ಇಲ್ಲೇ ಇವೆ ಕನಸುಗಳು

ಇಲ್ಲೇ ಇವೆ ಕನಸುಗಳು

ಎಲ್ಲೂ ಮರೆಯಾಗಿಲ್ಲ ಕನಸುಗಳು
ಇಲ್ಲೇ ಇವೆ, ಎದೆಯ ಚಿಪ್ಪಿನೊಳಗೆ 
ಮೈಮರೆತು, ಆಕಾಶ ನೋಡುತ್ತಾ,,,,

ಅಂದೆಂದಿಗಿಂತಲೂ ಹೆಚ್ಚು ಹರಿತವಾಗುತ್ತಿವೆ
ದಿನವೂ ಎದೆಯಾಳದ ಬಡಿತದ ಶಬ್ಧವ ಕುಡಿದು,

ಬದುಕಿದ್ದೇನೆ ಎನ್ನುವ ಒಂದೇ ಕಾರಣ ಸಾಕು
ಅವು ಮತ್ತೆ ಮತ್ತೆ, ಮೇಲೆದ್ದು ಮುಗುಳ್ನಗಲು,

ಇರುವ ಕೊಟ್ಯಂತರ ನಕ್ಷತ್ರಗಳಲ್ಲಿ
ಒಂದು ಮರೆಯಾದ ಮಾತ್ರಕ್ಕೆ, 
ಜಗವೇನು ಸತ್ತಿದೆಯೇ ದುಃಖದಲಿ  !!

ವಿರಮಿಸಿದ ಮಾತ್ರಕ್ಕೆ, ಹುಲಿಯೇನು 
ಆರ್ಭಟಿಸದೆ, ಎದುರಿಗಿನ ನರಿಗಳನು ಕಂಡು,

ಕಾಣದ ದಾರಿಯಲಿ, ನಡೆವುದೇ ಕನಸಿಗಿರುವ 
ಏಕೈಕ ಹಾದಿಯಾದರೆ, ನಡೆಯಲಿ ನನ್ನೆಲ್ಲ 
ಕನಸುಗಳೂ, ಬೆಂಬಿಡದೆ ಸೂರ್ಯನನು ಹಿಂಬಾಲಿಸಿ,

ಎಲ್ಲರಿಗೂ,,,, ಬೆಳದಿಂಗಳಲಿ ಚುಂಬಿಸುವ ಚಂದ್ರನಿಗೆ
ವ್ಯಭಿಚಾರಿ ಎಂದಮಾತ್ರಕ್ಕೆ, 
ಅವನೊಡಲ ಪ್ರೇಮವೇನು ಹೆಪ್ಪುಗಟುವುದೇ?

ಕನಸುಗಳಲಿ ಬದುಕುವುದೇ ತಪ್ಪೆಂದರೆ,
ಕನಸುಗಳಿಲ್ಲದೆ ಬದುಕುವುದೂ ತಪ್ಪು, ದೊಡ್ದ ತಪ್ಪು,,,

ಮಾಯಜಾಲದೊಳಗೆ ಸಿಲುಕಿ, 
ಟ್ರಾಫಿಕ್ಕಿನ ಕೊನೆಯಲ್ಲಿ, ಪೆಟ್ರೋಲ್ ಇಲ್ಲದ ಬೈಕನ್ನು
ತಳ್ಳಿದಂತೆ, ಬದುಕನ್ಯಾಕೆ ತಳ್ಳಬೇಕು ಪ್ರದರ್ಶನಕಿಟ್ಟು,

ಕನಸುಗಳನು ಹುಟ್ಟಿಸುತ,
ಕನಸುಗಳನ್ನು ಪೊರೆಯುತ್ತ,
ಕನಸುಗಳನ್ನು ಪ್ರೀತಿಸುತ್ತಾ,
ಬದುಕಬೇಕಿಲ್ಲಿ ನೈಜವಾಗಿ...............

Comments

Submitted by kavinagaraj Sat, 09/05/2015 - 07:16

ಚೆನ್ನಾಗಿದೆ, ನವೀನರೇ.
ಕನಸು - ನನಸಿಗೆ ಪೂರಕ!
ಕನಸು - ಮುನ್ನುಗ್ಗಲು ಪ್ರೇರಕ!
ನನಸಿನಲಿ ಆಗದುದು ಕನಸಿನಲ್ಲಾದರೂ ಆಗಬಹುದು!
ಕನಸು - ಅಂತರ್ನಿಹಿತ ಅದಮ್ಯ ಆಸೆಯ ಬೀಜ!