ಇಳುವರಿ ಹೆಚ್ಚಳಕ್ಕಾಗಿ ಮೂತ್ರ ಗೊಬ್ಬರ
ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಹಳ್ಳಿ ಸಿದ್ಧಿಪುರ್. ಅಲ್ಲಿನ ಸುಮಾರು ಒಂದು ನೂರು ಮನೆಗಳ ನಿವಾಸಿಗಳ ಮೂತ್ರ, ಹೊಲಗಳಲ್ಲಿ ಗೊಬ್ಬರವಾಗಿ ಬಳಕೆ. ಇದರಿಂದಾಗಿ ಬೆಳೆಗಳ ಇಳುವರಿಯಲ್ಲಿ ಹೆಚ್ಚಳ.
ಇದೇನು ಹೊಸ ವಿಧಾನವಲ್ಲ. 1960ರ ದಶಕದಲ್ಲಿ, ರಾಸಾಯನಿಕ ಗೊಬ್ಬರಗಳ ಬಳಕೆ ಶುರುವಾಗುವ ಮುಂಚೆ, ಆ ಹಳ್ಳಿಯ ಜನರು ಮೂತ್ರವನ್ನು ಕೃಷಿ ಹೊಲಗಳಲ್ಲಿ ಗೊಬ್ಬರವಾಗಿ ಬಳಸುತ್ತಿದ್ದರು. "ಆ ಕಾಲದಲ್ಲಿ ಮನೆಯ ಮೆಟ್ಟಲುಗಳ ಕೆಳಗಡೆ ಇದ್ದ ಹೊಂಡದಲ್ಲಿ ಬೂದಿ ಮತ್ತು ಭತ್ತದ ಸಿಪ್ಪೆ ತುಂಬುತ್ತಿದ್ದೆವು; ಮನೆಮಂದಿಯೆಲ್ಲ ಅದರಲ್ಲೇ ಮೂತ್ರ ಮಾಡುತ್ತಿದ್ದೆವು. ಇದು ಕಂಪೋಸ್ಟ್ ಆದ ನಂತರ, ಇದನ್ನು ಹೊಲಕ್ಕೆ ಗೊಬ್ಬರವಾಗಿ ಹಾಕುತ್ತಿದ್ದೆವು” ಎನ್ನುತ್ತಾರೆ ಸಿದ್ಧಿಪುರದ ಜಿಬಾನ್ ಮಹರ್-ಜನ್.
ಮಹರ್-ಜನ್ ಒಬ್ಬ ಪ್ರಗತಿಪರ ಕೃಷಿಕ. 2004ರಿಂದೀಚೆಗೆ ಮೂತ್ರವನ್ನು ಗೊಬ್ಬರವಾಗಿ ಬಳಸಲು ಶುರು ಮಾಡಿದ ಸಿದ್ಧಿಪುರದ ಕೆಲವೇ ಕೃಷಿಕರಲ್ಲಿ ಒಬ್ಬರು. ಇದಕ್ಕೆ ಪ್ರೇರಣೆ ಕಾಠ್ಮಂಡುವಿನ ಸರಕಾರೇತರ ಸಂಸ್ಥೆಯಾದ “ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ." “ಇಕೊಸಾನ್" (ಇಕೊಲಾಜಿಕಲ್ ಸಾನಿಟೇಷನ್) ಕಕ್ಕಸುಗಳನ್ನು ಜನಪ್ರಿಯಗೊಳಿಸುವುದು ಈ ಸಂಸ್ಥೆಯ ಉದ್ದೇಶ. ಈ ಕಕ್ಕಸುಗಳಲ್ಲಿ ಮೂತ್ರ ಮತ್ತು ಮಲ ಬೇರೆಬೇರೆಯಾಗುವ ವ್ಯವಸ್ಥೆ ಇದೆ. ತನ್ನ ಮನೆಯಲ್ಲಿ ಆ ಸಂಸ್ಥೆ ನೀಡಿದ ಇಕೊಸಾನ್ ಅಳವಡಿಸಿಕೊಂಡರು ಮಹರ್-ಜನ್.
ಅನಂತರ ಮುತ್ರವನ್ನು ತನ್ನ ಆಲೂಗಡ್ದೆ ಹೊಲದಲ್ಲಿ ಗೊಬ್ಬರವಾಗಿ ಹಾಕಿದರು. ಇದರಿಂದಾಗಿ, ಅವರ ಆಲೂಗಡ್ದೆ ಇಳುವರಿಯಲ್ಲಿ ಹೆಚ್ಚಳ. ಎಷ್ಟು ಹೆಚ್ಚಳ ಅಂತೀರಾ? ಮೂತ್ರವನ್ನು ಗೊಬ್ಬರವಾಗಿ ಹಾಕದಿರುವ ಇತರ ಕೃಷಿಕರು ಅಲ್ಲಿದ್ದಾರೆ; ಅವರು ಮಹರ್-ಜನ್ರ ಹೊಲದ ವಿಸ್ತೀರ್ಣಕ್ಕಿಂತ ಆರು ಪಟ್ಟು ಹೆಚ್ಚು ವಿಸ್ತೀರ್ಣದ ಹೊಲದಲ್ಲಿ ಬೆಳೆಯುವ ಆಲೂಗಡ್ಡೆಗಳ ತೂಕಕ್ಕೆ ಸಮ, ಇವರ ಹೊಲದ ಆಲೂಗಡ್ಡೆಗಳ ತೂಕ! ಮೂತ್ರವನ್ನು ಹೊಲಕ್ಕೆ ಗೊಬ್ಬರವಾಗಿ ಹಾಕಿದಾಗ ತರಕಾರಿಗಳ ಗಾತ್ರ ದೊಡ್ಡದಾಗುತ್ತದೆ ಮತ್ತು ಪೀಡೆಕೀಟಗಳ ಹಾವಳಿ ಕಡಿಮೆ ಎಂಬುದು ಮಹರ್-ಜನ್ ಅನುಭವ.
ಮೂತ್ರವನ್ನು ಗೊಬ್ಬರವಾಗಿ ಬಳಸಿದಾಗ ಲಾಭ ಜಾಸ್ತಿ ಎಂಬುದು ನಮ್ಮ ದೇಶದ ಕೆಲವು ಕೃಷಿಕರ ಅನುಭವವೂ ಹೌದು. (ಯಾಕೆಂದರೆ, ಇದರಿಂದಾಗಿ ಇಳುವರಿ ಜಾಸ್ತಿ ಮತ್ತು ರಾಸಾಯನಿಕ ಗೊಬ್ಬರಗಳ ವೆಚ್ಚ ಕಡಿಮೆ.) ಇದು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮುಸಿರಿ ಹಳ್ಳಿಯ ಬಾಳೆ ಕೃಷಿಕರ ಅನುಭವ. ಅಲ್ಲಿ 750 ಬಾಳೆಗಿಡಗಳಿಗೆ ಸಮುದಾಯ ಇಕೊಸಾನ್ ಕಕ್ಕಸಿನ ಮೂತ್ರವನ್ನು ಗೊಬ್ಬರವಾಗಿ ಬಳಸಿ ಪ್ರಯೋಗ ನಡೆಸಲಾಯಿತು.
ಈ ಪ್ರಯೋಗ ಆರಂಭಿಸಿದ್ದು “ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ” (ಸ್ಕೋಪ್ ಎಂಬ ಸೇವಾಸಂಸ್ಥೆಯ ಸಹಯೋಗದಲ್ಲಿ). ಈ ಪ್ರಯೋಗದ ಐದು ವರುಷಗಳ ಅಂಕೆಸಂಖ್ಯೆ ಪರಿಶೀಲಿಸಿದಾಗ ತಿಳಿದು ಬಂದ ಸಂಗತಿ: ಬಾಳೆ ಕೃಷಿಯಲ್ಲಿ ಈ ವಿಧಾನ ಅನುಸರಿಸಿದರೆ ಸಿಗುವ ಹೆಚ್ಚುವರಿ ಆದಾಯ ಹೆಕ್ಟೇರಿಗೆ ರೂ.45,000ಕ್ಕಿಂತ ಅಧಿಕ. (ಬಾಳೆಗೊನೆಗಳ ಅಧಿಕ ತೂಕದಿಂದ ಲಭಿಸಿದ ಅಧಿಕ ಆದಾಯ ಮತ್ತು ರಾಸಾಯನಿಕ ಗೊಬ್ಬರಗಳ ಕಡಿಮೆ ಬಳಕೆಯಿಂದಾದ ಉಳಿತಾಯ - ಇವೆರಡು ಸೇರಿ.)
ಅದೇನಿದ್ದರೂ, ಮೂತ್ರವನ್ನು ಗೊಬ್ಬರವಾಗಿ ಬಳಸುವ ವಿಧಾನಕ್ಕೆ ಇತಿಮಿತಿಗಳಿವೆ. ಯಾಕೆಂದರೆ, ಮೂತ್ರದಲ್ಲಿ ಸಾರಜನಕ ಅಧಿಕ ಪ್ರಮಾಣದಲ್ಲಿದೆ; ಆದರೆ ರಂಜಕ ಮತ್ತು ಪೊಟಾಷಿಯಮ್ ಕಡಿಮೆ ಪ್ರಮಾಣದಲ್ಲಿವೆ. ಆದ್ದರಿಂದ, ಯಾವುದೇ ಬೆಳೆಗೆ ಮೂತ್ರವನ್ನು ಗೊಬ್ಬರವಾಗಿ ಬಳಕೆ ಮಾಡುವಾಗ, ರಂಜಕ ಮತ್ತು ಪೊಟಾಷಿಯಮ್ ಅನ್ನು ಸರಿದೂಗಿಸಲು ಬೇರೆ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಒಂದು ಬೆಳೆಗೆ ಎರಡು ಅಥವಾ ಮೂರು ಕಂತುಗಳಲ್ಲಿ ಗೊಬ್ಬರ ಕೊಡುವಾಗಲಂತೂ ಆ ಬೆಳೆಗೆ ಅಗತ್ಯವಾದ ಪೋಷಕಾಂಶಗಳನ್ನು ಸಮರ್ಪಕವಾಗಿ ಒದಗಿಸಲಿಕ್ಕಾಗಿ ಸರಿಯಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ.
ಅಂತೂ, ಮಾನವ ಮೂತ್ರ ಹಲವಾರು ಬೆಳೆಗಳಿಗೆ ಉತ್ತಮ ಗೊಬ್ಬರ ಎಂಬುದರಲ್ಲಿ ಅನುಮಾನವಿಲ್ಲ.
ಫೋಟೋಗಳು: ಅಂತರ್ಜಾಲ ಕೃಪೆ