ ವರ್ಷವಾದರೂ ಅವಳಿಗೆ ಹೆಚ್ಚಿನ ಬೆಲೆಯ ಒಡವೆಯನ್ನು ಇನ್ನೂ ಕೊಡಿಸಿರಲಿಲ್ಲ. ಆ ಸಿಟ್ಟನ್ನು ಅವಳು ಆಗಾಗ ಅಡಿಗೆಗೆ ಉಪ್ಪು ಖಾರ ಕಡಿಮೆ ಹಾಕಿ  ಅಥವಾ ಅಡಿಗೇನೆ ಮಾಡದೇ ತೀರಿಸಿಕೊಳ್ತಾ ಇದ್ದಳು. ಆದರೆ ನೆಕ್‌ಲೇಸ್ ಖರೀದಿ ಮಾಡಲು ನನಗೆ ಕನಿಷ್ಟ ೧೨ ರಿಂದ ೧೬ ತಿಂಗಳೂ ಇನ್ನೂ ಬೇಕಾಗಿತ್ತು. 

ಅವನು ನನ್ನ ಮನಸ್ಸನ್ನು ಓದಿದವನ ಹಾಗೆ "ನಿಂಗ ನನ್ನ ಮ್ಯಾಲ ನಂಬಿಕೆ ಬರವಲ್ದು ಅಂತ ಕಾಣತ್ತ. ಒಂದ ಕೆಲ್ಸಾ ಮಾಡ, ಮುಂದಿನ ವೀಕೆಂಡ್ ನೀ ನನ್ನ ಮನೀಗೆ ಬಾ. ಆವಾಗ ಇದರ ಬಗ್ಗೆ ಮಾತಾಡುಣ. ಹಂಗ ನಿನಗ ಟೈಮ್ ಇದ್ರ, ನನ್ನ ಫರ್ಸ್ಟ್ ಮೂವೀ 'ಹುಡುಕಾಟ' ನೋಡು. ಇದ ನನ್ನ ಅಡ್ರೆಸ್" ಅಂತ ಹೇಳಿ ತನ್ನ ಕಾರ್ಡ್ ಕೊಟ್ಟ. "ಇನ್ನೊಂದ ಮಾತ, ನಿನಗ ಏನರ ಸೈಟ್ ಬೇಕಾದ್ರ ಹೇಳ, ನಾ ನಿಂಗ ಕಡಿಮೆ ರೇಟ್ ಒಳಗ ಕೊಡಿಸಿ ಕೊಡ್ತೀನಿ. ಹಂಗ ರೊಕ್ಕಾ ಇನ್‌ವೆಸ್ಟ್ ಮಾಡಬೇಕಂದ್ರ ನಂಗ ಹೇಳ. ಒಳ್ಳೇ ರೇಟ್ ಬರುವಂಗ ಮಾಡ್ತೇನಿ" ಅಂತ ನನ್ನ ತಲೆಯಲ್ಲಿ ಹುಳ ಬಿಟ್ಟ. "ಈಗ ನಿನ್ನಿಂದ ಇನ್ನೊಂದ ಸಹಾಯ ಆಗಬೇಕ. ಏನಂದ್ರ ನನ್ನ ಕಾರ್ ಅಲ್ಲೇ ಬಾರ್ ಹತ್ರಾನ ಪಾರ್ಕ್ ಮಾಡೇನಿ. ನೀ ಅಲ್ಲಿತನಕ ನಂಗ ನಿನ್ನ ಕಾರ್ ನ್ಯಾಗ ಡ್ರಾಪ್ ಕೊಡು" ಅಂತ ಕೇಳಿಕೊಂಡ. ನಾನು ಆಯ್ತು ಅಂತ ಹೇಳಿ ಬಿಲ್ ಕೊಡೋಕೆ ಹೋದ್ರೆ, ತಾನೇ ಮುಂದೆ ಹೋಗಿ ಬಿಲ್ ಪೇ ಮಾಡಿದ. ನಾನು ಅವನನ್ನು ರಾಜಾಜಿನಗರದ ನವರಂಗ ಹತ್ತಿರ ಇರೋ ಒಂದು ಬಾರ್ ನ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರ್ ಹತ್ತಿರ ತಂದು ಇಳಿಸಿದೆ. ನೋಡ್ತೀನಿ ಮರ್ಸಿಡೀಸ್ ಬೇಂಜ಼್ ಕಾರ್. ನನ್ನ ಸೆಕೆಂಡ್ ಹ್ಯಾಂಡ್ ಮಾರುತಿ ೮೦೦ ಅದರ ಮುಂದೆ ದೀನನಾಗಿ ನಿಂತಿತ್ತು. ಅವನು "ಸೀ ಯೂ ನೆಕ್ಸ್ಟ್ ವೀಕೆಂಡ್, ಇನ್ ಮೈ ಹೋಮ್. ನೀ ಖಂಡಿತವಾಗಿ ಬರ್ತೀ ಅಂತ ನಂಗ ಗೊತ್ತು" ಅಂತ ಹೇಳಿ ನನಗೆ ಟಾಟಾ ಮಾಡಿ ತನ್ನ ಬೇಂಜ಼್ ಕಾರಲ್ಲಿ ಜುಮ್ಮ ಅಂತ ಹೋದ. 

                                                                                                                                                                                        (to be continued...)