ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೫)
ಅವನು ಹಾಗೆಯೇ ಬೇರೆ ಏನೇನೋ ಮಾತಾಡುತ್ತಿದ್ದ. ಘಂಟೆ ೯.೩೦ ಆಗಿದ್ದರಿಂದ ನಾನು ಬರುತ್ತೇನೆ ಅಂತ ಹೇಳಿ ಅಲ್ಲಿಂದ ಕಾಲು ಕಿತ್ತೆ. ಒಂದೆರಡು ವಾರದ ಒಳಗಾಗಿ ಕಾರ್ ನ ಮಾರಿ, ಸೈಟ್ ಗೆ ಹಣ ಹೊಂದಿಸಬೇಕು ಅಂತ ಲೆಕ್ಕ ಹಾಕಿ ನನ್ನ ಹೆಂಡತಿಗೆ ಸೈಟ್ ತೆಗೆದುಕೊಳ್ಳುತ್ತಿರುವ ವಿಚಾರ ಹೇಳಿದೆ. ಅದಕ್ಕೆ ಅವಳು ಖುಷಿಯಾಗಿ "ತುಂಬಾ ಒಳ್ಳೆಯ ಸುದ್ದಿ, ಆದರೆ ಕಾಗದ ಪತ್ರ ಎಲ್ಲವೂ ಸರಿ ಇವೆಯ ಅಂತ ಪರೀಕ್ಷೆ ಮಾಡಿ ಮುಂದಿನ ಹೆಜ್ಜೆ ಇಡಿ" ಅಂತ ಎಚ್ಚರಿಕೆ ಕೊಟ್ಟಳು. ನಾನು ಬೇರೆಯೊಬ್ಬರಿಗೆ ಕಾರ್ ನ ಪರಭಾರೆ ಮಾಡಿ ೭೫ ಸಾವಿರ ರೂಪಾಯಿ ಪಡೆದು, ಒಟ್ಟು ೫ ಲಕ್ಷ ೭೫ ಸಾವಿರ ರೂಪಾಯಿಗಳನ್ನು ನನ್ನ ಗೆಳೆಯನ ಕೈಗೆ ಕೊಟ್ಟೆ. ಬಾಕಿ ಹಣ ಕಾಲ ಕ್ರಮೇಣ ಕೊಡುತ್ತೇನೆ ಅಂತ ಹೇಳಿ ಅವನಿಗೆ ಸೈಟ್ ತೋರಿಸಲು ಕೇಳಿದೆ. ಮುಂದಿನ ದಿನ ಅವನು ನನ್ನನ್ನು ಬೆಂಗಳೂರಿನ ಹೊರವಲಯದಲ್ಲಿದ್ದ ತನ್ನ ಜಮೀನು ತೋರಿಸಲು ಕರೆದುಕೊಂಡು ಹೋದ. "ಇದ ಇನ್ನೂ ಪೂರ್ತಿಯಾಗಿ ಲೇಯೌಟ್ ಆಗಾಕ ಒಂದರಿದ ಎರಡು ವರ್ಷ ಬೇಕಾಕ್ಕೈತಿ" ಅಂತ ಅಂದ. ನನಗೆ ಅವನ ಮೇಲೆ ಭರವಸೆ ಇದ್ದುದರಿಂದ ಆಯ್ತು ಅಂತ ಒಪ್ಪಿಕೊಂಡೆ. ಹಾಗೆಯೇ ನನ್ನಾಕೆಗೆ ಒಡವೆ ಕೊಡಿಸಬೇಕು ಅಂತ ಇಲ್ಲಿ ವರೆಗೆ ಜಮಾ ಮಾಡಿದ್ದ ೪೦ ಸಾವಿರ ರೂಪಾಯಿಗಳನ್ನು ಅವನ ಇನ್ವೆಸ್ಟ್ ಮೆಂಟ್ ಬಿಸ್ನೆಸ್ ಗೆ ಹಾಕಿದೆ.
ಹೀಗೆಯೇ ೩ ವಾರ ಕಳೆಯಿತು. ಒಮ್ಮೆ ಶಾಪಿಂಗ್ ಗೆ ಅಂತ ಮಾಲ್ ಗೆ ಹೋದಾಗ ಆಕಸ್ಮಿಕವಾಗಿ ಸರೋಜ ಸಿಕ್ಕಳು. ಹಾಗೆಯೇ ಅವಳ ಯಜಮಾನರ ಪರಿಚಯವೂ ಆಯಿತು. ಸರೋಜ ಈಗ ಪೂರ್ತಿಯಾಗಿ ಬೆಂಗಳೂರು ಭಾಷೆಯಲ್ಲೇ ಮಾತಾಡುತ್ತಿದ್ದಳು. ನನ್ನ ಮನೆ ಹತ್ತಿರದಲ್ಲೇ ಇದ್ದುದರಿಂದ ಅವರನ್ನು ಮನೆಗೆ ಬರಲು ಹೇಳಿದೆ. ಅವರು ಮನೆಗೆ ಬಂದು, ಅದು ಇದು ವಿಚಾರ ಮಾತಾಡುತ್ತಿದ್ದಾಗ ಈರಪ್ಪನ ವಿಷಯವನ್ನು ನಾನು ಪ್ರಸ್ತಾಪ ಮಾಡಿದೆ. ಅದಕ್ಕೆ ಸರೋಜ "ಮಧುಕರ, ನನ್ನ ಹಾಗೂ ಅಣ್ಣನ ಸಂಬಂಧ ಈಗ ಅಷ್ಟು ಸರಿಯಾಗಿಲ್ಲ. ಅವನು ಈಗ ಇಲ್ಲೇ ಬೆಂಗಳೂರಿನಲ್ಲಿ ಇದಾನೆ ಅಂತೆ, ಅವನನ್ನ ನಾನು ಕೊನೇ ಸಾರಿ ಭೇಟಿ ಆಗಿದ್ದು ೨ ವರ್ಷಗಳ ಹಿಂದೆ. ಅವನು ಅದು ಇದು ಅಂತ ಏನೋ ಬಿಸ್ನೆಸ್ ಮಾಡಿ ಇರೋ ಹಣ ಎಲ್ಲ ಕಳೆದುಕೊಂಡು ನನ್ನ ಹತ್ತಿರ ಧನಸಹಾಯ ಕೇಳಲು ಬಂದಿದ್ದ. ನಮ್ಮವರು ಅಷ್ಟು ಹಣ ಕೊಡೋಕೆ ಆಗುವುದಿಲ್ಲ ಎಂದುದ್ದಕ್ಕೆ ಏನೇನೋ ಬೈದು ಹೋದ. ಆಮೇಲೆ ಅವನು ಎಲ್ಲಿಗೆ ಹೋದ ಏನು ಆದ ಎಂಬ ವಿಚಾರ ನಮಗೆ ತಿಳಿಯಲಿಲ್ಲ. ಆದರೆ ಈಗ ೬ ತಿಂಗಳ ಹಿಂದೆ ಅವನ ಕೆಲವು ಆಪ್ತರಿಂದ ಅವನ ಸಮಾಚಾರ ಸಿಕ್ಕಿತು. ಬಿಸ್ನೆಸ್ ನಲ್ಲಿ ಕಳೆದು ಹೋದ ಹಣ ಹೊಂದಿಸೋಕೆ ಅವನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದನಂತೆ, ಅದರಲ್ಲಿ ಸ್ವಲ್ಪ ರಾಜಕೀಯ ನಡೆದು ಅಲ್ಲೂ ಕೂಡ ಅವನಿಗೆ ಲಾಸ್ ಆಗಿ ಕೊನೆಗೆ ಈಗ ಫಿಲ್ಮ್ ಇಂಡಸ್ಟ್ರೀ ಯಲ್ಲಿ ಅದೇನೋ ಮೂವೀಸ್ ಮಾಡ್ತೀನಿ ಅಂತ ಓಡಾಡ್ತಾ ಇದಾನೆ ಅಂತೆ. ಇವನು ಯಾವಾಗ ಸರಿ ಹೋಗ್ತಾನೋ? ಆ ದೇವರೇ ಬಲ್ಲ!" ಎಂದು ಹೇಳಿ ತನ್ನ ಮನಸ್ಸಿನ ಕೊರಗನ್ನು ಹೊರಗೆ ಹಾಕಿದಳು. ಸರೋಜಾಳ ಮಾತು ಕೇಳಿ ನನಗೆ ನನ್ನ ಕಾಲು ಕೆಳಗಿನ ನೆಲ ಕಂಪಿಸಿದ ಅನುಭವವಾಯಿತು. ನನ್ನ ಹೆಂಡತಿಯ ಮುಖವನ್ನು ನೋಡಿದೆ, ಚಂಡಿ ಚಾಮುಂಡಿಯ ಮುಖ ಕಂಡ ಹಾಗೆ ಕಂಡಿತು. ಆದರೆ ನಾನು ಸೈಟ್ ತೆಗೆದುಕೊಂಡಿರುವ ವಿಚಾರ ಸರೋಜಾಗೆ ಹೇಳಲಿಲ್ಲ, ನನ್ನಾಕೆಯೂ ಅದರ ಬಗ್ಗೆ ಬಾಯಿ ಬಿಡಲಿಲ್ಲ. ಅವರು ಹೋದ ಮೇಲೆ ನನ್ನಾಕೆ "ನೋಡಿ, ನೀವು ಅದೇನು ಮಾಡ್ತೀರೋ ನನಗೆ ಗೊತ್ತಿಲ್ಲ. ಸೈಟ್ ಮನೆ ಹಾಳಾಯ್ತು ಮೊದ್ಲು ಹೋಗಿ ಅವನ ಹತ್ತಿರ ಕೊಟ್ಟಿರೋ ದುಡ್ಡು ತಗೊಂಡು ಬನ್ನಿ" ಎಂದು ಖಾರವಾಗಿ ನುಡಿದಳು. ನಾನು ಆಗಲೇ ಅವನಿಗೆ ಫೋನ್ ಮಾಡಿದೆ, ಅವನು ಫೋನ್ ಎತ್ತಲಿಲ್ಲ. ಹೀಗೆಯೇ ಎರಡು ದಿನಗಳು ಕಳೆದವು. ನಾನು ಫೋನ್ ಮಾಡಿದಾಗ ಅದು ಬಿಜಿ ಅಥವಾ ನಾಟ್ ರೀಚಬಲ್ ಅಂತ ಬರ್ತಾ ಇತ್ತು. ನಾನು ಸಂಪೂರ್ಣವಾಗಿ ಮುಳುಗಿ ಹೋದೆನಲ್ಲ ಎಂಬ ಭಯ ನನ್ನನ್ನು ಆವರಿಸಿತು. ಏನೇ ಆಗಲಿ ಈ ವೀಕೆಂಡ್ ಹೋಗಿ ಅವನನ್ನ ಖುದ್ದಾಗಿ ಭೇಟಿ ಮಾಡ್ಲೇಬೇಕು ಅಂತ ರವಿವಾರದ ವರೆಗೆ ಕಾದು ಆ ದಿನ ಸಾಯಂಕಾಲ ಅವನ ಮನೆಗೆ ಹೋದೆ. ಆಸಾಮಿ ಮನೆಯೊಳಗೆ ಗುಂಡು ಹಾಕ್ತಾ ಕುಳಿತಿದ್ದ. ನಾನು ಒಳಗೆ ಹೋದವನೆ "ಈರಪ್ಪ, ನೀ ಇಂಥಾ ಮೋಸಗಾರ ಅಂತ ಮೊದ್ಲ ನಂಗ ಗೊತ್ತ ಆಗಿದ್ರ, ನಾ ನಿಂಗ ಸಹಾಯ ಮಾಡಾಕ ಬರ್ತಿರಲಿಲ್ಲ. ಮೊದಲ ನೀ ನನ್ನ ರೊಕ್ಕಾ ಕೊಡ, ಸಾಕ ನಿನ್ನ ದೋಸ್ತಿ" ಅಂತ ಸಿಟ್ಟಿನಿಂದ ಹೇಳಿದೆ. ಅದಕ್ಕೆ ಅವನು ನಕ್ಕು "ಯಾಕೋ ಮಧು, ಇಷ್ಟ ಯಾಕ ಸಿಟ್ಟಾಗಿ. ಯಾರ ಏನ ಅಂದ್ರು. ನಾ ಏನ ನಿನ್ನ ರೊಕ್ಕಾ ತಗೊಂಡು ಓಡಿ ಹೋಗಂಗಿಲ್ಲ. ಏನ ಆತ ಅಂತ ಹೇಳ" ಎಂದು ಕೇಳಿದ. ನಾನು ಸ್ವಲ್ಪ ಸಮಾಧಾನವಾಗಿ ಸರೋಜ ಹೇಳಿದುದನ್ನು ಅವನಿಗೆ ಹೇಳಿದೆ. "ಕಷ್ಟ ಕಾಲದಾಗ ಸಹಾಯ ಮಾಡ ಅಂದ್ರ ಮಾಡಲಿಲ್ಲ. ಈಗ ನನ್ನ ಏಳ್ಗೆ ನೋಡಿ ಇವಳಿಗೆ ಹೊಟ್ಟೆ ಸಂಕಟ" ಅಂತ ಹೇಳಿ ಡ್ರಿಂಕ್ಸ್ ಬಾಯಿಗೆ ಹಾಕಿದ. "ನಿಂಗೂ ಸ್ವಲ್ಪ ಡ್ರಿಂಕ್ಸ್ ಬೇಕಾ?" ಎಂದ. "ನಂಗೆ ಡ್ರಿಂಕ್ಸ್ ಬೇಡ, ನನ್ನ ರೊಕ್ಕಾ ಕೊಡು. ನಿನ್ನ ಸ್ವಂತ ತಂಗಿ ನಿನ್ನ ಬಗ್ಗೆ ಯಾಕ ಚಾಡಿ ಹೇಳ್ತಾಳ?" ಅಂತ ಕೇಳಿದೆ.
"ನೋಡ ಮಧು, ಅವಳು ಹೇಳಿರೋ ಕೆಲವು ಮಾತು ಖರೇ, ಆದ್ರ ಎಲ್ಲಾ ಸತ್ಯ ಅಲ್ಲ. ನನಗ ಮೊದ್ಲ ಸ್ವಲ್ಪ ಬಿಸ್ನೆಸ್ ಒಳಗ ಲಾಸ್ ಆಯ್ತು, ಆಮ್ಯಾಲ ರಿಯಲ್ ಎಸ್ಟೇಟ್ ನಿಂದ ಸ್ವಲ್ಪ ರೊಕ್ಕಾ ಬಂತು, ಸ್ವಲ್ಪ ಹೋಯ್ತು. ಈಗ ಸ್ವಲ್ಪ ರಿಕವರ್ ಆಗಾಕತ್ತೈತಿ. ನಿನ್ನ ರೊಕ್ಕಾನ ನಾ ಆಲ್ರೆಡೀ ಆ ಲೇಯೌಟ್ ಕನ್ವರ್ಷನ್ ಗೆ ಹಾಕಿಬಿಟ್ಟೇನಿ. ಕುಡಿದಾಗ ಸುಳ್ಳು ಹೇಳಬಾರ್ದೂ ಅಂತಾರ, ನಾ ನಿಂಗ ಎಲ್ಲ ಖರೇ ಹೇಳ್ತೇನಿ ಕೇಳ. ನಾನೀಗ ಒಂದು ಸಮಸ್ಯೆ ಒಳಗ ಸಿಕ್ಕ ಹಾಕೊಂಡೆನಿ. ನನ್ನ ಜಮೀನ ಸಲುವಾಗಿ ಈ ಸದ್ಯ ನನಗ ಮತ್ತ ಆ ಏರಿಯಾದ ಒಬ್ಬ ಮುಖಂಡ ಇಬ್ಬರ ನಡಕ ಮನಸ್ತಾಪ ಆಗೈತಿ. ಆ ಸೂಳೆ ಮಗಗ ಈಗಿನ ಸರ್ಕಾರದವ್ರ ಸಪೋರ್ಟ್ ಐತಿ. ಮಕ್ಕಳು, ಬೇರೆ ರಾಜ್ಯದಿಂದ ಇಲ್ಲಿ ಕೆಲ್ಸಕ್ಕ ಅಂತ ಬಂದು ರಾಜಕೀಯ ಮಾಡ್ತಾರ್. ನಮ್ಮ ಸರ್ಕಾದವ್ರು ವೋಟ್ ಗೋಸ್ಕರ ಆ ನನ್ನ ಮಕ್ಕಳಿಗೆ ಸಪೋರ್ಟ್ ಮಾಡ್ತಾರ್. ನಾ ಮೊದ್ಲ ಬೆಂಗಳೂರಿನ ಔಟ್ ಸ್ಕರ್ಟ್ ನಲ್ಲಿ ಜಮೀನ ತಗೊಂಡಾಗ, ಅಲ್ಲಿ ಈ ನನ್ನ ಮಕ್ಕಳು ಕಡಿಮೆ ಸಂಖ್ಯೆ ಒಳಗ ಇದ್ರು. ಬರ್ತಾ ಬರ್ತಾ ನಾಯಿಕೊಡಿ ಬೆಳದಂಗ ಬೆಳದ, ತಮ್ಮದ ಒಂದು ಗ್ರೂಪ್ ಮಾಡ್ಕೊಂಡ ಈಗ ರಾಜಕೀಯ ಮಾಡಾಕತ್ತಾರ. ಈಗ ಆ ಏರಿಯಾ ಹೆಂಗ್ ಆಗೈತಿ ಅಂದ್ರ, ಯಾರರ ಅಲ್ಲಿ ಹೋಗಿ ಕನ್ನಡದಾಗ ಮಾತಾಡಿದ್ರ ಮುಖ ಮುಖ ನೋಡ್ತಾರ್. ನಮ್ಮ ಜನ ವೋಟ್ ಮತ್ತ ರೊಕ್ಕದ ಆಸೆಗೆ ಎಲ್ಲಾನೂ ಮಾರ್ಕೊಂಡು, ಈಗ ಭಾಷೇನೂ ಕೂಡ ಮಾರಿಕೊಳ್ಳೋ ಹಾಗೆ ಕಾಣಕತ್ತಾರ. ಆದ್ರ ನಾ ಮಾತ್ರ ಆ ಜಾಗಾನ ಅವರ ಕೈಗೆ ಸಿಗದ ಹಾಗೆ ಮಾಡ್ತೀನಿ. ಬೇಕಾದ್ರ ಅದಕ್ಕೋಸ್ಕರ ನಾನು ಯಾವ ಕೋರ್ಟ್ ಗೆ ಹೋಗೋಕೂ ಸಿದ್ಧ. ಆ ಜಾಗಾನ ನಾ ಕೇವಲ ಕನ್ನಡದವರಿಗೆ ಮಾತ್ರ ಕೊಡೋದು, ಬೇರೆ ಯಾರಿಗೂ ಕೊಡಂಗಿಲ್ಲ" ಎಂದು ಜೋಶಲ್ಲಿ ತನ್ನ ಕನ್ನಡ ಅಭಿಮಾನವನ್ನು ಹೊರಗೆ ಹಾಕಿದ. ಅವನ ಭಾಷಾಭಿಮಾನ ಕಂಡು ನನಗೆ ಹೆಮ್ಮೆ ಆದರೂ, ಅದರ ಜೊತೆಗೆ ಅವನ ಜಮೀನಿನ ಹಾಗೂ ನನ್ನ ಸೈಟ್ ನ ಸಮಸ್ಯೆ ಕೂಡ ಹೆಣೆದುಕೊಂಡಿದೆ ಎಂಬುದರ ಅರಿವಾಗಿ ವ್ಯಥೆಯಾಯಿತು. "ನೀ ಯಾಕ ಅವರ ಜೊತೆ ಕೂತು ಸಮಸ್ಯೆ ಬಗೆ ಹರಿಸಿಕೊಳ್ಳಬಾರ್ದು" ಅಂತ ಸಲಹೆ ಕೊಟ್ಟೆ. "ಅದೆಲ್ಲ ಮಾಡಿ ಆಯ್ತು, ಇನ್ನೆನ ಇದ್ರು ಹೋರಾಟ. ನೀನೂ ಬೇಕಾದ್ರ ನನ್ನ ಜೊತೆ ಬಾ" ಅಂತ ಹೇಳಿ ನನಗೆ ಭಯ ಹುಟ್ಟಿಸಿದ. ಇವನ ಸಮಸ್ಯೆಗೆ ನಾನು ಯಾಕೆ ಸುಮ್ನೆ ಇರುವೆ ಬಿಟ್ಟುಕೊಳ್ಳಲಿ ಅಂತ ಅನ್ನಿಸಿ "ನೋಡು, ನೀ ಏನಾದ್ರೂ ಮಾಡ್ಕೋ. ನಿನ್ನ ಕಾರ್ ಮಾರಿ ಆದ್ರೂ ನನ್ನ ೬ ಲಕ್ಷ ೧೫ ಸಾವಿರ ರೂಪಾಯಿ ಕೊಡು" ಅಂತ ದುಂಬಾಲು ಬಿದ್ದೆ. ಆನಂತರ ಅವನಾಡಿದ ಮಾತುಗಳನ್ನು ಕೇಳಿ ನನಗೆ ಅಲ್ಲೇ ಹುಚ್ಚು ಹಿಡಿಯುವಂತಾಯಿತು. ಅವನು ತನ್ನ ಹಳೆಯ ಸಾಲವನ್ನು ತೀರಿಸುವುದಕ್ಕಾಗಿ ಮನೆ ಮತ್ತು ಕಾರನ್ನು ಮಾರಿ, ಈಗ ಅದೇ ಮನೆಯಲ್ಲೇ ಕೆಲವು ದಿನಗಳಿಂದ ಬಾಡಿಗೆಗೆ ಇದ್ದ. ಅವನ ಚಿತ್ರದ ಶೂಟಿಂಗ್ ಹಣಕಾಸಿನ ಅಭಾವದಿಂದಾಗಿ ಅರ್ಧಕ್ಕೆ ಸ್ಥಗಿತವಾಗಿತ್ತು. ಅವನ ಇನ್ವೆಸ್ಟ್ಮೆಂಟ್ ಬಿಸ್ನೆಸ್ ಕೂಡ ಕೈ ಕೊಟ್ಟಿತ್ತು. ಈ ಹಣಕಾಸಿನ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವನಿಗೆ ಈಗ ಇದ್ದ ಒಂದೇ ಮಾರ್ಗ ಎಂದರೆ, ಜಮೀನನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳುವುದು. ಒಂದು ವೇಳೆ ಅವನು ಮುಳುಗಿದರೆ ನಾನು ಮುಳುಗಿದಂತೆ ಅಂತ ನನಗೆ ಆಭಾಸವಾಗಿ "ನನಗೆ ಕೋರ್ಟ್ ಕಛೇರಿ ಅಂತ ಅಡ್ಡಾಡಲಿಕ್ಕೆ ಆಗುದಿಲ್ಲ. ಬೇಕಾದ್ರ ಬೇರೆ ರೀತಿಯಲ್ಲಿ ಸಹಾಯ ಕೇಳು, ಟ್ರೈ ಮಾಡ್ತೀನಿ" ಅಂತ ಹೇಳಿದೆ. ಅವನು ಮೊದಲೇ ಪ್ಲಾನ್ ಮಾಡಿದ್ದ ಎಂದು ಕಾಣುತ್ತೆ, ನನ್ನ ಈ ಮಾತು ಕೇಳುತ್ತಲೇ "ನೀ, ಹೆಂಗೂ ಜಾಹೀರಾತು ಕಂಪನೀ ಒಳಗ ಕೆಲ್ಸಾ ಮಾಡಾಕತ್ತಿ. ನೀ ಯಾಕ ಇಂಥವರ ವಿರುದ್ಧ ಒಂದು ಜಾಹೀರಾತು ಮಾಡಿ ಜನಕ್ಕ ತಿಳಿಯುವ ಹಂಗ ಮಾಡಬಾರ್ದು. ಸ್ವಲ್ಪ ಕನ್ನಡದವರಿಗೆ ಸಹಾಯ ಮಾಡಿದಂಗೂ ಆಕ್ಕೈತಿ" ಅಂತ ಹೇಳಿದ. ನಾನು ಅವನ ಮಾತಿನ ಪರಿಣಾಮ ಏನಾಗಬಹುದೆಂದು ಅಂತ ಯೋಚನೆ ಮಾಡಿದೆ. ನನ್ನ ಸೀನಿಯರ್ ಮ್ಯಾನೇಜರ್ ಕೂಡ ಕನ್ನಡದವರೇ. ಅವರು ಕೂಡ ಈ ಪರಭಾಷಿಕರ ಗುಂಪುಗಾರಿಕೆಯ ಬಗ್ಗೆ ಒಮ್ಮೆ ನನ್ನ ಹತ್ರ ಹೇಳಿದ್ದು ನೆನಪಾಗಿ "ಆಯ್ತು ನಾನು ಪ್ರಯತ್ನ ಪಡ್ತೀನಿ, ಆದ್ರ ನಿನ್ನ ಕಾನೂನಿನ ಹೋರಾಟ ನೀ ಮುಂದುವರೆಸು" ಅಂತ ಹೇಳಿ ಅಲ್ಲಿಂದ ಹೊರಟೆ.
ನಾನು ಮನೆಗೆ ಹೋಗಿ ಅವನಾಡಿದ ಜಾಹೀರಾತಿನ ವಿಚಾರವಾಗಿ ಮತ್ತೊಮ್ಮೆ ಯೋಚಿಸಿದೆ. ನಾನು ಹುಟ್ಟು ಹೋರಾಟಗಾರನಲ್ಲವಾಗಿದ್ದರು, ಕಾಲೇಜ್ ನಲ್ಲಿ ಇದ್ದಾಗ ಕೆಲವೊಂದು ಚಳುವಳಿಗಳಲ್ಲಿ ಭಾಗವಹಿಸಿದ್ದು ಜ್ಞಾಪಕಕ್ಕೆ ಬಂತು. ಯಾಕೆ ನಾನು ಈ ವಿಚಾರವಾಗಿ ನನ್ನ ಮ್ಯಾನೇಜರ್ ಹತ್ರ ಮಾತಾಡಬಾರ್ದು, ಇದರಿಂದ ಪರಭಾಷಿಕರಿಗೆ ಎಚ್ಚರಿಕೆ ಕೊಟ್ಟ ಹಾಗೆ ಆಗುತ್ತೆ. ಅದಕ್ಕಿಂತ ಮುಖ್ಯವಾಗಿ ನನ್ನ ಸೈಟ್ ನನಗೆ ಸಿಗುತ್ತೆ ಅಂತ ಲೆಕ್ಕ ಹಾಕಿದೆ. ಮುಂದಿನ ದಿನ ಈ ವಿಷಯದ ಕುರಿತು ಮ್ಯಾನೇಜರ್ ಅವರಿಗೆ ಹೇಳಿದಾಗ, ಅವರು ಅರ್ಧ ಘಂಟೆ ಗಂಭೀರವಾಗಿ ಆಲೋಚಿಸಿ "ಮಧುಕರ್, ನನಗೂ ಈ ಪರಭಾಷಿಕರ ಗುಂಪುಗಾರಿಕೆಯ ಬಗ್ಗೆ ವ್ಯಥೆ ಇದೆ. ಆದರೆ ಬಿಸ್ನೆಸ್ ಈಸ್ ಬಿಸ್ನೆಸ್ ಅಂಡ್ ಸೆಂಟಿಮೆಂಟ್ಸ್ ಆರ್ ಸೆಂಟಿಮೆಂಟ್ಸ್. ಎರಡನ್ನೂ ಮಿಕ್ಸ್ ಮಾಡೋಕೆ ಆಗೋಲ್ಲ. ನೀವು ಪರಭಾಷಿಕರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಪ್ರಕಟಿಸಬಹುದು, ಆದರೆ ಅದಕ್ಕೆ ಕೆಲವು ಕಂಡೀಶನ್ಸ್ ಇವೆ. ಮೊದಲನೆಯದು, ಇದು ಕೇವಲ ನಿಮ್ಮ ಸ್ವಂತ ಅನಿಸಿಕೆ ಆಗಿರಬೇಕು. ನಿಮ್ಮ ಅನಿಸಿಕೆಗೂ ಮತ್ತು ಕಂಪನೀ ಗೂ ಯಾವುದೇ ಸಂಬಂಧ ಇರಕೂಡದು. ಎರಡನೆಯದು, ಮುಂದೆ ಏನಾದ್ರೂ ತೊಂದರೆ ಆದ್ರೆ, ಅದಕ್ಕೆ ಕಂಪನೀ ಹೊಣೆಗಾರ ಆಗುವುದಿಲ್ಲ. ಯೋಚನೆ ಮಾಡಿ ಪ್ರಕಟಿಸಿ. ದೇವರು ಒಳ್ಳೆಯದು ಮಾಡಲಿ" ಅಂತ ಹೇಳಿ ಹೊರಟು ಹೋದರು. ವಿಷಯ ತುಂಬಾ ಸೂಕ್ಷ್ಮವಾದ ಕಾರಣ, ಯಾರ ಭಾವನೆಗಳಿಗೂ ಧಕ್ಕೆ ಬರದ ಹಾಗೆ ಅದನ್ನು ಪ್ರಕಟಿಸಬೇಕಾಗಿತ್ತು. ಸುಮ್ಮನೇ ಯಾಕೆ ನನಗೆ ಈ ಎಲ್ಲಾ ಗೊಡವೆ? ಬೇಕಾದರೆ ಈರಪ್ಪಾನೆ ಹೋರಾಟ ಮಾಡಲಿ. ಹೇಗೂ ಜಾಸ್ತಿ ಪೀಡಿಸಿದರೆ ಅವನೇ ಹಣ ಕೊಟ್ಟರೂ ಕೊಡಬಹುದು ಅಂತ ಒಳ ಮನಸ್ಸು ಹೇಳ್ತಾ ಇತ್ತು. ಆದರೂ ಇದ್ದ ವಿಚಾರವನ್ನು ಹೇಳೋಕೆ ನಾನು ಯಾಕೆ ಭಯ ಪಡಬೇಕು ಅಂತ ನಿರ್ಧಾರ ಮಾಡಿ, ಒಂದು ದಿನ ಪತ್ರಿಕೆಯಲ್ಲಿ ಆ ವಿಷಯವನ್ನು ಪ್ರಕಟಿಸಿ ಬಿಟ್ಟೆ. ಮಾರನೆಯ ದಿನ ಮುಂಜಾನೆ ನಾನು ಆಫೀಸ್ ನಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಡೆಸ್ಕ್ ಗೆ ಫೋನ್ ಕಾಲ್ ಬಂತು. ನಾನು ರಿಸೀವರ್ ಅನ್ನು ಎತ್ತಿ "ಯಾರಿದು?" ಅಂತ ಕೇಳುವಷ್ಟರಲ್ಲಿ "ಮಿಸ್ಟರ್ ಮಧುಕರ್, ನಾನು ಯಾರು ಅನ್ನೋದು ಮುಖ್ಯ ಅಲ್ಲ. ಮೊದಲು ನೀವು ಬರೆದಿರೋ ಆರ್ಟಿಕಲ್ ಗೆ ನೀವು ಅಪಾಲಜೀ ಕೇಳಬೇಕು. ಇಲ್ಲ ಅಂದ್ರೆ ಪರಿಣಾಮ ನೆಟ್ಟಗೆ ಇರೋಲ್ಲ. ಬೇಕಾದ್ರೆ ಸ್ವಲ್ಪ ದುಡ್ಡು ಕಳಿಸಿಕೊಡ್ತಿವಿ. ನಿಮಗೆ ಸಂಬಂಧ ಇಲ್ಲದ ವಿಷಯಕ್ಕೆ ತಲೆ ಹಾಕಬೇಡಿ" ಎಂದು ಎಚ್ಚರಿಕೆ ಕೊಟ್ಟು ಫೋನ್ ಇಟ್ಟ. ಭೂ ಮಾಫಿಯ ಬಗ್ಗೆ ಇಲ್ಲೀವರೆಗೆ ಕೇಳಿದ್ದೆ, ಈಗ ಅನುಭವಿಸುವಂತಾಯಿತು.
ಅವನು ಕೊಟ್ಟ ಹಣವನ್ನು ತೆಗೆದುಕೊಂಡಿದ್ದರೆ, ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿತ್ತೇನೋ. ಆದರೆ ಮುಂದೆ ಇಟ್ಟ ಹೆಜ್ಜೆ ನ ಹಿಂದೆ ತೆಗೆದುಕೊಳ್ಳೋದು ಸರಿ ಅಲ್ಲ ಅಂತ ತಿಳಿದು, ನಾನು ಇನ್ನೊಂದು ಆರ್ಟಿಕಲ್ ಬರೆದು ಪ್ರಕಟಿಸಿ ಬಿಟ್ಟೆ. ಪರಿಣಾಮ ನನ್ನ ಕೆಲಸ ಹೋಯ್ತು. ಆ ಜಮೀನಿನ ವಿವಾದ ಕೋರ್ಟ್ ಅಲ್ಲಿ ನಡೆದು, ತೀರ್ಪು ಆ ಏರಿಯಾದ ಮುಖಂಡನ ಪರವಾಗಿ ಬಂದು ಈರಪ್ಪ ಜಮೀನನ್ನು ಕಳೆದುಕೊಂಡ. ಹಾಗೆಯೇ ನನ್ನ ಸೈಟ್ ಮತ್ತು ಹೆಂಡತಿಯ ಒಡವೆಯ ಹಣ ಕೂಡ ಹೋಯಿತು. ಇದನ್ನೆಲ್ಲ ನೋಡಿ ಬೇಸತ್ತು ನನ್ನಾಕೆ ಮುನಿಸಿಕೊಂಡು ತವರು ಮನೆಗೆ ಹೋದಳು. ಒಂದು ದಿನ ನಾನು ಮನೆಯಲ್ಲಿ ಇದ್ದಾಗ ಈರಪ್ಪ ಬಂದ. "ನೋಡ ಮಧುಕರ್, ನಾ ಮಾತಿಗೆ ಎಂದೂ ತಪ್ಪಿದವ ಅಲ್ಲ. ನನಗೋಸ್ಕರ ನೀನು ಕಷ್ಟಾ ಪಟ್ಟಿ. ಅದಕ್ಕ ನಾ ನಿನ್ನ ರೊಕ್ಕಾ ಕೊಡಾಕ ಬಂದೇನಿ. ನಿನಗ ನೆನಪಿರಬಹುದು ನಮ್ಮಪ್ಪ ನಿನ್ನ ಸ್ಟಡೀಸ್ ಗೆ ಅಂತ ೧ ಲಕ್ಷ ಕೊಟ್ಟಿದ್ದು. ಅಸಲು, ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಹಿಡದ ಅದು ೨ ಲಕ್ಷ ಆಕ್ಕೈತಿ. ಉಳಿದ ೩ ಲಕ್ಷ ೭೫ ಸಾವಿರ ರೂಪಾಯಿ ತೊಗೊ" ಅಂತ ಹೇಳಿ ಹಣ ಕೊಟ್ಟು ಹೊರಟು ಹೋದ. ನನ್ನ ಮ್ಯಾನೇಜರ್ ನನ್ನ ಮೇಲೆ ಸಹಾನುಭೂತಿ ತೋರಿಸಿ, ತಮ್ಮ ಪರಿಚಯದ ಬೇರೊಂದು ಕಂಪನೀಯಲ್ಲಿ ಉದ್ಯೋಗ ಕೊಡಿಸಿದರು.
ಒಂದು ದಿನ ಮನೆಯ ಪಕ್ಕದಲ್ಲಿದ್ದ ಹೊಟೆಲ್ ಗೆ ಟೀ ಕುಡಿಯಲು ಹೋದಾಗ ಎಫ್. ಎಮ್. ನಿಂದ ಗೋಪಾಲ ಕೃಷ್ಣ ಅಡಿಗರ 'ಇರುವುದೆಲ್ಲವ ಬಿಟ್ಟು, ಇರದುದ ಕಡೆಗೆ ತುಡಿವುದೆ ಜೀವನ' ಗೀತೆ ಬರ್ತಾ ಇತ್ತು. ಅದನ್ನು ಕೇಳಿ, ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಂಡಂತಾಗಿದ್ದ ನನ್ನ ಜೀವನದ ಘಟನೆಗಳನ್ನು ನೋಡಿ ನನಗೆ ನಗೆ ಬಂತು.