ಇ-ಲೋಕ (ಸಂಚಿಕೆ ೨)

ಇ-ಲೋಕ (ಸಂಚಿಕೆ ೨)

ಬರಹ

ಎಲ್ಲಾ ಮೊಬೈಲಿಗೂ ಒಂದೇ ಚಾರ್ಜರ್‍ ಯಾಕಿಲ್ಲ?
ಮೊಬೈಲ್ ಹ್ಯಾಂಡ್‌ಸೆಟ್‌ಗಳ ಚಾರ್ಜರ್‍ ಒಂದು ಕಂಪೆನಿಯದಕ್ಕೆ ಇನ್ನೊಂದು ಹೋದಿಕೆಯಾಗುವುದನ್ನು ನೋಡಿದ್ದೀರಾ? ಒಂದೇ ಕಂಪೆನಿಯ ಒಂದು ಹ್ಯಾಂಡ್‌ಸೆಟ್‌ಗೆ ಇನ್ನೊಂದರ ಚಾರ್ಜರ್‍ ಹೊಂದಿಕೆಯಾಗದೇ ಇರುವುದೂ ಇದೆ.ವಸ್ತುಗಳನ್ನು ತಯಾರಿಸುವಾಗ ಒಂದು ನಿಗದಿತ ಮಾನಕಕ್ಕೆ ಸರಿಯಾಗಿ ಪ್ರತಿಯೋರ್ವ ತಯಾರಕನೂ ತಯಾರಿಸಬೇಕೆಂಬ ಅಲಿಖಿತ ಒಪ್ಪಂದ ಇರುವಾಗ ಈ ತರಹೇವಾರೀ ಚಾರ್ಜರ್‌ಗಳನ್ನು ಯಾಕಾದರೂ ತಯಾರಿಸುತ್ತಾರೊ?ಮಾರುಕಟ್ಟೆಯಲ್ಲಿ ಸಿಗುವ ವಿದ್ಯುತ್ ಪ್ಲಗ್, ಸಾಕೆಟುಗಳು ಒಂದು ಕಂಪೆನಿಯದಕ್ಕೆ ಇನ್ನೊಂದು ಹೊಂದಿಕೆಯಾಗುವುದು ಸಾಮಾನ್ಯ. ಚಾರ್ಜರ್‌ಗಳನ್ನು ಯಾವುದೇ ಹ್ಯಾಂಡ್‌ಸೆಟ್ಟಿನೊಂದಿಗೆ ಬಳಸಬಹುದಾದರೆ ಅವುಗಳ ಬೆಲೆ ತಗ್ಗುವುದೇ ಅಲ್ಲದೆ,ಜನರು ಚಾರ್ಜರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲೂ ಬರುತ್ತದೆ.ಅನುಕೂಲತೆಯಂತೂ ಬಹಳವಾಗಿ ಹೆಚ್ಚುತ್ತದೆ. ದಕ್ಷಿಣ ಕೊರಿಯಾ ಸರಕಾರ ಚಾರ್ಜರ್‌ಗಳಲ್ಲಿ ಏಕರೂಪತೆ ಸಾಧಿಸಲು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರಿಗೆ ಶರತ್ತು ಹಾಕಿದೆ. ಈಗ ಚೀನಾದ ಸರದಿ. ಅಲ್ಲಿನ ಸರಕಾರವೂ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ನಮ್ಮಲ್ಲಿ ಸರಕಾರ ಎಚ್ಚೆತ್ತುಕೊಳ್ಳಲು ತಡವಾಗದೇನೋ?
ವರ್ಷಪೂರ್ತಿ ದಿನಕ್ಕೊಂದು ಸಿನೆಮಾ
ಜೋನ್ ಮೆಕಾಸ್‌ಗೆ ಈಗ ಎಂಭತ್ತೈದು ವರ್ಷ. ಆತ ಮೂವತ್ತೈದು ವರ್ಷದವನಾಗಿದ್ದಾಗಿನಿಂದಲೂ ತನ್ನ ಮತ್ತು ತನ್ನ ಬಳಗದವರ ಜೀವನ ವಿಧಾನ,ಶೈಲಿಯನ್ನು ಚಿತ್ರೀಕರಿಸಿಕೊಂಡಿದ್ದಾನೆ. ಆತ ಜಗತ್ತನ್ನು ಬರಿಗಣ್ಣಿನಿಂದ ನೋಡಿದ್ದಕ್ಕಿಂತ ಹೆಚ್ಚು ಕ್ಯಾಮರಾ ಕಣ್ಣಿನಿಂದ ನೋಡಿದ್ದಾನೆ ಎಂದರೆ ತಪ್ಪಿಲ್ಲ.ಹೀಗೆ ಗಂಟೆಗಟ್ಟಲೆ ಹೊತ್ತಿನ ದೃಶ್ಯಗಳು ಆತನ ಬಳಿ ರಾಶಿ ಬಿದ್ದಿವೆ.ಬರುವ 2007ನ್ನು ಸರ್ವರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ತನ್ನ ಚಿತ್ರೀಕಕರಣವನ್ನು ಬಳಸಬೇಕೆನ್ನುವುದು ಆತನ ಯೋಜನೆ. ಚಿತ್ರೀಕರಣದ ದೃಶ್ಯಗಳನ್ನು ಬಳಸಿ ದಿನಕ್ಕೊಂದು ಚಿತ್ರವನ್ನು ಬಿಡುಗಡೆ ಮಾಡುವುದು ಆತನ ಕನಸು. ಚಿತ್ರವನ್ನು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಬೇಕಿಲ್ಲ. ಅದನ್ನು ಆತನ ವೆಬ್‌ಸೈಟಿನಲ್ಲಿ ಆತ ಪ್ರದರ್ಶಿಸಲಿದ್ದಾನೆ.http://jonasmekas.comನಲ್ಲಿ ಆತನ ಚಿತ್ರಗಳು ವೀಕ್ಷಣೆಗೆ ಲಭ್ಯ.
ಚಿತ್ರಗಳನ್ನು ಕಿರುಪರದೆ ಮೇಲೆ ವೀಕ್ಷಿಸಿದರೂ ರಂಜನೆಗೆ ಏನೂ ಅಡ್ಡಿಯಿಲ್ಲ. ಚಿತ್ರದಲ್ಲಿ ತಲ್ಲೀನರಾದಾಗ ಗಾತ್ರ ಪ್ರಮುಖವಾಗದು ಎಂದವನ ಅಭಿಪ್ರಾಯ.ಆತನು ಹದಿನಾರು ಎಮ್‌ಎಮ್ ಫಿಲ್ಮಿನಿಂದ ಹಿಡಿದು ಆಧುನಿಕ ಕ್ಯಾಮರಾಗಳೆಲ್ಲವನ್ನೂ ಬಳಸಿದ್ದಾನೆ.ಹಳೆಯ ಚಿತ್ರಗಳೊಂದಿಗೆ ಹೊಸದಾಗಿ ಚಿತ್ರೀಕರಿಸಿದ ಭಾಗಗಳನ್ನೂ ಸೇರಿಸುವ ಯೋಜನೆ ಮೆಕಾಸ್ ಹಾಕಿದ್ದಾನೆ.ಚಿತ್ರ ನಿರ್ಮಾಣದಲ್ಲಿಯೇ ಮುಳುಗಿರುವ ಈತ ಸ್ವತಃ ಚಿತ್ರಗಳನ್ನು ನೋಡಲು ಸಮಯವಿಲ್ಲ ಎಂದು ಸಮಜಾಯಿಷಿಕೆ ಕೊಡುತ್ತಾನೆ.ನೀವೂ ಹಾಗೆಯೇ ಹೇಳಿ ಆತನ ಕಿರು ಸಿನೆಮಾಗಳನ್ನು ನೋಡದಿರಬೇಡಿ ಮತ್ತೆ!
ಮುಖದ ಅನ್ವೇಷಣೆ ಸಾಧ್ಯ
ಗೂಗಲ್ ಶೋಧ ಪುಟದಲ್ಲಿ ಚಿತ್ರಗಳನ್ನು ಹುಡುಕುವ ಸೇವೆ ಲಭ್ಯ.

ಐಶ್ವರ್ಯ ರೈಯ ಚಿತ್ರ ಹುಡುಕು ಬೇಕಾದರೆ ನೀವು ಆ ಪದದ ಆಧಾರದ ಮೇಲೆ ಚಿತ್ರ ಹುಡುಕಬೇಕಾಗುತ್ತದೆ.ಜಾಲತಾಣದ ಪುಟಗಳಲ್ಲಿರುವ ಚಿತ್ರಗಳ ಹೆಸರಿನ ಆಧಾರದಲ್ಲಿ ಶೋಧ ಕಾರ್ಯ ನಡೆಯುತ್ತದೆ. ಐಶ್ವರ್ಯಳ ಚಿತ್ರಕ್ಕೆ "ಸುಂದರಿ" ಎಂದು ಹೆಸರಿಸಿದ್ದರೆ, ಆ ಚಿತ್ರ ಶೋಧ ಫಲಿತಾಂಶದಲ್ಲಿ ಒಳಗೊಳ್ಳದು. ಸ್ವೀಡಿಶ್ ಕಂಪೆನಿಯೊಂದು ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಅದರ ಪ್ರಕಾರ ನೀವು ನಿಮಗೆ ಬೇಕಾದ ವ್ಯಕ್ತಿಯ ಒಂದು ಚಿತ್ರವನ್ನು ನೀಡಿ,ಜಾಲತಾಣಗಳಲ್ಲಿರುವ ಆತನ ಚಿತ್ರವನ್ನು ಹೋಲುವ ಇತರ ಚಿತ್ರಗಳನ್ನು ಹುಡುಕಾಡಬಹುದು. ನೀವು ನೀಡಿದ ಚಿತ್ರದ ಬಾಯಿಯ ಆಕಾರ, ಮೂಗಿನ ವಕ್ರತೆ, ಹಣೆಯ ಅಗಲ ಇತ್ಯಾದಿ ಅಂಶಗಳ ಆಧಾರದಲ್ಲಿ ಚಿತ್ರದ ಹುಡುಕಾಟ ನಡೆಯುವುದೇ ವಿನಃ ಚಿತ್ರಕ್ಕೆ ನೀಡಿದ ಶೀರ್ಷಿಕೆಯ ಆಧಾರದಲ್ಲಿ ಅಲ್ಲ.
ಮೇಲ್ನೋಟಕ್ಕೆ ಇದು ಸುಲಭವೆನ್ನಿಸಿದರೂ, ಹಾಗಿಲ್ಲ. ವ್ಯಕ್ತಿ ಚಹರೆ ಬದಲಾದರೂ ಗುರುತಿಸಲು ನಮಗೆ ಸಾಧ್ಯವಾದರೂ ಕಂಪ್ಯೂಟರ್‌ಗೂ ಅದು ಸಾಧ್ಯವಾಗುವಂತೆ ಮಾಡುವುದು ಸುಲಭವಲ್ಲ.
ಕ್ಲಿಕ್ಕಿಸಿ ಬಹಮಾನ ಗೆಲ್ಲಿರಿ
ಅಲೆಕ್ಸ್ ಎನ್ನುವ ಯುವಕ ತನ್ನ ವಿದ್ಯಾಭ್ಯಾಸಕ್ಕೆ ಹಣ ಒಟ್ಟು ಮಾಡಬೇಕಿತ್ತು. ಆತ ವೆಬ್‌ಪುಟವೊಂದನ್ನು ಆರಂಭಿಸಿದ.ಇದರ ಪುಟಗಳನ್ನು ಕಿರು ಅಂಕಣಗಳಾಗಿ ಮಾಡಿ ಅದನ್ನು ಜಾಹೀರಾತುದಾರರಿಗೆ ಜಾಹೀರಾತು ಪ್ರದರ್ಶಿಸಲು ನೀಡಿ,ಹಣ ಪಡೆದ. ಹೀಗೆ ತನ್ನ ಜಾಲತಾಣದಿಂದ ಆತ ಒಂದು ಮಿಲಿಯನ್ ಡಾಲರ್‍ ಗಳಿಸಿದ. ಅದೇ ಹುಡುಗ ಈಗ ಇನ್ನೊಂದು ಸಾಹಸಕ್ಕೆ ಇಳಿದಿದ್ದಾನೆ. ಆತನ ಹೊಸ ತಾಣ http://www.pixelotto.comನಲ್ಲಿ ಜಾಹೀರಾತುಗಳಿವೆ.ಇವನ್ನು ಕ್ಲಿಕ್ಕಿಸಿದವರಲ್ಲಿ ಕೆಲವರಿಗೆ ಅದೃಷ್ಟಲಕ್ಷ್ಮಿ ಒಲಿಯಬಹುದು.ಕ್ಲಿಕ್ಕಿಸುವ ಮೊದಲು ನೋಂದಾಯಿಸಿಕೊಳ್ಳಬೇಕು. ಬಹುಮಾನ ಗೆದ್ದರೆ ಅದು ನಿಮಗೆ ತಿಳಿಯಬೇಕಲ್ಲಾ-ಅದಕ್ಕಾಗಿ!
ಶರವೇಗದ ಸರದಾರ ಸೀಮನ್ಸ್
ಫೈಬರ್‌ ಅಪ್ಟಿಕ್ ಕೇಬಲ್‌ಗಳ ಮೂಲಕ ಅತಿ ಹೆಚ್ಚೆಂದರೆ ಎಷ್ಟು ಬಿಟ್‌ಗಳ ರವಾನೆ ಸಾಧ್ಯ? ಸೀಮನ್ಸ್ ಕಂಪೆನಿಯ ಹೊಸ ತಾಂತ್ರಿಕತೆಯ ಮೂಲಕ ಪ್ರತಿ ಸೆಕೆಂಡಿಗೆ ನೂರೇಳು ಗಿಗಾಬಿಟ್‌ಗಳಷ್ಟು ಮಾಹಿತಿ ರವಾನೆ ಸಾಧ್ಯವಂತೆ-ಅದೂ ಒಂದು ಫೈಬರ್‍ ಎಳೆಯ ಮೂಲಕ!
*ಅಶೋಕ್‌ಕುಮಾರ್‍ ಎ